ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಡಿಕೇರಿ | ದಸರೆಯಲ್ಲಿ ಮುಖವಾಡ, ಪೀಪಿ ನಿಷೇಧ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

Published : 4 ಅಕ್ಟೋಬರ್ 2024, 14:28 IST
Last Updated : 4 ಅಕ್ಟೋಬರ್ 2024, 14:28 IST
ಫಾಲೋ ಮಾಡಿ
Comments

ಮಡಿಕೇರಿ: ಈ ಬಾರಿಯ ದಸರಾ ದಶಮಂಟಪಗಳ ಶೋಭಾಯಾತ್ರೆಯ‌ಲ್ಲಿ ಶಬ್ದ ಮಿತಿಯ ಉಲ್ಲಂಘನೆಗೆ ಅವಕಾಶ ಇಲ್ಲ. ಮಾತ್ರವಲ್ಲ, ಮುಖವಾಡ ಹಾಗೂ ಕರ್ಕಶ ಧ್ವನಿ ಹೊಮ್ಮಿಸುವ ಪೀಪಿಗಳಿಗೂ ಅವಕಾಶ ಕೊಡುವುದಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದರು.

ಇಲ್ಲಿನ ಪತ್ರಿಕಾಭವನದಲ್ಲಿ ಕೊಡಗು ಪ್ರೆಸ್‌ ಕ್ಲಬ್‌ ಶುಕ್ರವಾರ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು.

‘ಡಿ.ಜೆ ಬಳಕೆ ಮಾಡಲು ಲಕ್ಷಗಟ್ಟಲೆ ಹಣವನ್ನು ವ್ಯಯಿಸುವ ಜನರು ಸಾಂಪ್ರದಾಯಿಕ ಕಲೆಗಳ ಕಲಾವಿದರಿಗೆ ಅವಕಾಶ ಕೊಡುವುದಿಲ್ಲ. ಇದರಿಂದ ನಮ್ಮ ಕಲೆಗಳು ಅಳಿಯುತ್ತಿವೆ’ ಎಂದು  ಬೇಸರ ವ್ಯಕ್ತಪಡಿಸಿದರು.

‘ಮೈಸೂರು ದಸರಾ ಮಹೋತ್ಸವ ನೋಡಲು ವಿದೇಶಗಳಿಂದಲೂ ಜನರು ಬರುತ್ತಾರೆ. ಏಕೆಂದರೆ, ಅಲ್ಲಿ ಬೇರೆಲ್ಲೂ ಸಿಗದ ಸಾಂಪ್ರದಾಯಿಕ ಕಲೆಗಳ ಪ್ರದರ್ಶನ ಸಿಗುತ್ತದೆ ಎಂದು. ಆದರೆ, ಕೊಡಗಿನಲ್ಲಿ ವಿಶ್ವದೆಲ್ಲೆಡೆ ಸಿಗುವ ಡಿ.ಜೆ ಹಾಕಲಾಗುತ್ತದೆ. ಅದರ ಬದಲಿಗೆ ಇಲ್ಲಿನ ಸ್ಥಳೀಯ ಕಲೆಗಳ ಪ್ರದರ್ಶನವಾಗಬೇಕು. ಕೊಡಗಿನ ವಾಲಗ ನಮ್ಮ ಅಸ್ಮಿತೆ ಅಲ್ಲವೇ?’ ಎಂದು ಅವರು ಪ್ರಶ್ನಿಸಿದರು.

‘ನಮಗೆ ಯಾರಿಗೂ ತೊಂದರೆ ಕೊಡುವ ಉದ್ದೇಶ ಇಲ್ಲ. ಆದರೆ, ಡಿ.ಜೆ.ಯಿಂದ ಯಾರಿಗಾದರೂ ತೊಂದರೆಯಾದರೆ ಸುಮ್ಮನಿರುವ ಪ್ರಶ್ನೆಯೇ ಇಲ್ಲ. ಯಾವುದೇ ಆಚರಣೆಗಳಾಗಲಿ ಅದರಿಂದ ಬೇರೆಯವರಿಗೆ ತೊಂದರೆಯಾಗಬಾರದು. ವಿಶೇಷವಾಗಿ ವಯಸ್ಸಾದವರು, ರೋಗಿಗಳು, ಗರ್ಭಿಣಿಯರು, ಬಾಣಂತಿಯರು, ನವಜಾತ ಶಿಶುಗಳು... ಇವರಿಗೆ ತೊಂದರೆಯಾಗದ ಹಾಗೆ ಹಬ್ಬ ಆಚರಿಸಬೇಕು’ ಎಂದು ಕಿವಿಮಾತು ಹೇಳಿದರು.

ದಶಮಂಟಪಗಳ ಸಮಿತಿಯವರೂ ಶಬ್ದವನ್ನು ಕಡಿಮೆ ಮಾಡಲು ಒಪ್ಪಿರುವುದು ಒಳ್ಳೆಯ ಬೆಳವಣಿಗೆ. ಮಾಲಿನ್ಯ ನಿಯಂತ್ರಣ ಮಂಡಳಿಯವರು ಶಬ್ದದ ಪ್ರಮಾಣವನ್ನು ಅಳೆಯುತ್ತಾರೆ ಎಂದರು.

ಬಿಗಿ ಭದ್ರತೆ: ಈ ಬಾರಿ ದಶಮಂಟಪಗಳ ಶೋಭಾಯಾತ್ರೆಗೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. ‘ಜಂಬೊಟಿನ್’ ಎಂಬ ವಿಶೇಷ ಘಟಕವನ್ನು ಸ್ಥಾಪಿಸಲಾಗಿದೆ. ಇದರಲ್ಲಿ 10ರಿಂದ 15 ಜನರ ಪೊಲೀಸರನ್ನು ನಿಯೋಜಿಸಿ ಒಟ್ಟಿಗೆ ಅವರು ಸಂಚರಿಸುತ್ತಾರೆ. ಇಂತಹ 6ರಿಂದ 7 ತಂಡಗಳನ್ನು ನಿಯೋಜಿಸಲಾಗುವುದು. ಹೆಚ್ಚು ಲೈಟ್‌ಗಳನ್ನು, ಸಿಸಿಟಿವಿ ಕ್ಯಾಮೆರಾಗಳನ್ನು ಹಾಕಲಾಗುವುದು ಎಂದರು.

ದಶಮಂಪಟಗಳ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದೆ. ಪ್ರತಿ ಮಂಟಪಕ್ಕೂ 9 ಮಂದಿ ಪೊಲೀಸರು ಹಾಗೂ ಒಬ್ಬ ಲೈನ್‌ಮೆನ್‌ ಅನ್ನು ನಿಯೋಜಿಸಲಾಗಿದೆ ಎಂದರು.

ದಸರೆಗೆ ಬಿಗಿ ಭದ್ರತೆ ಸಾವಿರ ಪೊಲೀಸ್ ನಿಯೋಜನೆಗೆ ನಿರ್ಧಾರ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
‘ಕೊಡಗಿನ ವಾತಾವರಣ ಬೇರೆಲ್ಲೂ ಸಿಗದು’
‘ಕೊಡಗು ಜಿಲ್ಲೆಯ ಕಾರ್ಯನಿರ್ವಹಣೆ ಏನನ್ನಿಸಿದೆ’ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ‘ನಿಜಕ್ಕೂ ತುಂಬಾ ಖುಷಿಯಾಗಿದೆ. ಇಂತಹ ವಾತಾವರಣ ಬೇರೆಲ್ಲೂ ಸಿಗದು’ ಎಂದು ಹೇಳಿದರು. ‘ಇಲ್ಲಿರುವ ಜನರು ತುಂಬಾ ಒಳ್ಳೆಯವರು. ಇಲಾಖೆಯ ಸಿಬ್ಬಂದಿಯೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಾರೆ. ರಾಜಕೀಯ ಮುಖಂಡರು ಅನಗತ್ಯವಾದ ಒತ್ತಡಗಳನ್ನು ಹೇರುವುದಿಲ್ಲ. ಇಂತಹ ವಾತಾವರಣ ನನಗೆ ಖುಷಿ ತಂದಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT