ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ: ‘ಡ್ರೋಣ್‌ ದೀದಿ’ ಅನುಷ್ಠಾನಕ್ಕೆ ಸಿದ್ಧತೆ

ಆರರಿಂದ ಏಳು ನಿಮಿಷದಲ್ಲಿ ಒಂದು ಎಕರೆಗೆ ರಾಸಾಯನಿಕ ಸಿಂಪಡಣೆಯ ಸಾಮರ್ಥ್ಯ
Published 19 ಜುಲೈ 2024, 5:16 IST
Last Updated 19 ಜುಲೈ 2024, 5:16 IST
ಅಕ್ಷರ ಗಾತ್ರ

ಕೊಪ್ಪಳ: ಅತ್ಯಂತ ಕಡಿಮೆ ಸಮಯದಲ್ಲಿ ಹೆಚ್ಚು ಪ್ರದೇಶದ ಹೊಲದಲ್ಲಿ ರಾಸಾಯನಿಕ ಸಿಂಪಡಣೆಗೆ ಅನುಕೂಲವಾಗುವ ಕೇಂದ್ರ ಸರ್ಕಾರದ ‘ಡ್ರೋಣ್‌ ದೀದಿ’ ಯೋಜನೆಯನ್ನು ಜಿಲ್ಲೆಯಲ್ಲಿ ಅನುಷ್ಠಾನ ಮಾಡಲು ಕೃಷಿ ಇಲಾಖೆ ಕಂಪನಿಗಳ ಸಹಯೋಗದಲ್ಲಿ ಸಿದ್ಧತೆ ಮಾಡಿಕೊಂಡಿದ್ದು, ಇದರ ಮೊದಲ ಪ್ರಯೋಗ ಜು. 23ರಂದು ತಾಲ್ಲೂಕಿನ ಕಿನ್ನಾಳದಲ್ಲಿ ನಡೆಯಲಿದೆ.

ಇದೇ ವರ್ಷದ ಮಾರ್ಚ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಹತ್ತು ಸ್ಥಳಗಳಲ್ಲಿ ‘ಡ್ರೋನ್‌ ದೀದಿ’ ವಿತರಿಸಿದ್ದರು. ಕ್ರಮೇಣವಾಗಿ ದೇಶದಾದ್ಯಂತ ವಿಸ್ತರಣೆ ಮಾಡುವುದಾಗಿಯೂ ಹೇಳಿದ್ದರು. ಭಾರತದ ಗ್ರಾಮೀಣ ಮಹಿಳೆಯರನ್ನು ಸಬಲೀಕರಣಗೊಳಿಸಲು ಈ ಯೋಜನೆ ಅನುಕೂಲವಾಗುತ್ತದೆ ಎನ್ನುವ ನಿರೀಕ್ಷೆಗಳಿವೆ. 

ಇತ್ತೀಚೆಗಿನ ವರ್ಷಗಳಲ್ಲಿ ಹೊಲ ಗದ್ದೆಗಳಲ್ಲಿ ಕೆಲಸ ಮಾಡಲು ಕಾರ್ಮಿಕರ ಕೊರತೆ ತೀವ್ರವಾಗಿ ಕಾಡುತ್ತಿದೆ. ಅವರನ್ನು ದೂರದ ಊರುಗಳಿಂದ ಕರೆ ತರುವುದು, ವಾಪಸ್‌ ಕಳಿಸುವುದು, ಹೆಚ್ಚು ಕೂಲಿ ಪಾವತಿಸುವುದು ಹೀಗೆ ಪ್ರತಿ ವಿಷಯವೂ ಹೊಲದ ಮಾಲೀಕನಿಗೆ ಹೊರೆಯಾಗುತ್ತಿದೆ. ಆದ್ದರಿಂದ ಕೇಂದ್ರ ಕಾರ್ಮಿಕರ ಕೊರತೆ ನೀಗಿಸುವುದು ಮತ್ತು ಸ್ಟಾರ್ಟ್‌ ಅಪ್‌ಗಳಿಗೆ ಉತ್ತೇಜಿಸಲು ‘ಡ್ರೋಣ್‌ ದೀದಿ’ ಯೋಜನೆ ಆರಂಭಿಸಿದೆ.

ಈ ಯೋಜನೆಯಡಿ ಕೊಪ್ಪಳ ಜಿಲ್ಲೆಯಲ್ಲಿ ಕೃಷಿ ಇಲಾಖೆ ಹಾಗೂ ಖಾಸಗಿ ಕಂಪನಿಗಳ ಸಹಯೋಗದಲ್ಲಿ ಐದು ಡ್ರೋಣ್‌ಗಳು ಬಂದಿವೆ. ವಿಡಿಯೊ ಚಿತ್ರೀಕರಣದಂಥ ಕೆಲಸಕ್ಕೆ ಬಹುತೇಕ ಬಳಕೆಯಾಗುತ್ತಿದ್ದ ಡ್ರೋಣ್‌ಗಳು ಈಗ ರಾಸಾಯನಿಕ ಸಿಂಪಡಣೆಗೂ ಯಥೇಚ್ಛವಾಗಿ ಬಳಕೆ ಮಾಡಲಾಗುತ್ತದೆ. ಈ ಡ್ರೋಣ್‌ ನೆರವಿನಿಂದ ಗರಿಷ್ಠ ಆರರಿಂದ ಏಳು ನಿಮಿಷದ ಅವಧಿಯಲ್ಲಿ ಒಂದು ಎಕರೆ ಭೂಮಿಗೆ ರಾಸಾಯನಿಕ ಸಿಂಪಡಣೆ ಮಾಡಬಹುದಾಗಿದೆ. ಇದರಿಂದ ರೈತರ ದೈಹಿಕ ಶ್ರಮ, ಮಾನಸಿಕ ಯಾತನೆ ಹಾಗೂ ಸಮಯ ಉಳಿತಾಯವಾಗುತ್ತದೆ. ಕಾರ್ಮಿಕರಿಗಾಗಿ ಕಾಯುವ ಸಮಸ್ಯೆಯೂ ತಪ್ಪುತ್ತದೆ.

ಈ ಡ್ರೋಣ್‌ ಹೇಗೆ ನಿರ್ವಹಣೆ ಮಾಡಬೇಕು ಎನ್ನುವ ಬಗ್ಗೆ ಜಿಲ್ಲೆಯ ಹಲವು ರೈತರಿಗೆ ತರಬೇತಿಯನ್ನೂ ನೀಡಲಾಗಿದ್ದು, ಕೃಷಿ ವಿಜ್ಞಾನ ಕೇಂದ್ರದವರು ಪ್ರತಿ ಎಕರೆಗೆ ಕನಿಷ್ಠ ದರದಲ್ಲಿ ಬಾಡಿಗೆ ನಿಗದಿ ಮಾಡಿದ್ದಾರೆ. ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರ ಮಹಿಳಾ ಸ್ವಸಹಾಯ ಸಂಘಗಳಿಗೆ 15,000 ಡ್ರೋನ್‌ಗಳನ್ನು ನೀಡಲು ಯೋಜಿಸಿದೆ. ಬೆಳೆಗೆ ಔಷಧ ಸಿಪರಣೆ, ನಿಖರವಾದ ಕೃಷಿ, ಫೀಲ್ಡ್ ಮ್ಯಾಪಿಂಗ್ ಮತ್ತು ಡೇಟಾ ಸಂಗ್ರಹಣೆ ಸೇರಿದಂತೆ ಕೃಷಿ ಚಟುವಟಿಕೆಗಳ ಮಾಹಿತಿಯೂ ಲಭ್ಯವಾಗುತ್ತದೆ.

ಬೆಳೆ ಹುಲುಸಾಗಿ ಬರಬೇಕು ಎಂದು ರೈತರು ಮೇಲಿಂದ ಮೇಲೆ ರಾಸಾಯನಿಕ ಸಿಂಪಡಣೆ ಮಾಡುವುದು ಇತ್ತೀಚೆಗಿನ ವರ್ಷಗಳಲ್ಲಿ ಸಾಮಾನ್ಯವಾಗಿದೆ. ಇದಕ್ಕಾಗಿ ರಾಸಾಯನಿಕ, ಸಿಂಪಡಿಸಲು ಪರಿಕರಗಳ ಖರೀದಿ ಅಥವಾ ಬಾಡಿಗೆ ತರುವುದು ಹೀಗೆ ಆರ್ಥಿಕವಾಗಿಯೂ ಹೊರೆಯಾಗುತ್ತಿದೆ.

ಹೊಸ ಯೋಜನೆಯಿಂದಾಗಿ ಗ್ರಾಮೀಣ ಭಾಗದ ರೈತರ ಸಬಲೀಕರಣಕ್ಕೆ, ಕೃಷಿ ಅಭ್ಯಾಸದಲ್ಲಿ ಪ್ರಗತಿ, ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವುದು, ಕೃಷಿಯಲ್ಲಿ ಸುರಕ್ಷತೆ ಮತ್ತು ದಕ್ಷತೆ, ಸ್ಟಾರ್ಟ್ ಅಪ್‌ಗಳಿಗೆ ಅವಕಾಶಗಳು, ಸ್ವಸಹಾಯ ಗುಂಪುಗಳಿಗೆ ಆರ್ಥಿಕ ಪ್ರೋತ್ಸಾಹ ಹೀಗೆ ಅನೇಕ ಪ್ರಯೋಜನಗಳು ಆಗಲಿವೆ. ಇದರ ಸಾಧಕ ಬಾಧಕಗಳ ಬಗ್ಗೆಯೂ ಚರ್ಚೆಯಾಗಬೇಕಿದೆ.

ರುದ್ರೇಶಪ್ಪ ಟಿ.ಎಸ್‌.
ರುದ್ರೇಶಪ್ಪ ಟಿ.ಎಸ್‌.

Highlights - null

Quote - ಕೇಂದ್ರದ ಯೋಜನೆ ‘ಡ್ರೋಣ್‌ ದೀದಿ’ ಅನುಷ್ಠಾನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರಾಯೋಗಿಕವಾಗಿ ಕಿನ್ನಾಳದ ಹೊಲದಲ್ಲಿ ರಾಸಾಯನಿಕ ಸಿಂಪಡಣೆ ಮಾಡಲಾಗುವುದು. ರುದ್ರೇಶಪ್ಪ ಟಿ.ಎಸ್‌. ಕೃಷಿ ಇಲಾಖೆ ಜಂಟಿ ನಿರ್ದೇಶಕ

Cut-off box - null

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT