ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು– ಕುಶಾಲನಗರ ಮಾ‌ರ್ಗಕ್ಕೆ ಕ್ರಮ: ವಿ.ಸೋಮಣ್ಣ

ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಭರವಸೆ; ಮೈಸೂರು ರೈಲು ನಿಲ್ದಾಣ ಅಭಿವೃದ್ಧಿಗೆ ಕ್ರಮ
Published : 14 ಸೆಪ್ಟೆಂಬರ್ 2024, 6:27 IST
Last Updated : 14 ಸೆಪ್ಟೆಂಬರ್ 2024, 6:27 IST
ಫಾಲೋ ಮಾಡಿ
Comments

ಮೈಸೂರು: ‘ಹೆಜ್ಜಾಲ–ಚಾಮರಾಜನಗರ, ಮೈಸೂರು–ಕುಶಾಲನಗರ ರೈಲು ಮಾರ್ಗ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದು ಸೇರಿದಂತೆ ಮೈಸೂರು ಭಾಗದಲ್ಲಿ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ ನೀಡಲಾಗುವುದು. ಮೈಸೂರು ಕೇಂದ್ರ ರೈಲು ನಿಲ್ದಾಣದಲ್ಲಿ ಬೆಂಗಳೂರಿನಂತೆಯೇ ಹಲವು ಸೌಲಭ್ಯಗಳು ದೊರೆಯುವಂತೆ ಅಭಿವೃದ್ಧಿಪಡಿಸಲಾಗುವುದು’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಭರವಸೆ ನೀಡಿದರು.

ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಇಲ್ಲಿನ ಡಿಆರ್‌ಎಂ ಕಚೇರಿಯಲ್ಲಿ ಇಲಾಖೆಯ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಶುಕ್ರವಾರ ಅವರು ಮಾತನಾಡಿದರು.

‘ತಮಿಳುನಾಡಿನ ಸತ್ಯಮಂಗಲ ಕಾಡಿನಲ್ಲಿ ರೈಲು ಮಾರ್ಗ ಹಾದು ಹೋಗುವುದಕ್ಕೆ ವಿರೋಧ ವ್ಯಕ್ತವಾಗಿತ್ತು. ಈಗ ಅದನ್ನು ಬಿಟ್ಟು 142 ಕಿ.ಮೀ. ಉದ್ದದ ಹೊಸ ಯೋಜನೆಗೆ ಅಂದರೆ ಹೆಜ್ಜಾಲದಿಂದ–ಸಂತೇಮರಹಳ್ಳಿ ಮೂಲಕ ಚಾಮರಾಜನಗರಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ನಿರ್ಮಿಸಲಾಗುವುದು. ₹1,380 ಕೋಟಿ ಮೊತ್ತದ ಯೋಜನೆ ಇದಾಗಿದೆ’ ಎಂದು ತಿಳಿಸಿದರು.

‘ಮೈಸೂರು– ಕುಶಾಲನಗರ ರೈಲು ಮಾರ್ಗ ನಿರ್ಮಾಣಕ್ಕೆ (89 ಕಿ.ಮೀ.) ₹3,084 ಕೋಟಿ ಖರ್ಚಾಗಲಿದೆ. ಇದಕ್ಕೆ ಸರ್ಕಾರದಿಂದ ಅನುಮೋದನೆ ‌ಕೊಡಿಸಿಕೊಡಲಾಗುವುದು. ಇದಕ್ಕಾಗಿ ಚಾಲನೆ ನೀಡಲಾಗಿದೆ. ಅಗತ್ಯವಿರುವ ಜಾಗವನ್ನು ರಾಜ್ಯ ಸರ್ಕಾರದಿಂದ ಕೊಡಿಸಿಕೊಡಬೇಕು’ ಎಂದು ಸಭೆಯಲ್ಲಿದ್ದ ಶಾಸಕ ತನ್ವೀರ್‌ ಸೇಠ್ ಅವರನ್ನು ಕೋರಿದರು.

2025ರೊಳಗೆ ಅಭಿವೃದ್ಧಿ: ‘ಅಮೃತ ಭಾರತ ಯೋಜನೆಯಡಿ ₹330 ಕೋಟಿ ವೆಚ್ಚದಲ್ಲಿ ಮೈಸೂರು ವಿಭಾಗದಲ್ಲಿ 15 ನಿಲ್ದಾಣಗಳನ್ನು 2025ರೊಳಗೆ ಅಭಿವೃದ್ಧಿಪಡಿಸಲಾಗುವುದು. ಅಶೋಕಪುರಂನಲ್ಲಿರುವ ರೈಲ್ವೆ ಕಾರ್ಯಾಗಾರವನ್ನು ಮೇಲ್ದರ್ಜೆಗೇರಿಸಲು ₹59.40 ಕೋಟಿ ಬಿಡುಗಡೆಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಆಗಬೇಕಿರುವ ಕೆಲಸಗಳೇನು ಎಂಬ ಪ್ರಸ್ತಾವವನ್ನು ಮೂರು ದಿನಗಳಲ್ಲಿ ಸಿದ್ಧಪಡಿಸಿ ಸಲ್ಲಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಮೈಸೂರಿನ ವರ್ತುಲ ರಸ್ತೆಯಲ್ಲಿ ನಾಲ್ಕು ಕಡೆ ನಿರ್ಮಾಣವಾಗುತ್ತಿರುವ ಅಂಡರ್‌ಪಾಸ್ ಹಾಗೂ ನಗರ ವ್ಯಾಪ್ತಿಯಲ್ಲಿ ನಾಲ್ಕು ಕಡೆ ನಿರ್ಮಿಸಲಾಗುತ್ತಿರುವ ರೈಲ್ವೆ ಸೇತುವೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು’ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕರಾದ ಜಿ.ಟಿ. ದೇವೇಗೌಡ, ಟಿ.ಎಸ್. ಶ್ರೀವತ್ಸ, ತನ್ವೀರ್‌ ಸೇಠ್, ಡಿಆರ್‌ಎಂ ಶಿಲ್ಪಿ ಅಗರ್‌ವಾಲ್, ಪ್ರಿನ್ಸಿಪಲ್ ಚೀಫ್ ಕಮರ್ಷಿಯಲ್ ಆಫೀಸರ್ ಸತ್ಯಪ್ರಕಾಶ್ ಶಾಸ್ತ್ರಿ, ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ವಿನಾಯಕ್ ಆರ್. ನಾಯಕ್ ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.

ಸಚಿವರು ಇದಕ್ಕೂ ಮುನ್ನ, ಅಶೋಕಪುರಂ ರೈಲು ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಕೇಂದ್ರ ರೈಲು ನಿಲ್ದಾಣದಲ್ಲಿ ಶೌಚಾಲಯದ ವ್ಯವಸ್ಥೆ ಮೊದಲಾದವುಗಳನ್ನು ‍ಪರಿಶೀಲಿಸಿದರು. ಪ್ರಯಾಣಿಕರಿಂದ ಮಾಹಿತಿ ಪಡೆದರು.

ಮೈಸೂರು ವಿಭಾಗದ ಅಧಿಕಾರಿಗಳ ಸಭೆ ಡಿಆರ್‌ಎಂ ಕಚೇರಿ ಆವರಣದಲ್ಲಿ ಸೋಮಣ್ಣ ಬೆಂಬಲಿಗರ ದಂಡು ನಿಲ್ದಾಣಗಳಿಗೆ ಭೇಟಿ, ಪರಿಶೀಲನೆ

ಮೈಸೂರು ಕೇಂದ್ರ ರೈಲು ನಿಲ್ದಾಣದಲ್ಲಿ ಪಾರ್ಕಿಂಗ್‌ ಶುಲ್ಕ ದುಬಾರಿಯಾಗಿರುವ ಬಗ್ಗೆ ಅಧಿಕಾರಿಗಳು ಪರಿಶೀಲಿಸಿ ಕ್ರಮ ವಹಿಸಬೇಕು
ವಿ.ಸೋಮಣ್ಣ ರೈಲ್ವೆ ಖಾತೆ ರಾಜ್ಯ ಸಚಿವ

ಸೇಬಿಗಾಗಿ ಮುಗಿಬಿದ್ದರು... ಸಚಿವರಾದ ನಂತರ ಇದೇ ಮೊದಲಿಗೆ ನಗರಕ್ಕೆ ಆಗಮಿಸಿದ ಸೋಮಣ್ಣ ಅವರಿಗೆ ಅಭಿಮಾನಿಗಳು ಬೆಂಬಲಿಗರು ಹಾಗೂ ಕಾರ್ಯಕರ್ತರಿಂದ ಸಿದ್ದಲಿಂಗಪುರದ ಬಳಿ ಅದ್ದೂರಿ ಸ್ವಾಗತ ದೊರೆಯಿತು. ಮುಖಂಡರು ಸೇಬಿನಿಂದ ಸಿದ್ಧಪಡಿಸಿದ್ದ ದೊಡ್ಡ ಹಾರವನ್ನು ಕ್ರೇನ್‌ನಲ್ಲಿ ಹಾಕುವ ಮೂಲಕ ಸಚಿವರನ್ನು ಬರಮಾಡಿಕೊಂಡರು. ಸಚಿವರು ಅಲ್ಲಿಂದ ತೆರಳುತ್ತಿದ್ದಂತೆಯೇ ಪಾಲ್ಗೊಂಡಿದ್ದವರು ಹಾರದಲ್ಲಿದ್ದ ಸೇಬಿಗೆ ಮುಗಿಬಿದ್ದರು. ಸಿಕ್ಕಷ್ಟನ್ನು ಕಿತ್ತುಕೊಂಡರು. ಕೆಲವೇ ಕ್ಷಣಗಳಲ್ಲಿ ಆ ಹಾರದಲ್ಲಿ ಹೂವು ಮಾತ್ರವೇ ಉಳಿಯಿತು! ಸಚಿವರು ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿ ದರ್ಶನ ಪಡೆದರು.

‘ಅಧಿಕಾರಿಗಳು ಕನ್ನಡ ಕಲಿಯಬೇಕು’ ಬೇರೆ ರಾಜ್ಯಗಳಿಂದ ಇಲಾಖೆಯ ಕೆಲಸಕ್ಕೆಂದು ಇಲ್ಲಿಗೆ ಬರುವ ಅಧಿಕಾರಿಗಳು ಕನ್ನಡವನ್ನು ಕಲಿತುಕೊಳ್ಳಬೇಕು. ಇದರಿಂದ ಸಾರ್ವಜನಿಕರೊಂದಿಗೆ ಸಂವಹನ ಸಾಧಿಸಿ ಉತ್ತಮ ಸೇವೆ ನೀಡಲು ಸಹಕಾರಿಯಾಗುತ್ತದೆ’ ಎಂದು ತಿಳಿಸಿದರು. ಇಲ್ಲಿಗೆ ಬಂದು ವರ್ಷಗಳೇ ಕಳೆದರೂ ಕನ್ನಡ ಕಲಿಯದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು ತಮಗೆ ತಿಳಿದಷ್ಟು ಹಿಂದಿ ಭಾಷೆಯಲ್ಲೇ ಮಾತನಾಡುತ್ತಾ ಸಭೆ ನಡೆಸಿದರು. ‘ಭಾರತದ ವಿಕಾಸದ ಎಂಜಿನ್ ಆಗಿ ನಮ್ಮ ಇಲಾಖೆ ಕೆಲಸ ಮಾಡುತ್ತಿದೆ. ಜನಸಾಮಾನ್ಯರಿಗೆ ಬಹಳಷ್ಟು ಅನುಕೂಲ ಕಲ್ಪಿಸುವ ರೈಲ್ವೆಗೆ ಪ್ರಧಾನಿ ನರೇಂದ್ರ ಮೋದಿ ಸಾಕಷ್ಟು ಆದ್ಯತೆ ಕೊಡುತ್ತಿದ್ದಾರೆ. ಭಾಷೆ ತೊಡಕಾಗದಿರಲೆಂದು ಹಿಂದಿ ಭಾಷೆಯನ್ನು ಕಲಿತುಕೊಳ್ಳುವಂತೆ ಸಲಹೆ ನೀಡಿದ್ದಾರೆ. ಅದರಂತೆ ನಾನು ಕಲಿಯುತ್ತಿದ್ದೇನೆ. ಈಗ ನಿರ್ವಹಿಸುವಷ್ಟು ಕಲಿತುಕೊಂಡಿದ್ದೇನೆ’ ಎಂದರು.

ಅಶೋಕಪುರಂ ನವೀಕೃತ ರೈಲು ನಿಲ್ದಾಣ ಉದ್ಘಾಟನೆ ನ.14ರಂದು ‘ಅಶೋಕಪುರಂ ರೈಲ್ವೆ ನಿಲ್ದಾಣವನ್ನು ಉತ್ತಮವಾಗಿ ನವೀಕರಿಸಲಾಗಿದೆ. ಅಲ್ಲಿ ಹಿಂದೆ ಆರು ಪ್ಲಾಟ್‌ಫಾರಂಗಳಷ್ಟೇ ಇದ್ದವು. ಈಗ 6ಕ್ಕೆ ಏರಿಸಲಾಗಿದೆ. ತುಂಬಾ ಚೆನ್ನಾಗಿಯೇ ಅಭಿವೃದ್ಧಿಪಡಿಸಲಾಗಿದೆ. ಹಿಂದಿನ ಸಂಸದರು ಮಾಡಿರುವ ಕೆಲಸ ಅಭಿನಂದನಾರ್ಹವಾದುದು. ನ.14ರಂದು ರೈಲ್ವೆ ಸಚಿವರ ಮೂಲಕ ನಿಲ್ದಾಣವನ್ನು ಉದ್ಘಾಟಿಸಲಾಗುವುದು’ ಎಂದು ಸೋಮಣ್ಣ ತಿಳಿಸಿದರು. ‘ಅಲ್ಲಿ ಪಾರ್ಕಿಂಗ್ ಸೌಲಭ್ಯಕ್ಕೂ ಕ್ರಮ ವಹಿಸಲಾಗುತ್ತದೆ. ಜಾಗ ಕೊಡಿಸಿದರೆ ಅಲ್ಲಿನ ರಸ್ತೆ ವಿಸ್ತರಣೆಗೆ ಇಲಾಖೆಯಿಂದಲೇ‌ ಕ್ರಮ ವಹಿಸಲಾಗುವುದು’ ಎಂದು ತಿಳಿಸಿದರು.

‘ಹೆಚ್ಚುವರಿಯಾಗಿ 2 ಸಾಮಾನ್ಯ ಬೋಗಿ’ ‘ಮುಂದಿನ ಎರಡು ತಿಂಗಳಲ್ಲಿ ಪ್ರತಿ ರೈಲು ಗಾಡಿಗಳಿಗೂ ಹೆಚ್ಚುವರಿಯಾಗಿ ಎರಡು ಸಾಮಾನ್ಯ ಬೋಗಿಗಳನ್ನು ಅಳವಡಿಸಲಾಗುವುದು. ಅಲ್ಲದೇ ಮಹಿಳಾ ಪ್ರಯಾಣಿಕರ ರಕ್ಷಣೆ ದೃಷ್ಟಿಯಿಂದ ಬೋಗಿಗಳಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೂ ಕ್ರಮ ಕೈಗೊಳ್ಳಲಾಗುವುದು’ ಎಂದು ಸೋಮಣ್ಣ ಭರವಸೆ ನೀಡಿದರು. ‘ದೇಶದ ವಿವಿಧೆಡೆ ಹೊಸದಾಗಿ 13 ವಂದೇ ಭಾರತ್ ರೈಲು ಸಂಚಾರವನ್ನು ಶೀಘ್ರದಲ್ಲೇ ಆರಂಭಿಸಲಾಗುವುದು. ಮುಂದಿನ ಮೂರು ತಿಂಗಳಲ್ಲಿ ಕರ್ನಾಟಕಕ್ಕೆ ಮತ್ತೊಂದು ವಂದೇ ಭಾರತ್ ರೈಲು ಸಿಗುವ ಸಾಧ್ಯತೆ ಇದೆ. ಬೆಂಗಳೂರು ಹೊರತುಪಡಿಸಿ ರಾಜ್ಯದ ಇತರ ರೈಲ್ವೆ ಸೇತುವೆ ನಿರ್ಮಾಣಕ್ಕೆ ₹11 ಸಾವಿರ ಕೋಟಿ ಬಿಡುಗಡೆಯಾಗಿದೆ. ತುಮಕೂರಿನಲ್ಲಿ 8 ಕಡೆ ₹800 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗುತ್ತಿದೆ. ತುಮಕೂರು ಮೈಸೂರು ಬೆಂಗಳೂರು ಕಡೆಗೆ ಮೂರು ಹೊಸ ಮೆಮು ರೈಲು ಸಂಚಾರ ಆರಂಭಿಸಲಾಗುವುದು’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT