ಹಗರಣ ಮುಚ್ಚಿ ಹಾಕುವ ಪ್ರಯತ್ನ: ಆರೋಪ
‘15ನೇ ಹಣಕಾಸು ಮತ್ತು ನರೇಗಾ ಯೋಜನೆಯಡಿ ₹ 1.5 ಕೋಟಿಗೂ ಹೆಚ್ಚು ಸಾರ್ವಜನಿಕ ಹಣವನ್ನು ಲೂಟಿ ಮಾಡಿರುವುದು ಇಲಾಖೆಯ ಕೂಲಂಕಷ ವಿಚಾರಣೆ ಮತ್ತು ದಾಖಲೆಗಳ ಪರಿಶೀಲನೆಯಲ್ಲಿ ದೃಢಪಟ್ಟಿದೆ. ಆಪಾದಿತ ಪಿಡಿಒ ವಿರುದ್ಧ ಕೇವಲ ವೇತನ ಬಡ್ತಿ ತಡೆ ಹಿಡಿಯುವ ಕ್ರಮದ ಮೂಲಕ ದೊಡ್ಡ ಹಣಕಾಸಿನ ಹಗರಣವನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕಲು ಯತ್ನಿಸಲಾಗುತ್ತಿದೆ. ಲೂಟಿಯಾಗಿರುವ ₹ 1 ಕೋಟಿಗೂ ಹೆಚ್ಚು ಹಣಕಾಸಿನ ಬಗ್ಗೆ ವರದಿಯಲ್ಲಿ ಉದ್ದೇಶಪೂರ್ವಕವಾಗಿ ಎಲ್ಲೂ ಉಲ್ಲೇಖ ಮಾಡಿಲ್ಲ’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮರೇನಹಳ್ಳಿ ಬಸವರಾಜ್ ಆರೋಪಿಸಿದ್ದಾರೆ. ‘ಪಿಡಿಒ ವಿರುದ್ಧದ ಎಲ್ಲ ಅರೋಪಗಳು ಸಾಬೀತಾಗಿವೆ ಎಂದು ಸಿಇಒ ಆದೇಶಿಸಿದ್ದಾರೆ. ಆದರೆ ಎಷ್ಟು ಹಣ ದುರುಪಯೋಗವಾಗಿದೆ ಎಂಬ ಪ್ರಸ್ತಾಪವಾಗಲೀ ಅಥವಾ ಪಿಡಿಒ ವಿರುದ್ಧದ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಹಣ ಮರುಪಾವತಿಗೆ ಕ್ರಮ ಕೈಗೊಳ್ಳುವ ಬಗ್ಗೆ ಯಾವುದೇ ಆದೇಶ ಇಲ್ಲ. ಜಿಲ್ಲೆಯ ಪ್ರಭಾವಿ ರಾಜಕಾರಣಿಗಳ ಒತ್ತಡಕ್ಕೆ ಮಣಿದು ದೊಡ್ಡ ಹಗರಣವನ್ನು ಮುಚ್ಚಿ ಹಾಕಲು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಪ್ರಯತ್ನ ನಡೆಸಿದ್ದಾರೆ. ಈ ಬಗ್ಗೆ ಪಿಡಿಒ ಮತ್ತು ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಿಸಲಾಗುವುದು’ ಎಂದು ವಕೀಲರಾದ ಡಿ. ದೊಡ್ಡಬೋರಯ್ಯ ಮತ್ತು ಇ. ನಾಗಪ್ಪ ತಿಳಿಸಿದ್ದಾರೆ.