ಹಾಸನ: ವಿಧಾನಸಭೆ ಚುನಾವಣೆಯ ಸ್ಪರ್ಧೆಗೆ ಜಿಲ್ಲೆಯ 2 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು, ಇನ್ನೂ ಐದು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಘೋಷಣೆ ಬಾಕಿ ಉಳಿದಿದೆ. ಈ ಬಾರಿ ಜಿಲ್ಲೆಯಲ್ಲಿ ಕನಿಷ್ಠ ಖಾತೆಯನ್ನಾದರೂ ತೆರೆಯಬೇಕು ಎನ್ನುವ ಇರಾದೆಯಲ್ಲಿರುವ ಕಾಂಗ್ರೆಸ್, ಅಳೆದು ತೂಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿದೆ.

ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ, ಸಕಲೇಶಪುರ– ಆಲೂರು– ಕಟ್ಟಾಯ ಮೀಸಲು ಕ್ಷೇತ್ರಕ್ಕೆ ಮುರಳಿಮೋಹನ್ ಹಾಗೂ ಎಚ್.ಡಿ. ದೇವೇಗೌಡರ ತವರು ಕ್ಷೇತ್ರ ಹೊಳೆನರಸೀಪುರಕ್ಕೆ ಶ್ರೇಯಸ್ ಪಟೇಲ್ ಅವರನ್ನು ಕಾಂಗ್ರೆಸ್‌ನಿಂದ ಕಣಕ್ಕೆ ಇಳಿಸಲಾಗಿದೆ.

ಶ್ರೇಯಸ್ ಪಟೇಲ್: ಹೊಳೆನರಸೀಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಕಾಂಗ್ರೆಸ್, ಈ ಬಾರಿ ಸಂಸದ ಡಿ.ಕೆ. ಸುರೇಶ್ ಉಸ್ತುವಾರಿಯಲ್ಲಿ ಸರಣಿ ಸಭೆಗಳನ್ನು ನಡೆಸಿದ ನಂತರ ಶ್ರೇಯಸ್ ಪಟೇಲ್ ಅವರಿಗೆ ಟಿಕೆಟ್ ನೀಡಿದೆ.

ಮಾಜಿ ಶಾಸಕ ಜಿ. ಪುಟ್ಟಸ್ವಾಮಿಗೌಡರ ಮೊಮ್ಮಗ ಶ್ರೇಯಸ್ ಪಟೇಲ್, ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಕಳೆದ ಬಾರಿ ಕಾಂಗ್ರೆಸ್ ಮುಖಂಡ ಬಾಗೂರು ಮಂಜೇಗೌಡ ಅವರು ಹೊಳೆನರಸೀಪುರದಲ್ಲಿ 50 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದು ಪರಾಭವ ಹೊಂದಿದ್ದರು.

ಹಲವು ದಶಕಗಳ ಬಳಿಕ ಹೊಳೆನರಸೀಪುರ ಕ್ಷೇತ್ರದಲ್ಲಿ ಖಾತೆ ತೆರೆಯುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿರುವ ಕಾಂಗ್ರೆಸ್ ಮುಖಂಡರು, ಯುವ ಮುಖ ಶ್ರೇಯಸ್ ಅವರಿಗೆ ಆದ್ಯತೆ ನೀಡಿದೆ. ತಾತನ ರಾಜಕೀಯ, ಅವರ ಬೆಂಬಲಿಗರ ಜೊತೆಗೆ ಉತ್ತಮ ಒಡನಾಟ ಹೊಂದಿರುವ ಶ್ರೇಯಸ್ ಪಟೇಲ್, ಸಾಂಪ್ರದಾಯಿಕ ಮತಗಳ ಜೊತೆಗೆ ಇತರ ಮತಗಳನ್ನು ಪಡೆಯಬಹುದು ಎನ್ನುವ ನಿರೀಕ್ಷೆ ಕಾಂಗ್ರೆಸ್‌ನದ್ದಾಗಿದೆ.

ಮುರಳಿಮೋಹನ್: ಸಕಲೇಶಪುರ–ಆಲೂರು–ಕಟ್ಟಾಯ ಮೀಸಲು ಕ್ಷೇತ್ರದಿಂದ ಹೊಸ ಮುಖ ಎಂದೇ ಬಿಂಬಿತವಾಗಿರುವ ಮುರಳಿ ಮೋಹನ್ ಅವರನ್ನು ಆಯ್ಕೆ ಮಾಡುವ ಮೂಲಕ ಅಚ್ಚರಿ ಮೂಡಿಸಿದೆ.

ಹೊಸಬರಿಗೆ ಮಣೆ ಹಾಕಿರುವ ಕಾಂಗ್ರೆಸ್, ಜೆಡಿಎಸ್‌ನ ಹಾಲಿ ಶಾಸಕ ಎಚ್.ಕೆ. ಕುಮಾರಸ್ವಾಮಿ ಅವರ ವಿರುದ್ಧ ಯಾವ ರಣತಂತ್ರ ಹೆಣೆಯಲಿದೆ. ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಕಗ್ಗಂಟಾಗಿರುವ 3 ಕ್ಷೇತ್ರ: ಜಿಲ್ಲೆಯ ಬೇಲೂರು, ಹಾಸನ ಹಾಗೂ ಶ್ರವಣಬೆಳಗೊಳ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆ ಸುಲಭವಾಗಿಲ್ಲ. ಹಾಗಾಗಿ ಮೊದಲ ಪಟ್ಟಿಯಲ್ಲಿ ಈ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಮಾಡಲಾಗಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಹಾಸನ ಕ್ಷೇತ್ರದಲ್ಲಿ ಬಾಗೂರು ಮಂಜೇಗೌಡ, ದೇವರಾಜೇಗೌಡ, ಎಚ್.ಕೆ. ಮಹೇಶ್ ಸೇರಿದಂತೆ ಹಲವರು ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಬೇಲೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣ, ಮಾಜಿ ಸಚಿವ ಬಿ.ಶಿವರಾಂ, ಕೃಷ್ಣೇಗೌಡ, ಗ್ರಾನೈಟ್ ರಾಜಶೇಖರ್ ಸೇರಿದಂತೆ ಹಲವು ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಶ್ರವಣಬೆಳಗೊಳದ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ.

ಹಾಗಾಗಿ ಈ ಕ್ಷೇತ್ರಗಳಲ್ಲಿ ಯಾರಾದರೂ ಒಬ್ಬರ ಹೆಸರು ಘೋಷಣೆ ಮಾಡಿದಲ್ಲಿ, ಪಕ್ಷ ಸಂಘಟನೆಗೆ ಹಿನ್ನಡೆ ಆಗಬಹುದು ಎನ್ನುವ ಆತಂಕ ಕಾಂಗ್ರೆಸ್ ಮುಖಂಡರನ್ನು ಕಾಡುತ್ತಿದೆ. ಹೀಗಾಗಿ ಇನ್ನೊಂದು ಸುತ್ತಿನ ಚರ್ಚೆಯ ಬಳಿಕ ಈ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಗೆ ಮುಂದಾಗಿದ್ದಾರೆ.

ಈ ಐದು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಬೇಕಿದೆ. ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಅಭ್ಯರ್ಥಿಗಳ ಪಟ್ಟಿಯನ್ನು ಬೇಗ ಬಿಡುಗಡೆ ಮಾಡಿದರೆ ಸಂಘಟನೆಗೆ ಹಾಗೂ ಪಕ್ಷಬಲವರ್ಧನೆಗೆ ಹೆಚ್ಚು ನೆರವಾಗಲಿದೆ ಎಂಬ ಮಾತುಗಳು ಕಾಂಗ್ರೆಸ್ ಪಾಳಯದಲ್ಲಿ ಕೇಳಿ ಬರುತ್ತಿದೆ.

ಕಾದು ನೋಡುವ ತಂತ್ರ
ಅರಸೀಕೆರೆ, ಅರಕಲಗೂಡು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕಾದು ನೋಡುವ ತಂತ್ರವನ್ನು ಕಾಂಗ್ರೆಸ್ ನಾಯಕರು ಅನುಸರಿಸುತ್ತಿದ್ದಾರೆ.

ಈ ಕ್ಷೇತ್ರಗಳ ಶಾಸಕರಾದ ಕೆ.ಎಂ. ಶಿವಲಿಂಗೇಗೌಡ, ಎ.ಟಿ. ರಾಮಸ್ವಾಮಿ ಈಗಾಗಲೇ ಜೆಡಿಎಸ್‌ನಿಂದ ಹೊರನಡೆದಿದ್ದಾರೆ. ಶಿವಲಿಂಗೇಗೌಡ ಕಾಂಗ್ರೆಸ್ ಸೇರುವುದು ನಿಶ್ಚಿತವಾಗಿದ್ದರೂ, ಇದುವರೆಗೆ ಪಕ್ಷ ಸೇರ್ಪಡೆಯಾಗಿಲ್ಲ.

ಇನ್ನು ಎ.ಟಿ. ರಾಮಸ್ವಾಮಿ ಕೂಡ ಕ್ಷೇತ್ರದ ಮತದಾರರು, ಜನರ ಭಾವನೆಗಳನ್ನು ತಿಳಿದುಕೊಂಡು ಮುಂದಿನ ಹೆಜ್ಜೆ ಇರಿಸುವುದಾಗಿ ಹೇಳಿದ್ದಾರೆ. ಹಾಗಾಗಿ ಅವರು ಕಾಂಗ್ರೆಸ್ ಸೇರುವರೋ ಅಥವಾ ಬಿಜೆಪಿಯಿಂದ ಸ್ಪರ್ಧಿಸುವರೋ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

ಇದರಿಂದಾಗಿ ಈ ಎರಡು ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ ಇನ್ನೂ ಅಂತಿಮವಾಗಿಲ್ಲ. ಇಬ್ಬರೂ ಶಾಸಕರ ನಡೆಯನ್ನು ನೋಡಿಕೊಂಡು, ಮುಂದಿನ ನಿರ್ಧಾರ ತೆಗೆದುಕೊಳ್ಳಲು ಕಾಂಗ್ರೆಸ್ ಮುಖಂಡರು ನಿರ್ಧರಿಸಿದ್ದಾರೆ.

ಹಾಸನ ಕ್ಷೇತ್ರದ ಘೋಷಣೆಗೆ ಹಿಂದೇಟು
ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದಿಂದ ಅಗಿಲೆ ಯೋಗೀಶ್ ಅವರ ಹೆಸರು ಘೋಷಿಸಿರುವುದನ್ನು ಬಿಟ್ಟರೆ, ಎರಡೂ ರಾಷ್ಟ್ರೀಯ ಪಕ್ಷಗಳು ಹಾಗೂ ಜೆಡಿಎಸ್‌ನಿಂದ ಅಭ್ಯರ್ಥಿಯನ್ನು ಅಧಿಕೃತವಾಗಿ ಘೋಷಿಸಿಲ್ಲ.

ಬಿಜೆಪಿಯಿಂದ ಹಾಲಿ ಶಾಸಕ ಪ್ರೀತಂ ಗೌಡರಿಗೆ ಟಿಕೆಟ್ ಸಿಗುವುದು ನಿಶ್ಚಿತ ಎನ್ನಲಾಗುತ್ತಿದ್ದು, ಪಕ್ಷದಿಂದ ಅಧಿಕೃತ ಘೋಷಣೆ ಆಗಬೇಕಿದೆ. ಇದೀಗ ಮೊದಲ ಪಟ್ಟಿಯಲ್ಲಿ ಕಾಂಗ್ರೆಸ್ ಕೂಡ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ಇನ್ನು ಜೆಡಿಎಸ್‌ನಲ್ಲಿ ಟಿಕೆಟ್ ಗೊಂದಲ ಮುಂದುವರಿದಿದ್ದು, ಅಭ್ಯರ್ಥಿಯ ಆಯ್ಕೆ ಕಗ್ಗಂಟಾಗಿದೆ.

ಜೆಡಿಎಸ್ ಟಿಕೆಟ್ ಘೋಷಣೆಯ ನಂತರ ಉದ್ಭವಿಸುವ ಪರಿಸ್ಥಿತಿಯ ಲಾಭ ಪಡೆಯಲು ಕಾಂಗ್ರೆಸ್ ಮುಖಂಡರು ಚಿಂತನೆ ನಡೆಸುತ್ತಿದ್ದಾರೆ ಎನ್ನುವ ಮಾತುಗಳೂ ಕ್ಷೇತ್ರದಲ್ಲಿ ಕೇಳಿ ಬರುತ್ತಿವೆ.

ಹೊಳೆನರಸೀಪುರ ಕ್ಷೇತ್ರದ ಮತದಾರರು ಈ ಬಾರಿ ಬದಲಾವಣೆ ಬಯಸಿದ್ದಾರೆ. ಪಕ್ಷದ ಮುಖಂಡರೂ ಕಾರ್ಯಕರ್ತರ ಭಾವನೆಗಳಿಗೆ ಸ್ಪಂದಿಸುವ ಮೂಲಕ ನನಗೆ ಟಿಕೆಟ್ ನೀಡಿದ್ದಾರೆ.
–ಶ್ರೇಯಸ್ ಪಟೇಲ್, ಹೊಳೆನರಸೀಪುರ ಕ್ಷೇತ್ರದ ಅಭ್ಯರ್ಥಿ

ಕಾಂಗ್ರೆಸ್ ಈ ಬಾರಿ ಟಿಕೆಟ್ ನೀಡಿದೆ. ಮೊದಲಿನಿಂದಲೂ ಕ್ಷೇತ್ರದಲ್ಲಿ ಓಡಾಡುತ್ತ ಪಕ್ಷ ಸಂಘಟನೆ ಮಾಡುತ್ತಿದ್ದು, ಈ ಬಾರಿ ಕಾಂಗ್ರೆಸ್ ಗೆಲುವು ಸಾಧಿಸಲು ಶ್ರಮಿಸುತ್ತೇನೆ.
–ಮುರಳಿಮೋಹನ್, ಸಕಲೇಶಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.