ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗದಗ | ಹೆಚ್ಚಿದ ನಕಲಿ ನಂಬರ್‌ ಪ್ಲೇಟ್‌ ಹಾವಳಿ: ‘ಥರ್ಡ್ ಐ’ಗೂ ಸಿಗದ ಗುರುತು

ಸಂಚಾರ ನಿಯಮ ಉಲ್ಲಂಘಿಸಿ ಪುಂಡಾಟ
ಚಂದ್ರು ಎಂ. ರಾಥೋಡ್‌
Published 24 ಜುಲೈ 2024, 4:59 IST
Last Updated 24 ಜುಲೈ 2024, 4:59 IST
ಅಕ್ಷರ ಗಾತ್ರ

ನರೇಗಲ್:‌ ಪಟ್ಟಣದಲ್ಲಿ ಹಾಗೂ ಜಿಲ್ಲೆಯ ವಿವಿಧೆಡೆ ಅಳವಡಿಸಿರುವ ಥರ್ಡ್‌ ಐ (ಮೂರನೇ ಕಣ್ಣು)ನಿಂದ ತಪ್ಪಿಸಿಕೊಳ್ಳಲು ನಕಲಿ ನಂಬರ್‌ ಪ್ಲೇಟ್‌ ಅಳವಡಿಸುವವರ ಸಂಖ್ಯೆ ಹೆಚ್ಚಾಗಿದೆ.

ಅಲ್ಲದೆ ದ್ವಿಚಕ್ರ ವಾಹನಗಳಾದ ಬೈಕ್‌, ಸ್ಕೂಟಿ, ಲೂನಾಗಳ ನಂಬರ್‌ ಪ್ಲೇಟ್‌ ಮೇಲೆ ಸ್ಟೀಕರ್‌ ಅಂಟಿಸುವುದು,  ರಬ್ಬರ್‌, ದಾರ ಅಳವಡಿಸುವ ಮಾಡಲಾಗುತ್ತಿದೆ. ಇದರಿಂದ ‘ಥರ್ಡ್‌ ಐ’ನಲ್ಲಿ ಈ ಬೈಕ್‌ಗಳ ನಂಬರ್‌ ಪ್ಲೇಟ್ ಸ್ಕ್ಯಾನ್ ಆಗುತ್ತಿಲ್ಲ. ಸಂಚಾರ ನಿಯಮ ಉಲ್ಲಂಘಿಸಿದಾಗ ಈ ಬೈಕ್ ಸವಾರರನ್ನು ಗುರುತಿಸುವುದೇ ಸಂಚಾರ ಪೊಲೀಸರಿಗೆ ಹಾಗೂ ಆರ್‌ಟಿಒ ಅಧಿಕಾರಿಗಳಿಗೆ ಕಷ್ಟವಾಗಿದೆ.

ಹೆಲ್ಮೆಟ್ ಧರಿಸದೆ, ವಿಮೆ ಮಾಡಿಸದೆ, ವಾಹನದ ದಾಖಾಲಾತಿಗಳು ಇಲ್ಲದೆ ದ್ವಿಚಕ್ರ ವಾಹನ ಚಲಾಯಿಸುವವರು ವಿವಿಧ ರೀತಿಯ ಅನ್ಯ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಎಸ್‌ಎಸ್‌ಆರ್‌ ನಂಬರ್‌ ಇದ್ದರೂ ಅದನ್ನು ತೆಗೆದು ಪ್ಲೇನ್‌ ನಂಬರ್‌ ಪ್ಲೇಟ್‌ ಅಳವಡಿಸುತ್ತಿದ್ದಾರೆ.

‘ಥರ್ಡ್‌ ಐ’ನಲ್ಲಿ ಸೆರೆ ಸಿಗದಂತೆ ನಂಬರ್‌ ಪ್ಲೇಟ್‌ ತೆಗೆದು ಹಾಕಿ ಸಂಚರಿಸುತ್ತಿರುವ ವಾಹನಗಳ ಕುರಿತು ದೂರುಗಳು ಬಂದಿವೆ. ಇಂತವರ ಹಾಗೂ ನಕಲಿ ನಂಬರ್‌ ಪ್ಲೇಟ್‌ ಡಿಫೆಕ್ಟಿವ್‌ ಸೈಲೆನ್ಸರ್‌ ಬಳಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
ಐಶ್ವರ್ಯ ನಾಗರಾಳ, ಪಿಎಸ್‌ಐ, ನರೇಗಲ್‌

ಕೆಲವರು ಬೇರೆ ವಾಹನದ ನಂಬರ್‌ಗಳನ್ನು ತಮ್ಮ ಬೈಕ್‌ಗೆ ಹಾಕುತ್ತಿದ್ದಾರೆ. ಇದರಿಂದ ‘ಥರ್ಡ್‌ ಐ’ ಕ್ಯಾಮೆರಾದಲ್ಲಿ ಸೆರೆಸಿಕ್ಕಾಗ ಮೂಲ ಮಾಲೀಕರಿಗೆ ನೋಟಿಸ್‌ ಹೋಗುತ್ತಿದೆ. ಹೀಗೆ ನರೇಗಲ್‌ ಪಟ್ಟಣದ ಬಾರ್‌ ಬೆಂಡಿಂಗ್‌ ಮೇಸ್ತ್ರಿ ದೇವಪ್ಪ ಯಂಕಪ್ಪ ಮಾಳೋತ್ತರ ಎನ್ನುವರಿಗೆ ಗದಗ-ಹೊಂಬಳ ರೋಡ್‌ನಲ್ಲಿ ಹೆಲ್ಮೇಟ್‌ ಧರಿಸದೆ ರಸ್ತೆ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಮಾ. 15ಕ್ಕೆ ನೋಟಿಸ್‌ ಬಂದಿತ್ತು. ಇವರ ಬೈಕ್‌ ಪ್ಯಾಷನ್‌ ಪ್ರೋ ಡಿಆರ್‌ಎಸ್‌ ಕ್ಯಾಸ್ಟ್‌, ಕೆಎ-26, ವಿ-1517 ಆಗಿದೆ. ಆದರೆ ಇದೇ ನಂಬರ್‌ನ ಎಚ್‌ಎಫ್‌ ಡಿಲಕ್ಸ್‌ ಬೈಕ್‌ ರಸ್ತೆ ನಿಯಮ ಉಲ್ಲಂಘನೆ ಮಾಡಿರುವುದು ಫೋಟೊದಲ್ಲಿ ಕಂಡು ಬಂದಿತು. ನಂತರ ಪೊಲೀಸರ ಅಧಿಕಾರಿಗಳ ಸಹಾಯದಿಂದ ಮೂಲ ದಾಖಲೆಗಳನ್ನು ನೀಡಿ ದಂಡ ರದ್ದುಪಡಿಸಲಾಗಿದೆ.

‘ಈ ರೀತಿಯಲ್ಲಿ ಅನೇಕರು ನಕಲಿ ನಂಬರ್‌ ಪ್ಲೇಟ್‌ಗಳನ್ನು ಬಳಕೆ ಮಾಡಿ, ಬೇಕಾಬಿಟ್ಟಿಯಾಗಿ ಬೈಕ್ ಚಲಾಯಿಸಿ ಸಂಚಾರ ನಿಯಮ ಉಲ್ಲಂಘಿಸುತ್ತಿದ್ದಾರೆ. ಇದರಿಂದ ಎಲ್ಲಾ ದಾಖಲೆಗಳನ್ನು ಹೊಂದಿರುವ ಸಾಮಾನ್ಯರಿಗೆ ತೊಂದರೆ ಆಗುತ್ತಿದೆ. ನಕಲಿ ನಂಬರ್‌ ಪ್ಲೇಟ್‌ ಹಾವಳಿ ತಡೆಯಲು ಅಧಿಕಾರಿಗಳು ಮುಂದಾಗಬೇಕು. ಇಲ್ಲವಾದರೆ ಇದನ್ನೇ ಹವ್ಯಾಸ ಮಾಡಿಕೊಳ್ಳುವ ಯುವಕರು, ಅನಿಯಮಿತ, ಅಕ್ರಮ ಚಟುವಟಿಕೆಗೆ ಬಳಕೆ ಮಾಡಿಕೊಳ್ಳಲು ಮುಂದಾಗುತ್ತಾರೆ’ ಎನ್ನುತ್ತಾರೆ ಹಿರಿಯ ವಕೀಲ ಬಿ. ಎ. ಹಿರೇಮಠ.

ಕಠಿಣ ಕ್ರಮಕ್ಕೆ ಆಗ್ರಹ

‘ನಂಬರ್ ಪ್ಲೇಟ್ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಏಕತ್ವವನ್ನು ಹೆಚ್ಚಿಸಲು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಕೇಂದ್ರ ಮೋಟಾರು ವಾಹನ ಕಾಯಿದೆ 1988 ಅನ್ನು ತಿದ್ದುಪಡಿ ಮಾಡಿತು. 2005ರಲ್ಲಿ ಎಚ್‌ಎಸ್‌ಆರ್‌ಪಿ ಪರಿಚಯಿಸಿತು. ತಿದ್ದುಪಡಿಯ ನಂತರ ಹಳೆಯ ಮತ್ತು ಹೊಸ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಕೋಡೆಡ್ ಸ್ಟಿಕ್ಕರ್ ಕಡ್ಡಾಯ ಮಾಡಿದೆ. ಅಳವಡಿಸಿಕೊಳ್ಳಲು ಅವಧಿಯನ್ನು ವಿಸ್ತರಣೆ ಮಾಡಿದೆ. ಆದರೆ ಇದನ್ನೇ ಲಾಭವಾಗಿ ಪಡೆದ ಅನೇಕರು ರಸ್ತೆ ನಿಯಮಗಳನ್ನು ಉಲ್ಲಂಘಿಸಲು ಅಡ್ಡಾದಿಡ್ಡಿಯಾಗಿ ವಾಹನ ಓಡಿಸಲು ಬಳಕೆ ಮಾಡುತ್ತಿದ್ದಾರೆ. ಆದ್ದರಿಂದ ನಂಬರ್‌ ಪ್ಲೇಟ್‌ಗಳಿಗೆ ಬಣ್ಣ ಹಚ್ಚುವ ಅಲಂಕಾರ ಮಾಡುವ ರಬ್ಬರ ಕಟ್ಟುವ ಪುಂಡರಿಗೆ ಬುದ್ದಿ ಕಲಿಸಲು ಇಲಾಖೆ ಮುಂದಾಗಬೇಕು’ ಎಂದು ವಕೀಲ ಪ್ರಸಾದ ಸತ್ಯಣ್ಣವರ ಹೇಳಿದರು.

ರಸ್ತೆಗಳಲ್ಲಿ ಪುಂಡಾಟ

‘ಕೆಲ ಯುವಕರು ಬೇಕಂತಲೇ ವಾಹನದ ನಂಬರ್‌ ಪ್ಲೇಟ್‌ ತೆಗೆದು ಹಾಕಿ ಸೈಲೆನ್ಸರ್‌ ಪೈಪ್‌ ಅನ್ನು ವಿಭಿನ್ನವಾಗಿ ಅಳವಡಿಸಿ ಜೋರಾಗಿ ಸೌಂಡ್‌ ಮಾಡುತ್ತಾರೆ. ವಿದ್ಯಾರ್ಥಿನಿಯರು ಶಾಲಾ ಕಾಲೇಜಿಗೆ ಹೋಗುವಾಗ ಮನೆಗೆ ತೆರಳುವಾಗ ಬಸ್‌ ನಿಲ್ದಾಣದಿಂದ ಕಾಲೇಜಿನವರೆಗೆ ಜೋರಾಗಿ ಸಂಚರಿಸಿ ಪುಂಡಾಟ ಮಾಡುತ್ತಾರೆ. ಅಂತವರನ್ನು ಮಟ್ಟ ಹಾಕಲು ಸಂಬಂಧಪಟ್ಟ ಇಲಾಖೆ ಮುಂದಾಗಬೇಕು’ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ಹಿಂಬದಿ ನಂಬರ್‌ ಪ್ಲೇಟ್‌ಗೆ ರಬ್ಬರ್‌ ಹಾಕಿರುವುದು
ಹಿಂಬದಿ ನಂಬರ್‌ ಪ್ಲೇಟ್‌ಗೆ ರಬ್ಬರ್‌ ಹಾಕಿರುವುದು
ಮುಂಬದಿ ನಂಬರ್‌ ಪ್ಲೇಟ್‌ಗೆ ರಬ್ಬರ್‌ ಹಾಕಿರುವುದು
ಮುಂಬದಿ ನಂಬರ್‌ ಪ್ಲೇಟ್‌ಗೆ ರಬ್ಬರ್‌ ಹಾಕಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT