ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಇಲ್ಲಿನ ಅಂಬಾವಿಲಾಸ ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ಶನಿವಾರ ನಡೆದ ‘ವಿಜಯದಶಮಿ ಮೆರವಣಿಗೆ’ಯಲ್ಲಿ ಪಾಲ್ಗೊಂಡಿದ್ದ ಕಲಾತಂಡಗಳು ನಾಡಿನ ಕಲೆ, ಸಂಸ್ಕೃತಿಯನ್ನು ಅನಾವರಣಗೊಳಿಸಿದವು.

ಕಲೆ, ಪ್ರತಿಭೆ ಪ್ರದರ್ಶಿಸುತ್ತಾ ಸಾಗಿದ ಕಲಾವಿದರು ರಾಜಮಾರ್ಗದಲ್ಲಿ ‘ಕಲಾಮಾರ್ಗ’ವನ್ನೇ ಸೃಷ್ಟಿಸಿದರು! ವಿವಿಧ ಕುಣಿತ, ಹಲವು ವೇಷ, ಜನಪದ ಕಲಾಪ್ರಾಕಾರಗಳು ಆ ಪ್ರದೇಶದ ಕಲಾಸಂಪತ್ತನ್ನು ಪರಿಚಯಿಸಿದವು. ನಂದಿಧ್ವಜ ಪೂಜೆಯೊಂದಿಗೆ ಮುನ್ನುಡಿ ಬರೆದ ಜಂಬೂಸವಾರಿಗೆ ವಿಶೇಷ ಮೆರುಗನ್ನು ನೀಡುವ ಕೆಲಸವನ್ನು ಕಲಾವಿದರು ಮಾಡಿದರು.

ಗೌರಿಶಂಕರ ನಗರದ ಗೌರಿಶಂಕರ ನಂದಿಧ್ವಜ ಸಂಘದ ಮಹದೇವಪ್ಪ ಉಡಿಗಾಲ ನೇತೃತ್ವದ ತಂಡದಿಂದ ನಂದಿಧ್ವಜ ಕುಣಿತ ಗಮನಸೆಳೆಯಿತು.

ಆರಂಭದಲ್ಲಿದ್ದ, ಬಿರುಬಿಸಿಲಿನಲ್ಲೂ ಕಾರ್ಯಕ್ರಮ ನೀಡುತ್ತಿದ್ದ ಅವರ ಉತ್ಸಾಹವನ್ನು ಕಂಡು, ವರುಣನೂ ಧರೆಗಿಳಿದು ತಂಪೆರೆದ! ನೆತ್ತಿ ಸುಡುವ ಬಿಸಿಲು, ಮಳೆ ಹಾಗೂ ಚಳಿಯನ್ನೂ ಲೆಕ್ಕಿಸದೇ ಅವರು ಐದು ಕಿ.ಮೀ.ವರೆಗೂ ಕ್ರಮಿಸಿದರು. ರಾಜಪಥದುದ್ದಕ್ಕೂ ನೆರೆದಿದ್ದವರ ಗಮನವನ್ನು ತಮ್ಮತ್ತ ಸೆಳೆದುಕೊಂಡರು.

ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಜನರನ್ನು ರಂಜಿಸಿದರು.

ವಿವಿಧ 52 ತಂಡಗಳ 1,600 ಕಲಾವಿದರು ಹತ್ತಾರು ಪ್ರಾಕಾರಗಳನ್ನು ಕಣ್ತುಂಬಿಕೊಳ್ಳುವ ಅವಕಾಶವನ್ನು ಸಹಸ್ರಾರು ಜನ ಹಾಗೂ ಪ್ರವಾಸಿಗರಿಗೆ ಕಲ್ಪಿಸಿಕೊಟ್ಟರು.

ವೀರಭದ್ರನ ಕುಣಿತ, ವೀರಗಾಸೆ ಕುಣಿತ, ಪುರವಂತಿಕೆ ಕುಣಿತ ಮೆರವಣಿಗೆಯ ಸೊಬಗು ಹೆಚ್ಚಿಸಿದವು.

ಕೊಂಬು ಕಹಳೆಯ ದನಿ ಆವರಣ ತುಂಬಿದರೆ, ಡೊಳ್ಳಿನ ಸದ್ದು ಎದೆನಡುಗಿಸುವಂತಿತ್ತು! ಲಂಬಾಣಿ ನೃತ್ಯ, ಕೊಡವರ ಸುಗ್ಗಿ ಕುಣಿತ, ಕಣಿವಾದನ, ಹಗಲು ವೇಷ, ಗೊರವರ ಕುಣಿತ, ವೀರಮಕ್ಕಳ ಕುಣಿತ, ನಂದಿಕೋಲು, ನವಿಲು ನೃತ್ಯ, ತಮಟೆ ಮತ್ತು ನಗಾರಿ ಪಾಲ್ಗೊಂಡಿದ್ದವರ ಕಾಲುಗಳನ್ನು ಕುಣಿಸಿದವು.

ಹಗಲು ವೇಷ ತಂಡದವರು ವಿವಿಧ ವಿಚಿತ್ರ ಹಾಗೂ ವಿಶೇಷ ವೇಷಗಳಿಂದಾಗಿ ಗಮನಸೆಳೆದರು. ಢಕ್ಕೆ ಕುಣಿತ, ಹಾಲಕ್ಕಿ ಸುಗ್ಗಿ ಕುಣಿತ, ಗಾರುಡಿ ಗೊಂಬೆಗಳು, ಕುಡುಬಿ ನೃತ್ಯ, ಚೆಂಡೆ ವಾದನ, ಹಕ್ಕಿಪಿಕ್ಕಿ ನೃತ್ಯ, ಹೂವಿನ ನೃತ್ಯ ವಿಶೇಷವಾಗಿದ್ದವು. ಕೋಳಿ ಕುಣಿತದ ಕಲಾವಿದರು ಎಲ್ಲರ ಗಮನಸೆಳೆದರು.

ಮೈಸೂರು ಸೀಮೆಯ ಜಿಲ್ಲೆಗಳ ಕಲೆಗಳೊಂದಿಗೆ, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಕರಾವಳಿಯ ಕಲಾತಂಡಗಳು ಆಯಾ ಪ್ರದೇಶದ ಸಂಸ್ಕೃತಿಯನ್ನು ಕಟ್ಟಿಕೊಟ್ಟವು; ಪ್ರತಿನಿಧಿಸಿದವು. ದೊಣ್ಣೆವರಸೆ ಕಲಾವಿದರು ಬೆಂಕಿ ಉಂಡೆಗಳನ್ನು ಉಗುಳುತ್ತಾ ಹಲವು ಸಾಹಸ ವರಸೆಗಳನ್ನು ಪ್ರದರ್ಶಿಸಿದರು. ತಿ.ನರಸೀಪುರದ ದಲಿತ ಸಂಘರ್ಷ ಸಮಿತಿಯವರು ನಾದಸ್ವರ ಹಾಗೂ ಡೋಲಿನೊಂದಿಗೆ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ತಂಡವೊಂದು ಅಂಬಾರಿ ಆನೆ ಅರ್ಜುನನ ಬಾವುಟ ಹಿಡಿದು ಸಾಗಿ, ಅರ್ಜುನನ ನೆನಪನ್ನು ತಂದಿತು. ಅದನ್ನು ನೋಡಿದಾಗ ನೆರೆದಿದ್ದವರ ಹರ್ಷೋದ್ಗಾರ ಮುಗಿಲುಮುಟ್ಟುತ್ತಿತ್ತು.

ನಂದಿ ಧ್ವಜ, ವೀರಗಾಸೆ, ಪುರವಂತಿಕೆ, ಕೊಂಬು ಕಹಳೆ, ಕಂಸಾಳೆ, ಕೀಲುಕುದುರೆ, ಕೋಲಾಟ, ಚಿಟ್ ಮೇಳ, ಹೂವಿನ ನೃತ್ಯ, ಹೆಜ್ಜೆ ಮೇಳ, ತಮಟೆ ನಗಾರಿ, ಯಕ್ಷಗಾನ ಬೊಂಬೆಗಳು, ವಿವಿಧ ಕುಣಿತದ ತಂಡಗಳು ಆ ಭಾಗದ ಕಲಾ ಸೊಬಗನ್ನು ಪರಿಚಯಿಸಿದವು. ವೇಷಧಾರಿಗಳನ್ನು ಕಂಡು ಮಕ್ಕಳು ಸಂಭ್ರಮಿಸಿದರು.

ವಿಶೇಷ ಪೋಷಾಕಿನ ‘ಮೆರುಗು’

ರಾಜರ ಕಾಲದಲ್ಲಿ ನಡೆಯುತ್ತಿದ್ದ ವಿಜಯದಶಮಿಯ ಮೆರವಣಿಗೆಯಲ್ಲಿ ಬಟರು ಪಂಚ ಲೋಹದಿಂದ ಸಿದ್ಧಪಡಿಸಿದ ಭಾರವಾದ ಲಾಂಛನಗಳನ್ನು ಹಿಡಿದು ರಾಜಪೋಷಾಕು ಧರಿಸಿ ಪಾಲ್ಗೊಳ್ಳುತ್ತಿದ್ದರು.

ಅದೇ ಮಾದರಿಯಲ್ಲಿ ಈ ಬಾರಿ ಹಗುರವಾದ ಲಾಂಛನ, ಪೋಷಾಕು ಸಿದ್ಧಪಡಿಸಲಾಗಿತ್ತು. ಸೂರ್ಯ, ಮೀನು, ವರಾಹ, ಚಂದ್ರಮಂಡಲ, ತ್ರಿಶೂಲ ಸಿಂಹ, ಮತ್ಸ್ಯ, ಗರುಡ, ಮಾರುತಿ ಮೊದಲಾದ ಚಿತ್ರಗಳಿದ್ದ ಲಾಂಛನಗಳನ್ನು ಹಿಡಿದು ನಿಯೋಜಿತ ಸಿಬ್ಬಂದಿಯು ಪಾಲ್ಗೊಂಡಿದ್ದರು.

ಕೆಲವು ಸಾಹಸಿಗಳು ಬೆಂಕಿಯ ಉಂಡೆಗಳನ್ನು ಉಗುಳಿದರೆ, ಮರಗಾಲು ಕುಣಿತ ಕಲಾವಿದರು ಆಕಾಶವನ್ನೇ ಮುಟ್ಟುತ್ತೇನೆಂಬ ಛಲವನ್ನು ವ್ಯಕ್ತಪಡಿಸಿದರು. ಸಮೃದ್ಧ ಸಂಸ್ಕೃತಿಯ ರಸದೌತಣಕ್ಕೆ ಜಂಬೂಸವಾರಿ ಸಾಕ್ಷಿಯಾಯಿತು. ಹಲವು ಜಿಲ್ಲೆಗಳ ತಂಡಗಳು ತಮ್ಮ ಪ್ರತಿಭೆ, ಕಲಾ ಪ್ರದರ್ಶನ ನೀಡಿ ಜನರ ಮನಸೂರೆಗೊಂಡರು. ರಸ್ತೆಯ ಇಕ್ಕೆಲಗಳಲ್ಲಿ ನಿಂತು ತಮ್ಮನ್ನು ವೀಕ್ಷಿಸುತ್ತಿದ್ದವರಿಗೆ ರಂಜನೆ ನೀಡಿದರು. ಹತ್ತು ಹಲವು ಕಲಾಪ್ರಾಕಾರಗಳು ಒಂದಾದ ಮೇಲೊಂದಂತೆ ಸಾಗಿದ್ದರಿಂದ ಮೆರವಣಿಗೆ ಕಳೆ ಕಟ್ಟಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.