ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅನ್ನದಾತರ ಮನಗೆದ್ದ ‘ಮಂಡ್ಯ ಜ್ಯೋತಿ’

Published 21 ಜುಲೈ 2024, 4:52 IST
Last Updated 21 ಜುಲೈ 2024, 4:52 IST
ಅಕ್ಷರ ಗಾತ್ರ

ಮಂಡ್ಯ: ಕಡಿಮೆ ನೀರು, ಹೆಚ್ಚು ಇಳುವರಿ ಮತ್ತು ರೋಗನಿರೋಧಕ ಶಕ್ತಿ ಅಧಿಕವಾಗಿರುವ ಸುಧಾರಿತ ಹೊಸ ಭತ್ತದ ತಳಿಗಳನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ರೈತರಿಗೆ ಪರಿಚಯಿಸಿದೆ. ಈ ತಳಿಗಳ ಮಹತ್ವ ಅರಿತ ರೈತರು ಬೆಳೆಯಲು ಉತ್ಸಾಹ ತೋರುತ್ತಿದ್ದಾರೆ. 

ಮಂಡ್ಯ ಜ್ಯೋತಿ (ಕೆ.ಎಂ.ಪಿ.-220), ಕೆ.ಎಂ.ಪಿ.-225, ಆರ್.ಎನ್.ಆರ್-15048, ಕೆ.ಎಂ.ಪಿ.-175 (ದಕ್ಷ) ಈ ನಾಲ್ಕು ಸುಧಾರಿತ ತಳಿಗಳನ್ನು ಕೃಷಿ ವಿ.ವಿ ಅಭಿವೃದ್ಧಿಪಡಿಸಿದೆ. 

ಭತ್ತವು ರಾಜ್ಯದ ನೀರಾವರಿ ಪ್ರದೇಶಗಳಲ್ಲಿ ಬೆಳೆಯಲಾಗುತ್ತಿರುವ ಒಂದು ಪ್ರಮುಖ ಆಹಾರ ಬೆಳೆ. ರಾಜ್ಯದ ದಕ್ಷಿಣ ಜಿಲ್ಲೆಗಳ ಮೈದಾನ ಪ್ರದೇಶಕ್ಕೆ ಬಿತ್ತನೆ ಕಾಲ, ನೀರಿನ ಲಭ್ಯತೆ, ಕೀಟ ಹಾಗೂ ರೋಗದ ತೀವ್ರತೆ ಮತ್ತು ಮಣ್ಣಿನ ಗುಣಲಕ್ಷಣಗಳನ್ನು ಗಮನದಲ್ಲಿಟ್ಟುಕೊಂಡು ಅಧಿಕ ಇಳುವರಿ ನೀಡುವ ತಳಿಗಳು ಹಾಗೂ ಹೈಬ್ರಿಡ್‌ಗಳನ್ನು ರೈತರಿಗೆ ಪರಿಚಯಿಸಲಾಗಿದೆ. 

ಮಂಡ್ಯ ಜ್ಯೋತಿ:

ಹಳೇ ಮೈಸೂರು ಭಾಗವಾದ ಮಂಡ್ಯ, ಮೈಸೂರು, ಹಾಸನ ಹಾಗೂ ಚಾಮರಾಜನಗರ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಕೆಂಪು ಅಕ್ಕಿ ಭತ್ತದ ತಳಿಯಾದ ‘ಜ್ಯೋತಿ ಭತ್ತ’ವನ್ನು ರೈತರು ಬೆಳೆಯುತ್ತಾರೆ. ಈ ತಳಿಯು ಅನೇಕ ರೋಗಗಳಿಗೆ ತುತ್ತಾಗುತ್ತಿರುವುದರಿಂದ ರೋಗ ನಿಯಂತ್ರಿಸಲು ಹೆಚ್ಚಿನ ರಾಸಾಯನಿಕ ಔಷಧಗಳನ್ನು ಬಳಸುವ ಮೂಲಕ ಅಧಿಕ ಖರ್ಚು ಮಾಡಿ ಭತ್ತವನ್ನು ಬೆಳೆಯಲಾಗುತ್ತಿದೆ.

ಇದನ್ನು ಮನಗಂಡ ಕೃಷಿ ವಿಜ್ಞಾನಿಗಳು, ಜ್ಯೋತಿ ಭತ್ತದ ತಳಿಯಲ್ಲಿ ಬೆಂಕಿರೋಗ ನಿರೋಧಕತೆಯನ್ನು ಉತ್ತಮಪಡಿಸಿ, ಜ್ಯೋತಿ ತಳಿಯ ಕಾಳುಗಳನ್ನು ಹೋಲುವಂತಹ ಕೆಂಪು ಅಕ್ಕಿ ಭತ್ತದ ತಳಿಯಾದ ‘ಮಂಡ್ಯ ಜ್ಯೋತಿ’ (ಕೆ.ಎಂ.ಪಿ.-220) ಅನ್ನು ಬಿಡುಗಡೆ ಮಾಡಿದ್ದಾರೆ. ಈ ತಳಿಯು ರೈತರ ಮನ ಗೆಲ್ಲುವಲ್ಲಿ ದಾಪುಗಾಲು ಇಟ್ಟಿದೆ.  

ಬೆಂಕಿ ನಿರೋಧಕ ಶಕ್ತಿ:

ಐ.ಆರ್.-64 ಎಂಬ ಭತ್ತದ ತಳಿಯು ಕರ್ನಾಟಕದಲ್ಲಿ ಅಲ್ಲದೇ ದೇಶದಾದ್ಯಂತ ಹೆಚ್ಚು ಜನಪ್ರಿಯವಾದ ಹಾಗೂ ಹಳೆ ತಳಿಯಾಗಿದೆ. ಬಿಡುಗಡೆಗೊಂಡಾಗ ರೋಗ ನಿರೋಧಕತೆಯನ್ನು ಹೊಂದಿದ್ದ ಐ.ಆರ್.-64 ಭತ್ತದ ತಳಿಯು ಕಳೆದ ಸುಮಾರು ವರ್ಷಗಳಿಂದ ತನ್ನ ರೋಗ ನಿರೋಧಕತೆಯನ್ನು ಕಳೆದುಕೊಂಡು ಬೆಂಕಿರೋಗಕ್ಕೆ ತುತ್ತಾಗುತ್ತಿದೆ.

ಐ.ಆರ್.-64 ಅನ್ನು ಹೋಲುವ ಹಾಗೂ ಬೆಂಕಿರೋಗ ನಿರೋಧಕತೆಯುಳ್ಳ ಹೊಸ ಭತ್ತದ ತಳಿ ‘ಕೆ.ಎಂ.ಪಿ.-225’ ಅನ್ನು ಬೆಳೆದು ಬೆಂಕಿರೋಗದಿಂದಾಗುವ ನಷ್ಟದಿಂದ ಪಾರಾಗಬಹುದು ಎನ್ನುತ್ತಾರೆ ಕೃಷಿ ವಿಜ್ಞಾನಿಗಳು. 

‘ಈ ಎಲ್ಲಾ ಸುಧಾರಿತ ಭತ್ತದ ತಳಿಗಳನ್ನು ಮಂಡ್ಯ, ಮೈಸೂರು, ಹಾಸನ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಜುಲೈ ತಿಂಗಳ ಮೊದಲ ವಾರದ ನಂತರದಿಂದ ತಿಂಗಳ ಕೊನೆಯೊಳಗೆ ಬಿತ್ತನೆ ಮಾಡಿ ಆಗಸ್ಟ್ ತಿಂಗಳಲ್ಲಿ ನಾಟಿ ಮಾಡಲು ಸೂಕ್ತವಾಗಿರುತ್ತದೆ. ಈ ತಳಿಗಳ ಬಿತ್ತನೆ ಬೀಜಗಳು ಮಂಡ್ಯದ ವಿ.ಸಿ. ಫಾರಂನಲ್ಲಿ ಹಾಗೂ ಕೆಲವು ರೈತರಲ್ಲಿ ದೊರೆಯುತ್ತವೆ’ ಎಂದು ಭತ್ತದ ತಳಿ ವಿಜ್ಞಾನಿ ಡಾ.ಸಿ.ಎ. ದೀಪಕ್‌ ಮಾಹಿತಿ ನೀಡಿದ್ದಾರೆ.– ಪುಟ್ಟಸ್ವಾಮಿಗೌಡ ಪಟೇಲ್‌ ರಾಯಸಮುದ್ರ ಕೆ.ಆರ್.ಪೇಟೆ ತಾಲ್ಲೂಕು.

‘ಮಂಡ್ಯ ಜ್ಯೋತಿ’ ಭತ್ತದ ತೆನೆ
‘ಮಂಡ್ಯ ಜ್ಯೋತಿ’ ಭತ್ತದ ತೆನೆ
ಕೃಷಿ ವಿಶ್ವವಿದ್ಯಾಲಯಗಳು ಆವಿಷ್ಕರಿಸಿರುವ ಸುಧಾರಿತ ತಳಿಗಳನ್ನು ಸಬ್ಸಿಡಿ ದರದಲ್ಲಿ ರೈತ ಸಂಪರ್ಕ ಕೇಂದ್ರದಲ್ಲಿ ಮಾರಾಟ ಮಾಡಿದರೆ ರೈತರಿಗೆ ಪ್ರಯೋಜನವಾಗುತ್ತದೆ 
– ಜೆ.ಎಂ.ಕುಮಾರ್‌ ಪ್ರಗತಿಪರ ರೈತ ಕೆ.ಆರ್‌. ನಗರ.
ಮಂಡ್ಯ ಜ್ಯೋತಿ’ –ಪ್ರತಿ ಎಕರೆಗೆ 24 ಕ್ವಿಂಟಲ್‌ ಇಳುವರಿ ಸಿಕ್ಕಿದೆ. ಈ ಕೆಂಪಕ್ಕಿ ಊಟಕ್ಕೆ ಚೆನ್ನಾಗಿದೆ ಜಾನುವಾರುಗಳಿಗೆ ಉತ್ತಮ ಹುಲ್ಲು ಕೂಡ ಸಿಗುತ್ತದೆ. ಈ ಬಾರಿ ಮೂರು ಎಕರೆಯಲ್ಲಿ ಬೆಳೆಯಲು ಒಟ್ಲು ಬಿಟ್ಟಿದ್ದೇನೆ
– ಪುಟ್ಟಸ್ವಾಮಿಗೌಡ ಪಟೇಲ್‌ ರಾಯಸಮುದ್ರ ಕೆ.ಆರ್.ಪೇಟೆ ತಾಲ್ಲೂಕು.

‘ಮಧುಮೇಹಿಗಳಿಗೆ ಉತ್ತಮ ತಳಿ’

ತೆಲಂಗಾಣ ಕೃಷಿ ವಿಶ್ವವಿದ್ಯಾನಿಲಯದಿಂದ ಅಭಿವೃದ್ಧಿಗೊಂಡು ದೇಶದಾದ್ಯಂತ ಜನಪ್ರಿಯವಾಗುತ್ತಿರುವ ಭತ್ತದ ತಳಿ ಆರ್.ಎನ್.ಆರ್-15048. ಈ ತಳಿಯ ಕಾಳುಗಳು ಅತಿ ಸಣ್ಣದಾಗಿದ್ದು ಉತ್ತಮ ದರ್ಜೆಯ ಅಕ್ಕಿಯನ್ನು ಹೊಂದಿರುತ್ತದೆ. ವ್ಯಾಪಾರ ಹೊಂದಾಣಿಕೆಯಿರುವ ಈ ತಳಿಯ ಧಾನ್ಯಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ. ಈ ತಳಿಯ ಅಕ್ಕಿಯು ಅತಿ ಕಡಿಮೆ ಗೈಸೆಮಿಕ್ ಸೂಚ್ಯಂಕ ಹೊಂದಿರುವ ಕಾರಣ ಮಧುಮೇಹಿಗಳಿಗೆ ಹೃದಯ ಸಂಬಂಧಿ ಸಮಸ್ಯೆಯಿರುವವರಿಗೆ ಹಾಗೂ ದೇಹದ ತೂಕ ಕಡಿಮೆ ಮಾಡಲು ಇಚ್ಛೆಯುಳ್ಳವರು ಬಳಸಲು ಸೂಕ್ತವಾಗಿದೆ ಎನ್ನುತ್ತಾರೆ ಮಂಡ್ಯದ ವಿ.ಸಿ.ಫಾರಂನ ವಲಯ ಕೃಷಿ ಸಂಶೋಧನಾ ಕೇಂದ್ರದ ಭತ್ತದ ತಳಿ ವಿಜ್ಞಾನಿ ಡಾ.ಸಿ.ಎ. ದೀಪಕ್‌. 

ಕಡಿಮೆ ನೀರಿನಲ್ಲಿ ಬೆಳೆಯುವ ‘ದಕ್ಷ’

ಕೆ.ಎಂ.ಪಿ.-175 (ದಕ್ಷ) ಭತ್ತದ ತಳಿಯು ನೀರಿನ ಲಭ್ಯತೆ ಕಡಿಮೆಯಿರುವಲ್ಲಿ ಹಾಗೂ ಕೊಳವೆಬಾವಿ ಕೃಷಿ ಹೊಂಡಗಳಿಂದ ನೀರು ಹಾಯಿಸಿ ಕಡಿಮೆ ನೀರು ಉಪಯೋಗಿಸಿ ಬೆಳೆಯಲು ಸೂಕ್ತವಾಗಿದೆ. ‘ದಕ್ಷ’ ಎಂದು ಕರೆಯಲ್ಪಡುವ ಈ ತಳಿಯನ್ನು ಏರೋಬಿಕ್ ಮತ್ತು ಅರೆ ನೀರಾವರಿ ಪದ್ಧತಿಗಳಲ್ಲಿ ಬೆಳೆಯಲು ಅಭಿವೃದ್ಧಿ ಪಡಿಸಲಾಗಿದೆ. ಮಣ್ಣಿನಗುಣಕ್ಕೆ ಅನುಗುಣವಾಗಿ 6-7 ದಿನಗಳಿಗೊಮ್ಮೆ ನೀರು ನೀಡಿ ನೀರು ನಿಲ್ಲಿಸದೆ ಭತ್ತವನ್ನು ಬೆಳೆಯಬಹುದಾಗಿದೆ. ಈ ತಳಿಯು 115 ರಿಂದ 120 ದಿನಗಳಲ್ಲಿ ಕಟಾವಿಗೆ ಬರುವ ಅಲ್ಪಾವಧಿ ತಳಿಯಾಗಿರುತ್ತದೆ. ಎಕರೆಗೆ 16 ರಿಂದ 18 ಕ್ವಿಂಟಲ್ ಧಾನ್ಯದ ಇಳುವರಿ ನೀಡುವ ಸಾಮರ್ಥ್ಯ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT