ಬುಧವಾರ, 3 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಡಗು: ಜಿಲ್ಲೆಯಾದ್ಯಂತ ಭಾರಿ ಮಳೆ

Published 1 ಜುಲೈ 2024, 21:49 IST
Last Updated 1 ಜುಲೈ 2024, 21:49 IST
ಅಕ್ಷರ ಗಾತ್ರ

ಮಡಿಕೇರಿ/ಮಂಗಳೂರು: ಕೊಡಗು ಜಿಲ್ಲೆಯಾದ್ಯಂತ ಸೋಮವಾರ ಮಳೆ ಬಿರುಸು ಪಡೆದಿದೆ. ಭಾಗಮಂಡಲ, ವಿರಾಜಪೇಟೆ, ಮಡಿಕೇರಿ ಹಾಗೂ ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿ ಭಾಗದಲ್ಲಿ ಭಾರಿ ಮಳೆ ಸುರಿದಿದೆ. ಕಾವೇರಿ ನದಿ ತೀರದ ನಿವಾಸಿಗಳಲ್ಲಿ ಆತಂಕ ಎದುರಾಗಿದೆ. 

ನದಿ ತೊರೆಗಳು ಮತ್ತೆ ಭೋರ್ಗರೆಯುತ್ತಿವೆ. ಎಲ್ಲೆಡೆ ಭತ್ತದ ಬಿತ್ತನೆಗೆ ಸಿದ್ಧತೆ ‌ನಡೆದಿದೆ. ಕೆಲವೆಡೆ ಭತ್ತ ಸಸಿಮಡಿ ಕಾರ್ಯ ಆರಂಭವಾಗಿದೆ.

ವಿರಾಜಪೇಟೆಯಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆ ಮಣ್ಣು ಕುಸಿತವಾಗಿದೆ. ಭಾಗಮಂಡಲದಲ್ಲಿ ಮತ್ತೆ ನೀರು
ಏರಿಕೆಯಾಗುತ್ತಿದೆ. ಹೊಸ ಉದ್ಯಾನಕ್ಕೆ ನೀರು ನುಗ್ಗಿದೆ. ತ್ರಿವೇಣಿ ಸಂಗಮ ಭರ್ತಿಯಾಗಿದೆ.

ಸೋಮವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ವಿರಾಜಪೇಟೆ ಹಾಗೂ ಸುತ್ತಮುತ್ತ 12 ಸೆಂ.ಮೀ, ಭಾಗಮಂಡಲ ಹೋಬಳಿ ವ್ಯಾಪ್ತಿಯಲ್ಲಿ 10 ಸೆಂ.ಮೀ ಭಾರಿ ಮಳೆ ಸುರಿದಿದೆ. ಅಮ್ಮತ್ತಿ ಹಾಗೂ ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿಯಲ್ಲಿ 8, ಮಡಿಕೇರಿ ಹಾಗೂ ಸುತ್ತಮುತ್ತ 6, ಪೊನ್ನಂಪೇಟೆ ತಾಲ್ಲೂಕಿನ ಹುದಿಕೇರಿ ಹಾಗೂ ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪದಲ್ಲಿ 4 ಸೆಂ.ಮೀ ಮಳೆಯಾಗಿದೆ.

ಗೋಣಿಕೊಪ್ಪಲು, ಕುಟ್ಟ, ಶ್ರೀಮಂಗಲ, ಹುದಿಕೇರಿ, ಪೊನ್ನಂಪೇಟೆ ಭಾಗದಲ್ಲಿ ಸೋಮವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ಒಂದೇ ಸಮನೆ ಮಳೆ ಸುರಿಯಿತು.

ಮೈಸೂರಿನಲ್ಲಿ ಆಗಾಗ ಬಿಡುವು ಕೊಟ್ಟು ತುಂತುರು ಮಳೆ ಸುರಿಯಿತು. ಚಳಿಗಾಳಿಯೂ ಬೀಸುತ್ತಿತ್ತು.

ಕರಾವಳಿಯಲ್ಲಿ ಸಾಧಾರಣ ಮಳೆ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಸೋಮವಾರ ಸಾಧಾರಣ ಮಳೆಯಾಗಿದೆ. ಇಡೀ ದಿನ ಮೋಡಮುಸುಕಿದ ವಾತಾವರಣ ಇತ್ತು. ಬಿಟ್ಟು ಬಿಟ್ಟು ಮಳೆ ಸುರಿಯಿತು.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ಭಾನುವಾರ ರಾತ್ರಿ ಉತ್ತಮ ಮಳೆಯಾಗಿದೆ. ಬಾಳೆಹೊನ್ನೂರು ಸುತ್ತಮುತ್ತ ಸಾಧಾರಣ ಮಳೆಯಾಗಿದೆ.

ಶಿವಮೊಗ್ಗ ವರದಿ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನಲ್ಲಿ ಸೋಮವಾರ ಉತ್ತಮ ಮಳೆ ಸುರಿದಿದ್ದು, ನಗರ ಹೋಬಳಿಯಲ್ಲಿ ವರುಣನ ಆರ್ಭಟ ಮುಂದುವರಿದಿದೆ.

ಮಳೆಯಿಂದಾಗಿ ಜಲಾಶಯಗಳ ನೀರಿನ ಮಟ್ಟ ಏರಿಕೆ ಕಂಡಿದೆ. ಕಳೆದ 24 ಗಂಟೆಯಲ್ಲಿ ಹೊಸನಗರ ತಾಲ್ಲೂಕಿನ ಹುಲಿಕಲ್‌ನಲ್ಲಿ 15.8 ಸೆಂ.ಮೀ., ಮಾಣಿ– 16.3 ಸೆಂ.ಮೀ, ಮಾಸ್ತಿಕಟ್ಟೆ– 14.01 ಸೆಂ.ಮೀ., ಯಡಿಯೂರು–14.01 ಸೆಂ.ಮೀ. ಮಳೆಯಾಗಿದೆ.

ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆಯಾಗುತ್ತಿರುವ ಕಾರಣ ಲಿಂಗನಮಕ್ಕಿ ಜಲಾಶಯದ ಒಳಹರಿವು 13,704 ಕ್ಯುಸೆಕ್‌ಗೆ ಏರಿಕೆಯಾಗದೆ. ಭಾನುವಾರ ಜಲಾಶಯಕ್ಕೆ 11,358 ಕ್ಯುಸೆಕ್‌ ಒಳಹರಿವು ಇತ್ತು.

20 ಗ್ರಾಮಗಳಿಗೆ ಸಂಪರ್ಕ ಕಡಿತ
ಖಾನಾಪುರ ವರದಿ (ಬೆಳಗಾವಿ ಜಿಲ್ಲೆ):
ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿ ಅವ್ಯಾಹತವಾಗಿ ಸುರಿಯುತ್ತಿರುವ ಮಳೆಯಿಂದ ಮಲಪ್ರಭಾ ನದಿಯಲ್ಲಿ ನೀರಿನ ಹರಿವು ಹೆಚ್ಚಿದೆ. ತಾಲ್ಲೂಕಿನ ಹಬ್ಬನಹಟ್ಟಿ ಗ್ರಾಮದ ಬಳಿ ಆಂಜನೇಯ ದೇವಸ್ಥಾನದ ಕಟ್ಟಡ ಜಲಾವೃತವಾಗಿದೆ.

ತಾಲ್ಲೂಕಿನಲ್ಲಿ ಸುರಿಯುತ್ತಿರುವ ಸತತ ಮಳೆಗೆ ಮಲಪ್ರಭಾ, ಮಹದಾಯಿ ಮತ್ತು ಪಾಂಡರಿ ನದಿಗಳಲ್ಲಿ ನೀರಿನ ಹರಿವು ಹೆಚ್ಚಿದೆ. ಅರಣ್ಯ ಪ್ರದೇಶದಲ್ಲಿ ಜಲಮೂಲಗಳು ತುಂಬಿ ಹರಿಯಲಾರಂಭಿಸಿವೆ. ಭಾನುವಾರ ರಾತ್ರಿಯಿಂದ ತಾಲ್ಲೂಕಿನ ಗವ್ವಾಳಿ, ಕೊಂಗಳಾ, ಅಮಗಾಂವ, ದೇಗಾಂವ, ಕೃಷ್ಣಾಪುರ, ಮೆಂಡಿಲ್, ಸಡಾ, ಹುಳಂದ, ಮಾನ, ಕೃಷ್ಣಾಪುರ, ವರ್ಕಡ ಸೇರಿ ಕಾನನದಂಚಿನ 20ಕ್ಕೂ ಹೆಚ್ಚು ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT