ಮಂಗಳವಾರ, 2 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆರಂಭಿಕ ಹಂತದಲ್ಲಿಯೇ ಚಿಕಿತ್ಸೆಯಿಂದ ಕ್ಯಾನ್ಸರ್‌ ಗುಣಮುಖ: ಕಲಬುರಗಿ DC ಫೌಜಿಯಾ

Published 30 ಜೂನ್ 2024, 14:18 IST
Last Updated 30 ಜೂನ್ 2024, 14:18 IST
ಅಕ್ಷರ ಗಾತ್ರ

ಕಲಬುರಗಿ: ‘ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಿ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಿದರೆ ಕ್ಯಾನ್ಸರ್‌ನ ಹಲವು ರೋಗಗಳನ್ನು ಗುಣಪಡಿಸಬಹುದು’ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್‌ ಹೇಳಿದರು.

ನಗರದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕ್ಯಾನ್ಸರ್ ಜಾಗೃತಿ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಯಾವುದೇ ರೋಗಲಕ್ಷಣಗಳು ಕಂಡುಬಂದರೆ ತಡಮಾಡದೆ ವೈದ್ಯರನ್ನು ಕಾಣಬೇಕು. ಎಷ್ಟೇ ಕೆಲಸಗಳು ಇದ್ದರೂ ಆರೋಗ್ಯ ಕಡೆಗೆ ಗಮನಹರಿಸುವುದು ಬಹಳ ಮುಖ್ಯವಾಗಿದೆ. ಆರೋಗ್ಯವಾಗಿದ್ದರೆ ಎಲ್ಲವೂ ಸಾಧ್ಯ. ಯುವಜನತೆ ಇದರ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಮುಕ್ತವಾಗಿ ವೈದ್ಯರಿಗೆ ತಿಳಿಸಬೇಕು’ ಎಂದರು.

‘ವಿದ್ಯಾರ್ಥಿಗಳು ಉತ್ತಮ ಆಹಾರ ಸೇವಿಸಬೇಕು ಇದರಿಂದ ಆರೋಗ್ಯವಾಗಿರಬಹುದು. ಆರೋಗ್ಯ ಚೆನ್ನಾಗಿದ್ದರೆ ಉನ್ನತ ಗುರಿ ಮುಟ್ಟಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

‘ಇಂತಹ ಆರೋಗ್ಯ ಕುರಿತ ಕಾರ್ಯಕ್ರಮಗಳು ಪ್ರತಿ ಶಾಲಾ–ಕಾಲೇಜಿನಲ್ಲಿ ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ ತಿಳಿಹೇಳಬೇಕು’ ಎಂದು ಸಲಹೆ ನೀಡಿದರು.

ಎಚ್.ಸಿ.ಜಿ. ಕ್ಯಾನ್ಸರ್ ಸೆಂಟರ್ ಹಾಗೂ ಕಿದ್ವಾಯಿ ಆಸ್ಪತ್ರೆಯ ಮೆಡಿಕಲ್ ಆಂಕೊಲಾಜಿಸ್ಟ್, ವೈದ್ಯೆ ಡಾ.ಶೃತಿ ವಿ. ಅವರು ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್ ರೋಗಗಳು ಮತ್ತು ಅದರ ಪರಿಹಾರ ಕುರಿತು ವಿವರಿಸಿದರು.

ಶರಣಬಸವೇಶ್ವರ ದೇವಸ್ಥಾನ ಆವರಣದ ಶಾಲಾ ಕಾಲೇಜುಗಳ ನಿರ್ದೇಶಕಿ ಡಾ.ನೀಲಾಂಬಿಕಾ ಶೇರಿಕಾರ ಮಾತನಾಡಿ, ‘ಈ ಭಾಗದ ಮಹಿಳೆಯರು ಐಎಎಸ್ ಮತ್ತು ಕೆಎಎಸ್ ಉನ್ನತ ಹುದ್ದೆಗಳಲ್ಲಿರಬೇಕು ಎಂದು ಶರಣಬಸವಪ್ಪ ಅಪ್ಪ ಅವರ ಕನಸಾಗಿದೆ. ಅದರಂತೆ ಇತ್ತೀಚಿಗೆ ಮಹಿಳೆಯರು ಇಂತಹ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ವಿದ್ಯಾರ್ಥಿನಿಯರು ದೊಡ್ಡ ಕನಸು ಮತ್ತು ಗುರಿ ಇಟ್ಟುಕೊಳ್ಳಬೇಕು’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಪುಟ್ಟಮಣಿ ದೇವಿದಾಸ, ‘ಹಣ್ಣು ಮತ್ತು ತರಕಾರಿಗಳನ್ನು ಒಳಗೊಂಡಂತೆ ಆರೋಗ್ಯಕರ ಆಹಾರವನ್ನು ಸೇವಿಸಬೇಕು. ದುಶ್ಚಟಗಳಿಂದ ದೂರವಿರಬೇಕು. ನಿಯಮಿತವಾಗಿ ದೈಹಿಕ ಚಟುವಟಿಕೆಗಳನ್ನು ಮಾಡಬೇಕು. ಅಂದಾಗ ಮಾತ್ರ ರೋಗಗಳು ಬರದಂತೆ ಎಚ್ಚರಿಕೆ ವಹಿಸಬಹುದು’ ಎಂದು ಹೇಳಿದರು.

ಐಐಆರ್‌ಸಿಎಸ್‍ನ ಕಾರ್ಯದರ್ಶಿ ರವೀಂದ್ರ ಶಾಬಾದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್‌ಸಿಎಸ್‌ನ ಭಾಗ್ಯಲಕ್ಷ್ಮೀ ಎಂ., ಪರಮೇಶ್ವರ ಶೆಟಕಾರ ಇದ್ದರು.

ಅಕ್ಷತಾ ಮತ್ತು ಸ್ಫೂರ್ತಿ ಪ್ರಾರ್ಥಿಸಿದರು. ಮಹಾವಿದ್ಯಾಲಯದ ಪದ್ಮಜಾ ವೀರಶೆಟ್ಟಿ ಸ್ವಾಗತಿಸಿದರು. ದಾಕ್ಷಾಯಣಿ ಕಾಡಾದಿ ನಿರೂಪಿಸಿದರು. ದೀಶಾ ಮೆಹತಾ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT