ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಓದಿನ ಹಸಿವು ನೀಗಿಸುವ ‘ಪುಸ್ತಕ ದಾಸೋಹ’

Published : 5 ಅಕ್ಟೋಬರ್ 2024, 6:11 IST
Last Updated : 5 ಅಕ್ಟೋಬರ್ 2024, 6:11 IST
ಫಾಲೋ ಮಾಡಿ
Comments

ಹುಬ್ಬಳ್ಳಿ: ನಿಮ್ಮ ಮನೆಯಲ್ಲಿ ಪುಸ್ತಕಗಳಿವೆಯೇ? ಬೇರೆಯವರೂ ಅವುಗಳನ್ನು ಓದಬೇಕೆ? ಹಾಗಿದ್ದರೆ, ಅವುಗಳನ್ನು ಅಲ್ಲಿಯೇ ದೂಳು ಹಿಡಿಸುವ ಅಥವಾ ಬಿಸಾಡುವ ಬದಲು; ಚುಟುಕು ಸಾಹಿತ್ಯ ಪರಿಷತ್ತಿಗೆ ನೀಡಿ. ನೀವು ಓದಿ, ಆಸ್ವಾದಿಸಿದ ಪುಸ್ತಕಗಳನ್ನು ಇತರರೂ ಓದಿ, ಆನಂದಿಸುವರು. ಓದಿನ ಅಭಿರುಚಿ, ಜ್ಞಾನ ಪಸರಿಸಿದ ಖುಷಿ ನಿಮಗೂ ಲಭಿಸುತ್ತದೆ. 

ಹೌದು, ಮನೆಯಲ್ಲಿ ಹೆಚ್ಚು ಪುಸ್ತಕ ಇಟ್ಟುಕೊಂಡವರಿಗೆ, ಅವುಗಳ ನಿರ್ವಹಣೆ ದೊಡ್ಡ ಸವಾಲು. ಓದಿನ ಆಸಕ್ತಿ ಇದ್ದವರಿಗೆ ಪುಸ್ತಕ ಕೊಳ್ಳುವುದು ಕಷ್ಟಸಾಧ್ಯ. ಇಂತಹವರ ನಡುವೆ ಸೇತುವೆಯಾಗಿದೆ ಚುಟುಕ ಸಾಹಿತ್ಯ ಪರಿಷತ್ತು. ‘ಪುಸ್ತಕ ದಾಸೋಹ’ ಅಭಿಯಾನದ ಮೂಲಕ ಪರಿಷತ್‌ 10 ವರ್ಷಗಳಲ್ಲಿ 3 ಲಕ್ಷ ಪುಸ್ತಕಗಳನ್ನು ದಾನಿಗಳಿಂದ ಸಂಗ್ರಹಿಸಿ, ವಿತರಿಸಿದೆ.

ಪರಿಷತ್‌ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಹೂವು, ಉಡುಗೊರೆ ನೀಡುವುದಿಲ್ಲ. ಸಂಗ್ರಹವಾದ ಪುಸ್ತಕಗಳನ್ನೇ ಕೊಡುಗೆಯಾಗಿ ನೀಡಲಾಗುತ್ತದೆ. ಕವಿಗೋಷ್ಠಿ ನಡೆಸಿದರೆ, ಅಲ್ಲಿ ಬಹುಮಾನ ನೀಡುವುದೂ ಪುಸ್ತಕಗಳನ್ನೇ. ವಿದ್ಯಾರ್ಥಿಗಳಿಗೆ ಪುಸ್ತಕ ನೀಡಿ, ಆ ಬಗ್ಗೆ ಕಿರುಪರೀಕ್ಷೆ ನಡೆಸಿ, ಪುಸ್ತಕಗಳನ್ನೇ ಉಡುಗೊರೆಯಾಗಿ ನೀಡಲಾಗುತ್ತದೆ.

‘ಪುಸ್ತಕ ದಾಸೋಹ’ ಕಾಯಕದ ಕುರಿತು ‘ಪ್ರಜಾವಾಣಿ’ಗೆ ವಿವರಿಸಿದ ಪರಿಷತ್ತಿನ ರಾಜ್ಯ ಸಂಚಾಲಕ, ಹುಬ್ಬಳ್ಳಿಯ ಕೃಷ್ಣಮೂರ್ತಿ ಕುಲಕರ್ಣಿ ಅವರು, ‘ಇತ್ತೀಚಿನ ಕಾಲಘಟ್ಟದಲ್ಲಿ ಓದುವ ಸಂಸ್ಕೃತಿ ಮರೆಯಾಗುತ್ತಿದೆ. ಕೆಲವರಿಗೆ ಆದರ ಅಭಿರುಚಿ ಇದ್ದರೂ, ಹಣಕಾಸಿನ ಸಮಸ್ಯೆಯಿಂದ ಪುಸ್ತಕ ಕೊಳ್ಳಲಾಗುವುದಿಲ್ಲ. ಅದನ್ನು ನೀಗಸಲೆಂದೇ ಪರಿಷತ್ತು ವಿನೂತನ ಅಭಿಯಾನ 10 ವರ್ಷಗಳ ಹಿಂದೆ ಆರಂಭಿಸಿತು. ಇದಕ್ಕೆ ಸಿಕ್ಕ ಸ್ಪಂದನೆ ಅಭೂತಪೂರ್ವ’ ಎಂದು ಹೇಳಿದರು.

‘ಮಂಗಳೂರು ಕೇಂದ್ರ ಕಾರಾಗೃಹಕ್ಕೆ 300, ಹಾವೇರಿ ಕಾರಾಗೃಹಕ್ಕೆ 258 ಪುಸ್ತಕಗಳು ತಲುಪಿವೆ. ರಾಜ್ಯದ 100ಕ್ಕೂ ಹೆಚ್ಚು ಕೊಳೆಗೇರಿಯ ಶಾಲೆಗಳ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಪೂರೈಸಿದ್ದೇವೆ. ಓದು ಜನರನ್ನು ಆಯಸ್ಕಾಂತದಂತೆ ಸೆಳೆಯಬೇಕು. ಇದೇ ನಮ್ಮ ಆಶಯ’ ಎಂದರು.

‘ರಾಜ್ಯದ 22 ಜಿಲ್ಲೆಗಳಲ್ಲಿ ಪರಷತ್ತಿನ ಘಟಕಗಳಿವೆ. ಪುಸ್ತಕ ದಾನ ನೀಡುವ ಆಶಯವುಳ್ಳವರು ಕರೆ ಮಾಡಿ, ಮಾಹಿತಿ ನೀಡುತ್ತಾರೆ. ನಿಗದಿತ ಸ್ಥಳಕ್ಕೆ ತಲುಪಿಸಿದರೆ, ಘಟಕದವರು ಸಂಗ್ರಹಿಸುತ್ತಾರೆ. ಕೆಲವರು ಅಂಚೆ ಮೂಲಕ  ಕಳುಹಿಸುತ್ತಾರೆ. ಅವುಗಳನ್ನು ವಿವಿಧೆಡೆ ತಲುಪಿಸಲು ತಗುಲುವ ವೆಚ್ಚವನ್ನು ಪರಿಷತ್‌ ಭರಿಸುತ್ತಿದೆ’ ಎಂದು ತಿಳಿಸಿದರು.

‘ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿದ್ದ 500 ಪುಸ್ತಕಗಳನ್ನು ಪಾಟೀಲ ಪುಟ್ಟಪ್ಪ ಅವರ ಮನವೊಲಿಸಿ ಪಡೆದೆವು. ಹಲವಾರು ಮಠಗಳೂ  ಕೃತಿಗಳನ್ನು ನೀಡಿವೆ. ಸಾಹಿತಿಗಳು, ಸಾಹಿತ್ಯಾಸಕ್ತರೂ ಪುಸ್ತಕ ನೀಡಿದ್ದಾರೆ. ಕೋವಿಡ್‌ ಸಂದರ್ಭದಲ್ಲಿ ಈ ಆಂದೋಲನಕ್ಕೆ ಹೆಚ್ಚಿನ ಸ್ಪಂದನೆ ಸಿಕ್ಕಿತ್ತು. ಕಾರಾಗೃಹಕ್ಕೆ ನೀಡಿದ ಪುಸ್ತಕಗಳನ್ನು ಕೈದಿಗಳು ಓದುತ್ತಾರೆ. ಕೊಳೆಗೇರಿ ಶಾಲೆಗಳ ವಿದ್ಯಾರ್ಥಿಗಳಿಗಾಗಿ ವಚನ ಸಾಹಿತ್ಯ, ದಾಸ ಸಾಹಿತ್ಯ, ಮೇರು ಸಾಹಿತಿಗಳ ಕೃತಿಗಳನ್ನೇ ಆರಿಸಿ, ನೀಡುತ್ತೇವೆ’ ಎನ್ನುತ್ತಾರೆ ಕೃಷ್ಣಮೂರ್ತಿ ಕುಲಕರ್ಣಿ.

ಸದ್ಯ ಕೃಷ್ಣಮೂರ್ತಿ ಅವರ ಬಳಿ 4 ಸಾವಿರ ಪುಸ್ತಕಗಳಿವೆ.  ಹಲವರು ಪುಸ್ತಕ ನೀಡುವುದಾಗಿ ಸಹ ಹೇಳಿದ್ದಾರೆ.  ಆದರೆ, ಪುಸ್ತಕಗಳನ್ನು ಸಂಗ್ರಹಿಸಲು ಸೂಕ್ತ ವ್ಯವಸ್ಥೆ ಇಲ್ಲ. ಪುಟ್ಟ ಮನೆಯಲ್ಲೇ ಪುಸ್ತಕಗಳನ್ನು ಇಟ್ಟುಕೊಂಡಿದ್ದಾರೆ. ಮಳೆಗೆ ನೆನೆದು ಕೆಲವು ಪುಸ್ತಕಗಳು ಹಾಳಾಗಿವೆ. ಯಾರಾದರೂ ಜಾಗ ನೀಡಿದರೆ, ಗ್ರಂಥಾಲಯ ತೆರೆಯುವ ಆಶಯ ಅವರದ್ದು.

ಪುಸ್ತಕ ದಾನ ನೀಡಲು ಹಾಗೂ ಪಡೆಯಲು ಕೃಷ್ಣಮೂರ್ತಿ ಕುಲಕರ್ಣಿ (9482181305) ಅವರನ್ನು ಸಂಪರ್ಕಿಸಬಹುದು.

‘ದಾಸೋಹ’ದ ಆರಂಭ...

ಅಧಿಕ ಮಾಸದಲ್ಲಿ ಹಣ್ಣು–ಹಂಪಲು ದಾನ ನೀಡುವ ಪರಂಪರೆಯಂತೆ ಪರಿಷತ್‌  ಕವಿ ದಂಪತಿಗೆ ಪುಸ್ತಕದಾನ ನೀಡಲು ಮುಂದಾಯಿತು. ಮೊದಲು 40 ಕವಿ ದಂಪತಿಗೆ ತಲಾ 40 ಪುಸ್ತಕಗಳನ್ನು ನೀಡಿತು. ಇಷ್ಟೊಂದು ಪುಸ್ತಕ ಹೊರೆ ಎಂದು ಹಲವರು ಅಭಿಪ್ರಾಯಪಟ್ಟಿದ್ದರಿಂದ ಆ ಕವಿ ದಂಪತಿ ಹೆಸರಲ್ಲಿ ‘ದಾನ’ ನೀಡಲು ಆರಂಭಿಸಲಾಯಿತು.

ಮೂರು ವರ್ಷಗಳಿಗೊಮ್ಮೆ ಅಧಿಕ ಮಾಸ ಬರುವುದರಿಂದ ಗದುಗಿನ ಪಂಚಾಕ್ಷರಿ ಗವಾಯಿಗಳ ಮಠ ಹಾವೇರಿ ಹುಕ್ಕೇರಿ ಮಠ ಶಿರಸಿ ಉತ್ತರಾಧಿಮಠ ಸೇರಿದಂತೆ ವಿವಿಧೆಡೆ ಕವಿ ದಂಪತಿ ಹೆಸರಲ್ಲಿ ಪುಸ್ತಕದಾನ ಕಾರ್ಯಕ್ರಮ ನಡೆಸಲಾಗಿದೆ. ಕಳೆದ ವರ್ಷ ಮೈಸೂರು ಉಡುಪಿ ಮಂತ್ರಾಲಯದಲ್ಲಿ ಕಾರ್ಯಕ್ರಮಗಳು ಜರುಗಿವೆ.

‘ಪರಿಷತ್ತು ನೀಡಿದ ವೈವಿಧ್ಯಮಯ ಪುಸ್ತಕಗಳು ಮಕ್ಕಳಲ್ಲಿ ಓದುವ ಪ್ರೀತಿ ಹೆಚ್ಚಿಸಿವೆ. ಸಾಹಿತ್ಯ ಅಧ್ಯಯನದಿಂದ ಹಲವು ಮಕ್ಕಳು ಸಾಹಿತ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದು ಹುಬ್ಬಳ್ಳಿಯ ಎಚ್‌.ಬಿ. ಕೊರವರ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT