ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ: 746 ಮನೆ, 4,046 ಹೆಕ್ಟೇರ್ ಬೆಳೆ ಹಾನಿ

ವರದಾ, ತುಂಗಭದ್ರಾ ನೀರು ಹರಿಯುವಿಕೆ ಯಥಾಸ್ಥಿತಿ * 4,339 ರೈತರ ಜಮೀನು ಜಲಾವೃತ
Published 26 ಜುಲೈ 2024, 0:30 IST
Last Updated 26 ಜುಲೈ 2024, 0:30 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯಲ್ಲಿ ಹರಿಯುತ್ತಿರುವ ವರದಾ ಹಾಗೂ ತುಂಗಭದ್ರಾ ನದಿ ನೀರಿನಿಂದಾಗಿ 4,046 ಹೆಕ್ಟೇರ್‌ ಬೆಳೆ ಜಲಾವೃತಗೊಂಡಿದೆ. ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ 746 ಮನೆಗಳಿಗೆ ಹಾನಿ ಸಂಭವಿಸಿದೆ.

ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿದ್ದರಿಂದ ವರದಾ ಹಾಗೂ ತುಂಗಭದ್ರಾ ನದಿಗಳು ತುಂಬಿ ಹರಿಯುತ್ತಿದ್ದವು. ಎರಡೂ ನದಿಗಳ ನೀರು ಒಡಲು ಬಿಟ್ಟು, ಅಚ್ಚುಕಟ್ಟು ಪ್ರದೇಶದ ಜಮೀನಿಗೆ ನುಗ್ಗಿ ಹರಿಯುತ್ತಿದೆ.

ಎರಡೂ ಜಿಲ್ಲೆಗಳಲ್ಲಿ ಇದೀಗ ಮಳೆ ತುಸು ಕಡಿಮೆಯಾಗಿದ್ದು, ಎರಡೂ ನದಿಗಳ ನೀರಿನ ಹರಿಯುವಿಕೆ ಸ್ವಲ್ಪ ಮಟ್ಟದಲ್ಲಿ ತಗ್ಗಿದೆ. ನೀರಿನ ಹರಿಯುವಿಕೆ ಪ್ರಮಾಣ ಯಥಾಸ್ಥಿತಿಯಲ್ಲಿದ್ದು, ಏರಿಕೆ ಮಾತ್ರ ಕಂಡುಬಂದಿಲ್ಲ. ಜಮೀನು ಆವರಿಸಿರುವ ನೀರು ಸಹ ಇಳಿಮುಖವಾಗಿಲ್ಲ. 

‘ಕೃಷಿ ಹಾಗೂ ತೋಟಗಾರಿಕೆ ಬೆಳೆ ಬೆಳೆದಿದ್ದ 4,339 ರೈತರಿಗೆ ಸೇರಿದ್ದ 4046 ಹೆಕ್ಟೇರ್‌ ಜಮೀನು ಜಲಾವೃತಗೊಂಡಿದೆ. ಬೆಳೆ ನಷ್ಟ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಅಚ್ಚುಕಟ್ಟು ಪ್ರದೇಶದಲ್ಲಿರುವ ಜಮೀನಿನಿಂದ ನೀರು ಇಳಿಕೆಯಾದ ನಂತರವೇ ನಿಖರ ಮಾಹಿತಿ ಲಭ್ಯವಾಗಲಿದೆ’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ‘ಪ್ರಜಾವಾಣಿ’ಗೆ ತಿಳಿಸಿದರು.

‘1,781 ಹೆಕ್ಟೇರ್‌ನಲ್ಲಿದ್ದ ಮೆಕ್ಕೆಜೋಳ, 334 ಹೆಕ್ಟೇರ್‌ ಶೇಂಗಾ, 569 ಹೆಕ್ಟೇರ್‌ ಸೋಯಾಬಿನ್, 465 ಹೆಕ್ಟೇರ್ ಹತ್ತಿ, 35 ಹೆಕ್ಟೇರ್ ಹೆಸರು ಹಾಗೂ 120 ಹೆಕ್ಟೇರ್ ಅವರೆ–ಹುರುಳಿ ಬೆಳೆ ಹಾನಿಯಾಗಿದ್ದು, 218.39 ಹೆಕ್ಟೇರ್ ತೋಟಗಾರಿಕೆ ಬೆಳೆಯೂ ಜಲಾವೃತಗೊಂಡಿದೆ’ ಎಂದು ಹೇಳಿದರು.

‘ಬಾಳೆ, ಬೆಳ್ಳುಳ್ಳಿ, ಹಾಗಲಕಾಯಿ, ಮೆಣಸಿನಕಾಯಿ, ಕ್ಯಾಬೇಜ್, ವೀಳ್ಯದೆಲೆ, ಪಪ್ಪಾಯಿ, ಚೆಂಡು ಹೂವು, ಈರುಳ್ಳಿ, ಟೊಮೆಟೊ, ಶುಂಠಿ ಹಾಗೂ ಇತರೆ ತರಕಾರಿ ಬೆಳೆಗಳಲ್ಲಿ ನೀರು ನಿಂತುಕೊಂಡಿದೆ’ ಎಂದು ತಿಳಿಸಿದರು.

730 ಮನೆಗಳಿಗೆ ಭಾಗಶಃ ಹಾನಿ: ‘ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಒಟ್ಟು 746 ಮನೆಗಳು ಹಾಗೂ 8 ದನದ ಕೊಟ್ಟಿಗಳಿಗೆ ಹಾನಿಯಾಗಿದೆ. 730 ಮನೆಗಳಿಗೆ ಭಾಗಶಃ, 11 ಮನೆಗಳಿಗೆ ತೀವ್ರ ಹಾನಿ ಆಗಿದೆ. 5 ಮನೆಗಳು ಸಂಪೂರ್ಣ ಕುಸಿದಿವೆ’ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

‘ಹಾನಗಲ್ ತಾಲ್ಲೂಕಿನ ಸಾವಿನಕೇರಿ ಗ್ರಾಮದಲ್ಲಿ ದನದ ಕೊಟ್ಟಿಗೆ ಕುಸಿದು ಬಿದ್ದಿದ್ದರಿಂದ, ಅವಶೇಷಗಳಡಿ ಸಿಲುಕಿ ಆಕಳು ಮೃತಪಟ್ಟಿದೆ. ಜಿಲ್ಲೆಯ 12 ಸೇತುವೆಗಳು ಮುಳುಗಡೆಯಾಗಿದ್ದು, ಯಥಾಸ್ಥಿತಿ ಮುಂದುವರಿದಿದೆ’ ಎಂದರು.

ಹಾವೇರಿ ಜಿಲ್ಲೆಯ ಹಿರೇಮಗದೂರು ಹಾಗೂ ಡಂಬರಮತ್ತೂರು ನಡುವಿನ ರಸ್ತೆಯಲ್ಲಿ ವರದಾ ನದಿ ನೀರು ಹರಿಯುತ್ತಿದ್ದು ಅದರಲ್ಲೇ ಜನರು ಸಂಚರಿಸಿದರು
ಹಾವೇರಿ ಜಿಲ್ಲೆಯ ಹಿರೇಮಗದೂರು ಹಾಗೂ ಡಂಬರಮತ್ತೂರು ನಡುವಿನ ರಸ್ತೆಯಲ್ಲಿ ವರದಾ ನದಿ ನೀರು ಹರಿಯುತ್ತಿದ್ದು ಅದರಲ್ಲೇ ಜನರು ಸಂಚರಿಸಿದರು

ತಾಲ್ಲೂಕುವಾರು ಸುರಿದ ಮಳೆ ವಿವರ (ಜುಲೈ 19ರಿಂದ ಜುಲೈ 25ರವರೆಗೆ– ಮಿ.ಮೀ.ಗಳಲ್ಲಿ)

ತಾಲ್ಲೂಕು; ವಾಡಿಕೆ ಮಳೆ; ವಾಸ್ತವ ಮಳೆ ಬ್ಯಾಡಗಿ; 25.3; 71.4 ಹಾನಗಲ್; 56.7; 109.6 ಹಾವೇರಿ; 30.9; 49.1 ಹಿರೇಕೆರೂರು; 39.3; 100. ರಾಣೆಬೆನ್ನೂರು; 20.0; 46.4 ಸವಣೂರು; 24.2; 46.8 ಶಿಗ್ಗಾವಿ; 36.2; 69 ರಟ್ಟೀಹಳ್ಳಿ; 32.2; 73.3

ವಿಪತ್ತು ನಿರ್ವಹಣೆಗೆ ₹ 22.8 ಕೋಟಿ ಲಭ್ಯ

ಜಿಲ್ಲೆಯಲ್ಲಿ ಉಂಟಾಗುವ ಎಲ್ಲ ವಿಪತ್ತುಗಳನ್ನು ಎದುರಿಸಲು ಜಿಲ್ಲಾಡಳಿತ ಬಳಿ ಸದ್ಯ ₹ 22.08 ಕೋಟಿ ಮಾತ್ರ ಲಭ್ಯವಿದೆ. ಬೆಳೆ ಹಾಗೂ ಮನೆಗಳ ಹಾನಿ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಪ್ರತಿಯೊಬ್ಬರಿಗೂ ಪರಿಹಾರ ನೀಡುವುದು ಮುಂದಿನ ದಿನಗಳಲ್ಲಿ ಜಿಲ್ಲಾಡಳಿತಕ್ಕೆ ಸವಾಲಾಗಲಿದೆ. ರಾಜ್ಯ ಸರ್ಕಾರದಿಂದಲೂ ಹೆಚ್ಚುವರಿ ಪರಿಹಾರ ಪಡೆಯಲು ಪ್ರಸ್ತಾವ ಸಲ್ಲಿಸುವ ಸಾಧ್ಯತೆ ಇದೆ. ‘ಜಿಲ್ಲಾಧಿಕಾರಿ ಖಾತೆಯಲ್ಲಿ ₹ 16.43 ಕೋಟಿ ಹಾಗೂ ತಹಶೀಲ್ದಾರ್ ಅವರ ಖಾತೆಯಲ್ಲಿ ₹ 5.65 ಕೋಟಿ ಲಭ್ಯವಿದೆ. ವಿಪತ್ತು ನಿರ್ವಹಣೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT