ಗುರುವಾರ, 4 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ: ದುರಸ್ತಿಯಾಗದ ನೀರಿನ ಘಟಕಗಳು

* ಶುದ್ಧ ಕುಡಿಯುವ ನೀರಿಗೆ ಪರದಾಟ; ಆರೋಗ್ಯ ಸಮಸ್ಯೆಗೆ ಆಹ್ವಾನ * ಅಧಿಕಾರಿಗಳು– ಗುತ್ತಿಗೆದಾರರ ನಿರ್ಲಕ್ಷ್ಯ
Published 2 ಜುಲೈ 2024, 4:11 IST
Last Updated 2 ಜುಲೈ 2024, 4:11 IST
ಅಕ್ಷರ ಗಾತ್ರ

ಹಾವೇರಿ: ನಗರ ಹಾಗೂ ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ‘ಶುದ್ಧ ಕುಡಿಯುವ ನೀರು ಪೂರೈಕೆ ಘಟಕ’ ಆರಂಭಿಸಲಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಗುತ್ತಿಗೆದಾರರ ನಿರ್ವಹಣೆ ಕೊರತೆಯಿಂದಾಗಿ ಬಹುತೇಕ ಘಟಕಗಳು ತುಕ್ಕು ಹಿಡಿಯುತ್ತಿವೆ.

ಕಳೆದ ಬಾರಿ ಮಳೆಯ ಅಭಾವದಿಂದಾಗಿ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಜಿಲ್ಲೆಯ ಹಲವೆಡೆ ಹಾಹಾಕಾರ ಉಂಟಾಗಿತ್ತು. ಕೊಳವೆ ಬಾವಿಗಳು ಸಂಪೂರ್ಣ ಬತ್ತಿದ್ದವು. ಕೊಳವೆ ಬಾವಿಗಳನ್ನೇ ನೆಚ್ಚಿಕೊಂಡು ನಿರ್ಮಿಸಿದ್ದ ಶುದ್ಧ ಕುಡಿಯುವ ನೀರು ಘಟಕಗಳೂ ಬಂದ್ ಆಗಿದ್ದವು. ಹಲವು ದಿನ ಬಾಗಿಲು ಮುಚ್ಚಿದ್ದರಿಂದ ಬಹುತೇಕ ಘಟಕಗಳಲ್ಲಿರುವ ಉಪಕರಣಗಳು ನಿಷ್ಕ್ರಿಯಗೊಂಡಿವೆ.

ಇದೀಗ ಮಳೆಗಾಲ ಶುರುವಾಗಿದ್ದು, ಜಿಲ್ಲೆಯ ಅಲ್ಲಲ್ಲಿ ಮಳೆ ಸುರಿಯುತ್ತಿದೆ. ಕೆಲವೆಡೆ ಕೊಳವೆ ಬಾವಿಗಳಲ್ಲಿ ನೀರು ಬರಲಾರಂಭಿಸಿದೆ. ಆದರೆ, ಶುದ್ಧ ಕುಡಿಯುವ ನೀರು ಪೂರೈಕೆ ಘಟಕಗಳು ಮಾತ್ರ ಆರಂಭವಾಗಿಲ್ಲ. ಉಪಕರಣಗಳ ದುರಸ್ತಿಗೂ ಅಧಿಕಾರಿಗಳಾಗಲಿ ಹಾಗೂ ಗುತ್ತಿಗೆದಾರರಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಸಾರ್ವಜನಿಕರು ದೂರುತ್ತಿದ್ದಾರೆ.

ಹಾವೇರಿ, ರಾಣೆಬೆನ್ನೂರು ಹಾಗೂ ಇತರೆ ನಗರ ಪ್ರದೇಶಗಳಲ್ಲಿ ನಗರಸಭೆ– ಪುರಸಭೆಗಳಿಂದ ಘಟಕ ಸ್ಥಾಪಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಹಾಗೂ ಇತರರ ಸಹಕಾರದಲ್ಲಿ ಘಟಕಗಳನ್ನು ನಿರ್ಮಿಸಲಾಗಿದ್ದು, ಬಹುತೇಕ ಘಟಕಗಳ ನಿರ್ವಹಣೆ ಜವಾಬ್ದಾರಿಯನ್ನು ಕೆಲ ಗುತ್ತಿಗೆದಾರರಿಗೆ ವಹಿಸಲಾಗಿದೆ.

ಘಟಕಗಳು ಆರಂಭವಾದ ದಿನದಿಂದಲೂ ಅಸಮರ್ಪಕ ನಿರ್ವಹಣೆ ಎದ್ದು ಕಾಣುತ್ತಿದೆ. ಪದೇ ಪದೇ ಕೆಡುವ ಮೋಟರ್‌, ಹಾಳಾಗುವ ಫಿಲ್ಟರ್‌, ವಿದ್ಯುತ್‌ ಸರಬರಾಜಿನಲ್ಲಿ ತೊಂದರೆ, ಪೈಪ್‌ಲೈನ್‌ಗಳಲ್ಲಿ ದೋಷ ಸೇರಿದಂತೆ ಹಲವು ಸಮಸ್ಯೆಗಳು ಸಾಮಾನ್ಯವಾಗಿದ್ದವು. ಕೆಲ ದಿನ ಮಾತ್ರ ಬಂದ್ ಆಗುತ್ತಿದ್ದ ಘಟಕಗಳು, ಪುನಃ ಬಾಗಿಲು ತೆರೆಯುತ್ತಿದ್ದವು. ನೀರಿನ ಕೊರತೆಯಿಂದ ಬಂದಾಗಿರುವ ಘಟಕಗಳು, ಮಳೆಗಾಲ ಶುರುವಾಗಿ ಹಲವು ದಿನವಾದರೂ ಬಾಗಿಲು ತೆರೆಯದಿರುವುದು ಜಿಲ್ಲಾಡಳಿತ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯೆಂದು ಸಾರ್ವಜನಿಕರು ದೂರುತ್ತಿದ್ದಾರೆ.

ಆರೋಗ್ಯ ಸಮಸ್ಯೆಗೆ ಆಹ್ವಾನ: ಶುದ್ಧ ಕುಡಿಯುವ ನೀರು ದೊರೆಯದಿದ್ದರಿಂದ ಬಹುತೇಕ ಜನರು, ಲಭ್ಯವಿರುವ ಕೊಳವೆ ಬಾವಿಗಳು ಹಾಗೂ ಇತರೆ ಮೂಲಗಳ ನೀರು ಕುಡಿಯುತ್ತಿದ್ದಾರೆ. ಇದರಿಂದಾಗಿ ವಾಂತಿ–ಬೇಧಿ ಹಾಗೂ ಇತರೆ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

‌ತಡಸ ಬಳಿಯ ಮಮದಾಪುರದಲ್ಲಿ ಕುಡಿಯುವ ನೀರು ಘಟಕ ಬಂದ್ ಆಗಿ ಎರಡು ವರ್ಷವಾಗಿದೆ. ಇಲ್ಲಿಯ ಗ್ರಾಮಸ್ಥರು ಲಭ್ಯವಿರುವ ನೀರು ಕುಡಿಯುತ್ತಿದ್ದು, ನಾನಾ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ ಮರು ಆರಂಭಿಸಲು ಕೋರಿ ಗ್ರಾಮಸ್ಥರು ಹಲವು ಬಾರಿ ಮನವಿ ಸಲ್ಲಿಸಿದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಪಂದಿಸಿಲ್ಲ.

ಹಾವೇರಿ, ಹಾನಗಲ್, ಬ್ಯಾಡಗಿ, ಹಿರೇಕೆರೂರು, ರಾಣೆಬೆನ್ನೂರು, ಸವಣೂರು ಹಾಗೂ ಶಿಗ್ಗಾವಿ ತಾಲ್ಲೂಕಿನ ಬಹುತೇಕ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಇದರಲ್ಲಿ ಬಹುಪಾಲು ಮಂದಿ, ಕಲುಷಿತ ನೀರು ಸೇವನೆಯಿಂದ ಆರೋಗ್ಯ ಸಮಸ್ಯೆ ಎದುರಿಸುತ್ತಿರುವುದು ಗೊತ್ತಾಗುತ್ತಿದೆ. ಆದರೆ, ಈ ಬಗ್ಗೆ ಅಧಿಕಾರಿಗಳು ಯಾವುದೇ ಮಾಹಿತಿ ಕಲೆಹಾಕುತ್ತಿಲ್ಲ.

‘ಆಸ್ಪತ್ರೆಗಳಿಗೆ ಬರುವ ಜನರನ್ನು ಹಾಗೂ ಅವರನ್ನು ಪರೀಕ್ಷಿಸುವ ವೈದ್ಯರಿಂದಲೂ ಜಿಲ್ಲಾಡಳಿತದ ಅಧಿಕಾರಿಗಳು ಮಾಹಿತಿ ಪಡೆಯುತ್ತಿಲ್ಲ. ಮಾಹಿತಿ ಪಡೆದರೆ, ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಜನರು ವಾಸವಿರುವ ಸ್ಥಳಕ್ಕೆ ಹೋಗಿ ಶುದ್ಧ ಕುಡಿಯುವ ನೀರು ಪೂರೈಸಲು ಅನುಕೂಲವಾಗುತ್ತದೆ’ ಎಂದು ಶಿಗ್ಗಾವಿ ತಾಲ್ಲೂಕಿನ ಕಿರಾಣಿ ಅಂಗಡಿಯೊಂದರ ವ್ಯಾಪಾರಿ ರಾಕೇಶ ಹೇಳಿದರು.

ನೀರು ತರಲು ಕಿ.ಮೀ.ಗಟ್ಟಲೇ ಓಡಾಟ: ‘ಕುಡಿಯುವ ನೀರಿನಿಂದಲೇ ಹಲವು ಆರೋಗ್ಯ ಸಮಸ್ಯೆಗಳು ಬರುತ್ತವೆ’ ಎಂಬುದನ್ನು ತಿಳಿದಿರುವ ಕೆಲ ಗ್ರಾಮಸ್ಥರು, ತಮ್ಮ ಊರಿನ ಘಟಕ ಕೆಟ್ಟಿದ್ದರಿಂದ ದೂರದ ಊರುಗಳಿಗೆ ಹೋಗಿ ನೀರು ತರುತ್ತಿದ್ದಾರೆ.

ಚಕ್ಕಡಿ, ಬೈಕ್‌, ಕಾರುಗಳಲ್ಲಿ ಕಿ.ಮೀ.ಗಟ್ಟಲೇ ನಿತ್ಯವೂ ಹೋಗಿ ಬರುತ್ತಿರುವ ಜನ, ಸಕ್ರಿಯವಾಗಿರುವ ಘಟಕಗಳ ಎದುರು ಸರದಿಯಲ್ಲಿ ನಿಂತು ಶುದ್ಧ ಕುಡಿಯುವ ನೀರು ತುಂಬಿಸಿಕೊಂಡು ಬರುತ್ತಿದ್ದಾರೆ.

‘ಹಾನಗಲ್ ತಾಲ್ಲೂಕಿನ ಸೋಮಸಾಗರ ಗ್ರಾಮದ ಘಟಕ ಬಂದ್ ಆಗಿದೆ. ಗ್ರಾಮದಿಂದ 5 ಕಿ.ಮೀ ದೂರದಲ್ಲಿರುವ ಗುಡ್ಡದ ಮುತ್ತಳ್ಳಿ ಹಾಗೂ 7 ಕಿ.ಮೀ ದೂರದಲ್ಲಿರುವ ಚಿಕ್ಕಬಾಸೂರಿಗೆ ಹೋಗಿ ಶುದ್ಧ ನೀರು ತರುತ್ತಿದ್ದೇವೆ’ ಎಂದು ಗ್ರಾಮಸ್ಥ ಅರುಣ್ ಹೇಳಿದರು.

686 - ಜಿಲ್ಲೆಯಲ್ಲಿರುವ ಘಟಕಗಳು

49 - ಬಂದ್ ಆಗಿರುವ ಘಟಕಗಳು (ಇಲಾಖೆ ಮಾಹಿತಿ)

ಬ್ಯಾಡಗಿ ತಾಲ್ಲೂಕಿನ ತಡಸದಲ್ಲಿರುವ ಶುದ್ಧ ಕುಡಿಯುವ ನೀರು ಘಟಕದ ಸ್ಥಿತಿ
ಬ್ಯಾಡಗಿ ತಾಲ್ಲೂಕಿನ ತಡಸದಲ್ಲಿರುವ ಶುದ್ಧ ಕುಡಿಯುವ ನೀರು ಘಟಕದ ಸ್ಥಿತಿ

ಸಂಪೂರ್ಣ ಬತ್ತಿದ್ದ ಕೊಳವೆ ಬಾವಿಗಳು ನಗರ–ಗ್ರಾಮೀಣ ಪ್ರದೇಶದಲ್ಲಿ ಸಮಸ್ಯೆ ನೀರು ತರಲು ಕಿ.ಮೀ.ಗಟ್ಟಲೇ ಓಡಾಟ

‘ಖಾಸಗಿ ಘಟಕ ಮೊರೆ; 20 ಲೀಟರ್‌ಗೆ ₹ 10’

ಜಿಲ್ಲಾಡಳಿತ ಸ್ಥಾಪನೆ ಮಾಡಿರುವ ಶುದ್ಧ ಕುಡಿಯುವ ನೀರು ಘಟಕಗಳು ಬಂದ್‌ ಆಗಿದ್ದರಿಂದ ಜನರು ಖಾಸಗಿ ಘಟಕಗಳ ಮೊರೆ ಹೋಗುತ್ತಿದ್ದಾರೆ. ಹಾವೇರಿ ರಾಣೆಬೆನ್ನೂರು ಹಾಗೂ ಇತರೆಡೆ ಖಾಸಗಿಯವರು ಶುದ್ಧ ಕುಡಿಯುವ ನೀರು ಘಟಕ ಆರಂಭಿಸಿದ್ದಾರೆ. ಸರ್ಕಾರಿ ಘಟಕಗಳಲ್ಲಿ 20 ಲೀಟರ್‌ ನೀರಿಗೆ ₹ 5 ಬೆಲೆ ಇದೆ. ಆದರೆ ಖಾಸಗಿ ಘಟಕದಲ್ಲಿ 20 ಲೀಟರ್ ನೀರಿಗೆ ₹ 10 ಪಡೆಯಲಾಗುತ್ತಿದೆ. ‘ಜಿಲ್ಲಾಡಳಿತದ ಅಧಿಕಾರಿಗಳು ಎಲ್ಲ ಘಟಕಗಳನ್ನು ಮರು ಆರಂಭಿಸಬೇಕು. ಇದರಿಂದ ಖಾಸಗಿಯವರಿಗೆ ಹೆಚ್ಚು ಹಣ ಕೊಡುವುದು ತಪ್ಪುತ್ತದೆ’ ಎಂದು ಹಾವೇರಿ ಶಿವಾಜಿನಗರ ನಿವಾಸಿ ಮುನಾವರ್ ಆಗ್ರಹಿಸಿದರು.

‘ಅಧಿಕಾರಿಗಳಿಂದ ತಪ್ಪು ಮಾಹಿತಿ’

‘ಜಿಲ್ಲೆಯಲ್ಲಿ 686 ಶುದ್ಧ ನೀರಿನ ಘಟಕಗಳಿವೆ. ಈ ಪೈಕಿ ಕೇವಲ 49 ಘಟಕಗಳು ಬಂದ್ ಆಗಿರುವುದಾಗಿ ಅಧಿಕಾರಿಗಳು ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಜಿಲ್ಲೆಯಲ್ಲಿ ಸುತ್ತಾಡಿದರೆ 100ಕ್ಕೂ ಹೆಚ್ಚು ಘಟಕಗಳು ಬಂದ್ ಆಗಿ ತುಕ್ಕು ಹಿಡಿಯುತ್ತಿವೆ’ ಎಂದು ಸಾರ್ವಜನಿಕರು ಆರೋಪಿಸಿದರು. ‘ಅಧಿಕಾರಿಗಳು ಕಚೇರಿಯಲ್ಲೇ ಕುಳಿತೇ ಅಂಕಿ–ಅಂಶ ಸಿದ್ಧಪಡಿಸುತ್ತಿದ್ದಾರೆ. ಸ್ಥಳ ಪರಿಶೀಲನೆ ನಡೆಸುತ್ತಿಲ್ಲ. ಇವರ ನಿರ್ಲಕ್ಷ್ಯದಿಂದ ಜನರು ಶುದ್ಧ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ’ ಎಂದು ಅಳಲು ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT