ಶನಿವಾರ, 29 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಪೆನ್‌ಡ್ರೈವ್‌ ಹಂಚಿದವರ ಬೆನ್ನತ್ತಿದ ‌ಎಸ್‌ಐಟಿ: ಜೆಡಿಎಸ್ ಮುಖಂಡರ ವಿಚಾರಣೆ

Published 21 ಜೂನ್ 2024, 13:20 IST
Last Updated 21 ಜೂನ್ 2024, 13:20 IST
ಅಕ್ಷರ ಗಾತ್ರ

ಹಾಸನ: ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ, ಅಶ್ಲೀಲ ವಿಡಿಯೊ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು ಪೆನ್‌ಡ್ರೈವ್‌ ಹಂಚಿಕೆ ಮಾಡಿದವರ ಬೆನ್ನು ಹತ್ತಿದ್ದಾರೆ. ಪ್ರಜ್ವಲ್‌ ಬಂಧನದ ನಂತರ ಪ್ರಕರಣಕ್ಕೆ ಸಂಬಂಧಿಸಿದ ಇನ್ನೊಂದು ಆಯಾಮದ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಲೋಕಸಭೆ ಚುನಾವಣೆ ಮುಗಿದ ನಂತರ ರಾಜಕೀಯ ಸಮೀಕರಣ ಬದಲಾಗಿದ್ದು, ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಇದರ ಬೆನ್ನಲ್ಲೇ ಏಕಪಕ್ಷೀಯ ತನಿಖೆ ನಡೆಸದಂತೆ ಎಸ್‌ಐಟಿಗೆ ಸೂಚನೆ ಹೋಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅದಕ್ಕೆ ಅನುಗುಣವಾಗಿ ಎಸ್‌ಐಟಿ ಅಧಿಕಾರಿಗಳು, ಪೆನ್‌ಡ್ರೈವ್‌ ಹಂಚಿಕೆ ಪ್ರಕರಣದ ತನಿಖೆ ತೀವ್ರಗೊಳಿಸಿದ್ದಾರೆ.

ಪ್ರಜ್ವಲ್‌ ರೇವಣ್ಣ ವಿಡಿಯೊಗಳ ಬಗ್ಗೆ ಮೊದಲೇ ಹಲವರಿಗೆ ಗೊತ್ತಿತ್ತು. ಆದರೆ, ಅದನ್ನು ಪೆನ್‌ಡ್ರೈವ್‌ ಮೂಲಕ ಹಂಚಿಕೆ ಮಾಡಿದ ನಂತರವಷ್ಟೇ ಪ್ರಕರಣ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಪ್ರಜ್ವಲ್‌ಗೆ ಆಪ್ತರಾಗಿರುವ ಜೆಡಿಎಸ್ ಮುಖಂಡರನ್ನೂ ಎಸ್ಐಟಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.

ಕೆಲ ದಿನಗಳಿಂದ ಜಿಲ್ಲೆಯಲ್ಲಿ ಠಿಕಾಣಿ ಹೂಡಿರುವ ಅಧಿಕಾರಿಗಳ ಒಂದು ತಂಡ, 10ಕ್ಕೂ ಅಧಿಕ ಜನರ ಮನೆಗಳ ಮೇಲೆ ದಾಳಿ ನಡೆಸಿದೆ. ಪೆನ್‌ಡ್ರೈವ್‌ ಜೊತೆಗೆ ವಾಟ್ಸ್‌ಆ್ಯಪ್‌ ಮೂಲಕವೂ ವಿಡಿಯೊ ಹಂಚಿಕೆ ಮಾಡಲಾಗಿದೆ. ಹಾಗಾಗಿ ಯಾವ ಮೊಬೈಲ್‌ಗಳಿಂದ ವಿಡಿಯೊಗಳನ್ನು ಹಂಚಿಕೊಳ್ಳಲಾಗಿದೆ ಎಂಬುದನ್ನು ಪತ್ತೆ ಮಾಡುತ್ತಿರುವ ಅಧಿಕಾರಿಗಳು, ಮೊಬೈಲ್‌ ಫೋನ್‌ಗಳನ್ನು ವಶಕ್ಕೆ ಪಡೆದು, ಅವುಗಳಲ್ಲಿ ದತ್ತಾಂಶ ಪರಿಶೀಲಿಸುತ್ತಿದ್ದಾರೆ.

ಪೆನ್‌ಡ್ರೈವ್‌ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರ ವಿರುದ್ಧ ನಗರದ ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಹುತೇಕ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಇದೀಗ ಈ ಆರೋಪಿಗಳ ಹೊರತಾಗಿ ಬೇರೆ ಯಾರಾದರೂ ಪೆನ್‌ಡ್ರೈವ್‌ ಹಾಗೂ ವಿಡಿಯೊಗಳ ಹಂಚಿಕೆಯಲ್ಲಿ ಭಾಗಿಯಾಗಿದ್ದಾರೆಯೇ ಎನ್ನುವುದನ್ನು ತಂಡ ಪತ್ತೆ ಮಾಡುತ್ತಿದೆ ಎಂದು ತಿಳಿದು ಬಂದಿದೆ.

‘ಜೆಡಿಎಸ್‌ ಪಕ್ಷದ ಹಲವು ಮುಖಂಡರ ವಿಚಾರಣೆಯನ್ನು ಈಗಾಗಲೇ ನಡೆಸಿ, ಮೊಬೈಲ್‌ ಫೋನ್‌ ವಶಕ್ಕೆ ಪಡೆಯಲಾಗಿದೆ. ಇನ್ನಷ್ಟು ಜನರ ಬಳಿಯೂ ವಿಚಾರಣೆ ನಡೆಸಲು ನಿರ್ಧರಿಸಲಾಗಿದೆ. ಪೆನ್‌ಡ್ರೈವ್‌ ಹಂಚಿಕೆ ಪ್ರಕರಣ ಬಗೆದಷ್ಟು ವಿಸ್ತಾರವಾಗುತ್ತಲೇ ಇದೆ. ಇದರ ಮೂಲವನ್ನು ಪತ್ತೆ ಮಾಡುವುದೇ ಸವಾಲಿನ ಕೆಲಸ ಎನ್ನುವಂತಾಗಿದೆ’ ಎಂದು ಎಸ್‌ಐಟಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಂಸದರ ಸರ್ಕಾರಿ ನಿವಾಸದಲ್ಲಿ ಸ್ಥಳ ಮಹಜರು

ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ನಗರದ ಆರ್‌.ಸಿ. ರಸ್ತೆಯ ಸಂಸದರ ಸರ್ಕಾರಿ ನಿವಾಸಕ್ಕೆ ಕರೆತಂದಿದ್ದ ಎಸ್‌ಐಟಿ ಅಧಿಕಾರಿಗಳು ಶುಕ್ರವಾರ ಸತತ ನಾಲ್ಕು ಗಂಟೆ ಸ್ಥಳ ಮಹಜರು ನಡೆಸಿದರು. ಇದೇ ನಿವಾಸದಲ್ಲಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆಯೊಬ್ಬರು ದೂರು ನೀಡಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳ ಮಹಜರು ನಡೆಸಲಾಗಿದೆ. ಬೆಳಿಗ್ಗೆ 11.30ಕ್ಕೆ ಬಂದಿದ್ದ ಅಧಿಕಾರಿಗಳ ತಂಡ ಸಂಜೆ 4ಗಂಟೆಗೆ ಪ್ರಜ್ವಲ್‌ ಅವರನ್ನು ಕರೆದುಕೊಂಡು ಬೆಂಗಳೂರಿಗೆ ತೆರಳಿತು.

ಸದ್ಯ ನ್ಯಾಯಾಂಗ ಬಂಧನದಲ್ಲಿದ್ದ ಪ್ರಜ್ವಲ್‌ ಅವರನ್ನು ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆದು ಕರೆತರಲಾಗಿದ್ದು ಎಫ್‌ಎಸ್‌ಎಲ್ ತಜ್ಞರೂ ಬಂದಿದ್ದರು. ಈ ವೇಳೆ ಸಿಬ್ಬಂದಿ ಪ್ರಿಂಟರ್ ಹಾಗೂ ಇತರ ಸಾಮಗ್ರಿಗಳನ್ನು ನಿವಾಸದ ಒಳಗೆ ತೆಗೆದುಕೊಂಡು ಹೋಗಿದ್ದರು. ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಕೆಲ ದಿನಗಳ ಹಿಂದೆ ಹೊಳೆನರಸೀಪುರದ ಚೆನ್ನಾಂಬಿಕಾ ನಿವಾಸಕ್ಕೆ ಪ್ರಜ್ವಲ್ ಅವರನ್ನು ಕರೆತಂದಿದ್ದ ಎಸ್‌ಐಟಿ ಅಧಿಕಾರಿಗಳು ಸ್ಥಳ ಮಹಜರು ನಡೆಸಿದ್ದರು. ಅಲ್ಲಿಂದ ನೇರವಾಗಿ ಬೆಂಗಳೂರಿಗೆ ತೆರಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT