ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ: ಸಂಚಾರಕ್ಕೆ ಸಂಚಕಾರ ತರುವ ಸೇತುವೆಗಳು

ಪ್ರತಿ ವರ್ಷ ‘ಮಹಾ’ ಮಳೆಗೆ ಮುಳುಗುವ ಸೇತುವೆಗಳು: ದುರಸ್ತಿ, ಎತ್ತರ ಹೆಚ್ಚಳಕ್ಕೆ ಸಿಗದ ಸ್ಪಂದನೆ
Published 1 ಜುಲೈ 2024, 5:16 IST
Last Updated 1 ಜುಲೈ 2024, 5:16 IST
ಅಕ್ಷರ ಗಾತ್ರ

ಕಲಬುರಗಿ: ಉತ್ತರದಿಂದ ದಕ್ಷಿಣಕ್ಕೆ ಇಳಿಜಾರಾದ ಭೂ ಪ್ರದೇಶದಿಂದ ಕೂಡಿರುವ ಕಲಬುರಗಿಯಲ್ಲಿ ಭೀಮಾ, ಕಾಗಿಣಾ, ಮುಲ್ಲಮಾರಿ, ಕಮಲಾವತಿ, ಅಮರ್ಜಾ ಸೇರಿ ಇತರೆ ನದಿ, ಹಳ್ಳಗಳು ಮಳೆಗಾಲದಲ್ಲಿ ತುಂಬಿ ಹರಿದು, ನೆರೆಯನ್ನು ಹೊತ್ತು ತಂದು ಸೇತುವೆಗಳ ಮೇಲೆ ಹರಿದಾಡಿ ರಸ್ತೆ ಸಂಪರ್ಕಕ್ಕೆ ಸಂಚಕಾರ ತರುತ್ತಿವೆ.

ಹತ್ತಾರು ಗ್ರಾಮಗಳಲ್ಲಿ ಹೊಸ ಸೇತುವೆ ನಿರ್ಮಾಣ, ಸೇತುವೆ ಎತ್ತರ ಹೆಚ್ಚಳ, ದುರಸ್ತಿಯಂತಹ ಕೂಗು ದಶಕಗಳಿಂದ ಕೇಳಿಬರುತ್ತಿದೆ. ಅವುಗಳಲ್ಲಿ ಕೆಲವೊಂದಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳಿಂದ ‘ಭರವಸೆ’ ಲಭಿಸಿದ್ದರೆ, ಮತ್ತೆ ಕೆಲವು ಕಡತಗಳಲ್ಲೇ ಉಳಿದಿವೆ.

ರಾಷ್ಟ್ರೀಯ, ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ಸೇರಿ ಜಿಲ್ಲೆಯಲ್ಲಿ 14,925 ಕಿ.ಮೀ. ರಸ್ತೆ ವಿಸ್ತರಿಸಿಕೊಂಡಿದೆ. 49 ಭಾರಿ ಸೇತುವೆಗಳು, 100ಕ್ಕೂ ಅಧಿಕ ಮಧ್ಯಮ, ಕಿರು ಸೇತುವೆಗಳಿವೆ. ಹಲವು ಸೇತುವೆಗಳು ಶಿಥಲಾವಸ್ಥೆ, ಅಗತ್ಯಕ್ಕಿಂತ ಕಡಿಮೆ ಎತ್ತರದಲ್ಲಿವೆ. ಮತ್ತೆ ಕೆಲವು ಮಳೆಗೆ ಕೊಚ್ಚಿ ಹೋಗಿದ್ದು ಅಪಾಯಕ್ಕೆ ಆಹ್ವಾನ ನೀಡುವಂತಿವೆ.

ಪಟ್ಟಣ ಮತ್ತು ಹಳ್ಳಿಗಳ ನಡುವೆ ಸಂಪರ್ಕ ಕೊಂಡಿಯಾಗಿರುವ ಸೇತುವೆಗಳ ಪೈಕಿ ಕೆಲವು ಸೇತುವೆಗಳು ಮಳೆಗಾಲದಲ್ಲಿ ಸಾರಿಗೆ ಸಂಚಾರಕ್ಕೆ ತೀವ್ರ ಅನಾನುಕೂಲತೆ ಉಂಟುಮಾಡುತ್ತಿವೆ. ಇದರಿಂದ ಪ್ರಯಾಣಿಕರು ಸಮಯದ ಜತೆಗೆ ಅಧಿಕ ಹಣವನ್ನೂ ವ್ಯಯಿಸಬೇಕಿದೆ. ಅನಾರೋಗ್ಯ, ತುರ್ತು ಚಿಕಿತ್ಸೆಯಂತಹ ಸಂದರ್ಭದಲ್ಲಿ ‘ಮೃತ್ಯುವಿನ’ ಮಾರ್ಗವಾಗುತ್ತಿವೆ ಎಂಬ ಅಳುಕು ಸೇತುವೆ ಅವಲಂಬಿತ ಗ್ರಾಮಗಳ ನಿವಾಸಿಗಳದ್ದು.

‘ಆಳಂದ ತಾಲ್ಲೂಕಿನ ದೇಗಾಂವ– ಬಿಲಗುಂದಿ ನಡುವಿನ ದೊಡ್ಡ ಹಳ್ಳದ ಸೇತುವೆ ಕೊಚ್ಚಿ ಹೋಗಿದೆ. ದೇಗಾಂವ ಗ್ರಾಮಸ್ಥರು 35 ಕಿ.ಮೀ. ದೂರದ ಕಲಬುರಗಿಗೆ ಹೋಗಬೇಕಾದರೆ ಆಳಂದ ಮೂಲಕ 65 ಕಿ.ಮೀ. ಪ್ರಯಾಣಿಸಬೇಕು. ಬಿಲಗುಂದಿ ಗ್ರಾಮಸ್ಥರು 18 ಕಿ.ಮೀ. ಅಂತರದಲ್ಲಿನ ಆಳಂದಕ್ಕೆ ಕಡಗಂಚಿ ಮೂಲಕ 35 ಕಿ.ಮೀ. ದೂರ ಕ್ರಮಿಸಬೇಕಾದ ಪರಿಸ್ಥಿತಿ ಇದೆ. ಕನಿಷ್ಠ 1 ಕಿ.ಮೀ. ರಸ್ತೆ ಮಾಡಿ, ಎರಡು ಸೇತುವೆಗಳು ನಿರ್ಮಿಸಿದರೆ ಹತ್ತಾರು ಹಳ್ಳಿಗಳಿಗೆ ಅನುಕೂಲ ಆಗುತ್ತದೆ’ ಎನ್ನುತ್ತಾರೆ ದೇಗಾಂವ ಗ್ರಾಮದ ಶರಣಪ್ಪ ರಂಗೋಜಿ.

ಕಾಳಗಿ ತಾಲ್ಲೂಕಿನಲ್ಲಿ ಧಾರಾಕಾರ ಮಳೆಯಾದರೆ ಹಲವು ಸೇತುವೆಗಳು ಮುಳುಗಡೆಯಾಗಿ ರಸ್ತೆ ಸಂಚಾರ ಸ್ಥಗಿತಗೊಳ್ಳುತ್ತದೆ. ಮಂಗಲಗಿ, ರಾಜಾಪುರ, ಹೊಸಳ್ಳಿ, ತೆಂಗಳಿ, ಮಲಘಾಣ, ಚಿಂತಪಳ್ಳಿ, ಕಂಚನಾಳ, ಕೋಡ್ಲಿ, ಹಲಚೇರಾ ಗ್ರಾಮಸ್ಥರ ಗೋಳು ಕೇಳುವವರಿಲ್ಲ. ಸಂಬಂಧಪಟ್ಟ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಸ್ಪಂದನೆ ಸಿಗುತ್ತಿಲ್ಲ ಎಂಬ ಬೇಸರ ಸ್ಥಳೀಯರದ್ದು.

ಸೇತುವೆ ಎತ್ತರ ಹೆಚ್ಚಳ ಮಾಡಿ: ಚಿಂಚೋಳಿ ತಾಲ್ಲೂಕಿನಲ್ಲಿ‌ ನಾಗರಾಳ‌ ಜಲಾಶಯದ ನೀರು ನದಿಗೆ ಬಿಟ್ಟರೆ ಚಿಮ್ಮನಚೋಡ, ಗಾರಂಪಳ್ಳಿ, ತಾಜಲಾಪುರ ಹಾಗೂ ಗರಕಪಳ್ಳಿ ಭಕ್ತಂಪಳ್ಳಿ ಸೇತುವೆ ಮುಳುಗಿ ಸಂಪರ್ಕ‌ ಕಡಿತವಾಗುತ್ತದೆ. ಇದರಿಂದ ತುರ್ತು ಸಂದರ್ಭದಲ್ಲಿ ಸಮಸ್ಯೆ ಎದುರಾಗುತ್ತಿದ್ದು, ಜನರು ಜಲ ದಿಗ್ಬಂಧನಕ್ಕೆ ಒಳಗಾಗುವಂತಾಗಿದೆ. ಹೀಗಾಗಿ, ಸೇತುವೆಗಳ ಎತ್ತರ ಹೆಚ್ಚಿಸಬೇಕು ಎಂಬ ಬೇಡಿಕೆ ಇದೆ.

ಪೂರಕ ಮಾಹಿತಿ: ಶಿವಾನಂದ ಹಸರಗುಂಡಗಿ, ಸಂಜಯ ಪಾಟೀಲ, ಜಗನ್ನಾಥ ಶೇರಿಕಾರ, ಮಲ್ಲಿಕಾರ್ಜುನ ಎಂ.ಎಚ್, ಅವಿನಾಶ ಬೋರಂಚಿ, ವೆಂಕಟೇಶ ಹರವಾಳ, ಮಂಜುನಾಥ ದೊಡಮನಿ, ಗುಂಡಪ್ಪ ಕರೆಮನೋರ.

ಕಲಬುರಗಿ ತಾಲ್ಲೂಕಿನ ಪಟ್ಟಣ ಗ್ರಾಮದ ಸಮೀಪದ ಸೇತುವೆ ಮೇಲೆ ಹರಿಯುತ್ತಿರುವ ಹಳ್ಳದ ಮಳೆಯ ನೀರು (ಸಂಗ್ರಹ ಚಿತ್ರ)
ಕಲಬುರಗಿ ತಾಲ್ಲೂಕಿನ ಪಟ್ಟಣ ಗ್ರಾಮದ ಸಮೀಪದ ಸೇತುವೆ ಮೇಲೆ ಹರಿಯುತ್ತಿರುವ ಹಳ್ಳದ ಮಳೆಯ ನೀರು (ಸಂಗ್ರಹ ಚಿತ್ರ)
ಚಿಂಚೋಳಿ ತಾಲ್ಲೂಕಿನ ತಾಜಲಾಪುರ ಸಮೀಪದ ಮುಲ್ಲಾಮಾರಿ ನದಿ ಪ್ರವಾಹದಲ್ಲಿ ಮುಳುಗಡೆಯಾಗಿದ್ದ ಸೇತುವೆ
ಚಿಂಚೋಳಿ ತಾಲ್ಲೂಕಿನ ತಾಜಲಾಪುರ ಸಮೀಪದ ಮುಲ್ಲಾಮಾರಿ ನದಿ ಪ್ರವಾಹದಲ್ಲಿ ಮುಳುಗಡೆಯಾಗಿದ್ದ ಸೇತುವೆ
ಮಳೆಯಿಂದ ಮುಳುಗಡೆಯಾಗುವ ಸೇತುವೆಗಳನ್ನು ಗುರುತಿಸಲಾಗಿದ್ದು ಜನರ ಓಡಾಟಕ್ಕೆ ಪರ್ಯಾಯ ಮಾರ್ಗಗಳೂ ಗುರುತಿಸಲಾಗಿದೆ. ಯಡ್ರಾಮಿಯಲ್ಲಿ ಹಗ್ಗದ ಸಹಾಯದಿಂದ ಹಳ್ಳ ದಾಟಿದ ಸಂಬಂಧ ವರದಿ ನೀಡುವಂತೆ ಸ್ಥಳೀಯ ಅಧಿಕಾರಿಗಳಿ‌ಗೆ ಸೂಚಿಸಲಾಗಿದೆ
ಬಿ.ಫೌಜಿಯಾ ತರನ್ನುಮ್ ಜಿಲ್ಲಾಧಿಕಾರಿ
ಜೂನ್‌ ಆರಂಭದಲ್ಲಿ ಸುರಿದ ಮಳೆಗೆ ರಸ್ತೆ ಸೇತುವೆ ಹಾಳಾಗಿವೆ. ತಾತ್ಕಾಲಿಕ ದುರಸ್ತಿಗೆ ₹1.15 ಅನುದಾನದನಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅನುದಾನ ಬಳಿಕ ದುರಸ್ತಿ ಕಾರ್ಯ ಶುರುವಾಗಲಿದೆ
ಯಲ್ಲಪ್ಪ ಸುಬೇದಾರ ಆಳಂದ ತಹಶೀಲ್ದಾರ್‌
ಹೊದಲೂರು–ಜಮಗಾ (ಆರ್‌) ನಡುವಿನ ಸೇತುವೆ ಒಡೆದು ಜಮೀನುಗಳಿಗೆ ನೀರು ನುಗ್ಗಿದೆ. ಸಂಪರ್ಕ ಕಡಿತದಿಂದ ಎರಡು ಗ್ರಾಮಗಳ ಕೃಷಿ ಚಟುವಟಿಕೆಗಳಿಗೆ ದೊಡ್ಡ ಸಮಸ್ಯೆಯಾಗಿದೆ
ಶಾಂತಕುಮಾರ ಪಾಟೀಲ ಹೊದಲೂರು ರೈತ
ಸಂಕಷ್ಟಗಳು ಹೊತ್ತು ತರುವ ಕಾಗಿಣಾ ಕಮಲಾವತಿ 
ಸೇಡಂ: ತಾಲ್ಲೂಕಿನ ಕಾಗಿಣಾ ಮತ್ತು ಕಮಲಾವತಿ ನದಿಗಳು ತುಂಬಿ ಹರಿದು ಸಂಕಷ್ಟಗಳನ್ನು ಹೊತ್ತು ಸಾಗುತ್ತವೆ. ಬಹುತೇಕ ಸೇತುವೆಗಳು ಕಡಿಮೆ ಎತ್ತರ ಇರುವುದರಿಂದ ಗ್ರಾಮಗಳ ನಡುವಿನ ಸಂಪರ್ಕ ಕಡಿತವಾಗುತ್ತಿದೆ. ಯಡ್ಡಳ್ಳಿ ಬಿಬ್ಬಳ್ಳಿ ಕಾಚೂರ ಸಂಗಾವಿ ಗ್ರಾಮಗಳ ಸಂಪರ್ಕ ಕಡಿತವಾಗುತ್ತವೆ. ಹೊಸಳ್ಳಿ ಹೈಯ್ಯಾಳ ತೊಟ್ನಳ್ಳಿ ಮತ್ತು ಮಾದ್ವಾರ ಗ್ರಾಮಗಳ ವ್ಯಾಪ್ತಿಯಲ್ಲಿ ನಾಲಾಗಳ ಆರ್ಭಟಕ್ಕೆ ಜನರು ಬೇಸತ್ತಿದ್ದಾರೆ. ಕಿರು ಸೇತುವೆ ನಿರ್ಮಿಸಬೇಕು ಎಂಬ ಕೂಗಿಗೆ ಬೆಲೆ ಸಿಗುತ್ತಿಲ್ಲ. ಮಳಖೇಡ ಸಮೀಪ ಕಾಗಿಣಾ ನದಿಗೆ 2018ರಲ್ಲಿ ಶಂಕುಸ್ಥಾಪನೆಗೊಂಡ ಸೇತುವೆಯ ಕಾಮಗಾರಿ ಕೊನೆಯ ಹಂತಕ್ಕೆ ಬಂದಿದೆ. ತ್ವರಿತವಾಗಿ ಉದ್ಘಾಟನೆಯಾದರೆ ಸೇಡಂ–ಕಲಬುರಗಿ ನಡುವಿನ ಹಳೆಯ ಸೇತುವೆ ಅವಲಂಬಿಸುವುದು ತಪ್ಪುತ್ತದೆ ಎನ್ನುತ್ತಾರೆ ಸ್ಥಳೀಯರು.
ಪ್ರತಿ ವರ್ಷ ಮುಳುಗುವ ಸೇತುವೆ
ಚಿತ್ತಾಪುರ: ಚಿತ್ತಾಪುರ–ಕಲಬುರಗಿ–ಕಾಳಗಿಗೆ ಸಂಪರ್ಕಿಸುವ ದಂಡೋತಿ ಸಮೀಪದ ಕಾಗಿಣಾ ನದಿ ಸೇತುವೆ ಪ್ರತಿ ವರ್ಷ ಮಳೆಗಾಲದಲ್ಲಿ ಕನಿಷ್ಠ ಮೂರ್ನಾಲ್ಕು ದಿನ ಮುಳುಗಡೆ ಆಗುವುದು ಸಾಮಾನ್ಯವಾಗಿದೆ. ನಾಲ್ಕೂವರೆ ದಶಕಗಳ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಜನಪ್ರತಿನಿಧಿಗಳಿಗೆ ಸಾಧ್ಯವಾಗುತ್ತಿಲ್ಲ. ಪ್ರತಿ ಮಳೆಗಾಲದಲ್ಲಿ ವಿದ್ಯಾರ್ಥಿಗಳು ಉದ್ಯೋಗಸ್ಥರು ಪ್ರಯಾಣಿರು ಸಂಕಷ್ಟ ಅನುಭವಿಸುತ್ತಿದ್ದಾರೆ. ಸೇತುವೆ ಮುಳುಗಡೆಯಾದಾಗ ಶಹಾಬಾದ್ ಮೂಲಕ ಕಲಬುರಗಿಗೆ ಪ್ರಯಾಣಿಸುತ್ತಾರೆ. ಹೊಸ ಸೇತುವೆ ನಿರ್ಮಾಣದ ಮಾತುಗಳು ಆಗಾಗ ಕೇಳಿಬರುತ್ತಿವೆ. ಆದರೆ ಕಾರ್ಯರೂಪಕ್ಕೆ ಬರುತ್ತಿಲ್ಲ. ಕಂದಾಯ ಇಲಾಖೆಯ ಕಾರ್ಯದರ್ಶಿ ಜಿಲ್ಲಾಧಿಕಾರಿ ಜಿ.ಪಂ ಸಿಇಒ ಉಪ ವಿಭಾಗಾಧಿಕಾರಿ ಲೋಕೋಪಯೋಗಿ ಇಲಾಖೆಯ ಇಇ ಸೇರಿ ಹಲವು ಅಧಿಕಾರಿಗಳು ಸೇತುವೆಗೆ ಭೇಟಿ ನೀಡಿ ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಹ ನೀಡಿದ್ದಾರೆ. ಆದರೆ ಹೊಸ ಸೇತುವೆ ಕನಸು ನನಸಾಗುತ್ತಿಲ್ಲ ಎಂಬುದು ಸ್ಥಳೀಯರ ಬೇಸರ.
ಸೇತುವೆಗಳ ಎತ್ತರ ಹೆಚ್ಚಳದ ಬೇಡಿಕೆ
ಅಫಜಲಪುರ: ಭೀಮಾ ನದಿಯಲ್ಲಿ ನೆರೆ ಬಂದರೆ ನಾಲ್ಕೈದು ಗ್ರಾಮಗಳ ಸೇತುವೆ ಮುಳಗಡೆಯಾಗಿ ಹತ್ತಾರು ಗ್ರಾಮಗಳ ಸಂಪರ್ಕ ಕಡಿತವಾಗುತ್ತದೆ. ಆದರೆ ಸೇತುವೆಗಳ ಎತ್ತರ ಹೆಚ್ಚಳದ ಬೇಡಿಕೆಗೆ ಯಾರೂ ಕಿವಿಗೊಡುತ್ತಿಲ್ಲ. ವಿಜಯಪುರದ ಇಂಡಿ ತಾಲ್ಲೂಕಿಗೆ ಸಂಪರ್ಕ ಕಲ್ಪಿಸುವ ಮಣ್ಣೂರು ಮತ್ತು ದಿಕ್ಸಂಗ (ಬಿ) ಸಮೀಪದ ಅಮರ್ಜಾ ನದಿ ಸೇತುವೆ ಭೀಮಾ ನದಿಗೆ ನೆರೆ ಬಂದಾಗ ಸೇತುವೆಗಳು ಮುಳುಗಡೆಯಾಗಿ ಐದು ಗ್ರಾಮಗಳ ಸಂಪರ್ಕ ಕಡಿತವಾಗುತ್ತದೆ. ಘತ್ತರಗಾ– ದೇವಲ ಗಾಣಗಾಪುರ ಸೇತುವೆಯೂ ಮುಳುಗಡೆಯಾಗಿ ಸಿಂದಗಿ ಮತ್ತು ಜೇವರ್ಗಿ ಸಂಪರ್ಕ ಬಂದ್ ಆಗುತ್ತದೆ. ‘ನೆರೆ ಬಂದು ಸೇತುವೆಗಳು ಮುಳುಗಡೆಯಾದಾಗ ಮಾತ್ರ ಸರ್ಕಾರ ಚಿಂತನೆ ಮಾಡುತ್ತದೆ. ಆ ನಂತರ ಅದನ್ನು ಮರೆತುಬಿಡುತ್ತದೆ. ಮುಂದಾಲೋಚನೆಯಿಂದ ಘತ್ತರಗಾ ದೇವಲ ಗಾಣಗಾಪುರ ಮಣ್ಣೂರು ದಿಕ್ಸಂಗ (ಬಿ) ಜೇವರ್ಗಿ (ಬಿ) ಸೇತುವೆಗಳ ಎತ್ತರವನ್ನು ಹೆಚ್ಚಿಸಬೇಕು’ ಎನ್ನುತ್ತಾರೆ ಜೆಡಿಎಸ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ನಾಟೀಕಾರ.
ಮಳೆ ಅಬ್ಬರಕ್ಕೆ ಸಂಪರ್ಕ ಕಡಿತ
ಆಳಂದ: ಜೂನ್‌ ಮೊದಲ ವಾರದಲ್ಲಿ ಸುರಿದ ಮಳೆಗೆ 24 ರಸ್ತೆಗಳು ಸಂಪೂರ್ಣವಾಗಿ ಹಾಳಾಗಿ ಸಂಚಾರಕ್ಕೆ ಅಡ್ಡಿಯಾಗಿದ್ದು ತಾಲ್ಲೂಕಿನಲ್ಲಿ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಖಜೂರಿ ಆಳಂದ ಹಾಗೂ ನರೋಣಾ ವ್ಯಾಪ್ತಿಯ ಹಳ್ಳಕೊಳ್ಳಗಳು ತುಂಬಿ ಹರಿದು ಸೇತುವೆಗಳು ಮುಳುಗಡೆಯಾದವು. ಹೊಲಗದ್ದೆಗಳಿಗೂ ನೀರು ನುಗ್ಗಿ ಅಪಾರ ನಷ್ಟವಾಯಿತು. ಹೊದಲೂರು– ಜಮಗಾ (ಆರ್‌) ನಡುವಿನ ಸೇತುವೆ ಕೊಚ್ಚಿಹೋಗಿದೆ. ಶಾಸಕ ಬಿ.ಆರ್.ಪಾಟೀಲ ಅವರು ಭೇಟಿ ನೀಡಿ ದುರಸ್ತಿಗೆ ಸೂಚಿಸಿ 20 ದಿನ ಕಳೆದರೂ ಕಾರ್ಯ ಆರಂಭವಾಗಿಲ್ಲ. ಮಳೆಯ ಅಬ್ಬರಕ್ಕೆ ನಂದಗೂರು–ಕೊತ್ತನ ಹಿಪ್ಪರಗಾ ಖಂಡಾಳ–ಜಮಗಾ ಆಳಂದ–ಕಿಣಿಸುಲ್ತಾನ ಚಿತಲಿ–ಕಿಣಿಸುಲ್ತಾನ ಚಿಂಚೋಳಿ–ಪಡಸಾವಳಿ ತಡಕಲ–ವಳವಂಡವಾಡಿ ದೇಗಾಂವ–ಮುನ್ನೋಳ್ಳಿ ಸಂಪರ್ಕ ರಸ್ತೆಗಳು ಮಳೆಗೆ ಹೆಚ್ಚಿನ ಪ್ರಮಾಣದಲ್ಲಿ ಹಾಳಾಗಿದ್ದು ಸಂಚಾರಕ್ಕೆ ಸಮಸ್ಯೆಯಾಗಿದೆ.
ಸೇತುವೆಯಾಗುವ ಹಗ್ಗ
ಯಡ್ರಾಮಿ: ಈಚೆಗೆ ಬಿದ್ದ ಮಳೆಗೆ ವರವಿ ಗ್ರಾಮಸ್ಥರು ತುಂಬಿ ಹರಿಯತ್ತಿದ್ದ ಹಳ್ಳವನ್ನು ರೈತರು ಹಗ್ಗದ ನೆರವಿನ ಹರಸಾಹಸ ಪಟ್ಟು ದಾಟಿದರು. ಕಡಕೋಳ ಗ್ರಾಮದ ಹಳ್ಳದ ಸೇತುವೆ ಕೆಳ ಮಟ್ಟದಲ್ಲಿದ್ದು ಶಿಥಲಾವಸ್ಥೆ ತಲುಪಿದೆ. ಮಾಣಶಿವಣಗಿ ಯತ್ನಾಳ ಮಾರ್ಗವಾಗಿ ಸಿಂದಗಿಗೆ ಸಂಪರ್ಕ ಕಲ್ಪಿಸುತ್ತದೆ. ಈ ಸೇತುವೆ ಬಿದ್ದರೆ ಯಡ್ರಾಮಿ ಸಂಪರ್ಕ ಕಡಿತವಾಗುತ್ತದೆ. ‘ಹಂಗರಗಾ (ಕೆ) ಗ್ರಾಮಸ್ಥರು ಹಳ್ಳ ದಾಟಿ ಯಡ್ರಾಮಿ ಹಾಗೂ ಜಮೀನಿಗೆ ಹೋಗಬೇಕು. ನೀರಿನ ಮಟ್ಟ ಹೆಚ್ಚಾದಾಗ ಹೊಲಗಳಿಗೆ ಹೋಗುವಂತಿಲ್ಲ. ಇದರಿಂದ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗುತ್ತದೆ. ಶಾಸಕರು ಅಧಿಕಾರಿಗಳಿಗೆ ಮನವಿ ಮಾಡಿದರು ಸೇತುವೆ ನಿರ್ಮಾಣಕ್ಕೆ ಮುಂದಾಗಿಲ್ಲ’ ಎನ್ನುತ್ತಾರೆ ಗ್ರಾಮಸ್ಥ ವಿದ್ಯಾಸಾಗರ ಕಟ್ಟಿಮನಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT