ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉತ್ತಮ ರಸ್ತೆ ಕೊಡಗಿಗೆ ಗಗನ ಕುಸಮವೇ?

ಅಧಿಕ ಭಾರದ ವಾಹನಗಳ ಸಂಚಾರ ಜಿಲ್ಲೆಯಲ್ಲಿ ನಿಷೇಧ, ಆದೇಶದ ಸಮರ್ಪಕ ಅನುಷ್ಠಾನಕ್ಕೆ ಒತ್ತಾಯ
Published 15 ಜುಲೈ 2024, 8:05 IST
Last Updated 15 ಜುಲೈ 2024, 8:05 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯ ಬಹುತೇಕ ಗ್ರಾಮೀಣ ರಸ್ತೆಗಳು ಗುಂಡಿಗಳಿಂದ ತುಂಬಿ ಹೋಗಿದ್ದು, ಇ‌ಲ್ಲಿ ಸಂಚರಿಸುವುದೇ ಹರಸಾಹಸ ಎನ್ನುವಂತಾಗಿದೆ. ಹೊರ ಜಿಲ್ಲೆಗಳಿಂದ ಬಂದ ಹೊಸಬರಿಗಂತು ಇಂತಹ ರಸ್ತೆಗಳಲ್ಲಿ ವಾಹನ ಚಾಲನೆ ಮಾಡುವುದಕ್ಕೆ ಎಂಟೆದೆಯೇ ಬೇಕಾಗಿದೆ. ಈ ರಸ್ತೆಗಳ ಅಭಿವೃದ್ಧಿ ಹೇಗೆ ಎನ್ನುವುದೇ ಬಹುತೇಕ ಬಗೆಹರಿಯದ ಸಮಸ್ಯೆಯಾಗಿದೆ.

ವರ್ಷದಲ್ಲಿ ಸುಮಾರು ಅರ್ಧವರ್ಷ ಮಳೆಯ ದಿನಗಳನ್ನೇ ಕೊಡಗು ಕಾಣುತ್ತದೆ. ಇದರಿಂದ ಮಳೆಗಾಲದಲ್ಲಿ ರಸ್ತೆ ದುರಸ್ತಿ ಮಾಡಲು ಸಾಧ್ಯವಿಲ್ಲ ಎನ್ನುವ ಸಾಬೂಬನ್ನು ಎಲ್ಲ ಸರ್ಕಾರದ ಸಮಯದಲ್ಲಿ ರಾಜಕಾರಣಿಗಳು ಹೇಳುತ್ತಾರೆ. ಆದರೆ, ಇನ್ನುಳಿದ 6 ತಿಂಗಳಲ್ಲಿ ಸಮರೋಪಾದಿಯಲ್ಲಿ ಏಕೆ ಕಾಮಗಾರಿ ನಡೆಯುವುದಿಲ್ಲ ಎಂಬುದು ಯಕ್ಷಪ್ರಶ್ನೆ ಎನಿಸಿದ್ದು, ಇದಕ್ಕೆ ಯಾರೂ ಸಮರ್ಪಕ ಉತ್ತರ ನೀಡುತ್ತಿಲ್ಲ.

ರಸ್ತೆ ದುರಸ್ತಿಯಾದ ತರುವಾಯ ಆ ರಸ್ತೆಯನ್ನು ಜೋಪಾನವಾಗಿ ನೋಡಿಕೊಳ್ಳಬೇಕು ಎನ್ನುವ ಆಸಕ್ತಿ ಹಲವರಲ್ಲಿ ಇಲ್ಲ. ಮರಗಳನ್ನು ಕಡಿದು ಒಂದೇ ಲಾರಿಯಲ್ಲಿ ಅಧಿಕ ಭಾರ ಹೇರಿ, ಸಾಗಾಣಿಕೆ ಮಾಡುತ್ತಾರೆ. ಆ ರಸ್ತೆಯ ನಿಗದಿತ ಭಾರಮಿತಿ ದಾಟಿಯೇ ಬಹುತೇಕ ಸರಕು ಸಾಗಾಣಿಕೆ ಲಾರಿಗಳು ಸಂಚರಿಸುತ್ತವೆ. ಇದರಿಂದ ಸಹಜವಾಗಿಯೇ ರಸ್ತೆಗಳು ಬೇಗ ಕಿತ್ತು ಬರುತ್ತದೆ. ಹೀಗಾಗಿ, ಉತ್ತಮ ರಸ್ತೆಗಳು ಎನ್ನುವುದು ಕೊಡಗಿನ ಪಾಲಿಗೆ ಗಗನ ಕುಸುಮ ಎನಿಸಿದೆ.

ಜಿಲ್ಲಾಧಿಕಾರಿ ಅವರು ಈಗ ಅಧಿಕ ಭಾರದ ಸರಕುಸಾಗಾಣಿಕೆ ವಾಹನಗಳ ಸಂಚಾರವನ್ನು ನಿಷೇಧಿಸಿದ್ದಾರೆ. ಇದು ಭೂಕುಸಿತ ತಡೆಯಲು ಕೈಗೊಂಡ ಕ್ರಮ. ಈಗಾಗಲೇ ಹಲವೆಡೆ ರಸ್ತೆಗಳು ಕುಸಿಯುತ್ತಿರುವುದರಿಂದ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ. ಆದರೆ, ಅದರ ಅನುಷ್ಠಾನ ಮಾತ್ರ ಬಿಗಿಯಾಗಿ ಆಗುತ್ತಿಲ್ಲ ಎಂಬುದು ಬಹುತೇಕ ಮಂದಿಯ ಅಭಿಪ್ರಾಯ.

ಈ ವಿಚಾರ ಕುರಿತೇ ಈಚೆಗಷ್ಟೇ ಬಿಳಿಗೇರಿ ಗ್ರಾಮದ ಬೆಳೆಗಾರರು ಸುದ್ದಿಗೋಷ್ಠಿ ನಡೆಸಿ ತಮ್ಮ ಆಕ್ಷೇಪಗಳನ್ನು ವ್ಯಕ್ತಪಡಿಸಿದರು. ಇಂತಹ ಭಾರಿ ಸಾಗಾಣಿಕೆ ವಾಹನದಿಂದ ಆಗುತ್ತಿರುವ ತೊಂದರೆಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ಜೊತೆಗೆ, ಜಿಲ್ಲಾಧಿಕಾರಿ ಅವರ ನಿಷೇಧ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆಯೂ ಒತ್ತಾಯಿಸಿದರು.

ಇದೇ ವಿಷಯ ಮೊನ್ನೆ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ನೇತೃತ್ವದಲ್ಲಿ ನಡೆದ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪ‍ರಿಶೀಲನಾ ಸಭೆಯಲ್ಲೂ ಪ್ರಸ್ತಾಪವಾಯಿತು. ವಿಧಾನಪರಿಷ‌ತ್ ಸದಸ್ಯ ಸುಜಾ ಕುಶಾಲಪ್ಪ ಈ ಕುರಿತು ತಮ್ಮ ತೀವ್ರ ಆಕ್ಷೇಪಗಳನ್ನು ದಾಖಲಿಸಿದರು.

ಯಾರು ಎಷ್ಟೇ ಹೇಳಿದರೂ, ನಿಷೇಧ ಹೇರಿದರೂ ಕೊಡಗಿನಲ್ಲಿ ಭಾರಮಿತಿಯನ್ನು ಮೀರಿದ ವಾಹನಗಳು ಸಂಚರಿಸುತ್ತಲೇ ಇವೆ. ಮಳೆಗಾಲದಲ್ಲಿ ರಸ್ತೆಗಳು ಹಾಳಾಗುತ್ತಿವೆ. ಗುಂಡಿಗಳು ಕ್ಯಾನ್ಸರ್‌ನಂತೆ ರಸ್ತೆಯುದ್ದಕ್ಕೂ ಹರಡಿ ಸವಾರರ ಜೀವಹಿಂಡುತ್ತಿವೆ.

ನಾಪೋಕ್ಲುವಿನ ಗುಂಡಿ ಬಿದ್ದ ರಸ್ತೆಗಳು

ನಾಪೋಕ್ಲು: ನಾಪೋಕ್ಲು ವ್ಯಾಪ್ತಿಯಲ್ಲಂತೂ ಹಲವೆಡೆ ಗುಂಡಿಗಳಲ್ಲಿ ರಸ್ತೆಯನ್ನು ಹುಡುಕುವಂತಹ ಸ್ಥಿತಿ ಇದೆ.

ಎಮ್ಮೆಮಾಡು ಗ್ರಾಮಕ್ಕೆ ಸಂಪರ್ಕಿಸುವ ಕೂರುಳಿ-ಎಮ್ಮೆಮಾಡು ರಸ್ತೆ ಎಮ್ಮೆಮಾಡು ದರ್ಗಾದ ಬಳಿ ಹೊಂಡಗಳಿಂದ ಕೂಡಿದ್ದು ವಾಹನ ಸವಾರರಿಗೆ ಸಮಸ್ಯೆ ತಂದೊಡ್ಡಿದೆ. ರಸ್ತೆ ಹೊಂಡಗಳಾಗಿರುವುದಲ್ಲದೇ ಕೆಸರು ತುಂಬಿಕೊಂಡು ಚಾಲನೆಗೆ ಹರಸಾಹಸ ಪಡಬೇಕಿದೆ. ಮಳೆಗಾಲದಲ್ಲಂತೂ ಈ ರಸ್ತೆಯಲ್ಲಿ ನೀರು ತುಂಬಿ ಹರಿಯುತ್ತದೆ. ಗದ್ದೆಗೆ ಸಮಾನಾಂತರವಾಗಿ ರಸ್ತೆಯೂ ಇರುವುದರಿಂದ ರಸ್ತೆಯುದ್ದಕ್ಕೂ ನೀರು ಹರಿದು ಹೊಂಡಗುಂಡಿಗಳ ರಸ್ತೆಯಲ್ಲಿ ಚಾಲಕರು ಚಾಲನೆ ಮಾಡಬೇಕಿದೆ. ದ್ವಿಚಕ್ರ ವಾಹನ ಚಾಲಕರಂತೂ ಎದ್ದುಬಿದ್ದು ಸಾಗುವಂತಾಗಿದೆ. ರಸ್ತೆಯ ಎರಡೂ ಬದಿ ಚರಂಡಿಗಳಿಲ್ಲದೇ ಸಮಸ್ಯೆ ಮತ್ತಷ್ಟೂ ಬಿಗಡಾಯಿಸಿದೆ. ತುರ್ತಾಗಿ ಸುಮಾರು ಅರ್ಧ ಕಿ.ಮೀ ದೂರದ ರಸ್ತೆಯನ್ನು ದುರಸ್ಥಿಪಡಿಸಬೇಕಿದೆ ಎಂದು ಆಗ್ರಹಿಸುತ್ತಾರೆ ಸ್ಥಳೀಯ ನಿವಾಸಿ ಅಶ್ರಫ್.

ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುವ ಹಲವು ಬಸ್‌ಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ಈ ರಸ್ತೆಯಲ್ಲಿ ಸಾಗುವ ಪಾದಾಚಾರಿಗಳೂ ಪರದಾಡುವಂತಾಗಿದೆ.

ಇನ್ನು ಪೇರೂರು ಗ್ರಾಮದ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆಯ ಬಹುಭಾಗ ಡಾಂಬರು ಕಿತ್ತುಹೋಗಿದೆ. ಎಲ್ಲೆಲ್ಲೂ ಜಲ್ಲಿಗಳ ರಾಶಿಯೇ ಇದೆ. ರಸ್ತೆ ದುರಸ್ಥಿಗಾಗಿ, ಮರು ಡಾಂಬರೀಕರಣಕ್ಕಾಗಿ ಗ್ರಾಮಸ್ಥರು ಎದುರು ನೋಡುತ್ತಿದ್ದಾರೆ.

ಇದು ಗ್ರಾಮೀಣ ರಸ್ತೆಗಳ ದುಸ್ಥಿತಿಯಾದರೆ ಪಟ್ಟಣದ ಹಳೆ ತಾಲ್ಲೂಕು ಬಳಿ ಪೊನ್ನು ಮುತ್ತಪ್ಪ ದೇವಸ್ಥಾನದ ಬಳಿಯೂ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಹೊಂಡಗಳಲ್ಲಿ ವಾಹನ ಚಾಲನೆ ಮಾಡಲು ಚಾಲಕರು ಪರದಾಡುತ್ತಿದ್ದಾರೆ. 

ಕಳೆದ ಬಾರಿಯೂ ಈ ರೀತಿಯ ಸಮಸ್ಯೆ ಉಂಟಾಗಿತ್ತು. ರಸ್ತೆ ಹೊಂಡಗಳನ್ನು ಮುಚ್ಚಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿದ್ದರು.ದ್ ವಿಚಕ್ರ ಚಾಲಕರಿಗೆ, ಇತರ ವಾಹನಗಳ ಚಾಲಕರಿಗೆ ಸಮಸ್ಯೆ ಆಗುತ್ತಿದೆ. ಆದಷ್ಟು ಬೇಗ ರಸ್ತೆ ದುರಸ್ತಿ ಪಡಿಸಿದರೆ ತುಂಬಾ ಅನುಕೂಲವಾಗುತ್ತದೆ ಎಂದರು.

ಅತಿ ಭಾರದ ವಾಹನಗಳಿಂದ ರಸ್ತೆ ಹಾಳು; ಆರೋಪ

ಸಿದ್ದಾಪುರ: ಸಿದ್ದಾಪುರದ ಗುಹ್ಯ ಗ್ರಾಮದ ಸಂಪರ್ಕ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಹೊಂಡಗಳಿಂದ ತುಂಬಿ ಹೋಗಿದೆ. ಮುಖ್ಯ ರಸ್ತೆಯಿಂದ ಗುಹ್ಯ, ಪಲ್ಲಕ್ಕರೆಗೆ ತೇರಳುವ ರಸ್ತೆಯ ಬಹುತೇಕ ಭಾಗದಲ್ಲಿ ಹಾನಿಯಾಗಿದೆ.

ಸಿದ್ದಾಪುರದಿಂದ ಕಣ್ಣಂಗಾಲ, ಕೊಂಡಂಗೇರಿ, ಮೂರ್ನಾಡು ಭಾಗಕ್ಕೆ ತೆರಳಲು ಈ ರಸ್ತೆಯನ್ನು ಬಳಸುತಿದ್ದು, ಸವಾರರು ಹೈರಾಣಾಗಿದ್ದಾರೆ. ಮರದ ನಾಟಗಳನ್ನು ಸಾಗಿಸುವ ಬೃಹತ್ ವಾಹನಗಳು ಸೇರಿದಂತೆ ದೊಡ್ಡ ಲೋಡ್ ಸಾಗಿಸುವ ವಾಹನಗಳ ಓಡಾಟದಿಂದ ರಸ್ತೆ ಹದಗೆಡುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

ಸಿದ್ದಾಪುರ ಪಟ್ಟಣದ ಮುಖ್ಯ ರಸ್ತೆಯು ಕೂಡ ಹದಗೆಟ್ಟಿದ್ದು, ಸಂತ ಅಣ್ಣಮ್ಮ ಶಾಲೆಯ ಮುಂಭಾಗ ಹಾಗೂ ಅಯ್ಯಪ್ಪ ದೇವಾಲಯದ ಬಳಿಯಲ್ಲಿ ಹೊಂಡ ಬಿದ್ದಿದೆ.

ಮಾಹಿತಿ; ಸಿ.ಎಸ್.ಸುರೇಶ್, ರೆಜಿತ್‌ಕುಮಾರ್ ಗುಹ್ಯ

ನಾಪೋಕ್ಲು ಸಮೀಪದ ಕೂರುಳಿ-ಎಮ್ಮೆಮಾಡು ರಸ್ತೆಯಲ್ಲಿ ವಾಹನ ಸಂಚಾರ ದುಸ್ತರವಾಗಿದೆ
ನಾಪೋಕ್ಲು ಸಮೀಪದ ಕೂರುಳಿ-ಎಮ್ಮೆಮಾಡು ರಸ್ತೆಯಲ್ಲಿ ವಾಹನ ಸಂಚಾರ ದುಸ್ತರವಾಗಿದೆ
ನಿಗದಿತ ಭಾರಮಿತಿ ಮೀರಿದ ವಾಹನಗಳ ಸಂಚಾರ ಬೇಡ ನಿಯಮಗಳನ್ನು ಪಾಲಿಸಿದರೆ ರಸ್ತೆ ಹಾಳಾಗದು ಎಲ್ಲೆಡೆ ಇದೆ ಈ ಸಮಸ್ಯೆ

ಅಧಿಕ ಭಾರದ ವಾಹನಗಳಿಗೆ ಕಡಿವಾಣ ಹಾಕಿ ಗುಹ್ಯ ಗ್ರಾಮಕ್ಕೆ ಬೃಹತ್ ವಾಹನಗಳ ಸಂಚಾರದಿಂದ ರಸ್ತೆ ಹದಗೆಡುತ್ತಿದೆ. ಈಗಾಗಲೇ ಅಲ್ಲಲ್ಲಿ ಹೊಂಡ ಬಿದ್ದಿದ್ದು ವಾಹನ ಸಂಚಾರಿಸಲು ಸಮಸ್ಯೆಯಾಗಿದೆ. ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಕೆಸರುಮಯ ರಸ್ತೆಯಲ್ಲೇ ನಡೆದಾಡಬೇಕಿದೆ.

-ಶೇಖರ್ ನೇತಾಜಿ ಲೇಔಟ್ ನಿವಾಸಿ.

ಗುಂಡಿ ತಪ್ಪಿಸಲು ಹೋಗ ಅಪಘಾತ ನಾ‍ಪೋಕ್ಲು ಪಟ್ಟಣದ ಹಳೆ ತಾಲ್ಲೂಕು ಬಳಿ ಪೊನ್ನು ಮುತ್ತಪ್ಪ ದೇವಸ್ಥಾನದ ಬಳಿ ಸಂತೆಯ ದಿನವಾದ ಸೋಮವಾರ ವಾಹನಗಳ ಸಂಖ್ಯೆ ಹೆಚ್ಚಿದ್ದು ಗುಂಡಿ ತಪ್ಪಿಸಲು ಹೋಗಿ ವಾಹನ ಚಾಲಕರು ಅಪಘಾತಕ್ಕೆ ಒಳಗಾಗುತ್ತಿದ್ದಾರೆ. 2 ಭಾಗಗಳಿಂದ ಬರುವ ವಾಹನಗಳು ಇರುವ ಕಿರು ದಾರಿಯಲ್ಲಿ ಸಂಚರಿಸುತ್ತಿದ್ದು ವಾಹನ ಸಂಚಾರಕ್ಕೆ ಸಮಸ್ಯೆ ಆಗುತ್ತಿದೆ. ಸಂಬಂಧ ಪಟ್ಟ ಇಲಾಖೆಯವರು ಕೂಡಲೇ ರಸ್ತೆ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು

-ಬದಂಚೆಟ್ಟಿರ ವಿನೋದ್ ತಿಮ್ಮಯ್ಯ ಬೆಳೆಗಾರ.

ಎಮ್ಮೆಮಾಡು ಗ್ರಾಮಕ್ಕೆ ಸಂಪರ್ಕಿಸುವ ಕೂರುಳಿ-ಎಮ್ಮೆಮಾಡು ರಸ್ತೆ ಹಾಳಾಗಿದೆ. ಎದುರಿನಿಂದ ಬರುವ ವಾಹನಗಳಿಗೆ ಸ್ಥಳಾವಕಾಶ ಕೊಡಲು ಆಗುತ್ತಿಲ್ಲ. ರಸ್ತೆ ಹೊಂಡ ತೀವ್ರ ಸಮಸ್ಯೆ ತಂದಿದೆ. ಕೂಡಲೇ ರಸ್ತೆ ಗುಂಡಿ ಮುಚ್ಚಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿ ಕೊಡಬೇಕು

-ಮೊಯಿದು ಖಾಸಗಿ ಶಾಲಾಬಸ್ ವಾಹನದ ಚಾಲಕ.

ಗುಂಡಿ ಮುಚ್ಚಿ ಅನುಕೂಲ ಕಲ್ಪಿಸಿ ನಾಪೋಕ್ಲು ಬಳಿಯ ಹಳೆತಾಲ್ಲೂಕಿನಲ್ಲಿ ಎದುರಿನಿಂದ ಬರುವ ವಾಹನಗಳಿಗೆ ಸ್ಥಳಾವಕಾಶ ಕೊಡಲು ಆಗುತ್ತಿಲ್ಲ. ರಸ್ತೆ ಹೊಂಡ ತೀವ್ರ ಸಮಸ್ಯೆ ತಂದಿದೆ. ಕೂಡಲೇ ರಸ್ತೆ ಗುಂಡಿಮುಚ್ಚಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡಿ.

-ಶಂಭು ಅಯ್ಯಣ್ಣ ಶಾಲಾ ಬಸ್‌ ಚಾಲಕ ನೆಲಜಿ.

ಆದೇಶ ಪಾಲನೆಗೆ ಸೂಚಿಸಲಾಗಿದೆ ಕೊಡಗು ಜಿಲ್ಲೆಯಲ್ಲಿ ಈಗಾಗಲೇ  ಭಾರೀ ಸರಕು ಸಾಗಾಣೆ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ. ಜಿಲ್ಲೆಯ ಮುಖಾಂತರ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 275 ರ ಜಿಲ್ಲೆಯ ಗಡಿಭಾಗಗಳಾದ ಕುಶಾಲನಗರ ಮತ್ತು ಸಂಪಾಜೆಯಲ್ಲಿ ವ್ಯವಸ್ಥಿತ ಚೆಕ್‍ಪೋಸ್ಟ್ ನಿರ್ಮಿಸಿ ದಿನದ 24 ಗಂಟೆಯೂ ನಿಗಾ ವಹಿಸಲು ಸಿಬ್ಬಂದಿಗಳನ್ನು ನಿಯೋಜಿಸಲು ಮೊಬೈಲ್ ಪ್ಯಾಟ್ರೋಲಿಂಗ್ ನಡೆಸಲು ಹಾಗೂ ಈ ಆದೇಶ ಉಲ್ಲಂಘನೆಯಾಗದಂತೆ ಮತ್ತು ಆದೇಶ ಉಲ್ಲಂಘಿಸಿದವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಪೊಲೀಸ್ ಹಾಗೂ ಸಾರಿಗೆ ಇಲಾಖೆಗೆ ಸೂಚಿಸಲಾಗಿದೆ

-ವೆಂಕಟ್ ರಾಜಾ ಜಿಲ್ಲಾಧಿಕಾರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT