ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಲೂರು | ಚರಂಡಿಗೆ ಹರಿಯದ ನೀರು: ರಸ್ತೆಯಲ್ಲಿ ಗುಂಡಿ

Published 21 ಜುಲೈ 2024, 5:01 IST
Last Updated 21 ಜುಲೈ 2024, 5:01 IST
ಅಕ್ಷರ ಗಾತ್ರ

ಆಲೂರು: ಪಟ್ಟಣದ ಪ್ರಮುಖ ರಸ್ತೆಯಲ್ಲಿ ನಡೆದಿರುವ ಅವೈಜ್ಞಾನಿಕ ಕಾಮಗಾರಿಯಿಂದ ರಸ್ತೆಯಲ್ಲಿ ಹರಿಯುವ ನೀರು ಚರಂಡಿ ಸೇರುತ್ತಿಲ್ಲ. ನೀರು ನಿಂತಲ್ಲಿಯೇ ನಿಂತು, ದೊಡ್ಡ ಗುಂಡಿಗಳು ನಿರ್ಮಾಣವಾಗುತ್ತಿದ್ದು, ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.

ಪಟ್ಟಣದಲ್ಲಿರುವ ಮುಖ್ಯ ರಸ್ತೆ ಕೆಲವೆಡೆ ಅಗತ್ಯವಿರುವ ಸ್ಥಳದಲ್ಲಿ ರಸ್ತೆ ಉಬ್ಬುಗಳನ್ನು ನಿರ್ಮಾಣ ಮಾಡಿದ್ದು, ಇಲ್ಲಿ ಮಳೆ ನೀರು ನಿಂತು ಆಳವಾದ ಗುಂಡಿಗಳು ಬಿದ್ದಿವೆ. ತಾತ್ಕಾಲಿಕವಾಗಿ ಸ್ಥಳೀಯ ಅಂಗಡಿ ಮಾಲೀಕ ಜನದೀಶ್ ಅವರು ಕಲ್ಲು, ಮಣ್ಣು ತುಂಬಿ ಗುಂಡಿಗಳನ್ನು ಮುಚ್ಚಿದ್ದರು. ವಾರದಿಂದ ತೀವ್ರವಾಗಿ ಮಳೆಯಾಗುತ್ತಿದ್ದು, ಗುಂಡಿಗಳನ್ನು ಮುಚ್ಚಲು ಅಡಚಣೆಯಾಗಿದ್ದರೂ, ಪುರಸಭೆ ಎಂಜಿನಿಯರ್ ಕವಿತಾ, ಸ್ಥಳದಲ್ಲಿದ್ದ ಪಟ್ಟಣ ಪಂಚಾಯಿತಿ ಸದಸ್ಯರಾದ ಹರೀಶ್, ಲಿಂಗರಾಜು (ಪಾಪು) ಸಹಕಾರದೊಂದಿಗೆ ಜಲ್ಲಿ ಮಿಶ್ರಿತ ಕಾಂಕ್ರೀಟ್ ಹಾಕಿ, ಸುಗಮ ಸಂಚಾರಕ್ಕೆ ಸದ್ಯ ಅನುವು ಮಾಡಿಕೊಟ್ಟಿದ್ದಾರೆ.

ಅವೈಜ್ಞಾನಿಕ ಕಾಮಗಾರಿ: ರಸ್ತೆ ಉಬ್ಬುಗಳನ್ನು ನಿರ್ಮಾಣ ಮಾಡುವ ಸಂದರ್ಭದಲ್ಲಿ, ನಿಂತ ನೀರು ಸರಾಗವಾಗಿ ಚರಂಡಿಗೆ ಹರಿಯುವಂತೆ ಮುಂಜಾಗ್ರತೆ ವಹಿಸದೇ ಕೆಲಸ ಮಾಡಲಾಗಿದೆ. ಇದರಿಂದಾಗಿ ಮುಖ್ಯ ರಸ್ತೆಯಲ್ಲಿರುವ ಪ್ರತಿಯೊಂದು ರಸ್ತೆ ಉಬ್ಬುಗಳ ಬಳಿ ನೀರು ಸಂಗ್ರಹವಾಗಿ ಗುಂಡಿಗಳಾಗುತ್ತಿವೆ.

2015-16 ರಲ್ಲಿ ಪಟ್ಟಣದಲ್ಲಿ ದ್ವಿಮುಖ ರಸ್ತೆಯೊಂದಿಗೆ ಚರಂಡಿಗಳನ್ನು ನಿರ್ಮಾಣ ಮಾಡಲಾಯಿತು. ಈ ಸಂದರ್ಭದಲ್ಲಿ ತಾಂತ್ರಿಕ ದೋಷದಿಂದ ರಸ್ತೆ ಮೇಲೆ ಮತ್ತು ರಸ್ತೆ ಉಬ್ಬುಗಳ ಬಳಿ ಬಿದ್ದ ನೀರು ಚರಂಡಿಗೆ ಹರಿಯುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ಎರಡು ವರ್ಷಗಳ ಹಿಂದೆ ಜಾಮಿಯಾ ಮಸೀದಿ ಬಳಿ ಬಿಕ್ಕೋಡು, ಸಕಲೇಶಪುರ ಮತ್ತು ಹಾಸನ ರಸ್ತೆಗೆ ಸಂಪರ್ಕ ಕಲ್ಪಿಸುವ ಸ್ಥಳದಲ್ಲಿ ಸುಮಾರು ₹ 2 ಕೋಟಿ ವೆಚ್ಚದಲ್ಲಿ ವೃತ್ತ ನಿರ್ಮಾಣ ಮಾಡಲು ಕಾಮಗಾರಿ ಆರಂಭಿಸಲಾಯಿತು. ಆದರೆ ಯೋಜನೆ ಕೈಗೊಳ್ಳುವ ಮೊದಲು ಅಗತ್ಯವಿರುವ ಸ್ಥಳವನ್ನು ಕಾನೂನಾತ್ಮಕವಾಗಿ ವಶಕ್ಕೆ ಪಡೆಯದೇ ಕಾಮಗಾರಿ ಪ್ರಾರಂಭ ಮಾಡಿದರು. ಸ್ಥಳಾವಕಾಶ ದೊರಕದ ಕಾರಣ ಸುಮಾರು ₹5 ಲಕ್ಷ ವೆಚ್ಚದಲ್ಲಿ ಕೇವಲ ಮೋರಿ ನಿರ್ಮಾಣ ಕಾಮಗಾರಿಯನ್ನು ಕೈ ಬಿಡಲಾಯಿತು.

ವೃತ್ತ ನಿರ್ಮಾಣಕ್ಕೆ ಜಾಗ ಸಿಗದಿದ್ದರಿಂದ ಈ ಹಣವನ್ನು ಪಟ್ಟಣದ ಮುಖ್ಯ ರಸ್ತೆಯ ಹಂತನಮನೆ ಗ್ರಾಮದ ಬಳಿಯಿಂದ ರಾಷ್ಟ್ರೀಯ ಹೆದ್ದಾರಿಯವರೆಗೆ ದ್ವಿಮುಖ ರಸ್ತೆ ನಿರ್ಮಾಣಕ್ಕೆ ಬಳಸಿಕೊಳ್ಳಲು ಬದಲಾವಣೆ ಮಾಡಲಾಗಿದೆ ಎನ್ನಲಾಗಿದೆ.

ಲೋಕೋಪಯೋಗಿ ಇಲಾಖೆ ವತಿಯಿಂದ ಪಟ್ಟಣದಲ್ಲಿ ರಸ್ತೆ ನಿರ್ಮಾಣ ಮಾಡಲಾಗಿದೆ. ಪಟ್ಟಣ ಪಂಚಾಯಿತಿಗೆ ವರ್ಗಾವಣೆ ಮಾಡಿದ ನಂತರ, ಪೂರ್ವ ಸಿದ್ಧತೆ ಇಲ್ಲದೇ ಮಸೀದಿ ಬಳಿ ವೃತ್ತ ನಿರ್ಮಾಣ ಮಾಡುವ ಮೊದಲು, ಪಟ್ಟಣ ಪಂಚಾಯಿತಿ ಗಮನಕ್ಕೆ ಬಾರದಂತೆ ಯೋಜನೆ ರೂಪಿಸಿದ್ದು, ಚರಂಡಿ ನಿರ್ಮಾಣ ಮಾಡದೇ ಕೇವಲ ಡಕ್ ನಿರ್ಮಾಣ ಮಾಡಲಾಗಿದೆ. ಇದರಿಂದ ರಸ್ತೆಯಲ್ಲಿ ನೀರು ನಿಂತು ತೊಂದರೆಯಾಗುತ್ತಿದೆ. ಇದಕ್ಕೆ ಯಾರು ಹೊಣೆ ಎಂದು ಪಟ್ಟಣ ಪಂಚಾಯಿತಿ ಎಂಜಿನಿಯರ್‌ ಕವಿತಾ ಪ್ರಶ್ನಿಸಿದ್ದಾರೆ.

ಆಲೂರಿನಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ತಾತ್ಕಾಲಿಕವಾಗಿ ಗುಂಡಿಗಳನ್ನು ಮುಚ್ಚಿರುವುದು
ಆಲೂರಿನಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ತಾತ್ಕಾಲಿಕವಾಗಿ ಗುಂಡಿಗಳನ್ನು ಮುಚ್ಚಿರುವುದು
ದ್ವಿಮುಖ ರಸ್ತೆಯನ್ನು ಲೊಕೋಪಯೋಗಿ ಇಲಾಖೆ ವತಿಯಿಂದ ನಿರ್ಮಾಣ ಮಾಡಲಾಗಿದ್ದು ಅದರ ನಿರ್ವಹಣೆಯನ್ನು ಪಟ್ಟಣ ಪಂಚಾಯಿತಿಗೆ ವಹಿಸಲಾಗಿದೆ
-ಮಧು ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್
ಟ್ಟಣದ ಮುಖ್ಯ ರಸ್ತೆಯಲ್ಲಿ ವಾಹನ ಸಂಚರಿಸಲು ತೊಂದರೆಯಾಗಿದೆ. ಜನಪ್ರತಿನಿಧಿಗಳು ಕೂಡಲೇ ಸ್ಥಳೀಯರ ಸಭೆ ಕರೆದು ಚರ್ಚಿಸಿ ಸುಗಮ ವ್ಯವಸ್ಥೆಗೆ ಅವಕಾಶ ಕಲ್ಪಿಸಬೇಕು
ಪಯೋಗೇಶ್ ಕೊನೆಪೇಟೆ ಆಲೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT