ಕನ್ನಡಮ್ಮನ ಮರೆಯದಿರಿ; ನಿರ್ಮಲಾನಂದನಾಥ
ಮಂಡ್ಯ: ‘ಸಾಹಿತ್ಯ ಸಮ್ಮೇಳನ ನಮ್ಮ ತಾಯಿಯ ಹಬ್ಬ. ಅಸ್ಮಿತೆ ಶಕ್ತಿ ತಂದುಕೊಟ್ಟ ಭಾಷೆಯ ಹಬ್ಬ. ಕನ್ನಡಮ್ಮನನ್ನು ಮರೆತರೆ ಒಳ್ಳೆಯದಾಗುವುದಿಲ್ಲ’ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು. ‘ನಮ್ಮ ಭಾಷೆ ನಮಗೇನು ಕೊಡುತ್ತದೆ ಎಂಬುದು ವಿದೇಶಕ್ಕೆ ಹೋದಾಗಷ್ಟೇ ಗೊತ್ತಾಗುತ್ತದೆ. ವಿದೇಶಕ್ಕೆ ಹೋಗಿ ನೆಲೆಸಿದವರು ಭಾಷೆಯ ಜೊತೆಗೆ ತಮ್ಮ ಪೋಷಕರನ್ನೂ ಮರೆತರು’ ಎಂದು ವಿಷಾದಿಸಿದರು. ‘ಎಂಜಿನಿಯರಿಂಗ್ ಕೋರ್ಸ್ ಅನ್ನು ಕನ್ನಡದಲ್ಲಿ ಕಲಿಯಲು ಅವಕಾಶವಿದ್ದರೂ ವಿದ್ಯಾರ್ಥಿಗಳು ಬರುತ್ತಿಲ್ಲ. ಕನ್ನಡದಲ್ಲಿ ಕಲಿತವರಿಗೆ ಉದ್ಯೋಗ ಸಿಗುವ ವಾತಾವರಣ ಸೃಷ್ಟಿಯಾದರೆ ಸಹಜವಾಗಿಯೇ ಬರುತ್ತಾರೆ’ ಎಂದರು.