ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ: ಪಿಎಸ್‌ಐ, ಎಎಸ್‌ಐ ವಿರುದ್ಧ ಎಫ್‌ಐಆರ್

ಖಾಸಗಿ ವ್ಯಕ್ತಿ ನೇಮಿಸಿ ಲಾರಿ ಚಾಲಕರಿಂದ ಹಣ ವಸೂಲಿ
Published 16 ಜುಲೈ 2024, 4:41 IST
Last Updated 16 ಜುಲೈ 2024, 4:41 IST
ಅಕ್ಷರ ಗಾತ್ರ

ಕಲಬುರಗಿ: ಚಿಂಚೋಳಿ ತಾಲ್ಲೂಕಿನ ಮಿರಿಯಾಣ ಪೊಲೀಸ್ ಠಾಣೆ ವ್ಯಾಪ್ತಿಯ ರಸ್ತೆಯಲ್ಲಿ ಖಾಸಗಿ ವ್ಯಕ್ತಿಯನ್ನು ನಿಯೋಜಿಸಿ ಲಾರಿ ಚಾಲಕರಿಂದ ಹಣ ವಸೂಲಿ ಮಾಡಲು ಸರ್ಕಾರಿ ದಾಖಲೆಯನ್ನು ಹಾಳು ಮಾಡಿದ ಆರೋಪದಲ್ಲಿ ಮಿರಿಯಾಣ ಠಾಣೆಯ ಪಿಎಸ್‌ಐ ಹಾಗೂ ಎಎಸ್‌ಐ ವಿರುದ್ಧ ಪ್ರಕರಣ ದಾಖಲಾಗಿದೆ.

ಚಿಂಚೋಳಿಯ ಪ್ರಧಾನ ಸಿವಿಲ್ ನ್ಯಾಯಾಧೀಶ ದತ್ತಕುಮಾರ ಜವಳಕರ ಅವರು ನೀಡಿದ ದೂರಿನ ಅನ್ವಯ, ಪಿಎಸ್‌ಐ ಶಿವರಾಜ ಪಾಟೀಲ (ಕಾನೂನು ಮತ್ತು ಸುವ್ಯವಸ್ಥೆ) ಹಾಗೂ ಎಎಸ್‌ಐ ರಾಜು ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನ್ಯಾ. ದತ್ತಕುಮಾರ ಅವರು ಪೊಲೀಸ್ ಠಾಣೆಗೆ ಭೇಟಿ ನೀಡಿದಾಗ, ಠಾಣೆಯ ಮುಂಭಾಗದ ಮುಖ್ಯ ರಸ್ತೆಯಲ್ಲಿ ನಿಂತ ಖಾಸಗಿ ವ್ಯಕ್ತಿಯೊಬ್ಬರು ಓಡಾಡುತ್ತಿದ್ದ ಲಾರಿಗಳ ಚಾಲಕರಿಂದ ಹಣ ವಸೂಲಿ ಮಾಡುತ್ತಿದ್ದರು. ಖಾಸಗಿ ವ್ಯಕ್ತಿಯನ್ನು ಕರೆದು ಅವರು ವಿಚಾರಿಸಿದಾಗ, ಎಎಸ್‌ಐ ಅವರು ಹಣ ಸಂಗ್ರಹಿಸುವಂತೆ ಸೂಚಿಸಿದ್ದಾರೆ ಎಂದು ನ್ಯಾಯಾಧೀಶರ ಮುಂದೆ ಬಾಯಿಬಿಟ್ಟರು.

ಠಾಣೆಯಲ್ಲಿನ ‘ನ್ಯಾಯಾಧೀಶರ ಭೇಟಿ ಡೈರಿ’ ಪರಿಶೀಲಿಸಿದಾಗ, ಡೈರಿಯನ್ನು ಇನ್ನೊಂದು ಪುಟಕ್ಕೆ ಅಂಟಿಸಿ ಸರ್ಕಾರಿ ದಾಖಲಾತಿಯನ್ನು ತಿದ್ದಿ (ಟ್ಯಾಂಪರಿಂಗ್) ಹಾಳು ಮಾಡಿದ್ದು ಕಂಡುಬಂತು. ಇಂತಹುದ್ದೆ ಪ್ರಕರಣ ಈ ಹಿಂದಿನ ನ್ಯಾಯಾಧೀಶರ ಭೇಟಿ ವೇಳೆಯಲ್ಲಿ ಕಂಡುಬಂದಿತ್ತು. ಹೀಗಾಗಿ, ಈ ಇಬ್ಬರು ಪೊಲೀಸರ ಮೇಲೆ ನ್ಯಾಯಾಧೀಶರು ನ್ಯಾಯಾಲಯದಲ್ಲಿ ಸ್ವಯಂ ಪ್ರೇರಿತವಾಗಿ ಖಾಸಗಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಸಿಆರ್‌ಪಿಸಿ ಸೆಕ್ಷನ್ 156 (3) ಅಡಿ ನೀಡಲಾದ ದೂರಿನ ಅನ್ವಯ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 166, 465 ಮತ್ತು 466 ಅಡಿ ಪ್ರಕರಣ ದಾಖಲಾಗಿದೆ.

ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಒಡವೆ ದೋಚಿ ಪಾರಾರಿ: ಬಯಲು ಬಹಿರ್ದೆಸೆಗೆ ಹೋಗಿದ್ದ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಆಕೆಯ ಬಳಿ ಇದ್ದ ಚಿನ್ನಾಭರಣ ಕಸಿದು ಪರಾರಿಯಾದ ಪ್ರಕಾಶ ಶರಣಪ್ಪ ವಿರುದ್ಧ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೇಡಂ ತಾಲ್ಲೂಕಿನ ಗ್ರಾಮವೊಂದರ ಮಹಿಳೆಯೊಬ್ಬರು ಬಯಲು ಬಹಿರ್ದೆಸೆಗೆ ತೆರಳಿ ವಾಪಸ್ ಮನೆಗೆ ಬರುತ್ತಿದ್ದರು. ಮಹಿಳೆಯನ್ನು ತಡೆದು ನಿಲ್ಲಿಸಿದ ಪ್ರಕಾಶ, ಅತ್ಯಾಚಾರಕ್ಕೆ ಯತ್ನಿಸಿ ಹಲ್ಲೆ ಮಾಡಿದರು. ತೀವ್ರ ವಿರೋಧ ವ್ಯಕ್ತಪಡಿಸಿದಾಗ ಮಹಿಳೆಯ ಕೊರಳಲ್ಲಿದ್ದ ₹2.50 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಓಡಿ ಹೋದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT