ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು | 2 ವರ್ಷವಾದರೂ ಮೇಲೇಳದ ಯುದ್ಧ ಸ್ಮಾರಕ

₹ 1.47 ಕೋಟಿ ವೆಚ್ಚದ ಯೋಜನೆ: ಅಡಿಪಾಯ ಕಾಮಗಾರಿ ಮಾತ್ರ ಪೂರ್ಣ
Published 10 ಜುಲೈ 2024, 7:00 IST
Last Updated 10 ಜುಲೈ 2024, 7:00 IST
ಅಕ್ಷರ ಗಾತ್ರ

ಮೈಸೂರು: ಹಳೇ ಜಿಲ್ಲಾಧಿಕಾರಿ ಕಚೇರಿ ಸಮೀಪ ₹ 1.47 ಕೋಟಿ ವೆಚ್ಚದ ಯುದ್ಧ ಸ್ಮಾರಕಕ್ಕೆ ಭೂಮಿಪೂಜೆ ನಡೆದು ಎರಡು ವರ್ಷವಾದರೂ ಕಾಮಗಾರಿ ಪೂರ್ಣಗೊಂಡಿಲ್ಲ.

‘ಕಾರ್ಗಿಲ್‌ ವಿಜಯೋಜ್ಸವ’ಕ್ಕೆ (ಜುಲೈ 26) ದಿನಗಣನೆ ಆರಂಭವಾಗಿದ್ದು, 6 ತಿಂಗಳ ಹಿಂದೆಯೇ ಪೂರ್ಣಗೊಳ್ಳಬೇಕಿದ್ದ ಕಾಮಗಾರಿ ಕುಂಟು‌ತ್ತಾ ಸಾಗಿದೆ. ಅದು ದೇಶಪ್ರೇಮಿಗಳು, ಮಾಜಿ ಸೈನಿಕರ ವಿರೋಧಕ್ಕೂ ಕಾರಣವಾಗಿದೆ.

ಲೋಕೋಪಯೋಗಿ ಇಲಾಖೆಯು ಕಾಮಗಾರಿ ನಡೆಸುತ್ತಿದ್ದು, ಸ್ಮಾರಕದ ವೇದಿಕೆಗೆ ಕಂಬಗಳನ್ನು ಜೋಡಿಸುವ ಕಾರ್ಯ ಪೂರ್ಣಗೊಂಡಿಲ್ಲ. ಉದ್ದೇಶಿತ ಯೋಜನೆಯ ವೆಚ್ಚವು ₹ 1.47 ಕೋಟಿಗಿಂತ ಹೆಚ್ಚಾಗಲಿದ್ದು, ಇಲಾಖೆಯು ಪರಿಷ್ಕೃತ ಯೋಜನಾ ವೆಚ್ಚವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಲ್ಲಿಸಿಲ್ಲ. ಅದರಿಂದ ಕಾಮಗಾರಿ ವಿಳಂವವಾಗಿದೆ ಎನ್ನಲಾಗಿದೆ.

ಭೂಮಿಪೂಜೆಗೆ 2 ವರ್ಷ: ಎನ್‌ಸಿಸಿ ಪರೇಡ್‌ ಮೈದಾನದಲ್ಲಿ 2022ರ ಜುಲೈ 29ರಂದು ಸರ್ವಧರ್ಮದ ಪ್ರಾರ್ಥನೆಯೊಂದಿಗೆ ಮಾಜಿ ಯೋಧರು, ಸಂತ್ರಸ್ತ ಕುಟುಂಬಗಳ ಸದಸ್ಯರೊಂದಿಗೆ ಜಿಲ್ಲಾಡಳಿತವು ಭೂಮಿಪೂಜೆ ನೆರವೇರಿಸಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಸ್ತುವಾರಿಯಲ್ಲಿ ಲೋಕೋ‍ಪಯೋಗಿ ಇಲಾಖೆಯು ಪಾರಂಪರಿಕ ಶೈಲಿಯಲ್ಲಿ ನಿರ್ಮಾಣ ಕಾಮಗಾರಿ ನಡೆಸಿದೆ.

2023ರ ಜುಲೈ 26ರ ಕಾರ್ಗಿಲ್‌ ವಿಜಯ ದಿನದಂದೇ ಕಾಮಗಾರಿಯು ಪೂರ್ಣಗೊಳ್ಳುವ ಗುರಿ ಹಾಕಿಕೊಳ್ಳಲಾಗಿತ್ತು. ಮತ್ತೊಂದು ವರ್ಷ ಉರುಳಿದರೂ ಯೋಜನೆಯು ಅದೇ ಸ್ಥಿತಿಯಲ್ಲಿ ನಿಂತಿದೆ.

ಕೋಟಿ ವೆಚ್ಚದ ಶಿಲೆ: ಸ್ಮಾರಕ ನಿರ್ಮಾಣಕ್ಕೆ ಚಾಮರಾಜನಗರದ ಅಮಚವಾಡಿಯ ಪಟೇಲ್‌ ಪುಟ್ಟಮಾದಯ್ಯ ಎಂಬುವರು ₹ 1 ಕೋಟಿ ಮೌಲ್ಯದ ಕಪ್ಪು ಶಿಲೆಯನ್ನು ಕೊಡುಗೆಯಾಗಿ ನೀಡಿದ್ದಾರೆ. ಶ್ರೀನಾಥ್‌ ಎಂಬುವರು 200 ಟನ್‌ ಕಲ್ಲುಗಳನ್ನು ನೀಡಿದ್ದಾರೆ. ಹಾಸನದ ದಾನಿಯೊಬ್ಬರು ₹ 25 ಲಕ್ಷ ಮೌಲ್ಯದ ‘ಹಾಸನದ ಹಸಿರು ಗ್ರಾನೈಟ್‌’ ಕಲ್ಲುಗಳನ್ನು ನೀಡಿದ್ದಾರೆ. ಈ ಕಲ್ಲುಗಳ ಮೌಲ್ಯ ಸುಮಾರು ₹ 1.5 ಕೋಟಿಗೂ ಹೆಚ್ಚಿಗೆ ದಾಟುತ್ತದೆ.

‘ಆರೂವರೆ ವರ್ಷದ ಹಿಂದೆ ಸ್ಮಾರಕ ನಿರ್ಮಾಣಕ್ಕೆ ₹ 55 ಲಕ್ಷ ಬಿಡುಗಡೆಯಾಗಿತ್ತು. ಲೋಕೋಪಯೋಗಿ ಇಲಾಖೆ ಕಾಮಗಾರಿ ಆರಂಭಿಸಿದೆ. ಅಡಿಪಾಯ ಹಂತದ ಕಾಮಗಾರಿ ಪೂರ್ಣಗೊಂಡಿದೆ. ಕಂಬಗಳಿಗೆ ಹೊಳಪು ನೀಡುವ ಕಾರ್ಯ ನಡೆಯುತ್ತಿದೆ. ಈ ಕಾರ್ಯ 2 ತಿಂಗಳಲ್ಲಿ ಪೂರ್ಣಗೊಳಿಸುವ ನಿರೀಕ್ಷೆಯಿದ್ದು, ನಂತರವಷ್ಟೇ ಅಂತಿಮ ಹಂತದ ಕಾಮಗಾರಿ ಪ್ರಕ್ರಿಯೆ ಆರಂಭವಾಗಲಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಲೋಕೋಪಯೋಗಿ ಇಲಾಖೆಯು ಮುಂದಿನ ಹಂತದ ಕಾಮಗಾರಿಗೆ ₹ 91 ಲಕ್ಷದ ಹಣ ಬಿಡುಗಡೆಗೆ ಪ್ರಸ್ತಾವ ಕಳುಹಿಸುವುದು ಬಾಕಿ ಇದೆ. ಅದಲ್ಲದೆ ಉದ್ಯಾನದ ಅಭಿವೃದ್ಧಿಗೆ ಮುಡಾ ಹಾಗೂ ಪಾಲಿಕೆ ನೆರವನ್ನು ಪಡೆಯಲು ಯೋಜಿಸಲಾಗಿದೆ’ ಎಂದು ಮಾಹಿತಿ ನೀಡಿದರು. 

ಹುತಾತ್ಮ ಸೈನಿಕರ ಸ್ಮಾರಕದ ಬಗ್ಗೆ ಕಾಳಜಿ ಯಾರಿಗೂ ಇಲ್ಲವಾಗಿದೆ. ಅಧಿಕಾರಿಗಳಿಗೆ ಪತ್ರ ಬರೆದು ಕೆಲಸ ಎಲ್ಲಿಗೆ ಬಂತೆಂದು ಕೇಳುವುದೇ ಆಗಿದೆ. ಯಾವ ಕೆಲಸವೂ ನಡೆಯುತ್ತಿಲ್ಲ.
ಸುಧೀರ್ ಒಂಬತ್ಕೆರೆ, ನಿವೃತ್ತ ಮೇಜರ್ ಜನರಲ್

ಸ್ಮಾರಕದಲ್ಲಿ ಏನೇನಿರಲಿವೆ?

ಯುದ್ಧ ಸ್ಮಾರಕವು 4 ಚದರ ಅಡಿ ವಿಸ್ತೀರ್ಣವಿದ್ದು 33 ಅಡಿ ಎತ್ತರ ಸ್ತಂಭ ರಾಷ್ಟ್ರ ಲಾಂಛನ ಇರಲಿದೆ. ಭೂಸೇನೆ ವಾಯುಸೇನೆ ನೌಕಾ ಪಡೆಯ ಲೋಗೊ ಇರಲಿದೆ. ಸಮೀಪದಲ್ಲಿಯೇ ಯುದ್ಧ ವಿಮಾನಗಳು ಯುದ್ಧನೌಕೆ ಹಾಗೂ ಪರಿಕರಗಳು ಬರಲಿವೆ. ಕಾಪ್ಟರ್‌ ಯುದ್ಧನೌಕೆ ಸೇರಿದಂತೆ ಯುದ್ಧ ಸಾಮಗ್ರಿಗಳೂ ಯುದ್ಧ ಸ್ಮಾರಕದ ಉದ್ಯಾನದಲ್ಲಿ ಸ್ಥಾನ ಪಡೆಯಲಿವೆ. ಅದಕ್ಕಾಗಿ ರಕ್ಷಣಾ ಸಚಿವಾಲಯದ ಸೇನಾ ಪ್ರಧಾನ ಕಚೇರಿಯೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪತ್ರ ವ್ಯವಹಾರ ನಡೆಸಿದೆ. ‘ಕಾಪ್ಟರ್ ನೌಕೆ ಟ್ಯಾಂಕ್‌ ಜೊತೆಗೆ ರೈಫೆಲ್‌– ಹೆಲ್ಮೆಟ್‌ ನೀಡುವಂತೆ ಕೇಂದ್ರ ರಕ್ಷಣಾ ಸಚಿವಾಲಯದ ಸೇನಾ ಕಚೇರಿಗೆ ಕೇಳಲಾಗಿದೆ. ಸಾಗಣೆ ಹಾಗೂ ಇನ್ನಿತರೆ ವೆಚ್ಚವನ್ನು ನಾವೇ ಭರಿಸಬೇಕಿದೆ’ ಎಂದು ಸುದರ್ಶನ್ ಹೇಳಿದರು.

ನನಸಾಗದ ದಶಕಗಳ ಕನಸು

ಯುದ್ಧ ಸ್ಮಾರಕ ನಿರ್ಮಾಣ ಮಾಜಿ ಯೋಧರ ದಶಕದ ಕನಸಾಗಿದ್ದು 2000ರಲ್ಲಿಯೇ ಮಾಜಿ ಯೋಧರು ಸರ್ಕಾರಕ್ಕೆ ಮನವಿ ಸಲ್ಲಿದ್ದರು. ಡಿ.ರಂದೀಪ್‌ ಜಿಲ್ಲಾಧಿಕಾರಿಯಾಗಿದ್ದ ವೇಳೆ ಸ್ಮಾರಕಕ್ಕೆ ಜಾಗ ಮಂಜೂರಾಗಿತ್ತು. ಯುದ್ಧ ಸ್ಮಾರಕವು ನಗರದ ಆಕರ್ಷಣೆಯ ಕೇಂದ್ರ ಬಿಂದುವಾಗುವ ಯೋಧರ ದಶಕದ ಬೇಡಿಕೆಯ ಕನಸೂ ಇನ್ನೂ ನನಸಾಗಿಲ್ಲ.

ಸ್ಮಾರಕದ ಕಂಬಗಳಿಗೆ ಹೊಳಪು ನೀಡುವ ಕಾರ್ಯ ನಡೆದಿದೆ –ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.
ಸ್ಮಾರಕದ ಕಂಬಗಳಿಗೆ ಹೊಳಪು ನೀಡುವ ಕಾರ್ಯ ನಡೆದಿದೆ –ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT