ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಣೆಬೆನ್ನೂರು | ಮಂಗ ಕಚ್ಚಿ 20 ಅಧಿಕ ಜನರಿಗೆ ಗಾಯ; ಪ್ರತಿಭಟನೆ

ಮಂಗಗಳನ್ನು ಸೆರೆ ಹಿಡಿದ ಅರಣ್ಯ ಇಲಾಖೆ ಸಿಬ್ಬಂದಿ, ಪರಿಣಿತರ ತಂಡ
Published : 7 ಅಕ್ಟೋಬರ್ 2024, 13:24 IST
Last Updated : 7 ಅಕ್ಟೋಬರ್ 2024, 13:24 IST
ಫಾಲೋ ಮಾಡಿ
Comments

ರಾಣೆಬೆನ್ನೂರು: ತಾಲ್ಲೂಕಿನ ಯತ್ತಿನಹಳ್ಳಿ ಗ್ರಾಮದಲ್ಲಿ ಕಳೆದ ನಾಲ್ಕೈದು ತಿಂಗಳಿಂದ ಮಂಗಗಳ ಹುಚ್ಚಾಟದಿಂದ 20ಕ್ಕೂ ಹೆಚ್ಚು ಜನರನ್ನು ಕಚ್ಚಿ ಗಾಯಗೊಳಿಸಿದ್ದಕ್ಕೆ ರೋಸಿ ಹೋದ ಗ್ರಾಮಸ್ಥರು ಸೋಮವಾರ ಹಳೇ ಪಿ.ಬಿ.ರಸ್ತೆಯ ವಲಯ ಅರಣ್ಯ ಅಧಿಕಾರಿಗಳ ಕಾರ್ಯಾಲಯಕ್ಕೆ ಮುತ್ತಿಗೆ ಹಾಗಿ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಮಂಗವನ್ನ ಹಿಡಿಯುವವರೆಗೂ ನಾವು ಕಚೇರಿ ಬಿಟ್ಟು ಹೋಗುವುದಿಲ್ಲ. ಮಹಿಳೆಯರು, ಮಕ್ಕಳು ಭಯಬೀತರಾಗಿದ್ದಾರೆ. ಮಂಗವನ್ನು ಹಿಡಿದು ಜನರ ರಕ್ಷಣೆ ಮಾಡಬೇಕು ಎಂದು ಕಳೆದ 5 ತಿಂಗಳ ಹಿಂದೇಯೇ ಕಚೇರಿಗೆ ಬಂದು ಮನವಿ ಮಾಡಿದ್ದೇವೆ. ಇದುವರೆಗೂ ಒಂದು ಬೋನ್‌ ಇಟ್ಟು ಬಂದಿದ್ದು ಬಿಟ್ಟರೆ ಇದುವರೆಗೂ ಮಂಗವನ್ನು ಹಿಡಿಯುವ ಯಾವುದೇ ಪ್ರಯತ್ನ ಮಾಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಗಣೇಶ ಮಾಚೇನಹಳ್ಳಿ, ಶ್ರೀಕಾಂತ ಮಾಚೇನಹಳ್ಳಿ, ಸಂಜೀವರಡ್ಡಿ ದೇವರಡ್ಡಿ, ಗಿರೀಶ ಗಿರಡ್ಡಿ, ಕೃಷ್ಣ ಕಡೇಮನಿ, ಶಿವಪ್ಪ ಯಂಕಮ್ಮನವರ, ಹಿರೇಮಠ, ನಾಗಪ್ಪ, ಕೊಟ್ರಪ್ಪ, ನಿಂಗಪ್ಪ ಹರಿಜನ, ರಾಜು ಕೊಟ್ರೆಶ ಕುರುವತ್ತಿ ಮುಂತಾದವರು ಹುಬ್ಬಳ್ಳಿ, ಹೊನ್ನತ್ತಿ ಮತ್ತು ರಾಣೆಬೆನ್ನೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವರು ಗಾಯಗೊಂಡು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದರು.

ರೈತ ಭರಮರಡ್ಡಿ ದೇವರಡ್ಡಿ ಹಾಗೂ ಶಂಭುಲಿಂಗ ಕುರುವತ್ತಿ ಅವರು ಮಾತನಾಡಿ, ‘ಕಳೆದ ಐದಾರು ತಿಂಗಳಿಂದ ಮಗನ ಹಾವಳಿ ಹೆಚ್ಚಾಗಿದೆ. ಗ್ರಾಮದಲ್ಲಿ ಮನೆ ಬಾಗಿಲು ತೆಗೆದುಕೊಂಡು ಕೂಡುವಂತಿಲ್ಲ. ಟ್ರ್ಯಾಕ್ಟರ್‌ ಚಾಲು ಮಾಡುವಂತಿಲ್ಲ. ಶಬ್ದ ಕೇಳಿಸುತ್ತಲೇ ಆಟ್ಯಾಕ್‌ ಮಾಡುತ್ತದೆ. ಚಾಲಕರು ಟ್ರ್ಯಾಕ್ಟರ್‌ ಬಿಟ್ಟು ಹಾರಿ ಗಾಯಗೊಂಡಿದ್ದಾರೆ’ ಎಂದು ಆರೋಪಿಸಿದರು.

ಶಿವಯೋಗೆಯ್ಯ ಹಿರೇಮಠ, ಕೃಷ್ಟಪ್ಪ ಮಾಚೇನಹಳ್ಳಿ, ಶಂಭು ಮೂಲಿಮನಿ, ವಿನಯ ಗಂಗಾಪುರ, ಎಂ.ಬಿ. ಹಿರೇಮಠ, ಮಹೇಶ ಹೊಳಲ, ಮಹದೇವಪ್ಪ ಮೂಲಿಮನಿ, ಸೋಮನಗೌಡ ಕೆ. ಪಾಟೀಲ ಇದ್ದರು.

ವಲಯ ಅರಣ್ಯ ಅಧಿಕಾರಿ ಆಫ್ರೀನಾ ಸುಂಟಿ ಅವರು ಗ್ರಾಮಸ್ಥರ ಮನವೊಲಿಸಿ, ಶಿಗ್ಗಾವಿಯಿಂದ ಮಂಗ ಹಿಡಿಯುವವರನ್ನು ಕರೆಸಿ ಮಂಗ ಸೆರೆ ಹಿಡಿಯಲಾಗುವುದು ಎಂದು ಭರವಸೆ ನೀಡಿದ ನಂತರ  ಪ್ರತಿಭಟನೆ ವಾಪಸ್‌ ಪಡೆದರು.

ಪ್ರಕರಣದ ಗಂಭೀರತೆ ಅರಿತ ಅರಣ್ಯ ಇಲಾಖೆ ಸಿಬ್ಬಂದಿ ಸೋಮವಾರ ಸಂಜೆಯೇ ಗ್ರಾಮಕ್ಕೆ ಭೇಟಿ ನೀಡಿ ಮಂಗಗಳನ್ನು ಸೆರೆ ಹಿಡಿದು ಅರಣ್ಯದತ್ತ ಸಾಗಿಸಿದರು.

ರಾಣೆಬೆನ್ನೂರು ತಾಲ್ಲೂಕಿನ ಯತ್ತಿನಹಳ್ಳಿ ಗ್ರಾಮದಲ್ಲಿ ಜನರ ಮೇಲೆ ದಾಳಿ ಮಾಡುತ್ತಿದ್ದ ಮಂಗವನ್ನು ಸೋಮವಾರ ಶಿಗ್ಗಾವಿಯಿಂದ ತಜ್ಞರನ್ನು ಕರೆಸಿ ಸೆರೆ ಹಿಡಿಯಲಾಗಿದೆ
ಆಫ್ರೀನಾ ಸುಂಟಿ ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT