ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನರಗುಂದ | ನಿರಂತರ ಮಳೆ: ಆತಂಕದಲ್ಲಿ ಹೆಸರು ಬೆಳೆದ ರೈತರು

Published 25 ಜುಲೈ 2024, 5:21 IST
Last Updated 25 ಜುಲೈ 2024, 5:21 IST
ಅಕ್ಷರ ಗಾತ್ರ

ನರಗುಂದ: ಪಟ್ಟಣ ಸೇರಿದಂತೆ ತಾಲ್ಲೂಕಿನೆಲ್ಲೆಡೆ ಕಳೆದ ಒಂದು ವಾರದಿಂದ ಜಿಟಿಜಿಟಿ ಮಳೆ ನಿರಂತರ ಸುರಿಯುತ್ತಿದ್ದು ಜನಜೀವನ ಅಸ್ಯವ್ಯಸ್ತಗೊಂಡಿದೆ.

ಕಳೆದ ಎರಡು ದಿನಗಳಿಂದ ಮಳೆ ಜೋರಾಗಿ ಸುರಿಯುತ್ತಿದ್ದು, ಹೆಸರು ಬೆಳೆದಿರುವ ರೈತರು ತೀವ್ರ ಆತಂಕದಲ್ಲಿ ಮುಳುಗಿದ್ದಾರೆ. ಇದರಿಂದ ರೈತರ ಬಾಳು ಮತ್ತೆ ಗೋಳು ಎನ್ನುವಂತಾಗಿದೆ. ಉಳಿದ ಬೆಳೆಗಳಿಗೂ ತೇವಾಂಶ ಹೆಚ್ಚಾಗಿ ವಿವಿಧ ರೋಗಕ್ಕೆ ತುತ್ತಾಗುತ್ತಿವೆ.

ಹೆಸರು ಬೆಳೆ ಕೆಲವೆಡೆ ಮೊಗ್ಗು, ಹೂ ಬಿಟ್ಟಿವೆ. ಮತ್ತೊಂದೆಡೆ ಕಾಯಿ ಕಟ್ಟುವ ಹಂತದಲ್ಲಿವೆ. ಇನ್ನೊಂದೆಡೆ ಕಟಾವು ಮಾಡುವ ಹಂತಕ್ಕೆ ತಲುಪಿವೆ. ಆದರೆ ಈ ನಿರಂತರ ಮಳೆಯಿಂದ ಇಡಿ ಹೆಸರು ಬೆಳೆ ಹಾನಿಯಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತ ದುಃಸ್ಥಿತಿ ನಿರ್ಮಾಣವಾಗಿದೆ.

ಮುಂಗಾರು ಹಂಗಾಮಿನ ಪ್ರಮುಖ ವಾಣಿಜ್ಯ ಬೆಳೆಯಾದ ಹೆಸರು ಬೆಳೆ ರೈತರ ಕೈ ಹಿಡಿದು ಆರ್ಥಿಕ ಮಟ್ಟ ಹೆಚ್ಚಲು ಸಹಕಾರಿಯಾಗುತ್ತದೆ. ಈ ಬಾರಿ ಸಕಾಲಕ್ಕೆ ಮಳೆಯಾದ ಪರಿಣಾಮ ಶೇ 50ಕ್ಕೂ ಹೆಚ್ಚು ರೈತರು 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆ ಮಾಡಿದ್ದಾರೆ. ಕೇವಲ 60 ದಿನಗಳಲ್ಲಿ ಬರುವ ಬೆಳೆ ಇದಾಗಿರುವುದರಿಂದ ರೈತರ ಚಿತ್ತ ಹೆಸರಿನತ್ತ ಎಂಬಂತಾಗಿದೆ. ಇದೀಗ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ರೈತರು ತೀವ್ರ ಆತಂಕಗೊಂಡಿದ್ದು ಹೆಸರು ಬೆಳೆ ಹಾನಿಯಾಗುವುದು ನಿಶ್ಚಿತ ಎಂಬಂತಾಗಿದೆ.

‘ಹೆಸರು ಬೆಳೆಗೆ ಸೂರ್ಯನ ಸ್ಪರ್ಶವೇ ಇಲ್ಲದಂತಾಗಿ ಹಳದಿ ವರ್ಣಕ್ಕೆ ತಿರುಗುತ್ತಿವೆ. ಮಗ್ಗಿ, ಹೂ ಉದರುತ್ತಿವೆ. ಪ್ರತಿವರ್ಷವೂ ಬೆಳೆಹಾನಿಯಾದರೆ ಜೀವನ ನಡೆಸುವುದಾ ದರೂ ಹೇಗೆ‘ ಎಂದು ಹೆಸರು ಬೆಳೆ ಬೆಳೆದ ರೈತ ಕುರ್ಲಗೇರಿಯ ಯಲ್ಲಪ್ಪ ಚಲುವಣ್ಣವರ ಆತಂಕದಿಂದ ಪ್ರಶ್ನಿಸಿದರು.

ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಹೊಂದಿರುವ ಹಾಗೂ ಸರ್ಕಾರ ಬೆಂಬಲ ಬೆಲೆಯಲ್ಲೂ ಖರೀದಿಸಿದರೂ ಯೋಗ್ಯ ಬೆಲೆ ದೊರೆಯುವುದರಿಂದ ಹೆಸರು ಬೆಳೆಯ ಮೇಲೆ ರೈತರು ಅವಲಂಬಿತರಾಗಿದ್ದರು. ಈಗಲಾದರೂ ಮಳೆ ನಿಲ್ಲಬೇಕಿದೆ. ಈರುಳ್ಳಿ, ಮೆಕ್ಕೆಜೋಳ, ಹತ್ತಿ ಬೆಳೆಗಳು ತೇವಾಂಶ ಹೆಚ್ಚಾಗಿ ರೋಗಕ್ಕೆ ತುತ್ತಾಗುತ್ತಿವೆ. ಕಳೆಯೂ ಹೆಚ್ಚಾಗಿದ್ದು ಅದನ್ನು ಕಳೆಯಲು ರೈತರು. ಚಿಂತೆ ಮಾಡುವಂತಾಗಿದೆ.

ಜನಜೀವನ ಅಸ್ತವ್ಯಸ್ತ: ನಿರಂತರ ಮಳೆಯಿಂದ ರಸ್ತೆಗಳು ಕೆಸರುಮಯವಾಗಿವೆ. ರಸ್ತೆಗಳು ಸಂಚರಿಸದಂತಾಗಿವೆ. ಗ್ರಾಮೀಣ ಪ್ರದೇಶದಲ್ಲಂತೂ ರಸ್ತೆಗಳ ಸ್ಥಿತಿ ಹೇಳದಂತಾಗಿವೆ. ಒಟ್ಟಾರೆ ಈ ಮಳೆ ರೈತರಿಗೆ ಬೆಳೆಹಾನಿ ಉಂಟು ಮಾಡಿದರೆ ತಂಪಾದ ವಾತಾವರಣದಿಂದ ಜನಜೀವನಕ್ಕೆ ತೊಂದರೆ ಉಂಟಾಗಿದೆ.

ನರಗುಂದ ತಾಲ್ಲೂಕಿನ ಲ್ಲಿ ನಿರಂತರ ಣಳೆಗೆ ಹೆಸರು ಬೆಳೆ ಹಾನಿಯಾಗುವ ಹಂತಕ್ಕೆ ತಲುಪಿದೆ
ನರಗುಂದ ತಾಲ್ಲೂಕಿನ ಲ್ಲಿ ನಿರಂತರ ಣಳೆಗೆ ಹೆಸರು ಬೆಳೆ ಹಾನಿಯಾಗುವ ಹಂತಕ್ಕೆ ತಲುಪಿದೆ

ಸಂತೆಗೂ ಪರದಾಟ: ಬುಧವಾರವೂ ನಿರಂತರವಾಗಿ ಜೋರಾಗಿ ಮಳೆ ಸುರಿದ ಪರಿಣಾಮ ಸಂತೆ ಮಾಡಲು ಸಾರ್ವಜನಿಕರು, ವಿಶೇಷವಾಗಿ ಮಹಿಳೆಯರು ಪರದಾಡಿದ್ದು ಕಂಡು ಬಂತು.

ನರಗುಂದ ತಾಲ್ಲೂಕಿನ ಲ್ಲಿ ನಿರಂತರ ಣಳೆಗೆ ಹೆಸರು ಬೆಳೆ ಹಾನಿಯಾಗುವ ಹಂತಕ್ಕೆ ತಲುಪಿದೆ
ನರಗುಂದ ತಾಲ್ಲೂಕಿನ ಲ್ಲಿ ನಿರಂತರ ಣಳೆಗೆ ಹೆಸರು ಬೆಳೆ ಹಾನಿಯಾಗುವ ಹಂತಕ್ಕೆ ತಲುಪಿದೆ
ಮುಂಗಾರು ವಾಣಿಜ್ಯ ಬೆಳೆ ಹೆಸರಿನ ಫಸಲು ರೈತರಿಗೆ ಆಶಾಕಿರಣವಾಗಿದೆ. ಆದರೆ ಈ ನಿರಂತರ ಮಳೆಯಿಂದ ಹೆಸರು ಬೆಳೆ ಹಾನಿಯಾಗುವಂತೆ ಮಾಡಿದೆ
ಅರ್ಜುನ ಮಾನೆ ನರಗುಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT