ಕಲಬುರಗಿ ಲೋಕಸಭಾ ಮೀಸಲು ಕ್ಷೇತ್ರದಲ್ಲಿ ಎರಡನೇ ಬಾರಿಗೆ ಆಯ್ಕೆ ಬಯಸಿ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸಂಸದ ಡಾ. ಉಮೇಶ ಜಾಧವ ಅವರು ಕಣಕ್ಕೆ ಇಳಿದಿದ್ದಾರೆ. ಕಳೆದ ಬಾರಿ ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿದ್ದ ಜಾಧವ ಅವರಿಗೆ ಈ ಬಾರಿಯ ಎದುರಾಳಿಯಾಗಿ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಇದ್ದಾರೆ. ಬಿಡುವಿಲ್ಲದ ಪ್ರಚಾರದ ನಡುವೆಯೂ ಜಾಧವ ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
ಪ್ರಚಾರ ಕಾರ್ಯ ಹೇಗೆ ನಡೆದಿದೆ?
ಚೆನ್ನಾಗಿ ನಡೆಯುತ್ತಿದೆ. ಎಲ್ಲ ತಾಲ್ಲೂಕು ಕೇಂದ್ರ, ಬೂತ್ ಮಟ್ಟದಲ್ಲಿ ಪ್ರಚಾರ ಕಾರ್ಯ ಬಿರುಸಿನಿಂದ ಕೂಡಿದ್ದು, ಕಾರ್ಯಕ್ರಮ ಮುಗಿದ ಬಳಿಕ ನೂರಾರು ಬೆಂಬಲಿಗರು ನನ್ನ ಜತೆಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ.
ನಿಮ್ಮ ಎದುರು ಎಐಸಿಸಿ ಅಧ್ಯಕ್ಷರ ಅಳಿಯ ಕಣದಲ್ಲಿದ್ದಾರಲ್ಲ?
ಎಐಸಿಸಿ ಅಧ್ಯಕ್ಷರ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರು ಸ್ಪರ್ಧಿಸಿದ್ದರೂ ಸಚಿವ ಪ್ರಿಯಾಂಕ್ ಖರ್ಗೆ ಅವರೇ ಮಾತಾಡುತ್ತಿದ್ದಾರೆ ಎಂದು ಜನರು ಆಡಿಕೊಳ್ಳುತ್ತಿದ್ದಾರೆ. ರಾಧಾಕೃಷ್ಣ ಕಾಂಗ್ರೆಸ್ ಅಭ್ಯರ್ಥಿ ಎಂಬುದಕ್ಕಿಂತ ಖರ್ಗೆ ಅವರ ಅಳಿಯ ಎಂದೇ ಜನರಿಗೆ ಹೇಳಲಾಗುತ್ತಿದೆ.
ಜೆಡಿಎಸ್ ಮೈತ್ರಿಯಿಂದ ನಿಮಗೆ ಅನುಕೂಲ ಆಗಲಿದೆಯೇ?
ಜೆಡಿಎಸ್ ಜೊತೆಗೆ ಮೈತ್ರಿಯಿಂದ ನಮಗೆ ಬಹಳಷ್ಟು ಅನುಕೂಲ ಆಗಲಿದೆ. ಲೀಡ್ ಅಂತರವೂ ಹೆಚ್ಚಲಿದೆ. ಜೆಡಿಎಸ್‌ನ ಕೆಲವು ನಾಯಕರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿಲ್ಲ ಎಂಬುದು ನೋಡುವವರ ದೃಷ್ಟಿಕೋನದಲ್ಲಿದೆ. ಕಾಂಗ್ರೆಸ್ಸಿಗರ ಹಿಂದೆ ದೊಡ್ಡ ದಂಡೇ ಇದ್ದರೂ ಅವರೆಲ್ಲ ಹೆದರಿಕೊಂಡು ಹೋಗುತ್ತಿದ್ದಾರೆ. ನಮ್ಮಲ್ಲಿ ಪ್ರೀತಿ, ವಿಶ್ವಾಸದಿಂದ ಪ್ರಚಾರಕ್ಕೆ ಬರುತ್ತಿದ್ದಾರೆ.
ಶಿಕ್ಷಣ, ಉದ್ಯೋಗ, ಶುದ್ಧ ಕುಡಿಯುವ ನೀರು ಪೂರೈಕೆಯಲ್ಲಿ ಜಿಲ್ಲೆ ಈಗಲೂ ಹಿಂದೆ ಬಿದ್ದಿದೆಯಲ್ಲ?
ಮಲ್ಲಿಕಾರ್ಜುನ ಖರ್ಗೆ ಅವರು ಜಿಲ್ಲೆಯ ಪ್ರಥಮ ಶಿಕ್ಷಣ ಸಚಿವರಾಗಿ 50 ವರ್ಷ ಕಳೆದರೂ ಶೈಕ್ಷಣಿಕ ಸಾಧನೆಯಲ್ಲಿ ಹಿಂದೆ ಬೀಳುತ್ತಿದ್ದೇವೆ. ರಾಜ್ಯದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕೆಳ ಸ್ಥಾನದಲ್ಲಿದ್ದೇವೆ. ತಲಾ ಆದಾಯದಲ್ಲಿ ಕೊನೆಯಲ್ಲಿದ್ದೇವೆ. ಕಾಂಗ್ರೆಸ್ಸಿಗರು ಕೆಲಸವೇ ಮಾಡಿಲ್ಲ. ನಮಗೆ ಸಿಕ್ಕಂತಹ ಎರಡ್ಮೂರು ವರ್ಷಗಳ ಅವಧಿಯಲ್ಲಿ ಮೆಗಾ ಜವಳಿ ಪಾರ್ಕ್, ಹಿರೇನಂದೂರು ಬಳಿ ಪಿಎಂ ಗತಿಶಕ್ತಿ ಯೋಜನೆಯಂತಹ ಕೆಲಸ ಮಾಡಲಾಗಿದೆ. ಕಡಿಮೆ ಅವಧಿಯಲ್ಲಿ ಜಾಸ್ತಿ ಕೆಲಸಗಳಾಗಿವೆ.
ಮೆಟ್ರೊ ನಗರಗಳಿಗೆ ಗುಳೆ ಹೋಗುವುದು ಇನ್ನೂ ತಪ್ಪಿಲ್ಲ?
ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಬಂದ ಬಳಿಕ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗಲಿವೆ. ಸ್ಥಳೀಯವಾಗಿ ಕೆಲಸ ಸಿಕ್ಕು ಗುಳೆ ಹೋಗುವುದನ್ನು ತಪ್ಪಿಸಲಿದೆ.
ಖರ್ಗೆ ವಿರುದ್ಧ ಮುನಿಸಿಕೊಂಡು ಈ ಹಿಂದೆ ಬಿಜೆಪಿಯ ಜೊತೆಗೆ ಇದ್ದವರು ಈಗ ಮತ್ತೆ ಕಾಂಗ್ರೆಸ್ ಸೇರಿದ್ದಾರೆ. ಮತ ಗಳಿಕೆಯ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಲಿದೆ?
ಯಾರೇ ಸಣ್ಣ ಅಥವಾ ದೊಡ್ಡ ವ್ಯಕ್ತಿಯಾಗಲಿ ಪಕ್ಷ ಬಿಟ್ಟು ಹೋದಾಗ ಸಣ್ಣ ಮಟ್ಟದ ವ್ಯತ್ಯಾಸ ಆಗುತ್ತದೆ. ಅದರಲ್ಲಿ ಪ್ಲಸ್– ಮೈನಸ್ ಆಗುತ್ತದೆ. ಆದರೆ, ಮತದಾರರು ಬದಲಾಗುವುದಿಲ್ಲ. ಕೆಲವು ನಾಯಕು ಹೋಗುತ್ತಾರೆ, ಮತ್ತೆ ಕೆಲವು ನಾಯಕರು ಬರುತ್ತಾರೆ. ಆದರೆ, ಯಾವುದೇ ವ್ಯತ್ಯಾಸ ಆಗುವುದಿಲ್ಲ.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಬಿಜೆಪಿ ಮತ ಬುಟ್ಟಿಗೆ ‘ಕೈ’ ಹಾಕಲಿವೆಯಾ? ಗ್ಯಾರಂಟಿ ಆತಂಕ ಇದೆಯಾ?
ಗ್ಯಾರಂಟಿ ಯೋಜನೆಗಳು ಎಲ್ಲರಿಗೂ ಮುಟ್ಟುತ್ತಿಲ್ಲ. ಅನ್ನಭಾಗ್ಯ, ಯುವನಿಧಿ ಯೋಜನೆಗಳು ಎಲ್ಲರಿಗೂ ಸಿಗುತ್ತಿಲ್ಲ. ಶೇ 75ರಷ್ಟು ಜನರು ಸಂಕಷ್ಟದಲ್ಲಿ ಇದ್ದಾರೆ. ಕಾಂಗ್ರೆಸ್ಸಿಗರು ಗ್ಯಾರಂಟಿ ಮೇಲೆ ವೋಟ್ ಪಡೆಯಲು ಹೊರಟಿದ್ದಾರೆ. ಆದರೆ, ಅದು ಸಾಧ್ಯವಾಗುವುದಿಲ್ಲ.
ಕ್ಷೇತ್ರದ ಅಭಿವೃದ್ಧಿಗೆ ನಿಮ್ಮ ನೀಲನಕ್ಷೆ ಏನಿದೆ?
ಮುಂದಿನ ದಿನಗಳಲ್ಲಿ ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಆರಂಭಿಸಿ, ಕೂಲಿಗಾಗಿ ನಗರಗಳಿಗೆ ವಲಸೆ ಹೋಗುವುದನ್ನು ತಡೆಯುವುದು; ಕ್ರೀಡಾ ಚಟುವಟಿಕೆಗಳಲ್ಲಿ ಸಾಕಷ್ಟು ಹಿಂದುಳಿದಿದ್ದೇವೆ. ಹೀಗಾಗಿ, ಕ್ರೀಡೆಗಳಿಗೆ ಬೇಕಾದ ಅಗತ್ಯ ಸೌಕರ್ಯಗಳನ್ನು ಒದಗಿಸಿ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆಯ ಕ್ರೀಡಾಪಟುಗಳು ಸ್ಪರ್ಧಿಸಿ, ಗೆದ್ದು ಬರುವಂತೆ ಮಾಡುವ ಇಚ್ಛೆ ಇದೆ.
ನೀವು ಮಾಡಿದ ಸಾಧನೆ ಮತ್ತು ಮುಂದಿನ ಯೋಜನೆಗಳ ವಿಚಾರ ಬದಿಗಿಟ್ಟು ಮೋದಿ ಹೆಸರಲ್ಲಿ ಮತ ಕೇಳುತ್ತಿರುವುದು ಏಕೆ?
ಮೋದಿ ಅವರ ನಾಮಬಲ ಇಲ್ಲದೆ ಚುನಾವಣೆಯಲ್ಲಿ ಗೆಲ್ಲುವುದು ಸಾಧ್ಯವಿಲ್ಲ. ಮೋದಿ ವರ್ಚಸ್ಸಿನ ಜತೆಗೆ ನಮ್ಮ ವರ್ಚಸ್ಸು ಇದ್ದಾಗಲೇ ಗೆಲ್ಲುವುದು ಸಾಧ್ಯವಾಗುತ್ತದೆ.
ನೀರಾವರಿ ಯೋಜನೆಗಳು ಯಶಸ್ವಿಯಾಗುತ್ತಿಲ್ಲ ಏಕೆ?
ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ನೀರಾವರಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಬೆಣ್ಣೆತೊರಾ, ಗಂಡೋರಿ ನಾಲಾ, ಸನ್ನತಿ ಬ್ರಿಡ್ಜ್ ಕಂ ಬ್ಯಾರೇಜ್‌ನಂತಹ ಯೋಜನೆಗಳು ಯಶಸ್ವಿಯಾಗಿಲ್ಲ. ಕಳಪೆ ಕಾಮಗಾರಿ ಮಾಡಿ ದುಡ್ಡು ಹೊಡೆದಿದ್ದಾರೆ. ಹೀಗಾಗಿ, ಜಲಾಶಯಗಳ ಕಾಲುವೆಯ ನೀರು ಇಂದಿಗೂ ಕೃಷಿಕರ ಜಮೀನು ತಲುಪಿಲ್ಲ.
ರೈಲ್ವೆ ವಿಭಾಗೀಯ ಕಚೇರಿ ಸ್ಥಾಪನೆ ಇಎಸ್‌ಐ ಮೇಲ್ದರ್ಜೆಗೆ ಏರಿಸುವ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಮೌನವಾಗಿದೆಯಲ್ಲವೇ?
ರಾಜ್ಯ ಸರ್ಕಾರ ರಾಯಚೂರಿನಲ್ಲಿ ಏಮ್ಸ್ ಮಾಡಬೇಕು ಎಂದಿತ್ತು. ಆದರೆ ಅದು ಬೇರೆ ಕಡೆ ಹೋಯಿತು. ಕೇಂದ್ರ ಸರ್ಕಾರ ಒಂದು ರಾಜ್ಯಕ್ಕೆ ಒಂದೇ ಏಮ್ಸ್ ಕೊಡುತ್ತದೆ. ಎರಡು ಕೊಡುವುದಿಲ್ಲ. ಆದರೂ ಈ ಭಾಗಕ್ಕೆ ಏಮ್ಸ್ ತರಲು ನಾನು ಪ್ರಯತ್ನ ಮಾಡುತ್ತೇನೆ. 2014ರ ಮಾರ್ಚ್‌ನಲ್ಲಿ ತರಾತುರಿಯಲ್ಲಿ ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿಯನ್ನು ಘೋಷಣೆ ಮಾಡಿದರು. ಖರ್ಗೆ ಅವರು ಲೋಕಸಭೆ ಸದಸ್ಯರಾದ ಬಳಿಕ ಆ ಬಗ್ಗೆ ಧ್ವನಿ ಎತ್ತಿ ದುಂಬಾಲು ಬಿದ್ದು ಪ್ರಶ್ನೆ ಎತ್ತಿದ್ದರೆ ಅವಾಗಲೇ ಆಗುತ್ತಿತ್ತು. ಆದರೆ ಹಾಗೆ ಮಾಡಲಿಲ್ಲ. ವಿಭಾಗೀಯ ಕಚೇರಿ ಸ್ಥಾಪನೆಯ ಬಗ್ಗೆ ಈಗಾಗಲೇ ಸಾಕಷ್ಟು ಪ್ರಯತ್ನ ಮಾಡುತ್ತಿದ್ದೇನೆ ಅದನ್ನು ತರುತ್ತೇನೆ ಕೂಡ.
ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಆರಂಭ ಯಾವಾಗ?
ಕಳೆದ ವರ್ಷವೇ ಟೆಕ್ಸ್‌ಟೈಲ್ ಪಾರ್ಕ್ ಶುರುವಾಗುತ್ತಿದ್ದಂತೆ ಚುನಾವಣೆ ನೀತಿ ಸಂಹಿತೆ ಬಂತು. ಜೂನ್ ಜುಲೈನಲ್ಲಿ ರಾಜ್ಯ ಸರ್ಕಾರ ಬಂದರೂ ಗ್ಯಾರಂಟಿ ಯೋಜನೆಗಳಲ್ಲಿ ಮುಳುಗಿತು. ಕಾಂಗ್ರೆಸ್ಸಿಗರು ಉದ್ದೇಶ ಪೂರ್ವಕವಾಗಿ ವಿಳಂಬ ಮಾಡಿದರು. ಟೆಕ್ಸ್‌ಟೈಲ್ ಪಾರ್ಕ್‌ಗೆ ಎರಡನೇ ಆದ್ಯತೆ ಕೊಟ್ಟರು. ಸಾಕಷ್ಟು ಬೆನ್ನು ಹತ್ತಿದರೂ ಆಗಲಿಲ್ಲ. ದೆಹಲಿಯಿಂದ ಒತ್ತಡ ಹಾಕಿ ವಿಶೇಷ ಉದ್ದೇಶದ ಘಟಕ (ಎಸ್‌ಪಿವಿ) ಮಂಜೂರು ಮಾಡಿ ₹600 ಕೋಟಿ ಖರ್ಚು ಮಾಡುವ ಟೆಂಡರ್ ಕರೆದಿದ್ದಾರೆ. ಕೆಲವೇ ದಿನಗಳಲ್ಲಿ ಕೆಲಸ ಆಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.