ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಕಾಲದಲ್ಲಿ ತುಂಗಭದ್ರೆ ಬರಿದಾಗುವ ಆತಂಕ

ನದಿಯಲ್ಲಿ ನೀರು ನಿಲ್ಲದಿದ್ದರೆ ಬೇಸಿಗೆಯಲ್ಲಿ ಪೈರು ಪಡೆದುಕೊಳ್ಳುವುದು ಅಸಾಧ್ಯ
Published : 17 ಆಗಸ್ಟ್ 2024, 4:45 IST
Last Updated : 17 ಆಗಸ್ಟ್ 2024, 4:45 IST
ಫಾಲೋ ಮಾಡಿ
Comments

ಮುಂಡರಗಿ: ಹೊಸಪೇಟೆ ಬಳಿಯ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಮುರಿದು ಈಗಾಗಲೇ ಜಲಾಶಯದಲ್ಲಿ ಸಂಗ್ರಹವಾಗಿದ್ದ ಸುಮಾರು 60 ಟಿಎಂಸಿ ನೀರು ಖಾಲಿಯಾಗಿದೆ. ಅಕಾಲದಲ್ಲಿ ಜಲಾಶಯದ ನೀರು ಖಾಲಿಯಾಗುತ್ತಿರುವುದು ತಾಲ್ಲೂಕಿನ ರೈತರಲ್ಲಿ ತೀವ್ರ ಆತಂಕ ಮೂಡಿಸಿದೆ.

ಕಳೆದ ಹಲವು ದಿನಗಳಿಂದ ಹೊಸಪೇಟೆ ತುಂಗಭದ್ರಾ ಜಲಾಶಯದ ನೀರು ಶರವೇಗದಲ್ಲಿ ಖಾಲಿಯಾಗುತ್ತಿದ್ದು, ಮುಂಗಾರಿನ ಕೊನೆಯ ಅಕ್ಟೋಬರ್ ಹಾಗೂ ನವೆಂಬರ್‌ನಲ್ಲಿ ತಮ್ಮ ಜಮೀನುಗಳಿಗೆ ತುಂಗಭದ್ರೆಯ ನೀರು ದೊರೆಯುತ್ತದೆಯೋ, ಇಲ್ಲವೊ ಎನ್ನುವ ಅನುಮಾನ ಇಲ್ಲಿಯ ರೈತರನ್ನು ಕಾಡತೊಡಗಿದೆ.

ಪ್ರತಿ ವರ್ಷ ತುಂಗಭದ್ರಾ ನದಿ ದಂಡೆಯ ಮೇಲಿರುವ ತಾಲ್ಲೂಕಿನ ಶಿಂಗಟಾಲೂರ, ಶೀರನಹಳ್ಳಿ, ಗಂಗಾಪುರ, ಕೊರ್ಲಹಳ್ಳಿ, ಕಕ್ಕೂರು, ಕಕ್ಕೂರುತಾಂಡಾ, ಹೆಸರೂರು ಮೊದಲಾದ ಗ್ರಾಮಗಳ ರೈತರು ತುಂಗಭದ್ರಾ ನದಿ ನೀರನ್ನು ನಂಬಿ ಧೈರ್ಯದಿಂದ ಭತ್ತ, ಕಬ್ಬು, ಸೂರ್ಯಕಾಂತಿ ಮೊದಲಾದ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದ್ದರು.

ಸಾಮಾನ್ಯವಾಗಿ ಮಳೆಗಾಲದ ಜೂನ್, ಜುಲೈ, ಆಗಸ್ಟ್‌ನಲ್ಲಿ ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿರುತ್ತದೆ. ಆದರೆ ಈಗ ಹೊಸಪೇಟೆ ಜಲಾಶಯದ ಗೇಟ್ ಕೊಚ್ಚಿ ಹೋಗಿರುವುದರಿಂದ ನದಿಯ ನೀರು ವೇಗವಾಗಿ ಖಾಲಿಯಾಗುತ್ತಲಿದೆ.

ಪ್ರಸ್ತುತ ಮುಂಗಾರಿನಲ್ಲಿ ಮಲೆನಾಡು, ಶಿವಮೊಗ್ಗ ಹಾಗೂ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಸಾಮಕಷ್ಟು ಮಳೆ ಸುರಿದದ್ದರಿಂದ ತಾಲ್ಲೂಕಿನ ಹಮ್ಮಿಗಿ ಗ್ರಾಮದಲ್ಲಿರುವ ಶಿಂಗಟಾಲೂರ ಏತ ನೀರಾವರಿ ಯೋಜನೆಯ ಬ್ಯಾರೇಜ್ ಬೇಗನೆ ಭರ್ತಿಯಾಗಿತ್ತು.

ಆ.12ರಂದು 12,142 ಕ್ಯುಸೆಕ್, ಆ.13ರಂದು 20,447 ಕ್ಯುಸೆಕ್, ಆ.14ರಂದು 17,940 ಕ್ಯುಸೆಕ್ ಹಾಗೂ ಆ.15ರಂದು 17,551 ಕ್ಯುಸೆಕ್ ನೀರು ಬ್ಯಾರೇಜಿಗೆ ಹರಿದು ಬಂದಿದ್ದು, ನಿತ್ಯ ಅಷ್ಟೇ ಪ್ರಮಾಣದ ನೀರನ್ನು ತುಂಗಭದ್ರಾ ನದಿಗೆ ಹರಿಸಲಾಗುತ್ತಿದೆ.

ಇಲ್ಲಿಂದ ಹರಿದು ಹೋಗುವ ಹೆಚ್ವುವರಿ ನೀರು ಹೊಸಪೇಟೆಯ ತುಂಗಭದ್ರಾ ಜಲಾಶಯದಲ್ಲಿ ಸಂಗ್ರಹಗೊಳ್ಳುತ್ತದೆ. ಅಲ್ಲಿ ಸಂಗ್ರಹಗೊಳ್ಳುವ ನೀರು ತಟಸ್ಥವಾಗಿ ನಿಂತರೆ ಇಲ್ಲಿಯ ನದಿಯಲ್ಲಿಯೂ ನೀರು ತಟಸ್ಥವಾಗಿ ನಿಲ್ಲುತ್ತದೆ. ಸಾಮಾನ್ಯವಾಗಿ ಅಕ್ಟೋಬರ್ ಹಾಗೂ ನವೆಂಬರ್‌ವರೆಗೂ ನದಿಯಲ್ಲಿ ನೀರು ತಟಸ್ಥವಾಗಿ ನಿಲ್ಲುವುದರಿಂದ ನದಿಯಾಶ್ರಿತ ನೀರಾವರಿ ರೈತರಿಗೆ ತುಂಬಾ ಅನಕೂಲವಾಗುತ್ತದೆ.

ವಾಡಿಕೆಯಂತೆ ಈ ವರ್ಷವೂ ನದಿ ದಂಡೆಗಳಲ್ಲಿ ನೀರಾವರಿ ಜಮೀನುಗಳುಳ್ಳ ರೈತರು ಸಾವಿರಾರು ಎಕರೆ ಭತ್ತ, ಕಬ್ಬು ನಾಟಿ ಮಾಡಿದ್ದಾರೆ. ಜೊತೆಗೆ ಸಾವಿರಾರು ರೈತರು ಸೂರ್ಯಕಾಂತಿ, ಹತ್ತಿ, ಮೆಕ್ಕೆಜೋಳ ಹಾಗೂ ವಿವಿಧ ತೋಟಗಾರಿಕೆ ಬೆಳೆಗಳನ್ನು ಬಿತ್ತಿದ್ದಾರೆ. ಸದ್ಯ ಲಭ್ಯವಿರುವ ನೀರಿನ ಪ್ರಮಾಣದಲ್ಲಿ ಪ್ರಸ್ತುತ ವರ್ಷ ಶತಾಯ ಗತಾಯ ಮುಂಗಾರು ಪೈರನ್ನು ಮಾತ್ರ ಪಡೆದುಕೊಳ್ಳಬಹುದಾಗಿದ್ದು, ಬೇಸಿಗೆ ಪೈರು ಪಡೆದುಕೊಳ್ಳುವುದು ಅಸಾಧ್ಯವೆನಿಸುತ್ತಿದೆ. ನದಿ ಹಾಗೂ ಜಲಾಶಯದ ನೀರಿನ ಲಭ್ಯತೆಯನ್ನು ಆಧರಿಸಿ ಸಂಬಂಧಪಟ್ಟ ಅಧಿಕಾರಿಗಳು ಮುಂಚಿತವಾಗಿಯೇ ರೈತರಿಗೆ ಬೇಸಿಗೆಯಲ್ಲಿ ಬಿತ್ತನೆ ಮಾಡುವ ಕುರಿತು ಸ್ಪಷ್ಟನೆ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ತುಂಗಭದ್ರೆಯನ್ನು ನೆಚ್ಚಿಕೊಂಡು ಪ್ರತಿ ವರ್ಷ ಮುಂಗಾರು ಹಂಗಾಮಿನಲ್ಲಿ ಸಾಕಷ್ಟು ಬಳೆ ಪಡೆದುಕೊಂಡು ಬೇಸಿಗೆಯಲ್ಲೂ ಉತ್ತಮವಾಗಿ ಬೆಳೆ ಪಡೆದುಕೊಳ್ಳುತ್ತಿದ್ದೆವು. ಈಗ ನದಿಯ ನೀರು ತೀವ್ರಗತಿಯಲ್ಲಿ ಖಾಲಿಯಾಗುತ್ತಿದ್ದು ಬೇಸಿಗೆಯಲ್ಲಿ ಏನು ಮಾಡಬೇಕು ಎನ್ನುವುದು ತಿಳಿಯದಾಗಿದೆ
ರುದ್ರಯ್ಯ ಹಿರೇಮಠ ಶಿಂಗಟಾಲೂರ ಗ್ರಾಮದ ರೈತ

ಮಳೆಯಾ‌ಗದಿದ್ದರೆ ಕಾದಿದೆ ಸಂಕಷ್ಟ ಮುಂಗಾರು ಮುಕ್ತಾಯಗೊಳ್ಳಲು ಇನ್ನೂ ಸಾಕಷ್ಟು ಕಾಲಾವಕಾಶವಿದ್ದು ಈ ಅವಧಿಯಲ್ಲಿ ಶಿವಮೊಗ್ಗ ಹಾಗೂ ಮಲೆನಾಡು ಭಾಗಗಳಲ್ಲಿ ಮೊದಲಿನಂತೆ ಸಾಕಷ್ಟು ಮಳೆ ಸುರಿದು ಹೊಸಪೇಟೆ ಜಲಾಶಯ ಭರ್ತಿಯಾದರೆ ಮಾತ್ರ ಇಲ್ಲಿಯ ರೈತರು ವರ್ಷಪೂರ್ತಿ ನದಿ ನೀರನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಮುಂಗಾರಿನ ಕೊನೆಯ ಭಾಗದಲ್ಲಿಯೇ ರೈತರು ನದಿ ನೀರಿಗಾಗಿ ಪರದಾಡುವ ಪರಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ರೈತರು ತಿಳಿಸಿದ್ದಾರೆ. ಹೊಸಪೇಟೆ ಜಲಾಶಯದ ಗೇಟ್ ಬೇಗನೆ ದುರಸ್ತಿಗೊಳಿಸಿದರೆ ಸಂಭವಿಸಬಹುದಾದ ನೀರಿನ ನಷ್ಟವನ್ನು ಕಡಿಮೆಮಾಡಿಕೊಳ್ಳಬಹುದು. ಇಲ್ಲದಿದ್ದರೆ ತುಂಗಭದ್ರೆಯನ್ನು ನಂಬಿಕೊಂಡಿರುವ ತಾಲ್ಲೂಕಿನ ಸಾವಿರಾರು ರೈತರು ಈ ವರ್ಷ ಭಾರಿ ನಷ್ಟ ಅನುಭವಿಸಬೇಕಾಗುತ್ತದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT