ಮಂಡ್ಯ: ನಿವೃತ್ತ ತಹಶೀಲ್ದಾರ್, ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ನೌಕರ ದಂಪತಿ ಕೇವಲ 360 ದಿನಗಳಲ್ಲಿ ಸಾವಿರಕ್ಕೂ ಹೆಚ್ಚು ಪುಟದ ಕನ್ನಡ ಸತ್ಯವೇದ (ಬೈಬಲ್) ಕೃತಿಯನ್ನು ಕೈಬರಹದಲ್ಲಿ ಬರೆದು ಆಶ್ಚರ್ಯ ಸೃಷ್ಟಿಸಿದ್ದಾರೆ.

ಕೆಎಎಸ್ ಅಧಿಕಾರಿಯಾಗಿ ನಿವೃತ್ತರಾಗಿರುವ ಎಸ್.ಸನ್ನುತ, ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕಿಯಾಗಿ ನಿವೃತ್ತರಾಗಿರುವ ಬಿ.ರಮಾಬಾಯಿ ದಂಪತಿ ರಾಜ್ಯದಲ್ಲೇ ಮೊದಲ ಬಾರಿಗೆ ಕೈಬರಹದಲ್ಲಿಯೇ ಕನ್ನಡ ಬೈಬಲ್ ಬರೆದು ದಾಖಲೆ ಸೃಷ್ಟಿಸಿದ್ದಾರೆ. ನಗರದ ಕ್ರಿಶ್ಚಿಯನ್ ಕಾಲೊನಿ 2ನೇ ಕ್ರಾಸ್ನಲ್ಲಿ ವಿಶ್ರಾಂತ ಜೀವನ ಕಳೆಯುತ್ತಿರುವ ಈ ದಂಪತಿ ಬಹಳ ಶಿಸ್ತು, ಸಂಯಮದಿಂದ ಗುರಿ ಪೂರೈಸಿದ್ದಾರೆ. ಗ್ರಂಥದಲ್ಲಿರುವ ಅತ್ಯಂತ ಸ್ಫುಟ, ಸೊಗಸಾದ ಕನ್ನಡ ಅಕ್ಷರಗಳು ಕ್ರಿಸ್ತನ ವಾಕ್ಯಗಳ ಸಂದೇಶವಾಹಿನಿಯಾಗಿವೆ.

ಎಸ್.ಸನ್ನುತ ಅವರು ಮಂಡ್ಯ ಜಿಲ್ಲಾಡಳಿತದಲ್ಲಿ ವಿವಿಧ ಹುದ್ದೆ ನಿರ್ವಹಿಸಿದ್ದಾರೆ.ಅವರು ಪ್ರಾಮಾಣಿಕತೆ, ಶಿಸ್ತಿಗೆ ಹೆಸರಾಗಿದ್ದರು. ಪತ್ರ ಬರವಣಿಗೆಯಲ್ಲಿ ಪ್ರಸಿದ್ಧಿ ಪಡೆದು ಹಿರಿಯ ಅಧಿಕಾರಿಗಳ ನೆಚ್ಚಿನ ಸಿಬ್ಬಂದಿಯಾಗಿದ್ದರು. ತಮ್ಮ ಹಲವು ದಶಕಗಳ ಅನುಭವವನ್ನು ಒಂದುಗೂಡಿಸಿ ತಮ್ಮ 67ನೇ ವಯಸ್ಸಿನಲ್ಲಿ ಕನ್ನಡ ಬೈಬಲ್ ಬರೆದಿದ್ದಾರೆ. ಪತ್ನಿ ರಮಾಬಾಯಿ ಕೂಡ ಸಾಹಿತ್ಯ, ಸಂಗೀತದಲ್ಲಿ ಅಪಾರ ಪ್ರೀತಿಯುಳ್ಳವರಾಗಿದ್ದು 64ನೇ ವಯಸ್ಸಿನಲ್ಲಿ ಪತಿಯ ಪ್ರಯತ್ನಕ್ಕೆ ನೀರೆರೆದಿದ್ದಾರೆ.

ಸನ್ನುತ ಅವರು ಬೈಬಲ್ನ ಹಳೇ ಒಡಂಬಡಿಕೆ (ಕ್ರಿಸ್ತನ ಜನ್ಮ ಪೂರ್ವ) ಭಾಗ ಬರೆದರೆ ರಮಾಬಾಯಿ ಅವರು ಹೊಸ ಒಡಂಬಡಿಕೆ (ಕ್ರಿಸ್ತನ ಜನ್ಮ ನಂತರ) ಭಾಗವನ್ನುಬರೆದಿದ್ದಾರೆ. ಈ ಗ್ರಂಥ ಬೈಬಲ್ ಸೊಸೈಟಿ ಆಫ್ ಇಂಡಿಯಾ ಪ್ರಕಟಿಸಿರುವ ಸತ್ಯವೇದ ಕೃತಿಯ ತದ್ರೂಪವಾಗಿದ್ದು, ಅದೇ ಮಾದರಿಯಲ್ಲಿ ಒಂದು ಪುಟದ ಎರಡು ಭಾಗದಲ್ಲಿ ಕ್ರಿಸ್ತ ವಚನ ಬರೆದಿದ್ದಾರೆ.

ಕೈಬರಹವಾಗಿರುವ ಕಾರಣ ಮೂಲ ಕೃತಿಗಿಂತ ಕೊಂಚ ದೊಡ್ಡದಾಗಿದೆ. 45 ಸೆಂ.ಮೀ ಉದ್ದ, 29 ಸೆಂ.ಮೀ ಅಗಲದ ಹಾಳೆಗಳನ್ನು ಬಳಕೆ ಮಾಡಲಾಗಿದೆ. ಮೂಲ ಕೃತಿಯಲ್ಲಿ 1,364 ಪುಟಗಳಿದ್ದರೆ, ಕೈಬರಹದ ಕೃತಿಯಲ್ಲಿ 1,123 ಪುಟಗಳಿವೆ. ಸನ್ನತ ಅವರು ಬರೆದಿರುವ ಭಾಗದಲ್ಲಿ 844 ಪುಟಗಳಿದ್ದರೆ ರಮಾಬಾಯಿ ಅವರು ಬರೆದ ಭಾಗದಲ್ಲಿ 279 ಪುಟಗಳಿವೆ. ಎಲ್ಲೂ ವ್ಯಾಕರಣ ದೋಷ, ವಾಕ್ಯ ರಚನಾ ದೋಷವಿಲ್ಲ, ತಿದ್ದಿದ, ಗೀಚಿದ ಕುರುಹುಗಳಿಲ್ಲ. ಥೇಟ್ ಮುದ್ರಿತ ಪುಟದಂತೆಯೇ ಕೈಬರಹಕ್ಕಿಳಿಸಿರುವುದು ಸೋಜಿಗ ಮೂಡಿಸುತ್ತದೆ.

ಪ್ರೇರಣೆಯಾದ ಅಕ್ವಿಲ್ ಕೆರಿನ್: ಕ್ರಿಶ್ಚಿಯನ್ ಕಾಲೊನಿಯ 4ನೇ ಕ್ರಾಸ್ ನಿವಾಸಿ ಅಕ್ವಿಲ್ ಕೆರಿನ್ ಹಲವು ಭಾಷೆಗಳ ನೂರಾರು ಬೈಬಲ್ ಸಂಗ್ರಹಿಸಿದ್ದಾರೆ. ಕೈಬರಹದ ಕನ್ನಡ ಬೈಬಲ್ ಹುಡುಕಾಟದಲ್ಲಿದ್ದಾಗ ಅವರಿಗೆ ರಾಜ್ಯದಲ್ಲಿ ಯಾರೂ ಬರೆದಿಲ್ಲ ಎಂಬ ವಿಚಾರ ತಿಳಿದಿದೆ. ತಾವೇ ಬರೆಸಬೇಕು ಎನ್ನುವ ಚಿಂತನೆ ಹೊಳೆದಾಗ ಕೆ.ಸನ್ನುತ ಅವರನ್ನು ಸಂಪರ್ಕಿಸಿದ್ದಾರೆ. ಇದನ್ನು ಒಪ್ಪಿದ ಸನ್ನುತ ಅವರು ಯೋಗ ಮಾದರಿಯಲ್ಲಿ ಸತ್ಯವೇದಕ್ಕೆ ಕೈಬರಹ ರೂಪ ಕೊಟ್ಟಿದ್ದಾರೆ.

ಸನ್ನುತ–ರಮಾಬಾಯಿ ದಂಪತಿ ಕೈಬರಹಕ್ಕಾಗಿ ಹಾಕಿಕೊಂಡ ಕಾರ್ಯಸೂಚಿ ಸ್ಫೂರ್ತಿದಾಯಕವಾಗಿದೆ. 2020 ಆ.16ರಿಂದ ಇವರು ಕೈಬರಹ ಆರಂಭಿಸಿದರು. ಈ ವೇಳೆ ಕೋವಿಡ್ ಲಾಕ್ಡೌನ್ ಇದ್ದ ಕಾರಣ ಬರವಣಿಗೆಗೆ ಸಹಕಾರಿಯಾಗಿದೆ. ಬೆಳಿಗ್ಗೆ 2, ಸಂಜೆ 2 ಪುಟದಂತೆ ನಿತ್ಯ 4 ಪುಟ ಬರೆಯುತ್ತಾ ಸಾಗಿದ್ದಾರೆ. 2021 ಮೇ 16ಕ್ಕೆ ಬರವಣಿಗೆಯನ್ನು ಪೂರ್ಣಗೊಳಿಸಿದ್ದಾರೆ. ಸನ್ನುತ ಅವರು 8 ತಿಂಗಳು 23 ದಿನ, ರಮಾಬಾಯಿ ಅವರು 5 ತಿಂಗಳು 15 ದಿನದಲ್ಲಿ ಕೈಬರಹ ಪೂರೈಸಿದ್ದಾರೆ.

‘ನಮ್ಮ ಬದುಕಿನಲ್ಲಿ ಬಂದ ಅಪೂರ್ವ ಅವಕಾಶ ಎಂದೇ ನಾವು ಕೈಬರಹದಲ್ಲಿ ಸತ್ಯವೇದ ಬರೆದಿದ್ದೇವೆ. ತಾಳ್ಮೆ, ಶ್ರದ್ಧೆಯಿಂದ ಬೈಬಲ್ನ ಪ್ರತಿ ಶಬ್ದವನ್ನು ಅರ್ಥೈಸಿಕೊಂಡಿದ್ದೇವೆ. ಕೋವಿಡ್ ಅವಧಿ ನಮ್ಮ ಕಾರ್ಯಕ್ಕೆ ವರವಾಯಿತು. ಈ ಸೇವೆಯಿಂದ ನಮ್ಮ ಅಧ್ಯಾತ್ಮ ಜ್ಞಾನ ವೃದ್ಧಿಯಾಗಿದೆ. ಮುಂದಿನ ಪೀಳಿಗೆಗೆ ಇದು ನಮ್ಮ ಕೊಡುಗೆ ಎಂಬು ಭಾವಿಸಿದ್ದೇವೆ’ ಎಂದು ಎಸ್.ಸನ್ನುತ, ಬಿ.ರಮಾಬಾಯಿ ತಿಳಿಸಿದರು.

ಕ್ಲಾಸ್ಮೇಟ್ ಪೆನ್, 168 ರೀಫಿಲ್ಸ್

ಸತ್ಯವೇದ ಗ್ರಂಥಕ್ಕೆ ಕೈಬರಹ ರೂಪ ನೀಡಲು ಸನ್ನುತ–ರಮಾಬಾಯಿ ದಂಪತಿ ಕ್ಲಾಸ್ಮೇಟ್ ಆಕ್ಟೇನ್ ಪೆನ್ ಬಳಸಿದ್ದಾರೆ. ಬೈಬಲ್ನ 66 ಗ್ರಂಥ, 1,169 ಅಧ್ಯಾಯ, 31,086 ವಾಕ್ಯ, 7,83,137 ಪದ ಬರೆಯಲು ಅವರು ಬರೋಬ್ಬರಿ 168 ರೀಫಿಲ್ಸ್ ಬಳಸಿದ್ದಾರೆ, ಆ ಎಲ್ಲಾ ಖಾಲಿ ರೀಫಿಲ್ಸ್ ಸಂಗ್ರಹಿಸಿಟ್ಟಿದ್ದಾರೆ. ಒಟ್ಟು ಬೈಬಲ್ ಗ್ರಂಥ ರೂಪಗೊಂಡ ಪರಿಯ ಬಗ್ಗೆ ಪ್ರತ್ಯೇಕ ಡೈರಿಯೊಂದನ್ನು ಸಿದ್ಧಪಡಿಸಿದ್ದು ಅದರಲ್ಲಿ ಹಲವು ಆಶ್ಚರ್ಯಗಳಿವೆ.

ಈ ಮಹಾಗ್ರಂಥವು ಅಕ್ವಿಲ್ ಕೆರಿನ್ ಅವರ ಸಂಗ್ರಹಕ್ಕೆ ಹೊಸ ಸೇರ್ಪಡೆಯಾಗುತ್ತಿದೆ, ಅವರು ನಗರದಲ್ಲಿ ಬೈಬಲ್ ಮ್ಯೂಸಿಯಂ ನಿರ್ಮಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಅದಕ್ಕೆ ಪೂರ್ವಭಾವಿಯಾಗಿ ಕಳೆದ ಸೆ.12ರಂದು ಕ್ರೈಸ್ತ ಧರ್ಮಗುರುಗಳ ಸಮ್ಮುಖದಲ್ಲಿ ಕನ್ನಡ ಕೈಬರಹದ ಬೈಬಲ್ ಗ್ರಂಥದ ಪ್ರತಿಷ್ಠಾಪನಾ ಕಾರ್ಯ ನೆರವೇರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.