ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ ಲೋಕಸಭಾ ಕ್ಷೇತ್ರ : ಐವರು ಮಹಿಳೆಯರು ಕಣದಲ್ಲಿ

ಇಬ್ಬರು ಮುಸ್ಲಿಂ ಮಹಿಳೆಯರು ಸೇರಿ ಮೂವರು ಪಕ್ಷೇತರರ ಸ್ಪರ್ಧೆ
Published 27 ಏಪ್ರಿಲ್ 2024, 7:12 IST
Last Updated 27 ಏಪ್ರಿಲ್ 2024, 7:12 IST
ಅಕ್ಷರ ಗಾತ್ರ

ದಾವಣಗೆರೆ: ರಾಷ್ಟ್ರೀಯ ಪಕ್ಷಗಳ ಮಹಿಳಾ ಅಭ್ಯರ್ಥಿಗಳು, ಅದರಲ್ಲೂ ಶಾಮನೂರು– ಸಿದ್ದೇಶ್ವರ ಕುಟುಂಬದ ಇಬ್ಬರ ನಡುವಿನ ಸ್ಪರ್ಧೆಯ ಕಾರಣಕ್ಕೆ ದಾವಣಗೆರೆ ಲೋಕಸಭಾ ಕ್ಷೇತ್ರ ಈ ಬಾರಿ ರಾಜ್ಯದ ಗಮನ ಸೆಳೆದಿದೆ. ಇವರ ಜತೆಯಲ್ಲೇ  ಕ್ಷೇತ್ರದಲ್ಲಿ ಮೊದಲ ಬಾರಿಗೆ ಇಬ್ಬರು ಮುಸ್ಲಿಂ ಮಹಿಳೆಯರೂ, ಮತ್ತೊಬ್ಬ ಮಹಿಳೆಯೂ ಸ್ಪರ್ಧಿಸಿರುವುದು ವಿಶೇಷ. 

ಕ್ಷೇತ್ರದ ಇತಿಹಾಸದಲ್ಲೇ ಪಕ್ಷೇತರ ಅಭ್ಯರ್ಥಿಯಾಗಿ ಪೀಕಿಬಾಯಿ ಅವರು ಎರಡು ಬಾರಿ ಸ್ಪರ್ಧಿಸಿದ್ದು ಬಿಟ್ಟರೆ ಈವರೆಗೆ ಬೇರೊಬ್ಬ ಮಹಿಳೆ ಚುನಾವಣಾ ಕಣಕ್ಕೆ ಧುಮುಕಿರಲಿಲ್ಲ. ಇದೇ ಮೊದಲ ಬಾರಿಗೆ ಐವರು ಮಹಿಳೆಯರು ಕಣದಲ್ಲಿ ಇದ್ದಾರೆ. 

ಕಾಂಗ್ರೆಸ್‌ನಿಂದ ಡಾ.ಪ್ರಭಾ ಮಲ್ಲಿಕಾರ್ಜುನ್‌, ಬಿಜೆಪಿಯಿಂದ ಗಾಯತ್ರಿ ಸಿದ್ದೇಶ್ವರ, ಪಕ್ಷೇತರ ಅಭ್ಯರ್ಥಿಗಳಾಗಿ ಟಿ.ಜಬೀನ್ ತಾಜ್, ತಸ್ಲಿಮ್ ಬಾನು, ಜಿ.ಎಂ. ಗಾಯತ್ರಿ ಸಿದ್ದೇಶಿ ಕಣದಲ್ಲಿರುವ ಐವರು.

ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌, ಬಿಜೆಪಿ ಮಹಿಳೆಯರನ್ನೇ ಹುರಿಯಾಳಾಗಿಸಿಕೊಂಡಿರುವುದು ಗಮನಾರ್ಹ. ಅದು ಇತರರಿಗೂ ಪ್ರೋತ್ಸಾಹ ನೀಡಿರಬಹುದು. ಈ ಕಾರಣಕ್ಕೆ ಮೂವರು ಪಕ್ಷೇತರ ಮಹಿಳೆಯರು ಅದರಲ್ಲೂ ಮುಸ್ಲಿಂ ಸಮುದಾಯದ ಇಬ್ಬರು ಮಹಿಳೆಯರು ಕಣಕ್ಕೆ ಧುಮುಕಿದ್ದು ಈ ಬಾರಿ ಗಮನ ಸೆಳೆದಿದೆ.

ಶಾಮನೂರು, ಸಿದ್ದೇಶ್ವರ ಕುಟುಂಬದ ಪ್ರಭಾ, ಗಾಯತ್ರಿ ಹಾಗೂ ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯ್‌ಕುಮಾರ್‌ ನಡುವೆ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಇದ್ದರೂ ಇಬ್ಬರು ಮುಸ್ಲಿಂ ಮಹಿಳೆಯರು ಸೇರಿ ಮೂವರು ಸ್ಪರ್ಧಿಸಿರುವುದರಿಂದ ಚುನಾವಣಾ ಕಣ ರಂಗೇರಿ‌ದೆ.  

ತಸ್ಲಿಮ್ ಬಾನು ಅವರಿಗೆ ಯಾವುದೇ ರಾಜಕೀಯ ಹಿನ್ನೆಲೆಯಿಲ್ಲ. ಅವರ ಕುಟುಂಬದಲ್ಲಿ ಯಾರೂ ಚುನಾವಣೆಗೆ ಇದುವರೆಗೆ ನಿಂತಿಲ್ಲ.

‘ಮುಸ್ಲಿಂ ಮಹಿಳೆಯರು ಮನೆಯಿಂದ ಹೊರಬರುವುದೇ ಕಡಿಮೆ. ಅದರಲ್ಲೂ ರಾಜಕೀಯವಂತೂ ದೂರದ ಮಾತು. ಅಂತಹ ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿಸಲು, ಅವರ‌ಲ್ಲೂ ರಾಜಕೀಯ ಪ್ರಜ್ಞೆ ಬೆಳೆಸಲು ಈ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಗೆಲುವಿಗಿಂತ ಮಹಿಳೆಯರ ಭಾಗವಹಿಸುವಿಕೆ ಮುಖ್ಯ’ ಎಂದು ಅವರು ಹೇಳುತ್ತಾರೆ.

ಜಬೀನಾ ತಾಜ್‌ ಅವರದು ರಾಜಕೀಯ ಹಿನ್ನೆಲೆಯ ಕುಟುಂಬ. ಅವರ ತಂದೆ, ಸಹೋದರರು ಜನತಾ ಪರಿವಾರದೊಂದಿಗೆ ಗುರುತಿಸಿಕೊಂಡವರು. ತಂದೆ ಟಿ. ಯೂಸುಫ್ ಸಾಬ್‌, ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ದಾವಣಗೆರೆಯ ನಗರ ಯೋಜನಾ ಪ್ರಾಧಿಕಾರದ ಸದಸ್ಯರಾಗಿದ್ದವರು. ಸಿಎಎ, ಎನ್‌ಆರ್‌ಸಿ ವಿರೋಧಿಸಿ ದೆಹಲಿಯಲ್ಲಿ ನಡೆದ ಚಳವಳಿ ಬೆಂಬಲಿಸಿ ದಾವಣಗೆರೆಯಲ್ಲೂ ನಡೆದ ಹೋರಾಟದ ಮುಂದಾಳತ್ವ ವಹಿಸಿದ್ದವರು ಜಬೀನಾ ತಾಜ್‌. ಹಲವು ಸಾಮಾಜಿಕ ಕಾರ್ಯ ಮಾಡಿದ ಹಿನ್ನೆಲೆಯೂ ಅವರಿಗಿದೆ. ಕಳೆದ ಬಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು.

ಗಣಿಸಾಬ್‌ ದಾಖಲೆ ಸರಿಗಟ್ಟುವರೇ?:

ಕ್ಷೇತ್ರದಲ್ಲಿ ಮೊದಲ ಚುನಾವಣೆ (1977)ಯಲ್ಲಿ ಸಿಪಿಐನಿಂದ ಸ್ಪರ್ಧಿಸಿದ್ದ ಮುಸ್ಲಿಂ ಸಮುದಾಯದ ಗಣಿಸಾಬ್‌ 15,965 ಮತ ಪಡೆದಿದ್ದು ದಾಖಲೆಯಾಗಿದೆ. ಆ ಚುನಾವಣೆಯಲ್ಲಿ ಅವರು ಮೂರನೇ ಸ್ಥಾನ ಪಡೆದು ಗಮನಾರ್ಹ ಸಾಧನೆ ತೋರಿದ್ದರು. ನಂತರದಲ್ಲಿ ಮುಸ್ಲಿಂ ಸಮುದಾಯವರಿಂದ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಅಂತಹ ಸಾಧನೆ ಸಾಧ್ಯವಾಗಿಲ್ಲ. ಈ ಮಹಿಳೆಯರು ಸ್ಪರ್ಧಿಸಿರುವುದು ಇತರರಿಗೆ ಸ್ಫೂರ್ತಿಯಾಗಬಹುದೇ ಕಾದು ನೋಡಬೇಕಿದೆ.

ಟಿ. ಜಬೀನಾ ತಾಜ್‌
ಟಿ. ಜಬೀನಾ ತಾಜ್‌
ಜಿ.ಎಂ. ಗಾಯತ್ರಿ ಸಿದ್ದೇಶಿ
ಜಿ.ಎಂ. ಗಾಯತ್ರಿ ಸಿದ್ದೇಶಿ

ಮುಸ್ಲಿಂ ಮಹಿಳೆಯರು ರಾಜಕೀಯ ಸಾಮಾಜಿಕ ಪ್ರಜ್ಞೆ ಬೆಳೆಸಿಕೊಳ್ಳಲಿ ಎಂಬ ಉದ್ದೇಶದಿಂದ ಚುನಾವಣೆಗೆ ಸ್ಪರ್ಧಿಸಿದ್ದೇನೆ.

–ತಸ್ಲಿಮ್‌ ಬಾನು ಪಕ್ಷೇತರ ಅಭ್ಯರ್ಥಿ

ಅಲ್ಪಸಂಖ್ಯಾತರಿಗೆ ಎನ್‌ಡಿಎ ಇಂಡಿಯಾ ಒಕ್ಕೂಟ ಬಿಟ್ಟರೆ ಬೇರೆ ಆಯ್ಕೆಗಳು ಇಲ್ಲದಂತಾಗಿದೆ. ಜೆಡಿಎಸ್‌ನಲ್ಲಿ ಮೊದಲು ಗುರುತಿಸಿಕೊಂಡಿದ್ದೆ. ಎನ್‌ಡಿಎ ಜತೆ ಜೆಡಿಎಸ್‌ ಕೈಜೋಡಿಸಿದ್ದನ್ನು ವಿರೋಧಿಸಿ ಪಕ್ಷೇತರಳಾಗಿ ಸ್ಪರ್ಧಿಸಿದ್ದೇನೆ.

– ಟಿ. ಜಬೀನಾ ತಾಜ್‌ ಪಕ್ಷೇತರ ಅಭ್ಯರ್ಥಿ

6ನೇ ಬಾರಿ ಶಾಮನೂರು–ಸಿದ್ದೇಶ್ವರ ಕುಟುಂಬದ ಸೆಣಸು ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಇದುವರೆಗೆ ನಡೆದ ನಾಲ್ಕು ಚುನಾವಣೆಗಳಲ್ಲೂ ಶಾಮನೂರು ಶಿವಶಂಕರಪ್ಪ ಹಾಗೂ ಜಿ.ಎಂ. ಸಿದ್ದೇಶ್ವರ ಕುಟುಂಬಗಳೇ ಎದುರಾಳಿಗಳಾಗಿ ಸ್ಪರ್ಧಿಸಿರುವುದು ಕ್ಷೇತ್ರದ ವಿಶೇಷ. 1998 1999ರಲ್ಲಿ ಜಿ.ಎಂ. ಮಲ್ಲಿಕಾರ್ಜುನಪ್ಪ ಹಾಗೂ ಶಾಮನೂರು ಶಿವಶಂಕರಪ್ಪ ನಡುವೆ ಪೈಪೋಟಿ ಇದ್ದರೆ ಉಳಿದ ಚುನಾವಣೆಗಳಲ್ಲಿ 2004 2009 2014ರಲ್ಲಿ ಅವರ ಪುತ್ರರಾದ ಜಿ.ಎಂ. ಸಿದ್ದೇಶ್ವರ ಹಾಗೂ ಎಸ್‌.ಎಸ್‌. ಮಲ್ಲಿಕಾರ್ಜುನ್‌ ನಡುವೆ ಸ್ಪರ್ಧೆ ಇತ್ತು. ಈ ಬಾರಿ ಆ ಕುಟಂಬದ ಸೊಸೆಯರ ನಡುವೆ ಸ್ಪರ್ಧೆ ಏರ್ಪಟ್ಟಿದೆ. ದಾಖಲೆ ಮುರಿದಿದ್ದು 39 ವರ್ಷ ಬಳಿಕ ದಾವಣಗೆರೆ ಕ್ಷೇತ್ರದಲ್ಲಿ ದಾಖಲೆಯ ಮತಗಳ ಅಂತರದಲ್ಲಿ ಗೆದ್ದದ್ದು ಇಬ್ಬರೇ. 2019ರಲ್ಲಿ ಜಿ.ಎಂ. ಸಿದ್ದೇಶ್ವರ 1980ರಲ್ಲಿ ಕಾಂಗ್ರೆಸ್‌ನ ಟಿ.ವಿ. ಚಂದ್ರಶೇಖರಪ್ಪ. ಚಂದ್ರಶೇಖರಪ್ಪ ಅವರು ದಾಖಲೆಯ 140996 ಮತಗಳ ಅಂತರದಿಂದ (ಪಡೆದದ್ದು 238506 ಮತ) ಜನತಾ ಪಾರ್ಟಿಯ ಕೊಂಡಜ್ಜಿ ಬಸಪ್ಪ (97510 ಮತ) ವಿರುದ್ಧ ಜಯ ಸಾಧಿಸಿದ್ದು 2019ರವರೆಗೂ ದಾಖಲೆಯಾಗಿತ್ತು. ಆ ದಾಖಲೆ ಮುರಿಯಲು 39 ವರ್ಷ ಬೇಕಾದವು. 2019ರಲ್ಲಿ ಬಿಜೆಪಿಯ ಜಿ.ಎಂ. ಸಿದ್ದೇಶ್ವರ   169702 ಮತಗಳ ಅಂತರದಿಂದ (ಒಟ್ಟು ಮತ 652996) ಕಾಂಗ್ರೆಸ್‌ನ ಎಚ್‌.ಬಿ. ಮಂಜಪ್ಪ ವಿರುದ್ಧ (483294 ಮತ) ಗೆದ್ದು ದಾಖಲೆ ನಿರ್ಮಿಸಿದರು. ಈ ಬಾರಿ ಆ ದಾಖಲೆ ಅಳಿಯುವುದೇ ಅಥವಾ ಸಿದ್ದೇಶ್ವರ ಹೆಸರಿನಲ್ಲೇ ಮುಮದುವರಿಯುವುದೇ ಕಾದು ನೋಡಬೇಕಿದೆ.

10 ವರ್ಷದ ಹಿಂದೆ ಪತಿ ಸ್ಪರ್ಧೆ ಈಗ ಪತ್ನಿ ಸರದಿ ಪಕ್ಷೇತರರಾಗಿ ಸ್ಪರ್ಧಿಸಿರುವ ಜಗಳೂರು ತಾಲ್ಲೂಕಿನ ಗೋಡೆ ಗ್ರಾಮದ ಜಿ.ಎಂ. ಗಾಯತ್ರಿ ಸಿದ್ದೇಶಿ ಅವರ ಪತಿ ಜಿ.ಎಂ. ಸಿದ್ದೇಶಿ 2014ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆ ಚುನಾವಣೆಯಲ್ಲಿ ಅವರು 2732 ಮತಗಳನ್ನು ಪಡೆದಿದ್ದರು. ಆ ಚುನಾವಣೆಯಲ್ಲಿ  ಜಿ.ಎಂ. ಸಿದ್ದೇಶ್ವರ ಅವರು ಗೆಲುವು ಸಾಧಿಸಿದ್ದರು. ಆ ಚುನಾವಣೆಯಲ್ಲಿ ಜಿ.ಎಂ. ಸಿದ್ದೇಶ್ವರ ಎದುರು ಜಿ.ಎಂ. ಸಿದ್ದೇಶಿ ಸ್ಪರ್ಧಿಸಿದ್ದರೆ ಈ ಬಾರಿ ಪತ್ನಿಯರಾದ ಗಾಯತ್ರಿ ಸಿದ್ದೇಶ್ವರ ಹಾಗೂ ಗಾಯತ್ರಿ ಸಿದ್ದೇಶಿ ಕಣದಲ್ಲಿರುವುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT