ಕುಷ್ಟಗಿ: ತಾಲ್ಲೂಕಿನ ನಿಡಶೇಸಿ ಕೆರೆಯ ತಟದಲ್ಲಿನ ಸಸ್ಯೋದ್ಯಾನ ವರ್ಷದ ಹಿಂದೆ ತರಹೇವಾರಿ ಸಸ್ಯ, ಗಿಡಗಳು, ಹಚ್ಚಹಸಿರಿನ ಹುಲ್ಲುಹಾಸು, ಹಸು ಕರು, ಎತ್ತು, ರೈತರ ಪ್ರತಿಮೆಗಳು ಹೀಗೆ ಆಕರ್ಷಕ ರೀತಿಯಲ್ಲಿ ಮುದಗೊಳಿಸುವಂತಿತ್ತು. ಆದರೆ ಸದ್ಯದ ಅಲ್ಲಿಯ ಚಿತ್ರಣ ಸಂಪೂರ್ಣ ಬದಲಾಗಿದ್ದು ನಿರ್ವಹಣೆ ಕೊರತೆ ನಿರ್ಲಕ್ಷ್ಯದಿಂದಾಗಿ ಉದ್ಯಾನಲ್ಲಿನ ಅಧ್ವಾನ ಕಣ್ಣಿಗೆ ರಾಚುತ್ತಿದೆ.

ಕೆಲ ವರ್ಷಗಳ ಹಿಂದೆ ಸಾರ್ವಜನಿಕರ ಸಹಭಾಗಿತ್ವದಲ್ಲಿ ನಿಡಶೇಸಿ ಕೆರೆ ಅಭಿವೃದ್ಧಿ ಹೊಂದಿದ ನಂತರ ಕೆರೆ ದಂಡೆಯಲ್ಲಿನ ಬಯಲು ಜಾಗದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ₹ 2 ಕೋಟಿ ಅನುದಾನದಲ್ಲಿ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ ಉದ್ಯಾನವನ ಅಭಿವೃದ್ಧಿಪಡಿಸಿತ್ತು. ಸುತ್ತಲೂ ಗಟ್ಟಿಮುಟ್ಟಾದ ಆವರಣಗೋಡೆ, ಜನರು ನಡೆದಾಡಲು ನೆಲಹಾಸು, ಪೆವಿಲಿಯನ್ ಕಟ್ಟಡ, ಕೆರೆಯ ವಿಹಂಗಮ ನೋಟ ಸವಿಯಲು ವೀಕ್ಷಣಾಗೋಪುರ ನಿರ್ಮಿಸಲಾಗಿದೆ. ಅಷ್ಟೇ ಅಲ್ಲದೆ ಆಂಧ್ರಪ್ರದೇಶ ಮತ್ತಿತರೆ ಕಡೆಗಳಿಂದ ವಿವಿಧ ರೀತಿಯ ಆಲಂಕಾರಿಕ ಸಸ್ಯಗಳನ್ನು ನಾಟಿ ಮಾಡಲಾಗಿತ್ತು. ಗಜೇಂದ್ರಗಡ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಉದ್ಯಾನ ತೀರಾ ಕಡಿಮೆ ಅವಧಿಯಲ್ಲಿ ಸಂಪೂರ್ಣ ಹಾಳು ಬಿದ್ದಿರುವುದಕ್ಕೆ ಜನ ಬೇಸರಪಡುತ್ತಿದ್ದಾರೆ.

ಕೆರೆ ಮತ್ತು ಉದ್ಯಾನದ ಪ್ರದೇಶ ಪಟ್ಟಣದಿಂದ ಕೇವಲ ಮೂರು ಕಿ.ಮೀ ಸನಿಹದಲ್ಲಿದ್ದರೂ ಅದರ ಭೌಗೋಳಿಕ ವ್ಯಾಪ್ತಿ ಕೊರಡಕೇರಾ ಗ್ರಾಮ ಪಂಚಾಯಿತಿಗೆ ಸೇರಿದೆ. ಆರಂಭದಲ್ಲಿ ಉದ್ಯಾನ ನಿರ್ವಹಣೆ ಹೊಣೆಯನ್ನು ಕುಷ್ಟಗಿ ಪುರಸಭೆಗೆ ವಹಿಸುವ ಚಿಂತನೆ ನಡೆದಿತ್ತು. ಆದರೆ ಕೊರಡಕೇರಾ ಪಂಚಾಯಿತಿಯಿಂದ ಆಕ್ಷೇಪ ವ್ಯಕ್ತವಾಗಿದ್ದರಿಂದ ಕೈಬಿಡಲಾಯಿತು. ನಂತರ ಆ ಗ್ರಾಮ ಪಂಚಾಯಿತಿಗೆ ಉದ್ಯಾನವನ್ನು ಹಸ್ತಾಂತರಿಸಲಾಗಿತ್ತು. ಉದ್ಯಾನದ ಅವನತಿ ಆರಂಭವಾಗಿದ್ದೇ ಅಲ್ಲಿಂದ ಎನ್ನುತ್ತಾರೆ ಸಾರ್ವಜನಿಕರು.

ಸದ್ಯದ ಸ್ಥಿತಿ: ಒಣಗಿರುವ ಹುಲ್ಲುಹಾಸು, ಹಾಳಾದ ಅಲಂಕಾರಕ ಸಸ್ಯಗಳು, ಅಲ್ಲಲ್ಲಿ ಮಡುಗಟ್ಟಿದ ಕೆಸರು. ಬೀಗವೇ ಇಲ್ಲದ ಮುಖ್ಯದ್ವಾರ. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಇತರೆ ವಸ್ತುಗಳ ತ್ಯಾಜ್ಯ. ಮದ್ಯದ ಖಾಲಿ ಬಾಟಲಿ, ಪ್ಯಾಕೆಟ್ಗಳನ್ನು ಎಲ್ಲೆಂದರಲ್ಲಿ ಎಸೆಯಲಾಗಿದೆ. ಶಾಲಾ ಮಕ್ಕಳು, ಮಹಿಳೆಯರು, ದೂರದ ಊರಿನವರ ಸುಂದರ ವಿಹಾರ ತಾಣವಾಗಿತ್ತು. ಸದ್ಯ ಉದ್ಯಾನ ನಿರ್ಜನವಾಗಿದೆ. ಗ್ರಾಮೀಣ ಕೃಷಿ ಪರಂಪರೆಯನ್ನು ಬಿಂಬಿಸುವಂತೆ ಪಾರಂಪರಿಕ ರಾಶಿ ಕಣ ಹಂತಿ ತಿರುಗುವ ಎತ್ತುಗಳು, ರಾಶಿ ಮಾಡುವ ರೈತರು, ಹಸು ಕರು ಹೀಗೆ ವಿಶೇಷವಾಗಿ ಚಿತ್ರಿಸಿ ನಿರ್ಮಿಸಲಾಗಿದ್ದ ಪ್ರತಿಮೆಗಳು ಸಂಪೂರ್ಣ ಹಾಳಾಗಿವೆ. ಎತ್ತುಗಳ ಬಾಲ, ಕೊಂಬುಗಳು, ರೈತರ ಪ್ರತಿಮೆಗಳ ಕೈಗಳನ್ನೆಲ್ಲ ಕಿಡಿಗೇಡಿಗಳು ಮುರಿದು ವಿರೂಪಗೊಳಿಸಿದ್ದಾರೆ.

ಶಾಸಕರ ತವರಿನಲ್ಲೇ ದುಸ್ಥಿತಿ

ನಿರ್ವಹಣೆ ಹೊಣೆ ಹೊತ್ತಿರುವ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯವಹಿಸಿರುವುದೇ ಉದ್ಯಾನ ಹಾಳಾಗಲು ಕಾರಣವಾಗಿದೆ. ಒಬ್ಬ ಕಾವಲುಗಾರನನ್ನಾದರೂ ಇರಿಸಿಲ್ಲ ಎಂದು ಉದ್ಯಾನ ವೀಕ್ಷಣೆಗೆ ಬಂದಿದ್ದ ಸಾರ್ವಜನಿಕರಾದ ವೀರಭದ್ರಗೌಡ ಮಹೇಶ ಕಂಪ್ಲಿ ಇತರರು ಅಸಮಾಧಾನ ಹೊರಹಾಕಿದರು. ಅಷ್ಟೇ ಅಲ್ಲ ಪಂಚಾಯಿತಿ ಕೇಂದ್ರ ಇರುವ ಕೊರಡಕೇರಾ ವಿಧಾನಸಭೆ ಪ್ರತಿಪಕ್ಷದ ಮುಖ್ಯಸಚೇತಕ ದೊಡ್ಡನಗೌಡ ಪಾಟೀಲರ ತವರು ಗ್ರಾಮ. ಶಾಸಕರು ಹಾದುಹೋಗುವುದು ಈ ಉದ್ಯಾನದ ಪಕ್ಕದಲ್ಲೇ. ಆದರೂ ಉದ್ಯಾನಕ್ಕೆ ಈ ದುಸ್ಥಿತಿ ಬಂದಿರುವುದಕ್ಕೆ ಸಾರ್ವಜನಿಕರು ಅಚ್ಚರಿ ವ್ಯಕ್ತಪಡಿಸಿದರು. ಆದರೆ ತಮ್ಮ ಗಮನಕ್ಕೆ ತಾರದೆ ಉದ್ಯಾನವನ್ನು ಪಂಚಾಯಿತಿ ಹಸ್ತಾಂತರಿಸಿಕೊಂಡಿದೆ ಎಂದು ಶಾಸಕ ದೊಡ್ಡನಗೌಡ ಸ್ಪಷ್ಟಪಡಿಸಿದರು.

‘ಅನೈತಿಕ ಚಟುವಟಿಕೆಗಳ ತಾಣ’

ಉದ್ಯಾನಕ್ಕೆ ಸುರಕ್ಷತೆ ಇಲ್ಲವಾದರೂ ಕಳ್ಳಪ್ರೇಮಿಗಳಿಗೆ ಮಾತ್ರ ಉದ್ಯಾನ ಒಳ್ಳೆಯ ತಾಣವಾಗಿದೆ ಎಂಬ ಆರೋಪಗಳು ಜನರಿಂದ ಕೇಳಿಬಂದವು. ಅಪರಿಚಿತ ಯುವಕ ಯುವತಿಯರು ಇಲ್ಲಿಗೆ ಬರುತ್ತಾರೆ. ಹೇಳುವವರು ಕೇಳುವವರು ಯಾರೂ ಇಲ್ಲ. ಶಾಲೆ ಕಾಲೇಜಿನ ವಿದ್ಯಾರ್ಥಿಗಳ ಜೋಡಿಗಳೂ ಇಲ್ಲಿ ಬೀಡುಬಿಟ್ಟಿರುತ್ತವೆ. ಮದ್ಯ ವ್ಯಸನಿಗಳ ತಾಣವಾಗಿರುವುದಕ್ಕೆ ಅಲ್ಲಿಯ ಖಾಲಿ ಬಾಟಲಿಗಳೇ ಸಾಕ್ಷಿಯಾಗಿವೆ ಎಂಬುದು ತಿಳಿಯಿತು. ಉದ್ಯಾನದಲ್ಲೇ ಜಿಲ್ಲಾ ಪಂಚಾಯಿತಿ ಲಕ್ಷಾಂತರ ವೆಚ್ಚದಲ್ಲಿನ ಸಾರ್ವಜನಿಕರ ಅನುಕೂಲಕ್ಕೆಂದೇ ಶೌಚಾಲಯ ನಿರ್ಮಿಸಲಾಗುತ್ತಿದ್ದು ಅವು ಈಗ ಅನೈತಿಕ ಚಟುವಟಿಕೆಗಳ ತಾಣವಾಗಿವೆ ಎಂದೆ ಜನ ಆರೋಪಿಸಿದರು.

ಉದ್ಯಾನ ನಿರ್ವಹಣೆ ಸುಧಾರಣೆ ಚಿಂತನೆ ಇದೆಯಾದರೂ ನಿರ್ವಹಣೆ ಕಷ್ಟದ ಕೆಲಸ. ಸದ್ಯಕ್ಕೆ ಒಬ್ಬ ಕಾವಲುಗಾರನನ್ನು ನೇಮಿಸುತ್ತೇವೆ.
-ದಸ್ತಗೀರಸಾಬ್ ಗ್ರಾ.ಪಂ ಪಿಡಿಒ

ಉದ್ಯಾನ ನಿರ್ವಹಣೆ ಗ್ರಾ.ಪಂಗೆ ಅಸಾಧ್ಯ ಅದನ್ನು ವಹಿಸಿಕೊಂಡಿದ್ದನ್ನು ನನ್ನ ಗಮನಕ್ಕೂ ತಂದಿರಲಿಲ್ಲ. ಪುರಸಭೆಗೆ ನಿರ್ವಹಣೆಗೆ ಒಪ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇನೆ.
- ದೊಡ್ಡನಗೌಡ ಪಾಟೀಲ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.