ಕಲಬುರಗಿ: ನಗರದಲ್ಲಿ ಮಂಗಳವಾರ ತುಳಸಿ ಲಗ್ನದ ಸಂಭ್ರಮ ಮನೆ ಮಾಡಿತು. ತುಳಸಿಯ ಸಸಿಗೆ ಲಗ್ನ ನೆರವೇರಿಸುವ ಮೂಲಕ ಕುಟುಂಬದ ಸದಸ್ಯರೆಲ್ಲ ಸಂಭ್ರಮಪಟ್ಟರು.

ನಸುಕಿನಿಂದಲೇ ಪೂಜೆಗೆ ಸಿದ್ಧತೆ ಮಾಡಿಕೊಂಡ ಗೃಹಿಣಿಯರು ತುಳಸಿ ಕಟ್ಟೆಯನ್ನು ಸ್ವಚ್ಛಗೊಳಿಸಿದರು.ಬಣ್ಣಬಣ್ಣದ ರಂಗವಲ್ಲಿ ಬಿಡಿಸಿ, ಮಣ್ಣಿನ ಹಣತೆಗಳನ್ನು ಇಟ್ಟು ಅಲಂಕರಿಸಿದರು. ಬಾಳೆದಿಂಡು, ಕಬ್ಬಿನ ಜಲ್ಲೆಗಳನ್ನು ಕಟ್ಟಿದರು. ಮತ್ತೆ ಕೆಲವರು ತುಳಸಿಕಟ್ಟೆಗೆ ಬಣ್ಣ ಬಳಿದು, ಹಸೆಮನೆಯ ಸಿದ್ಧಪಡಿಸಿ ಮದುವೆ ಮನೆಯಲ್ಲಿನ ವಾತಾವರಣ ನಿರ್ಮಿಸಿದರು. ಇಳಿಸಂಜೆಗೆ ಸಾಲುದೀಪಗಳನ್ನು ಹಚ್ಚಿದ ಹೆಣ್ಣುಮಕ್ಕಳು, ಮನೆಯ ಎಲ್ಲ ಸದಸ್ಯರೊಂದಿಗೆ ಸೇರಿ ಲಗ್ನಕ್ಕೆ ಅಣಿಯಾದರು.

ಸಸಿಗೆ ಅರಿಸಿನ– ಕುಂಕುಮ– ಗಂಧ ತೀಡಿ ಮದುವಣಗಿತ್ತಿಯಂತೆ ಸಿಂಗರಿಸಿದರು. ಚೆಂಡುಹೂವಿನ ದಂಡೆ ಮಾಡಿ ಕಟ್ಟಿ, ಮಲ್ಲಿಗೆ ಹೂವಿನ ಮಾಲೆ ಮಾಡಿ ಮುಡಿಸಿದರು. ಹಸಿರು ಬಳೆ, ಕಾಲುಂಗುರ ತೊಡಿಸಿದರು. ಮತ್ತೆ ಕೆಲವರು ಚಿನ್ನಾಭರಣವನ್ನೂ ತೊಡಿಸಿದರು. ಅಕ್ಕಪಕ್ಕದ ಮನೆಯ ಮಹಿಳೆಯರೆಲ್ಲ ಸೇರಿ ಸಸಿಗೆ ಅರಿಸಿನ– ಕರಿಮಣಿಯ ತಾಳಿ ಕಟ್ಟಿ, ಅಕ್ಷತೆ ಹಾಕಿ, ಆರತಿ ಎತ್ತಿದರು. ಮಂಗಳಗೀತೆಗಳನ್ನು ಹಾಡಿ ತಮಗೂ ನಿತ್ಯ ಸುಮಂಗಲಿ ಭಾಗ್ಯ ನೀಡುವಂತೆ ಪ್ರಾರ್ಥಿಸಿದರು.

ಇದಕ್ಕೂ ಮುನ್ನ ಅರ್ಚಕರನ್ನು ಕರೆದು ‘ಕೃಷ್ಣ– ತುಳಸಿ’ ಲಗ್ನದ ವಿಧಾನಗಳನ್ನು ಪೂರೈಸಿದರು. ಬಾಳೆಎಲೆ, ಚೆಂಡುಹೂ, ಕೊಬ್ಬರಿ, ಅರಿಸಿನ, ಕುಂಕುಮ, ನೆಲ್ಲಿಕಾಯಿ, ಹುಣಸೆಕಾಯಿ, ಕಾಡಿಗೆ, ಬಾಚಣಕಿ, ಕನ್ನಡಕ ಸೇರಿದಂತೆ ವಿವಿಧ ಬಗೆಯ ದ್ರವ್ಯಗಳನ್ನು ಸಂಗ್ರಹಿಸಿದ ಪೊಟ್ಟಣಗಳನ್ನು ತುಳಸಿ ಮುಂದೆ ಇಟ್ಟು ನೈವೇದ್ಯ ಮಾಡಲಾಯಿತು.

ವೀಳ್ಯದೆಲೆ, ಅಡಿಕೆ, ಅರಿಸಿನ ಬೋಟು, ಅಕ್ಕಿ, ಕೊಬ್ಬರಿಗುಂಡು, ಬಾದಾಮಿ, ಉತ್ತತ್ತಿ ಇರುವ ಪೊಟ್ಟಣಗಳನ್ನು ಮಾಡಿ, ಅಕ್ಕಪಕ್ಕದ ಹೆಣ್ಣುಮಕ್ಕಳನ್ನು ಕರೆದು ಉಡಿ ತುಂಬಿದರು. ನಂತರ ಮನೆ ಮಂದಿಯೆಲ್ಲ ಕುಳಿತುಈ ಹಬ್ಬದ ವಿಶೇಷ ಖಾದ್ಯಗಳಾದ ಹೋಳಿಗೆ, ಕರಿಗಡಬು, ಭಜ್ಜಿ, ಕರಿದ ಮೆಣಸಿನಕಾಯಿ, ನೆಲ್ಲಿಕಾಯಿಯ ಉಪ್ಪಿನಕಾಯಿ ಸವಿದರು.

ಜಯತೀರ್ಥ ನಗರದ ಲಕ್ಷ್ಮಿ ನಾರಾಯಣ ಭಜನಾ ಮಂಡಳಿ ಅಧ್ಯಕ್ಷೆ ಜ್ಯೋತಿ ಲಾತೂರಕರ್ ಅವರ ಮನೆಯಲ್ಲಿಯೂ ಹಲವಾರು ಮಹಿಳೆಯರು ಸೇರಿಕೊಂಡು ಸಾಮೂಹಿಕವಾಗಿ ತುಳಸಿ ಲಗ್ನ ಮಾಡಿದರು. ಮಂಡಳಿ ಸದಸ್ಯರಾದ ಜ್ಯೋತಿ ಲಾತೂರಕರ, ಛಾಯಾ ಮೂಳೂರು, ಭಾಗ್ಯಾ ಕಾರಣಂ, ಮಾಲಾಶ್ರೀ, ಸಾಕ್ಷಿ, ಪುಷ್ಪಾ ಕುಲಕರ್ಣಿ, ಕವಿತಾ, ರೋಹಿಣಿ ಎಳಸಂಗಿಕರ್ ಮುಂತಾದವರು ಲಗ್ನದ ಪದಗಳನ್ನು ಹಾಡಿ ಸಂಭ್ರಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.