ಶುಕ್ರವಾರ, 5 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಚಾರ ನಿಯಮ ಉಲ್ಲಂಘನೆ: ಒಂದೇ ತಿಂಗಳಲ್ಲಿ ₹8.99 ಕೋಟಿ ದಂಡ!

ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಅಧಿಕ
Published 3 ಜುಲೈ 2024, 5:03 IST
Last Updated 3 ಜುಲೈ 2024, 5:03 IST
ಅಕ್ಷರ ಗಾತ್ರ

ಮಂಡ್ಯ: ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ (ಎನ್‌.ಎಚ್‌–275) ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಒಂದೇ ತಿಂಗಳಲ್ಲಿ (ಜೂನ್‌ 1ರಿಂದ 30ರವರೆಗೆ) 1,61,491 ಪ್ರಕರಣಗಳನ್ನು ದಾಖಲಿಸಿಕೊಂಡ ಪೊಲೀಸರು, ಬರೋಬ್ಬರಿ ₹8.99 ಕೋಟಿ ದಂಡ ವಿಧಿಸಿದ್ದಾರೆ. 

ಆ ಪೈಕಿ, 9,003 ಪ್ರಕರಣಗಳಿಗೆ ಸಂಬಂಧಿಸಿ ₹48.23 ಲಕ್ಷ ದಂಡವಷ್ಟೇ ಸಂಗ್ರಹವಾಗಿದೆ. ಬಾಕಿ 1,52,488 ಪ್ರಕರಣಗಳ ₹8.51 ಕೋಟಿ ದಂಡವನ್ನು ವಾಹನ ಮಾಲೀಕರು ಪಾವತಿಸಿಲ್ಲ. 

ಸೀಟ್‌ ಬೆಲ್ಟ್‌ ಧರಿಸದಿದ್ದರೆ ಮತ್ತು ಪಥ ಶಿಸ್ತು ಉಲ್ಲಂಘನೆಗೆ ತಲಾ ₹500, ಅತಿವೇಗಕ್ಕೆ ₹1,000 ಮತ್ತು ಚಾಲನೆ ವೇಳೆ ಮೊಬೈಲ್‌ ಬಳಕೆಗೆ ₹3,000 ದಂಡ ವಿಧಿಸಲಾಗುತ್ತಿದೆ. ಸೀಟ್‌ ಬೆಲ್ಟ್‌ ಧರಿಸದ ಪ್ರಕರಣಗಳೇ ಅತಿಹೆಚ್ಚಿವೆ.

ಐ.ಟಿ.ಎಂ.ಎಸ್‌ ಕಣ್ಗಾವಲು: ಹೆದ್ದಾರಿಯ ಆಯ್ದ 12 ಸ್ಥಳಗಳಲ್ಲಿ ₹3.5 ಕೋಟಿ ವೆಚ್ಚದಲ್ಲಿ ‘ಇಂಟಲಿಜೆಂಟ್‌ ಟ್ರಾಫಿಕ್‌ ಮ್ಯಾನೇಜ್‌ಮೆಂಟ್‌ ಸಿಸ್ಟಂ’ (ಐ.ಟಿ.ಎಂ.ಎಸ್‌) ಕ್ಯಾಮೆರಾಗಳನ್ನು ಅಳವಡಿಸಿದ್ದು, ಜೂನ್‌ 1ರಿಂದ ಸಂಚಾರ ನಿಯಮ ಉಲ್ಲಂಘನೆಗಳು ದಾಖಲಾಗುತ್ತಿವೆ. ಉಲ್ಲಂಘಿಸಿದವರಿಗೆ ತಕ್ಷಣ ‘ಇ–ಚಲನ್‌’ ಮೂಲಕ ನೋಟಿಸ್‌ ರವಾನೆಯಾಗುತ್ತಿದೆ. 

‘ನಿಯಮ ಉಲ್ಲಂಘಿಸಿದ ಸ್ಥಳ, ದಿನಾಂಕ, ಸಮಯ, ಉಲ್ಲಂಘನೆಯ ಬಗೆ ಹಾಗೂ ವಾಹನ ನೋಂದಣಿ
ಸಂಖ್ಯೆ ಸಹಿತ ಮಾಲೀಕರ ಮೊಬೈಲ್‌ ಫೋನ್‌ಗೆ ಎಸ್‌.ಎಂ.ಎಸ್‌. ರವಾನೆಯಾಗುತ್ತದೆ. ಕಳುಹಿಸಿದ ಲಿಂಕ್‌ ಮೂಲಕ ದಂಡ ಪಾವತಿಸಬಹುದು. ಉಲ್ಲಂಘನೆ ಬಗ್ಗೆ ಬೆಂಗಳೂರಿನ ಕಂಟ್ರೋಲ್‌ ರೂಂನಲ್ಲಿ ನಿರಂತರ ಕಣ್ಗಾವಲಿಡಲಾಗಿದೆ’ ಎಂದು ಮಂಡ್ಯ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ಯತೀಶ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.  

60 ಕ್ಯಾಮೆರಾ: 119 ಕಿ.ಮೀ. ಉದ್ದವಿರುವ ಪ್ರವೇಶ ನಿಯಂತ್ರಿತ ಹೆದ್ದಾರಿ ಆರಂಭವಾದ ನಂತರ ಬೆಂಗಳೂರು–ಮೈಸೂರು ನಡುವಿನ ಪ್ರಯಾಣದ ಅವಧಿ 3 ಗಂಟೆಯಿಂದ ಸರಾಸರಿ 90 ನಿಮಿಷಕ್ಕೆ ಇಳಿದಿದೆ. 

‘ವೇಗದ ಮಿತಿ ಗಂಟೆಗೆ 100 ಕಿ.ಮೀ. ನಿಗದಿಪಡಿಸಿದ್ದು, ಅತಿವೇಗದ ಮೇಲೆ ಕಣ್ಗಾವಲಿಡಲು ಹೆದ್ದಾರಿ ಪ್ರಾಧಿಕಾರದಿಂದ 60 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ನಂಬರ್ ಪ್ಲೇಟ್‌ ಅನ್ನು ಸ್ವಯಂಚಾಲಿತವಾಗಿ ಗುರುತಿಸಬಲ್ಲ ಕ್ಯಾಮೆರಾಗಳು, ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣದ ಸಮಯವನ್ನೂ ಗುರುತಿಸುತ್ತವೆ’ ಎನ್ನುತ್ತಾರೆ ಪ್ರಾಧಿಕಾರದ ಅಧಿಕಾರಿಗಳು.

Highlights - ಐ.ಟಿ.ಎಂ.ಎಸ್‌ ಕ್ಯಾಮೆರಾದಲ್ಲಿ ನಿಯಮ ಉಲ್ಲಂಘನೆ ದಾಖಲು ಸೀಟ್‌ ಬೆಲ್ಟ್‌ ಧರಿಸದ ಪ್ರಕರಣಗಳೇ ಹೆಚ್ಚು ಒಂದೇ ತಿಂಗಳಲ್ಲಿ ದಾಖಲೆಯ ದಂಡ ವಿಧಿಸಿದ ಪೊಲೀಸರು

Quote -

ಹೆದ್ದಾರಿಗಳಲ್ಲಿ ಸಂಚರಿಸುವ ವಾಹನ ಚಾಲಕರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸುರಕ್ಷಿತ ಪ್ರಯಾಣಕ್ಕೆ ಆದ್ಯತೆ ನೀಡಬೇಕು – ಅಲೋಕ್‌ಕುಮಾರ್‌ ಎಡಿಜಿಪಿ ಸಂಚಾರ ಮತ್ತು ರಸ್ತೆ ಸುರಕ್ಷತೆ

Cut-off box - ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ವಿವರ  ನಿಯಮ ಉಲ್ಲಂಘನೆ;ಪ್ರಕರಣಗಳ ಸಂಖ್ಯೆ ಪಥ ಶಿಸ್ತು ಉಲ್ಲಂಘನೆ;12609 ಟ್ರಿಪಲ್‌ ರೈಡಿಂಗ್‌;1087 ಹೆಲ್ಮೆಟ್‌ ಧರಿಸದಿರುವುದು;9079 ಚಾಲನೆ ವೇಳೆ ಮೊಬೈಲ್‌ ಬಳಕೆ;1830 ಸೀಟ್‌ ಬೆಲ್ಟ್ ಧರಿಸದಿರುವುದು;128631 ಅತಿ ವೇಗ;7671 ವಿರುದ್ಧ ದಿಕ್ಕಿನಲ್ಲಿ ಪ್ರಯಾಣ;7 ನೋ ಎಂಟ್ರಿ;577

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT