ಸೋಮವಾರ, 1 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಾಸಕ ಬಸವರಾಜು ಜನ್ಮದಿನ; ಅಧಿಕಾರಿಗಳ ಸಾಮೂಹಿಕ ರಜೆ?

ಚನ್ನಗಿರಿಯಿಂದ ತಿರುಪತಿಗೆ ತೆರಳಿದ ಸರ್ಕಾರಿ ಅಧಿಕಾರಿಗಳ ದಂಡು
Published 28 ಜೂನ್ 2024, 16:28 IST
Last Updated 28 ಜೂನ್ 2024, 16:28 IST
ಅಕ್ಷರ ಗಾತ್ರ

ಚನ್ನಗಿರಿ (ದಾವಣಗೆರೆ ಜಿಲ್ಲೆ): ಪಟ್ಟಣದಲ್ಲಿರುವ ತಾಲ್ಲೂಕು ಮಟ್ಟದ 33ಕ್ಕೂ ಅಧಿಕ ಸರ್ಕಾರಿ ಕಚೇರಿಗಳ ಪೈಕಿ ಬಹುತೇಕ ಕಚೇರಿಗಳಲ್ಲಿ ಶುಕ್ರವಾರ ಹಿರಿಯ ಅಧಿಕಾರಿಗಳು ಇರಲಿಲ್ಲ. ಕಾರ್ಯನಿಮಿತ್ಯ ಕಚೇರಿಗೆ ಬಂದಿದ್ದ ಸಾರ್ವಜನಿಕರು ಕೇಳಿದರೆ, ‘ಸಾಹೇಬರು ರಜೆ ಹಾಕಿದ್ದಾರೆ’ ಎಂದು ಸಿಬ್ಬಂದಿ ಹೇಳುತ್ತಿರುವುದು ಕಂಡುಬಂತು.

ಶುಕ್ರವಾರ ಚನ್ನಗಿರಿ ಶಾಸಕ ಬಸವರಾಜು ಶಿವಗಂಗಾ ಅವರ ಜನ್ಮದಿನ. ಅದನ್ನು ತಿರುಪತಿ ಸಮೀಪದ ರೆಸಾರ್ಟ್‌ ಒಂದರಲ್ಲಿ ಆಚರಿಸಲು ಎಲ್ಲ ಪ್ರಮುಖ ಹಿರಿಯ ಅಧಿಕಾರಿಗಳು ರಜೆ ಹಾಕಿ ಅಲ್ಲಿಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.

ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಕಾರ್ಯ ನಿಮಿತ್ತ ಬೆಳಿಗ್ಗೆಯಿಂದಲೇ ತಾಲ್ಲೂಕು ಮಟ್ಟದ ಕಚೇರಿಗಳಿಗೆ ಬಂದ ಸಾರ್ವಜನಿಕರು, ಪ್ರಮುಖ ಅಧಿಕಾರಿ ಇಲ್ಲ ಎನ್ನುವುದನ್ನು ಕೇಳಿ ಬೇಸರದಿಂದಲೇ ಮರಳಿದರು. ‘ಇನ್ನೊಂದು ದಿನ ದುಡ್ಡು ಖರ್ಚು ಮಾಡಿಕೊಂಡು, ನಾವೂ ರಜೆ ಹಾಕಿ ಮತ್ತೆ ಬರಬೇಕಲ್ಲ?’ ಎಂದು ಗೊಣಗಿಕೊಂಡು ವಾಪಸಾಗುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಂಡುಬಂತು.

ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಇ.ಒ, ಪುರಸಭೆ ಮುಖ್ಯಾಧಿಕಾರಿ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ, ಪಶು ವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ, ಕ್ಷೇತ್ರ ಶಿಕ್ಷಣಾಧಿಕಾರಿ, ತಾಲ್ಲೂಕು ವೈದ್ಯಾಧಿಕಾರಿ, ಸರ್ಕಾರಿ ಸಮುದಾಯ ಆಸ್ಪತ್ರೆಯ ವೈದ್ಯಾಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ, ಲೋಕೋಪಯೋಗಿ ಇಲಾಖೆಯ ಕೆಲವು ಎಂಜಿನಿಯರ್‌ಗಳು ಹಾಗೂ  ಕೆಲವು ಇಲಾಖೆಗಳ ಅಧಿಕಾರಿಗಳು ಸೇರಿ ಕೆಳಹಂತದ ಕೆಲವು ಅಧಿಕಾರಿಗಳು, ಸಹಾಯಕ ಸಿಬ್ಬಂದಿ ರಜೆ ಹಾಕಿ ಹೋಗಿದ್ದಾಗಿ ಗೊತ್ತಾಗಿದ್ದು, ಕೆಲವರು ವೈಯಕ್ತಿಕ ಕಾರಣ ಮುಂದಿರಿಸಿ ರಜೆ ಹಾಕಿದ್ದರು ಎನ್ನಲಾಗಿದೆ.

‘ಗುರುವಾರ ಬೆಳಿಗ್ಗೆ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ನಂತರ ಶಿವಮೊಗ್ಗದಿಂದ ವಿಮಾನದ ಮೂಲಕ ತಿರುಪತಿಗೆ ಹೋಗಿದ್ದಾರೆ. ಇನ್ನು ಕೆಲವರು ಜನ್ಮದಿನ ಆಚರಣೆಯ ಸಕಲ ವ್ಯವಸ್ಥೆ ಮಾಡಲು ಎರಡು ದಿನಗಳ ಹಿಂದೆಯೇ ರೆಸಾರ್ಟ್ ತಲುಪಿದ್ದಾರೆ’ ಎಂದು ಸರ್ಕಾರಿ ಕಚೇರಿಯೊಂದರಲ್ಲಿದ್ದ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ರಜೆ ಬಗ್ಗೆ ಅಧಿಕಾರಿಗಳು ಆಯಾ ಇಲಾಖೆಗಳ ಮುಖ್ಯಸ್ಥರಿಂದ ಅನುಮತಿ ಪಡೆಯಬೇಕಾಗುತ್ತದೆ. ನನ್ನಿಂದ ಯಾರೂ ಅನುಮತಿ ಪಡೆದಿಲ್ಲ. ಸಾಮೂಹಿಕವಾಗಿ ರಜೆ ಹಾಕಿರುವ ಬಗ್ಗೆ ಮಾಹಿತಿ ಬಂದಿದ್ದು ಈ ಬಗ್ಗೆ ಪರಿಶೀಲಿಸಲಾಗುವುದು.
–ಡಾ.ಎಂ.ವಿ.ವೆಂಕಟೇಶ್‌, ಜಿಲ್ಲಾಧಿಕಾರಿ

‘ಅಧಿಕಾರಿಗಳಿಗೆ ಜನರ ಕೆಲಸಕ್ಕಿಂತ ಕ್ಷೇತ್ರದ ಶಾಸಕರ ಜನ್ಮದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಳ್ಳುವುದೇ ಮುಖ್ಯ ಎಂಬಂತಿದೆ’ ಎಂದು ತಹಶೀಲ್ದಾರ್ ಕಚೇರಿಗೆ ಬಂದಿದ್ದ ತಾಲ್ಲೂಕಿನ ದಾಗಿನಕಟ್ಟೆ ಗ್ರಾಮದ ವಾಸಿ ಮಂಜುನಾಥ್ ಅಸಮಾಧಾನ ವ್ಯಕ್ತಪಡಿಸಿದರು.

ನಾನು ರಜೆ ಹಾಕಿದ್ದೆ. ಸಂಜೆ ಚನ್ನಗಿರಿಗೆ ಮರಳಿದ್ದೇನೆ ಎಂದು ತಹಶೀಲ್ದಾರ್‌ ಪಿ.ಎಸ್‌. ಎರಿಸ್ವಾಮಿ ಪ್ರತಿಕ್ರಿಯಿಸಿದರೆ, ತಾಲ್ಲೂಕು ಪಂಚಾಯಿತಿ ಇ.ಒ ಉತ್ತಮ್ ಬಿ.ಕೆ. ಅವರು ರಜೆ ಹಾಕಿದ್ದಾಗಿ ತಿಳಿಸಿದ್ದಾರೆ. ‘ರಜೆ ಹಾಕಿಲ್ಲ ಜಿಲ್ಲಾಧಿಕಾರಿಯವರು ಕರೆದಿದ್ದ ಸಭೆಗೆ ತೆರಳಿದ್ದೆ. ಚನ್ನಗಿರಿಗೆ ಮರಳಿದ್ದೇನೆ’ ಎಂದು ಪುರಸಭೆ ಮುಖ್ಯಾಧಿಕಾರಿ ಕೃಷ್ಣಾ ಕಟ್ಟೀಮನಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT