ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಮೈಸೂರು ಚಲೋ’ ಪಾದಯಾತ್ರೆ ಸಮಾರೋಪ: ಸರ್ಕಾರ ಕಿತ್ತೊಗೆಯುವ ಸಂಕಲ್ಪ

ಸಿ.ಎಂ ತವರಿನಲ್ಲೇ ಮೈತ್ರಿಯ ಎಚ್ಚರಿಕೆ ಸಂದೇಶ
Published : 10 ಆಗಸ್ಟ್ 2024, 23:30 IST
Last Updated : 10 ಆಗಸ್ಟ್ 2024, 23:30 IST
ಫಾಲೋ ಮಾಡಿ
Comments
ರಾಜ್ಯದ ಜನರಿಗೆ ಕಾಂಗ್ರೆಸ್ ಸರ್ಕಾರ ವಂಚನೆ ಮಾಡಿದೆ. ಅದನ್ನು ಬುಡಸಮೇತ ಕಿತ್ತು ಹಾಕಲು ಈ ಹೋರಾಟ. ನಮಗೆ ಅಧಿಕಾರದ ದಾಹ ಇಲ್ಲ
ಬಿ.ವೈ. ವಿಜಯೇಂದ್ರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
ಕಾಂಗ್ರೆಸ್‌ನದ್ದು ಜನಾಂದೋಲನ ಅಲ್ಲ , ಧನದ ಆಂದೋಲನ. ಈಗ ನಿವೇಶನ ವಾಪಸ್ ಕೊಡುತ್ತೇನೆ ಎನ್ನುತ್ತಿದ್ದಾರೆ. ಕದ್ದ ಮಾಲು ವಾಪಸ್ ಕೊಟ್ಟ ಮಾತ್ರಕ್ಕೆ ಕಳ್ಳನನ್ನು ಬಿಡಲು ಸಾಧ್ಯವೇ?
ಪ್ರಹ್ಲಾದ ಜೋಶಿ, ಕೇಂದ್ರ ಸಚಿವ
ಸಿದ್ದರಾಮಯ್ಯ ಭ್ರಷ್ಟಾಚಾರದಲ್ಲಿ ಮುಳುಗಿರುವ ಕಪ್ಪು ಕಾಗೆ. ಕಾಗೆಯಲ್ಲಿ ಕಪ್ಪು ಚುಕ್ಕೆ ತೋರಿಸಿ ಎಂದರೆ ಹೇಗೆ? ದಲಿತರಿಗೆ ಮುಂದಿನಿಂದ ಪ್ರೀತಿ‌, ಹಿಂದಿನಿಂದ ಚಾಕು ಎಂಬ ತಂತ್ರ ಅವರದ್ದು‌
ಛಲವಾದಿ ನಾರಾಯಣಸ್ವಾಮಿ ವಿಧಾನ ಪರಿಷತ್‌ ವಿಪಕ್ಷ ನಾಯಕ
ಬಂಡೆ ಬಿದ್ದರೆ ಕಷ್ಟ: ಎಚ್‌ಡಿಕೆ ಲೇವಡಿ
‘ಸಿದ್ದರಾಮಯ್ಯ ಪರವಾಗಿ ಬಂಡೆಯಂತೆ ನಿಲ್ಲುವುದಾಗಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಅದೇ ಬಂಡೆಯನ್ನು ನಂಬಿ 2018-19ರಲ್ಲಿ ಮುಖ್ಯಮಂತ್ರಿಯಾದೆ. ಆಮೇಲೆ ಅದು ನನ್ನ ಮೇಲೆ ಬಿತ್ತು. ಈಗ ಸಿದ್ದರಾಮಯ್ಯ ಮೇಲೆ ಯಾವಾಗ ಬೀಳುತ್ತದೋ ಗೊತ್ತಿಲ್ಲ’ ಎಂದು ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಎಚ್‌.ಡಿ. ಕುಮಾರಸ್ವಾಮಿ ಲೇವಡಿ ಮಾಡಿದರು. ‘ನನ್ನ ಮಗನ ರಾಜಕೀಯ ಭವಿಷ್ಯಕ್ಕಾಗಿ ಎಚ್‌.ಡಿ. ರೇವಣ್ಣ ಕುಟುಂಬದ ಮೇಲೆ ಸಂಚು ರೂಪಿಸಿದ್ದೇನೆ ಎಂದು ಆರೋಪಿಸಿದ್ದೀರಿ. ಸಿದ್ದರಾಮಯ್ಯನವರನ್ನು ರೇವಣ್ಣ ಅಪಾರವಾಗಿ ನಂಬಿದ್ದರು. ಅಂತಹವರ ವಿರುದ್ಧವೇ ಸಂಚು ಮಾಡಿ ಜೈಲಿಗೆ ಕಳುಹಿಸಿದ್ದೀರಿ. ಇಂತಹ ಮನೆಹಾಳರನ್ನು ರಾಜ್ಯದ ಜನತೆ ನಂಬುತ್ತಾರಾ?’ ಎಂದು ಕಿಡಿಕಾರಿದರು. ‘ಎಚ್‌.ಡಿ. ದೇವೇಗೌಡರ ಆಸ್ತಿ ವಿವರ ಕೇಳುತ್ತೀರಿ‌. ಅವರು ರಾಜಕಾರಣಕ್ಕೆ ಬರುವ ಮುಂಚೆ ಒಬ್ಬ ಎಂಜಿನಿಯರ್. ಆದರೆ ಕೃಷಿ ಕೂಲಿ ಕಾರ್ಮಿಕರಾಗಿದ್ದ ನಿಮ್ಮ ತಂದೆಯ ಆಸ್ತಿ ಏನಿತ್ತು? ನಿಮ್ಮ ಗುರು ಎಸ್‌.ಎಂ. ಕೃಷ್ಣ ಅಳಿಯ ಸಿದ್ಧಾರ್ಥ ಅವರ ಆತ್ಮಹತ್ಯೆಗೆ ಯಾರು ಕಾರಣ ಎಂದು ಜನರ ಮುಂದೆ ಇಡುತ್ತೀರಾ’ ಎಂದು ಪ್ರಶ್ನಿಸಿದರು.
ಯತೀಂದ್ರ ಮಿಮಿಕ್ರಿ ಮಾಡಿದ ಕುಮಾರಸ್ವಾಮಿ
‘ಜನಾದೇಶ’ ಸಮಾವೇಶದಲ್ಲಿ ಪ್ರಸಾರಗೊಂಡಿದ್ದ ವಿಡಿಯೊಗಳಿಗೆ ಪ್ರತಿಯಾಗಿ ‘ಮೈಸೂರು ಚಲೋ’ ಸಮಾವೇಶದಲ್ಲಿಯೂ ಕೆಲವು ವಿಡಿಯೊ ತುಣುಕುಗಳನ್ನು ಪ್ರದರ್ಶಿಸಲಾಯಿತು. ಸಿದ್ದರಾಮಯ್ಯ–ಡಿ.ಕೆ. ಶಿವಕುಮಾರ್‌ರನ್ನು ಲೇವಡಿ ಮಾಡುವ ವಿಡಿಯೊ ಅದರಲ್ಲಿ ಇದ್ದವು. ವರ್ಗಾವಣೆ ವಿಚಾರದಲ್ಲಿ ವೈರಲ್‌ ಆಗಿದ್ದ ಯತೀಂದ್ರ ಸಿದ್ದರಾಮಯ್ಯ ವಿಡಿಯೊ ಪ್ರದರ್ಶಿಸಿದ ಎಚ್‌.ಡಿ. ಕುಮಾರಸ್ವಾಮಿ, ಯತೀಂದ್ರ ಧ್ವನಿಯನ್ನು ಮಿಮಿಕ್ರಿ ಸಹ ಮಾಡಿದರು! ‘ನನ್ನ ಮತ್ತು ಯಡಿಯೂರಪ್ಪ ಸಂಘರ್ಷದಲ್ಲಿ ಕೆಲವು ಮಾತುಕತೆ ಆಗಿದ್ದು ನಿಜ. ಅದನ್ನು ಪ್ರದರ್ಶಿಸಿದ ನೀವೇನು ಮಾತನಾಡಿದ್ದೀರಿ ನೋಡಿ. ರಾಜಕೀಯವಾಗಿ ನೋವಿ‌ನಲ್ಲಿ ಮಾತನಾಡಿದ್ದು ನಿಜ. ವೈಯಕ್ತಿಕವಾಗಿ ಯಾರನ್ನೂ ಟೀಕಿಸಿಲ್ಲ’ ಎಂದು ಕುಮಾರಸ್ವಾಮಿ ಸಮಜಾಯಿಷಿ ನೀಡಿದರು.
ಬಳ್ಳಾರಿ ಪಾದಯಾತ್ರೆ ನೆನೆದ ಶ್ರೀರಾಮುಲು
ವೇದಿಕೆಗೆ ಬಿ.ಎಸ್. ಯಡಿಯೂರಪ್ಪ ಜೊತೆಗೆ ಬಿಜೆಪಿ ಮುಖಂಡರಾದ ಬಿ.‌ಶ್ರೀರಾಮುಲು ಹಾಗೂ ಜನಾರ್ಧನ ರೆಡ್ಡಿ ಒಟ್ಟಿಗೆ ಪ್ರವೇಶ ಕೊಟ್ಟು, ಪ್ರೇಕ್ಷಕರತ್ತ ಕೈಬೀಸಿದ್ದು ವಿಶೇಷವಾಗಿತ್ತು. ಈ ವೇಳೆ ಮಾತನಾಡಿದ ಬಿ.‌ ಶ್ರೀರಾಮುಲು, ಬಳ್ಳಾರಿ ಪಾದಯಾತ್ರೆಯನ್ನು ನೆನೆದರು. ‘ಬಳ್ಳಾರಿಗೆ 14 ವರ್ಷದ ಹಿಂದೆ ಇದೇ ಸಿದ್ದರಾಮಯ್ಯ ಪಾದಯಾತ್ರೆ ನಡೆಸಿದ್ದಾಗ ಯಡಿಯೂರಪ್ಪ ಸ್ವಯಂಪ್ರೇರಿತರಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಕಾಲ ಬದಲಾಗಿದ್ದು, ಅದೇ ಸಿದ್ದರಾಮಯ್ಯ ಭ್ರಷ್ಟಾಚಾರದಲ್ಲಿ ಸಿಲುಕಿದ್ದಾರೆ. ಅವರು ರಾಜೀನಾಮೆ ಕೊಡಬೇಕು. ಎಂತಹ ಬಂಡೆಯನ್ನೂ ಪುಡಿ‌ ಮಾಡುವ ಶಕ್ತಿ ನಮ್ಮಲ್ಲಿದೆ’ ಎಂದರು.
ಹೈಕಮಾಂಡ್ ಸೂಚನೆ: ಬಾರದ ಪ್ರೀತಂ ಗೌಡ
‘ಮೈಸೂರು ಚಲೋ’ ಪಾದಯಾತ್ರೆಯು ಮಂಡ್ಯ ಜಿಲ್ಲೆಗೆ ಪ್ರವೇಶಿಸಿದ ಸಂದರ್ಭ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಪಾಲ್ಗೊಂಡಿದ್ದು ಅವರ ಬೆಂಬಲಿಗರು ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿತ್ತು. ಪ್ರೀತಂ ಗೌಡ ಭಾವಚಿತ್ರವಿದ್ದ ಫ್ಲೆಕ್ಸ್‌ಗೆ ಬೆಂಕಿ ಸಹ ಹಾಕಲಾಗಿತ್ತು. ನಂತರದಲ್ಲಿ ಪ್ರೀತಂ ಪಾದಯಾತ್ರೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ಶನಿವಾರ ನಡೆದ ಸಮಾರೋಪ ಸಮಾವೇಶದಲ್ಲೂ ಕಾಣಿಸಿಕೊಳ್ಳಲಿಲ್ಲ. ‘ಪ್ರೀತಂ ಗೌಡ ಬರುವುದಾದರೆ ಪಾದಯಾತ್ರೆಯಿಂದಲೇ ಹಿಂದೆ ಉಳಿಯಲು ಜೆಡಿಎಸ್‌ ನಾಯಕರು ತಿಳಿಸಿದ್ದರು. ಎಚ್‌.ಡಿ. ಕುಮಾರಸ್ವಾಮಿ ಅವರೂ ಈ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಮಾವೇಶಕ್ಕೆ ಬಾರದಂತೆ ಬಿಜೆಪಿ ಹೈಕಮಾಂಡ್ ಪ್ರೀತಂ ಅವರಿಗೆ ಸೂಚಿಸಿತ್ತು’ ಎಂದು ಪಕ್ಷದ ಮೂಲಗಳು ತಿಳಿಸಿವೆ. ಫ್ಲೆಕ್ಸ್‌ಗಳಲ್ಲೂ ಅವರ ಚಿತ್ರಗಳಿ‌ರಲಿಲ್ಲ. ಜೆಡಿಎಸ್‌ ನಾಯಕ ಎಚ್‌.ಡಿ. ರೇವಣ್ಣ ಸಹ ಸಮಾವೇಶದಲ್ಲಿ ಭಾಗಿ ಆಗಲಿಲ್ಲ. ಮಾಜಿ ಸಂಸದ ಪ್ರತಾಪ ಸಿಂಹ ವೇದಿಕೆಗೆ ಬಂದಿದ್ದರೂ ಮೂಲೆಯಲ್ಲಿ ಕುಳಿತು ನಿರ್ಗಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT