ಬುಧವಾರ, 25 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಂಡ–ಗುಂಡಿಗಳ ರಸ್ತೆ: ಬಸ್ ಸಂಚಾರ ಬಂದ್‌

ಯಳ್ಳೂರ–ಬಸಾಪುರ ಗ್ರಾಮೀಣ ರಸ್ತೆ ದುರವಸ್ಥೆ: ಗ್ರಾಮಸ್ಥರ ಸಂಕಟ
ಮಾರುತಿ ಪೇಟಕರ
Published : 25 ಸೆಪ್ಟೆಂಬರ್ 2024, 6:31 IST
Last Updated : 25 ಸೆಪ್ಟೆಂಬರ್ 2024, 6:31 IST
ಫಾಲೋ ಮಾಡಿ
Comments

ಹಾನಗಲ್: ತಾಲ್ಲೂಕಿನ ಯಳ್ಳೂರ–ಬಸಾಪುರ ಗ್ರಾಮೀಣ ರಸ್ತೆ ಹದಗೆಟ್ಟಿದೆ. ಮೊಣಕಾಲು ಮಟ್ಟದ ತಗ್ಗುಗಳು ಸೃಷ್ಟಿಯಾಗಿದ್ದು ಸಾರಿಗೆ ಬಸ್‌ ಸಂಚಾರ ಕೂಡ ಅಸಾಧ್ಯವಾಗಿದೆ. ಈ ಭಾಗದ ಜನರು ಮತ್ತು ಶಾಲೆ–ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆ ಉಂಟಾಗಿದೆ.

ಮಳೆಗಾಲದ ಆರಂಭದಿಂದಲೇ ರಸ್ತೆ ಸಂಚಾರ ದುಸ್ತರವಾಗುತ್ತಿದೆ. ಈಚೆಗಂತೂ ಹೆಜ್ಜೆಗೊಂದು ಗುಂಡಿ ಬಾಯ್ತೆರೆದುಕೊಂಡು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಈ ರಸ್ತೆಯಲ್ಲಿ ಹಾನಗಲ್ ಸಾರಿಗೆ ಘಟಕದ ಬಸ್‌ ಸಂಚಾರ ಬಂದ್‌ ಮಾಡಿ ಒಂದು ತಿಂಗಳು ಗತಿಸಿದೆ.

ಮಹರಾಜಪೇಟೆ ಗ್ರಾಮದ ಪ್ರೌಢಶಾಲೆಗೆ ಮತ್ತು ಹಾನಗಲ್‌ನಲ್ಲಿ ಇಂಗ್ಲಿಷ್‌ ಮಾಧ್ಯಮದ ಪ್ರಾಥಮಿಕ ಶಾಲೆ, ಕಾಲೇಜುಗಳಿಗೆ ಬಸಾಪುರ, ಯಳ್ಳೂರ ಭಾಗದ ಸುಮಾರು 100 ವಿದ್ಯಾರ್ಥಿಗಳು ನಿತ್ಯ ಸಂಚರಿಸುತ್ತಾರೆ. ಬಸ್‌ ಸಂಚಾರ ಸ್ಥಗಿತದಿಂದ ವಿದ್ಯಾರ್ಥಿಗಳು ಮುಖ್ಯ ರಸ್ತೆಯ ತನಕ ನಡೆದುಕೊಂಡು ಹೋಗಬೇಕಿದೆ.

ಯಳ್ಳೂರ ಗ್ರಾಮದ ವಿದ್ಯಾರ್ಥಿಗಳು 3 ಕಿ.ಮೀ ನಡೆದುಕೊಂಡು ಹೋಗಿ ಮುಖ್ಯರಸ್ತೆ ತಲುಪಿ ಅಲ್ಲಿಂದ ಬಸ್‌ ಹಿಡಿದು ಶಾಲೆ, ಕಾಲೇಜಿಗೆ ತೆರಳಬೇಕಾಗಿದೆ. ಬಸಾಪುರ ಮತ್ತು ಸುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು 5 ಕಿ.ಮೀ ನಡೆದು ಹೋಗಬೇಕಿದೆ. ಇದೇ ಮಾರ್ಗವಾಗಿ ಬೊಮ್ಮನಹಳ್ಳಿ ಹೊಬಳಿಯ ಸಾಕಷ್ಟು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ದುರಸ್ತಿಗಾಗಿ ಸಂಬಂಧಿತ ಇಲಾಖೆಗೆ ಗ್ರಾಮಸ್ಥರ ಹಲವು ಬೇಡಿಕೆಗಳು ಸಲ್ಲಿಕೆಯಾಗಿವೆ. ಆದರೆ ಪ್ರಯೋಜನವಾಗಿಲ್ಲ.

ಈ ರಸ್ತೆಯಲ್ಲಿ ಕಾರುಗಳ ಸಂಚಾರ ಸಾಧ್ಯವಿಲ್ಲ. ಬೈಕ್‌ ಉಳ್ಳವರು ತಮ್ಮ ಮಕ್ಕಳನ್ನು ಮುಖ್ಯ ರಸ್ತೆಯವರೆಗೆ ಕರೆದುಕೊಂಡು ಹೋಗುತ್ತಾರೆ. ಇನ್ನುಳಿದ ಮಕ್ಕಳು ನಡೆದುಕೊಂಡು ಹೋಗಬೇಕು. ಮಳೆ ಬಂದ ಸಮಯದಲ್ಲಿ ಮಕ್ಕಳನ್ನು ಬಿಟ್ಟುಬರಲು, ಕರೆದುಕೊಂಡು ಹೋಗಲು ಕೆಲಸ ಬಿಟ್ಟು ಸಿದ್ಧಗೊಳ್ಳಬೇಕು ಎಂದು ಬಸಾಪುರ ಗ್ರಾಮಸ್ಥ ರಾಜಶೇಖರ ದೇಸಾಯಿ ಅಳಲು ತೋಡಿಕೊಂಡರು.

‘ರಸ್ತೆ ಹದಗೆಟ್ಟ ಕಾರಣ ಕೃಷಿ ಚಟುವಟಿಕೆಗೆ ಅಡಚಣೆ ಉಂಟಾಗುತ್ತಿದೆ. ಮಕ್ಕಳು ಸುರಕ್ಷಿತವಾಗಿ ಶಾಲೆಗೆ ಹೋಗಲು ಸಂಚಕಾರ ತಂದಿದೆ. ಸಣ್ಣ ಪ್ರಮಾಣದಲ್ಲಿ ರಸ್ತೆ ದುರಸ್ತಿಯಾದರೂ, ಸಾರಿಗೆ ಬಸ್‌ ಸಂಚಾರ ಆರಂಭದ ಸಾಧ್ಯತೆ ಇದೆ’ ಎಂದು ಗ್ರಾಮಸ್ಥರಾದ ವಿರುಪಾಕ್ಷ ಗುಂಡಿ, ಸಿದ್ಧು ಗೋಡಿ ತಿಳಿಸಿದರು.

ಯಳ್ಳೂರ ಕೆರೆ ಏರಿ ಮೇಲಿನ ರಸ್ತೆ ಹದಗೆಟ್ಟು ಬಸ್‌ ಸಂಚಾರ ಅಪಾಯಕರವಾಗಿದೆ. ರಸ್ತೆ ದುರಸ್ತಿಯಾಗದ ಹೊರತು ಈ ಮಾರ್ಗದಲ್ಲಿ ಬಸ್‌ ಸಂಚಾರ ಆರಂಭಿಸುವುದಿಲ್ಲ.
–ಎಚ್‌.ಡಿ.ಜಾವೂರ, ಹಾನಗಲ್ ಸಾರಿಗೆ ಘಟಕದ ವ್ಯವಸ್ಥಾಪಕ
ಯಳ್ಳೂರ ರಸ್ತೆ ದುರಸ್ತಿಗೆ ಮುಖ್ಯಮಂತ್ರಿಗಳ ವಿಶೇಷ ನಿಧಿ ಯೋಜನೆಯಲ್ಲಿ ಕಾಮಗಾರಿ ಮಾಡಲಾಗುತ್ತದೆ.
–ದೇವರಾಜ ಎಸ್‌., ಜಿಲ್ಲಾ ಪಂಚಾಯಿತಿ ಎಇಇ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT