ಭಾನುವಾರ, 30 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಲೈಂಗಿಕ ದೌರ್ಜನ್ಯ | ಡಾ.ಸೂರಜ್‌ ರೇವಣ್ಣ ವಿರುದ್ಧ ಪ್ರಕರಣ ದಾಖಲು

ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು
Published 22 ಜೂನ್ 2024, 15:36 IST
Last Updated 22 ಜೂನ್ 2024, 15:36 IST
ಅಕ್ಷರ ಗಾತ್ರ

ಹಾಸನ: ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪದ ಮೇಲೆ ವಿಧಾನಪರಿಷತ್ ಸದಸ್ಯ ಡಾ.ಸೂರಜ್‌ ರೇವಣ್ಣ ವಿರುದ್ಧ ಜಿಲ್ಲೆಯ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಶನಿವಾರ ಸಂಜೆ ಪ್ರಕರಣ ದಾಖಲಾಗಿದೆ.

ಶನಿವಾರ ಸಂಜೆ ಗ್ರಾಮಾಂತರ ಠಾಣೆಗೆ ಬಂದ ಸಂತ್ರಸ್ತ ಯುವಕ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ವೆಂಕಟೇಶ್‌ ನಾಯ್ಡು ಅವರ ಎದುರು ಹೇಳಿಕೆ ದಾಖಲಿಸಿದ್ದಾರೆ. ಅದರಂತೆ ಡಾ.ಸೂರಜ್‌ ರೇವಣ್ಣ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 377, 342, 506, 34ರ ಅಡಿ ಪ್ರಕರಣ ದಾಖಲಿಸಲಾಗಿದೆ.

‘ವಿಧಾನಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಅವರು ತಮ್ಮ ಗನ್ನಿಗಡದ ಫಾರಂಹೌಸ್‌ಗೆ ಬರಮಾಡಿಕೊಂಡು ನನ್ನ ಮೇಲೆ ಲೈಂಗಿಕ ಸಂಭೋಗ ಹಾಗೂ ದೌರ್ಜನ್ಯ ನಡೆಸಿದ್ದಾರೆ. ಹನುಮನಹಳ್ಳಿ ಗ್ರಾಮದ ಶಿವಕುಮಾರ್ ಮತ್ತು ಸೂರಜ್ ರೇವಣ್ಣ ಅವರಿಂದ ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಇದೆ. ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಯುವಕ ಲಿಖಿತ ದೂರು ನೀಡಿದ್ದಾರೆ.

ಈ ಬಗ್ಗೆ ಸಂತ್ರಸ್ತ ಬೆಂಗಳೂರಿಗೆ ತೆರಳಿ ಶುಕ್ರವಾರ ಪೊಲೀಸ್‌ ಮಹಾನಿರ್ದೇಶಕರು ಹಾಗೂ ಹಾಸನ ಎಸ್ಪಿಗೆ  ದೂರು ಸಲ್ಲಿಸಿದ್ದರು. ಅದನ್ನು ಹೊಳೆನರಸೀಪುರ ಗ್ರಾಮಾಂತರ ಠಾಣೆಗೆ ವರ್ಗಾಯಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಎಎಸ್ಪಿ ವೆಂಕಟೇಶ್‌ ನಾಯ್ಡು ಹೇಳಿಕೆ ಪಡೆದರು. ನಂತರ ಪ್ರಕರಣ ದಾಖಲಿಸಲಾಗಿದೆ.

ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆ ಬಳಿ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಒಂದು ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದೆ.

ಹರಿದಾಡಿದ ಆಡಿಯೊ: ಪ್ರಕರಣಕ್ಕೆ ಸಂಬಂಧಿಸಿದ ಸೂರಜ್‌ ರೇವಣ್ಣ ಹಾಗೂ ಸಂತ್ರಸ್ತ ಯುವಕನ ನಡುವಿನ ಸಂಭಾಷಣೆ ಎನ್ನಲಾದ ಅಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

‘ಘಟನೆ ನಡೆದು ಹೋಗಿದೆ. ಈಗ ಏನು ಮಾಡಲು ಸಾಧ್ಯ? ಏನು ಮಾಡಬೇಕು ಎಂದು ನೀನೇ ಹೇಳು’ ಎಂದು ಸಂತ್ರಸ್ತನ ಮನವೊಲಿಕೆ ಯತ್ನಿಸಿರುವುದು ಆಡಿಯೊದಲ್ಲಿದೆ. ಆದರೆ, ಆ ಧ್ವನಿ ಸೂರಜ್‌ ಅವರದ್ದೇ ಎಂಬುದು ಖಚಿತವಾಗಿಲ್ಲ.

‘ನನ್ನ ವಿರುದ್ಧ ಷಡ್ಯಂತ್ರ’

‘ನನ್ನ ವಿರುದ್ಧ ಷಡ್ಯಂತ್ರ ನಡೆಸಲಾಗಿದೆ. ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ. ಇದನ್ನು ತಿರಸ್ಕರಿಸುತ್ತೇನೆ. ಕಾನೂನಿನ ಅಡಿ ಏನು ಆಗಬೇಕೋ ಅದು ಆಗುತ್ತದೆ. ಆತನ ವಿರುದ್ಧವೂ ಪ್ರಕರಣ ದಾಖಲಾಗಿದೆ. ತನಿಖೆಯ ನಂತರ ಸತ್ಯಾಸತ್ಯತೆ ಹೊರಬರಲಿದೆ’ ಎಂದು ಡಾ.ಸೂರಜ್‌ ರೇವಣ್ಣ ಪ್ರತಿಕ್ರಿಯಿಸಿದ್ದಾರೆ.

‘ಇದು ಸಂಪೂರ್ಣ ರಾಜಕೀಯ ಷಡ್ಯಂತ್ರ. ಈ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ. ತನಿಖೆ ನಡೆಯಲಿ. ರಾಜ್ಯದ ಜನ ಎಲ್ಲವನ್ನೂ ಗಮನಿಸುತ್ತಾರೆ’ ಎಂದರು.

ಸೆನ್‌ ಠಾಣೆಯಲ್ಲಿ ವಿಚಾರಣೆ

ಹಣಕ್ಕಾಗಿ ಸಂತ್ರಸ್ತ ಬ್ಲಾಕ್‌ಮೇಲ್‌ ಮಾಡಿರುವ ಕುರಿತು ಶುಕ್ರವಾರ ಹೊಳೆನರಸೀಪುರ ನಗರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಸೆನ್‌ ಠಾಣೆಯಲ್ಲಿ ಡಾ.ಸೂರಜ್‌ ರೇವಣ್ಣ ಅವರನ್ನು ಪೊಲೀಸರು ವಿಚಾರಣೆ ನಡೆಸಿದರು.

ಸೂರಜ್‌ ಅವರನ್ನು ಅವರ ಕಾರಿನಲ್ಲೇ ಗನ್ನಿಗಡದ ತೋಟದ ಮನೆಯಿಂದ ಇಲ್ಲಿನ ಸೆನ್‌ ಠಾಣೆಗೆ ಪೊಲೀಸರು ಕರೆತಂದಿದ್ದಾರೆ. ಸಂತ್ರಸ್ತ, ಸೂರಜ್ ಅವರಿಗೆ ಬ್ಲ್ಯಾಕ್ ಮೇಲ್ ಮಾಡಲು ಮಾಡಿದ್ದ ಎನ್ನಲಾದ ಕರೆಯ ಆಡಿಯೊ ರಿಕವರಿಗೆ ಯತ್ನ ನಡೆಯುತ್ತಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT