ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಂಗಭದ್ರಾ ಜಲಾಶಯ | ಅವಧಿ ಮೀರಿದ್ದರೂ ಬದಲಾಗದ ಗೇಟ್‌, ಸರಪಳಿ

ತುಂಗಭದ್ರಾ ಜಲಾಶಯದಲ್ಲಿ ತಜ್ಞರ ಸಲಹೆಯಂತೆ ಸುರಕ್ಷತಾ ಕ್ರಮ: ಸಿ.ಎಂ
Published : 14 ಆಗಸ್ಟ್ 2024, 3:14 IST
Last Updated : 14 ಆಗಸ್ಟ್ 2024, 3:14 IST
ಫಾಲೋ ಮಾಡಿ
Comments

ಕೊಪ್ಪಳ: ‘ತುಂಗಭದ್ರಾ ಜಲಾಶಯದಲ್ಲಿ 70 ವರ್ಷಗಳಲ್ಲಿ ಮೊದಲ ಬಾರಿಗೆ ಗೇಟ್‌ ತುಂಡಾಗಿದೆ. 50 ವರ್ಷಗಳಿಗೊಮ್ಮೆ ಗೇಟ್ ಹಾಗೂ ಸರಪಳಿ ಬದಲಾಯಿಸಬೇಕಾಗಿತ್ತು ಎಂದು ತಜ್ಞರು ತಿಳಿಸಿದ್ದಾರೆ. ಇನ್ನು ಮುಂದೆ ಅವರ ಸಲಹೆಯಂತೆ ತುಂಗಭದ್ರಾ ಮಂಡಳಿ ಹಾಗೂ ಸಂಬಂಧಪಟ್ಟ ಮೂರೂ ರಾಜ್ಯ ಸರ್ಕಾರಗಳು ಈ ಕುರಿತು ಕ್ರಮಕೈಗೊಳ್ಳಲಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ತಾಲ್ಲೂಕಿನ ಮುನಿರಾಬಾದ್‌ನಲ್ಲಿ ತುಂಗಭದ್ರಾ ಜಲಾಶಯದಲ್ಲಿ ಕೊಚ್ಚಿ ಹೋದ 19ನೇ ಗೇಟ್‌ ಸ್ಥಳವನ್ನು ಮಂಗಳವಾರ ಪರಿಶೀಲಿಸಿ, ಜಲಾಶಯದ ಗೇಟ್‌ಗಳ ನಿರ್ಮಾಣ ಮತ್ತು ಸುರಕ್ಷತಾ ತಜ್ಞ ಎಂಜಿನಿಯರ್ ಕನ್ನಯ್ಯ ನಾಯ್ಡು ಅವರ ಜೊತೆ ಚರ್ಚಿಸಿದರು. ಆಂಧ್ರಪ್ರದೇಶದ ಹಣಕಾಸು ಸಚಿವ ಪಿ. ಕೇಶವ್‌, ಅಲ್ಲಿಂದ ಬಂದಿದ್ದ ಶಾಸಕರು ಹಾಗೂ ಸಂಸದರಿಗೆ ಸಿದ್ದರಾಮಯ್ಯ ಅವರು, ‘ಎಲ್ಲ ರಾಜ್ಯಗಳ ರೈತರ ಹಿತ ಕಾಯಲು ಬದ್ಧ. ಗೇಟ್‌ ಅಳವಡಿಕೆ ವಿಳಂಬವಾಗುವುದಿಲ್ಲ’ ಎಂದು ಭರವಸೆ ನೀಡಿದರು.  

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಮುಖ್ಯಮಂತ್ರಿ, ‘ರೈತರ ಮೊದಲ ಬೆಳೆಗೆ 90 ಟಿಎಂಸಿ ಅಡಿ ನೀರು ಬೇಕಾಗಿದೆ. ಜಲಾಶಯದ 50ರಿಂದ 60 ಟಿಎಂಸಿ ಅಡಿ ನೀರು ಹೊರಬಿಡದೆ ದುರಸ್ತಿ ಕಾರ್ಯ ಕೈಗೊಳ್ಳಲು ಸಾಧ್ಯವಿಲ್ಲ. ನೀರಿನ ಮಟ್ಟ ಕಡಿಮೆ ಮಾಡಲಾಗುತ್ತಿದ್ದು, ನಂತರವೂ 64 ಟಿಎಂಸಿ ಅಡಿ ನೀರು ಉಳಿಯುತ್ತದೆ. ಗೇಟ್‌ ದುರಸ್ತಿ ತ್ವರಿತವಾಗಿ ಮುಗಿಸಲು ಸೂಚಿಸಲಾಗಿದ್ದು ರೈತರು ಆತಂಕಪಡುವ ಅಗತ್ಯವಿಲ್ಲ’ ಎಂದರು.

‘ಹವಾಮಾನ ಇಲಾಖೆ ಮುನ್ಸೂಚನೆಯಂತೆ ಆಗಸ್ಟ್‌ 17ರ ಬಳಿಕ ಮತ್ತೆ ಮಳೆಯಾಗಲಿದೆ. ತುಂಗಭದ್ರಾ ಜಲಾಶಯದಿಂದ ಪೋಲಾಗಿರುವ ನೀರು ಮತ್ತೆ ತುಂಬಿಕೊಳ್ಳಲಿದೆ. ಆಗ ನಾನೇ ಬಂದು ಬಾಗಿನ ಅರ್ಪಿಸುತ್ತೇನೆ. ಯಾರೂ ಆತಂಕಗೊಳ್ಳುವ ಅಗತ್ಯವಿಲ್ಲ’ ಎಂದು ತಿಳಿಸಿದರು. 

ಅಪಾರ ಪ್ರಮಾಣದಲ್ಲಿ ನೀರು ಹೊರಬಿಟ್ಟ ಕಾರಣ ಕೊಪ್ಪಳ ತಾಲ್ಲೂಕಿನ ತುಂಗಭದ್ರಾ ಜಲಾಶಯದಲ್ಲಿ ಇಳಿಕೆಯಾದ ನೀರಿನ ಪ್ರಮಾಣ –ಪ್ರಜಾವಾಣಿ ಚಿತ್ರ/ಭರತ್‌ ಕಂದಕೂರ
ಅಪಾರ ಪ್ರಮಾಣದಲ್ಲಿ ನೀರು ಹೊರಬಿಟ್ಟ ಕಾರಣ ಕೊಪ್ಪಳ ತಾಲ್ಲೂಕಿನ ತುಂಗಭದ್ರಾ ಜಲಾಶಯದಲ್ಲಿ ಇಳಿಕೆಯಾದ ನೀರಿನ ಪ್ರಮಾಣ –ಪ್ರಜಾವಾಣಿ ಚಿತ್ರ/ಭರತ್‌ ಕಂದಕೂರ

‘ಅರೆಕಾಲಿಕ ಮಂತ್ರಿ’

ಚಿತ್ರದುರ್ಗ: ‘ಭ್ರಚ್ಟಾಚಾರದಲ್ಲಿ ಮುಳುಗಿರುವ ರಾಜ್ಯ ಸರ್ಕಾರ ನೀರಾವರಿ ಕ್ಷೇತ್ರವನ್ನು ಸಂಪೂರ್ಣ ನಿರ್ಲಕ್ಷಿಸಿದೆ. ರಾಜ್ಯದಲ್ಲಿ ಅರೆಕಾಲಿಕ ಜಲಸಂಪನ್ಮೂಲ ಸಚಿವರಿದ್ದು, ರೈತರು ಪರದಾಡುವಂತಾಗಿದೆ’ ಎಂದು ಸಂಸದ ಗೋವಿಂದ ಕಾರಜೋಳ ಮಂಗಳವಾರ ವ್ಯಂಗ್ಯವಾಡಿದರು.

ಇಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಜಲಸಂಪನ್ಮೂಲ ಇಲಾಖೆ
ಸಚಿವ ಸ್ಥಾನ ಹೊಂದುವುದರ ಜೊತೆಗೆ ಕೆಪಿಸಿಸಿ ಅಧ್ಯಕ್ಷರೂ ಆಗಿದ್ದಾರೆ. ಇಲಾಖೆಯ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತಿಲ್ಲ ಎಂದು ದೂರಿದರು.

ಹೊಸಪೇಟೆ ಬಳಿಯ ತುಂಗಭದ್ರಾ ಜಲಾಶಯದ 13ರಿಂದ 33ನೇ ಗೇಟ್‌ ನೋಡಿಕೊಳ್ಳುವ ಜವಾಬ್ದಾರಿ ರಾಜ್ಯ ಸರ್ಕಾರಕ್ಕಿದೆ. ಜಲಾಶಯ ಸುರಕ್ಷತಾ ಸಮಿತಿಯ ಸಲಹೆ ಸೂಚನೆಗಳನ್ನು ಮೊದಲೇ ಪಡೆಯಬೇಕಾಗಿತ್ತು’ ಎಂದು ಅಭಿಪ್ರಾಯಪಟ್ಟರು.

ಮಂಡಳಿ ನಿರ್ವಹಣೆ ಯಾರ ಕೈಯಲ್ಲಿದೆ?’

ಕೊಪ್ಪಳ: ಜಲಾಶಯದ ವಿಚಾರವನ್ನು ಬಿಜೆಪಿ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದು ಈ ವಿಷಯದಲ್ಲಿ ರಾಜಕಾರಣದ ಮಾತು ಆಡುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ‘ತುಂಗಭದ್ರಾ ಜಲಾಶಯದ ಸಂಪೂರ್ಣ ನಿರ್ವಹಣೆ ಜವಾಬ್ದಾರಿ ಜಲಾಶಯ ಮಂಡಳಿಯದ್ದಾಗಿದೆ. ಭಾರತ ಸರ್ಕಾರ ನೇಮಿಸಿದ ಅಧ್ಯಕ್ಷರು ಕೇಂದ್ರ ಜಲ ಆಯೋಗ ಆಂಧ್ರ ಪ್ರದೇಶ ತೆಲಂಗಾಣ ಮತ್ತು ಕರ್ನಾಟಕದ ಸದಸ್ಯರು ಮಂಡಳಿಯಲ್ಲಿರುತ್ತಾರೆ. ಇನ್ನೊಬ್ಬರ ಮೇಲೆ ಗೂಬೆ ಕೂರಿಸುವ ಬದಲು ವಿಶ್ಲೇಷಣೆ ಮಾಡುವುದು ಅಗತ್ಯ. ಆದ್ದರಿಂದ ಈ ವಿಷಯದಲ್ಲಿ ಯಾರನ್ನೂ ದೂಷಿಸುವುದಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT