ಜಗಳೂರು: ದಶಕಗಳ ಕಾಲ ಹಳ್ಳಿಗಾಡಿನ ಅನಕ್ಷರಸ್ಥ ಬಡ ಹೆಣ್ಣುಮಕ್ಕಳಿಗೆ ಸುರಕ್ಷಿತ ಹೆರಿಗೆ ಮಾಡಿಸುವ ಮೂಲಕ ಸಾವಿರಾರು ಜನರ ಪಾಲಿಗೆ ಜೀವರಕಕ್ಷಿಯಾಗಿದ್ದ ಸುಲ್ತಾನಮ್ಮ ಎಂದೇ ಹೆಸರಾಗಿದ್ದ ಸುಲ್ತಾನ್ ಬಿ ವಯೋಸಹಜ ಅನಾರೋಗ್ಯದಿಂದ 85ನೇ ವರ್ಷಕ್ಕೆ ತಮ್ಮ ಬದುಕಿನ ಸಾರ್ಥಕ ಪಯಣವನ್ನು ಮುಗಿಸಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಆಸ್ಪತ್ರೆಗಳೇ ಇಲ್ಲದ ಸಂದರ್ಭದಲ್ಲಿ ಹೆರಿಗೆ ಮಾಡಿಸಲು ಆರಂಭಿಸಿದ್ದ ಸುಲ್ತಾನ್ಬಿ ಸುಮಾರು ಏಳು ದಶಕಗಳ ಕಾಲ 10 ಸಾವಿರಕ್ಕೂ ಹೆಚ್ಚು ಹೆರಿಗೆಗಳನ್ನು ಉಚಿತವಾಗಿ ಮಾಡಿದ್ದರು. ಅವರು ಪಾರಂಪರಿಕ ನಾಟಿ ವೈದ್ಯ ಪದ್ಧತಿಯ ಅಪರೂಪದ ಕೊಂಡಿಯಾಗಿದ್ದರು.

‘ನಮ್ಮ ಮನೆಯಲ್ಲಿ ಮೂವರು ಅಕ್ಕಂದಿರಿಗೆ, ಮೂವರು ಅತ್ತಿಗೆಯರಿಗೆ ಹತ್ತು ಹೆರಿಗೆಗಳನ್ನು ಸುಲ್ತಾನಮ್ಮ ಸುಲಲಿತವಾಗಿ ಮಾಡಿಸಿದ್ದರು. ಹೆರಿಗೆಗೆ ಮುನ್ನ ಮನೆಗೆ ಬಂದು ಗರ್ಭಿಣಿಯರಿಗೆ ಧೈರ್ಯ ತುಂಬುತ್ತಿದ್ದರು. ನಂತರವೂ ಪ್ರತಿ ದಿನ ಬಂದು ಮಮತೆಯಿಂದ ತಾಯಿ ಮತ್ತು ಮಗುವಿನ ಆರೈಕೆಯನ್ನು ಮಾಡುತ್ತಿದ್ದರು. ಒಂದು ಪೈಸೆಯನ್ನೂ ಪಡೆಯದೆ ಉಚಿತವಾಗಿ, ಎಲ್ಲ ಜಾತಿ ಧರ್ಮದವರ ಮನೆಯಲ್ಲಿ ಹೆರಿಗೆ ಕಾರ್ಯದ ನೇತೃತ್ವವನ್ನು ವಹಿಸುತ್ತಿದ್ದರು’ ಎಂದು ಜಗಳೂರು ಗೊಲ್ಲರಹಟ್ಟಿ ಗ್ರಾಮದ 58 ವರ್ಷದ ಆರ್. ವೆಂಕಟೇಶ್ ‘ಪ್ರಜಾವಾಣಿ’ಯೊಂದಿಗೆ ನೆನಪುಗಳನ್ನು ಹಂಚಿಕೊಂಡರು.

ಹಾವು ಹಿಡಿಯುತ್ತಿದ್ದ ಸುಲ್ತಾನಮ್ಮ: ಸೂಲಗಿತ್ತಿ ಸೇವೆಯೇ ಅಲ್ಲದೇ ವಿಷಪೂರಿತ ಹಾವುಗಳು ವಸತಿ ಪ್ರದೇಶಕ್ಕೆ ಪ್ರವೇಶಿಸಿದಾಗ ಸುರಕ್ಷಿತವಾಗಿ ಹಾವುಗಳನ್ನು ಹಿಡಿದು ಕಾಡಿಗೆ ಬಿಡುತ್ತಿದ್ದರು.

ತಾಲ್ಲೂಕಿನಲ್ಲಿ ಯಾವುದೇ ಮನೆಯಲ್ಲಿ ಹಾವು ಬಂತೆಂದರೆ ಸುಲ್ತಾನಮ್ಮ ಅವರಿಗೆ ಕರೆ ಬರುತ್ತಿತ್ತು. ಬರಿಗೈಯಲ್ಲಿ ಹಾವುಗಳನ್ನು ಹಿಡಿಯುತ್ತಿದ್ದರು. ಒಮ್ಮೆ ಹಾವು ಹಿಡಿಯುವ ಸಂದರ್ಭದಲ್ಲಿ ನಾಗರಹಾವು ಕಚ್ಚಿ ಸಾವು ಬದುಕಿನೊಂದಿಗೆ ಹೋರಾಡಿದ್ದರು. ಆಸ್ಪತ್ರೆಯಲ್ಲಿ ಸಾವಿನಿಂದ ಪಾರಾಗಿದ್ದರೂ ಬೆರಳನ್ನು ಕಳೆದುಕೊಂಡಿದ್ದರು.

ನಾಟಿ ವೈದ್ಯೆ: ಇಸುಬು, ಹುಳಕಡ್ಡಿಗೂ (ಚರ್ಮ ಸಂಬಂಧಿ ರೋಗಗಳು) ಪರಿಣಾಮಕಾರಿ ನಾಟಿ ಔಷಧ ಕೊಡುತ್ತಿದ್ದರು. ಅಲೋಪಥಿ ವೈದ್ಯರಿಂದ ಗುಣಮುಖವಾಗದ ಹಲವು ಚರ್ಮರೋಗಳನ್ನು ಗಿಡಮೂಲಿಕೆ ಚಿಕಿತ್ಸೆಯ ಮೂಲಕ ಗುಣಪಡಿಸುತ್ತಿದ್ದರು.

ಬಾಲ್ಯದಿಂದ ಕೊನೆಯವರೆಗೆ ಬಡತನದಲ್ಲೇ ಜೀವಿಸಿದ್ದ ಸುಲ್ತಾನಮ್ಮ ತಮ್ಮ ಬಹುಮುಖಿ ಸಮಾಜಸೇವೆಯಲ್ಲೇ ತಮ್ಮ ಬದುಕಿನ ಸಾರ್ಥಕವನ್ನು ಕಂಡುಕೊಂಡಿದ್ದರು. ಎತ್ತಿನಗಾಡಿ ಇಟ್ಟುಕೊಂಡು ಪಟ್ಟಣದಲ್ಲಿ ಹಮಾಲಿ ಕೆಲಸ ಮಾಡುತ್ತಿದ್ದ ಗಂಡ ಹಾಗೂ ಪುತ್ರ ಅಕಾಲಿಕವಾಗಿ ಮೃತಪಟ್ಟಾಗಲೂ ಎದೆಗುಂದದ ಸುಲ್ತಾನ್ಬಿ ಸ್ವತಃ ಬಾರುಕೋಲು ಹಿಡಿದು ಒಂಟಿ ಎತ್ತಿನ ಗಾಡಿಯನ್ನು ಓಡಿಸುತ್ತಾ ಪಟ್ಟಣದಲ್ಲಿ ಹಲವು ಕಾಲ ಮಹಿಳಾ ಹಮಾಲಿಯಾಗಿ ಕೆಲಸ ಮಾಡಿದ್ದರು.

ಅರ್ಧ ಶತಮಾನಕ್ಕೂ ಮೀರಿದ ಅವರ ಸಾರ್ಥಕ ಸಮಾಜಸೇವೆಯನ್ನು ಪರಿಗಣಿಸಿ ಕಳೆದ ವರ್ಷ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಸುಲ್ತಾನ್ಬಿ ಅವರ ಅಗಲಿಕೆಯಿಂದ ಪಾರಂಪರಿಕ ವೈದ್ಯ ಪದ್ದತಿಯ, ತಾಯಿ ಹೃದಯದ ಸಮಾಜಸೇವಕಿಯನ್ನು ಸಮಾಜ ಕಳೆದುಕೊಂಡಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.