ಕೆಸರೆ ಜಮೀನಿಗೆ ಪಾರ್ವತಿ ಒಡತಿ!
ಮಂಡ್ಯ: ಮೈಸೂರು ತಾಲ್ಲೂಕಿನ ಕೆಸರೆ ಗ್ರಾಮದ ಸರ್ವೆ ಸಂಖ್ಯೆ 464ರಲ್ಲಿ ಸ್ವಾಧೀನಪಡಿಸಿಕೊಂಡ 3.16 ಎಕರೆ ಜಮೀನಿಗೆ ಬದಲಾಗಿ ಮಾಲೀಕರಾದ ಪಾರ್ವತಿ ಸಿದ್ದರಾಮಯ್ಯ ಅವರಿಗೆ ಮುಡಾ ಒಟ್ಟು 38 ಸಾವಿರ ಚ.ಅಡಿ ವಿಸ್ತೀರ್ಣದ 14 ಬದಲಿ ನಿವೇಶನ ನೀಡಿದೆ. ಹೀಗಿದ್ದರೂ ಆ ಜಮೀನಿಗೆ ಇನ್ನೂ ಪಾರ್ವತಿ ಅವರೇ ಒಡತಿ! ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕಈ ಸಂಬಂಧ ದಾಖಲೆ ಬಿಡುಗಡೆ ಮಾಡಿದರು.
‘2001ರಲ್ಲಿ ಮುಡಾ ಇಲ್ಲಿ ಬಡಾವಣೆ ನಿರ್ಮಿಸಿದೆ. 2010ರಲ್ಲಿ ಜಮೀನನ್ನು ಪಾರ್ವತಿ ಅವರು ಖರೀದಿಸಿದ್ದು, 2014ರಲ್ಲಿ ಪರ್ಯಾಯ ನಿವೇಶನ ಕೋರಿದ್ದರು. 2022ರ ಜನವರಿ ಯಲ್ಲಿ ಅವರಿಗೆ ಮುಡಾ ಬದಲಿ ನಿವೇಶನಗಳನ್ನೂ ನೀಡಿದ್ದಾಗಿದೆ. ಆದರೆ, ಆರ್‌ಟಿಸಿ ದಾಖಲೆಗಳಲ್ಲಿ ಮಾತ್ರ ಇನ್ನೂ ಮೂಲ ಮಾಲೀಕರ ಹೆಸರೇ ಇದೆ. ಎಲ್ಲಿಯೂ ಜಮೀನು ಮುಡಾ ವಶದಲ್ಲಿದೆ ಎಂಬ ಉಲ್ಲೇಖವೇ ಇಲ್ಲ‘ ಎಂದು ವಿವರಿಸಿದರು. ‘ಮುಡಾದಿಂದ ವಶಪಡಿಸಿಕೊಂಡ ಜಮೀನಿಗೆ ಶೇ 50:50 ಯೋಜನೆ ಅಡಿ ಬದಲಿ ನಿವೇಶನ ಕೋರಿ ಜಮೀನಿನ ಮಾಲೀಕರಾದ ಪಾರ್ವತಿ 2021ರ ಅಕ್ಟೋಬರ್ 25ರಂದು ಮುಡಾ ಆಯುಕ್ತರಿಗೆ ಪತ್ರ ಬರೆದಿದ್ದರು. ಅದಕ್ಕೆ ಆಯುಕ್ತರು, ‘ಕೂಡಲೇ ಕಡತದಲ್ಲಿ ಮಂಡಿಸಿ’ ಎಂದು ಪತ್ರದ ಮೇಲೆ ಷರಾ ಬರೆದಿದ್ದರು. ಅದೇ ಪತ್ರದಲ್ಲಿ ಪಾರ್ವತಿ ಅವರು ‘ 2001ರಲ್ಲಿಯೇ ಈ ಜಮೀನಿನಲ್ಲಿ ಮುಡಾ ನಿವೇಶನ, ರಸ್ತೆ, ಉದ್ಯಾನವನ್ನು ನಿರ್ಮಿಸಿ ಹಂಚಿಕೆ ಮಾಡಿದೆ’ ಎಂದು ಉಲ್ಲೇಖಿಸಿದ್ದರು’ ಎಂದು ಹೇಳಿದರು.