ಬಕ್ರೀದ್ ಅಂಗವಾಗಿ ಹುಬ್ಬಳ್ಳಿಯ ರಾಣಿ ಚನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನವನ್ನು ಭಾನುವಾರ ಸ್ವಚ್ಛಗೊಳಿಸಲಾಯಿತು –ಪ್ರಜಾವಾಣಿ ಚಿತ್ರಗಳು: ಗೋವಿಂದರಾಜ ಜವಳಿ
ಮಾರುಕಟ್ಟೆಯಲ್ಲಿ ಖರೀದಿ ಭರಾಟೆ
ಭಾನುವಾರದಂದು ಜನತಾ ಬಜಾರ್ ಶಾ ಬಜಾರ್ ದುರ್ಗದ ಬೈಲ್ ನ್ಯಾಷನಲ್ ಮಾರ್ಕೆಟ್ ಜನಜಂಗುಳಿಯಿಂದ ಕೂಡಿದ್ದವು. ಹಬ್ಬಕ್ಕೆ ಹೊಸ ಬಟ್ಟೆ ಖರೀದಿಸುವ ಸಂಪ್ರದಾಯ ಇರುವುದರಿಂದ ಬಟ್ಟೆ ಅಂಗಡಿಗಳಲ್ಲಿ ಖರೀದಿ ಜೋರಾಗಿತ್ತು. ಸಿಹಿಖಾದ್ಯವಾದ ‘ಶೀರ್–ಕುರ್ಮಾ’ ತಯಾರಿಕೆಗೆ ಬೇಕಿರುವ ಶ್ಯಾವಿಗೆ ಒಣಹಣ್ಣುಗಳನ್ನು ಉತ್ಸಾಹದಿಂದ ಖರೀದಿಸುತ್ತಿರುವುದು ಕಂಡುಬಂತು. ನ್ಯೂ ಮ್ಯಾದಾರ ಓಣಿ ಗಣೇಶ ಪೇಟೆ ಅಮರಗೋಳದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಕುರಿ ಮೇಕೆ ಹೋತ ಮಾರಾಟ ಖರೀದಿ ಪ್ರಕ್ರಿಯೆ ಜೋರಾಗಿತ್ತು. ಗ್ರಾಮೀಣ ಪ್ರದೇಶದ ಜನರೂ ಇಲ್ಲಿಗೆ ಕುರಿ ಮೇಕೆ ತಂದು ಮಾರಾಟಕ್ಕೆ ಇಟ್ಟಿದ್ದರು. ಕುರಿಗಳ ಗಾತ್ರ ತಳಿ ವಯಸ್ಸಿನ ಆಧಾರದಲ್ಲಿ ಕನಿಷ್ಠ ₹15 ಸಾವಿರದಿಂದ ₹60 ಸಾವಿರದವರೆಗೂ ಮಾರಾಟ ನಡೆಯಿತು. ಬನ್ನೂರು ಕುರಿಗಳಿಗೆ ಬೇಡಿಕೆ ಹಾಗೂ ಬೆಲೆ ಹೆಚ್ಚಿತ್ತು. ಹಬ್ಬದ ದಿನ ವಿಶೇಷವಾಗಿ ಬಿರಿಯಾನಿ ಸೇರಿದಂತೆ ತರಹೇವಾರಿ ಮಾಂಸದ ಖಾದ್ಯಗಳನ್ನು ತಯಾರು ಮಾಡುವುದರಿಂದ ಮಾರುಕಟ್ಟೆಯಲ್ಲಿ ಮಟನ್ ಬೆಲೆಯೂ ಹೆಚ್ಚಳವಾಗಿದೆ. ಕೆ.ಜಿ.ಗೆ ₹650ರಿಂದ ₹700ರವರೆಗೆ ಮಾರಾಟವಾಗುತ್ತಿದೆ.
ಬಕ್ರೀದ್ ಆಚರಣೆ ಹಿನ್ನೆಲೆ
‘ಪ್ರವಾದಿ ಇಬ್ರಾಹಿಂ ಅವರು ಅಲ್ಲಾಹುವಿನ ಆಪ್ತರು. ಅಲ್ಲಾಹು ಒಡ್ಡಿದ ಹಲವು ಬಗೆಯ ಪರೀಕ್ಷೆಗಳಲ್ಲಿ ಜಯಿಸಿದವರು. ಅಲ್ಲಾಹುವಿನ ಇಚ್ಛೆಯಂತೆ ಎಲ್ಲ ಪ್ರೀತಿಯ ವಸ್ತುಗಳನ್ನು ತ್ಯಾಗ ಮಾಡಿದವರು ಎಂದು ನಂಬಲಾಗುತ್ತದೆ. ಒಂದು ದಿನ ಇಬ್ರಾಹಿಂ ಅವರ ಕನಸಿನಲ್ಲಿ ಬಂದ ಅಲ್ಲಾಹು ‘ನಿನಗೆ ಅಮೂಲ್ಯ ಎನಿಸುವುದನ್ನು ನನಗೆ ಸಮರ್ಪಿಸು’ ಎಂದು ಆದೇಶಿಸುತ್ತಾರೆ. ಹೀಗಾಗಿ ತಮಗೆ ಅಮೂಲ್ಯವಾಗಿರುವ ಹಾಗೂ ಏಕೈಕ ಪುತ್ರ ಇಸ್ಮಾಯಿಲ್ ಅವರನ್ನು ಬಲಿ ನೀಡಲು ಇಬ್ರಾಹಿಂ ನಿರ್ಧರಿಸುತ್ತಾರೆ. ಇಸ್ಮಾಯಿಲ್ ಕತ್ತಿನ ಮೇಲೆ ಎಷ್ಟೇ ಸಲ ಕತ್ತಿ ಚಲಾಯಿಸಿದರೂ ಅದು ಹರಿಯುವುದಿಲ್ಲ. ಪುತ್ರ ವಾತ್ಸಲ್ಯದಿಂದ ಹೀಗಾಗುತ್ತಿದೆ ಎಂದುಕೊಂಡ ಇಬ್ರಾಹಿಂ ಅವರು ತಮ್ಮ ಕಣ್ಣುಗಳಿಗೆ ಬಟ್ಟೆ ಕಟ್ಟಿಕೊಂಡು ಕತ್ತಿ ಪ್ರಯೋಗಿಸುತ್ತಾರೆ. ಅಷ್ಟೊತ್ತಿಗೆ ಆತನ ಪರೀಕ್ಷೆ ನಿಲ್ಲಿಸಿದ್ದ ಅಲ್ಲಾಹು ಜಿಬ್ರಾಯಿಲ್‌ನನ್ನು ಕಳುಹಿಸಿರುತ್ತಾನೆ. ಜಿಬ್ರಾಯಿಲ್ ಬಂದು ಇಸ್ಮಾಯಿಲ್ ಜಾಗದಲ್ಲಿ ಕುರಿಯೊಂದನ್ನು ಇಟ್ಟಿರುತ್ತಾರೆ. ಇಬ್ರಾಹಿಂ ಕಣ್ತೆರೆದಾಗ ಅಲ್ಲಿ ಕುರಿಯ ಬಲಿ ನಡೆದಿತ್ತು. ಅಲ್ಲಾಹು ಒಡ್ಡಿದ ಸತ್ವ ಪರೀಕ್ಷೆಯನ್ನು ಇಬ್ರಾಹಿಂ ಗೆದ್ದಿದ್ದರು. ಅಂದಿನಿಂದ ಬಲಿ ಕರ್ಮ ಇಸ್ಲಾಮಿನ ಭಾಗವಾಗಿದ್ದು ಬಕ್ರೀದ್ ದಿನ ಪ್ರಾಣಿ ಬಲಿ ನೀಡಲಾಗುತ್ತಿದೆ’ ಎಂದು ಬಕ್ರೀದ್ ಆಚರಣೆಯ ಹಿನ್ನೆಲೆಯನ್ನು ಮುಸ್ಲಿಂ ಧರ್ಮಗುರು ಪೀರ್ ಸಯ್ಯದ್ ತಾಜುದ್ದೀನ್ ಖಾದ್ರಿ ಬಗದಾದಿ ತಿಳಿಸಿದರು.