ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಹುತ್ವದ ನಾಡು ಕಟ್ಟುವಲ್ಲಿ ರಾಜಿಯಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

Published : 21 ಸೆಪ್ಟೆಂಬರ್ 2024, 0:03 IST
Last Updated : 21 ಸೆಪ್ಟೆಂಬರ್ 2024, 0:03 IST
ಫಾಲೋ ಮಾಡಿ
Comments

ಮೈಸೂರು: ‘ಕರ್ನಾಟಕವು ಸರ್ವ ಜನಾಂಗದ ಶಾಂತಿಯ ತೋಟ. ಬಹುತ್ವದ ನಾಡು ಕಟ್ಟುವ, ಕನ್ನಡ ಭಾಷೆಯನ್ನು ಅಗ್ರಸ್ಥಾನಕ್ಕೇರಿಸಿ ಕನ್ನಡ ವಾತಾವರಣ ವಿಸ್ತರಿಸುವ ವಿಚಾರದಲ್ಲಿ ರಾಜಿ ಇಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ನಗರದಲ್ಲಿ ಶುಕ್ರವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ನಡೆದ ‘ಕರ್ನಾಟಕ ಸಾಂಸ್ಕೃತಿಕ ಮುನ್ನೋಟ: ಚಿಂತನಾ ಸಮಾವೇಶ’ ಉದ್ಘಾಟಿಸಿ ಮಾತನಾಡಿ, ‘ರಾಜ್ಯವು ಬಹುತ್ವದ ಬೀಡು. ಮನುಷ್ಯ ಪ್ರೀತಿಯ ಬಹುತ್ವ ಇಲ್ಲಿನದು. ಆದರೆ, ವಿದ್ಯಾವಂತರೇ ಬಹುತ್ವ, ಜಾತ್ಯತೀತತೆ ಬಿಟ್ಟು, ತಾರತಮ್ಯ , ಕಂದಾಚಾರ ಆಚರಿಸುತ್ತಿರುವುದು ದುರಂತ’ ಎಂದು ವಿಷಾದಿಸಿದರು.

‘ಬಸವಣ್ಣನ ವೈಚಾರಿಕ ನಿಲುವನ್ನು ಪಾಲಿಸಲೆಂದೇ ಅವರನ್ನು ಸಾಂಸ್ಕೃತಿಕ ನಾಯಕನನ್ನಾಗಿ ಘೋಷಿಸಲಾಯಿತು. ಸರ್ಕಾರಕ್ಕೆ ಕಿರೀಟ ಸಿಗುತ್ತದೆಂದಲ್ಲ. ಅವರ ಆಶಯ, ವಿಚಾರ, ವೈಚಾರಿಕತೆ ಯುವ ಪೀಳಿಗೆಗೆ ಹೆಚ್ಚೆಚ್ಚು ಗೊತ್ತಾಗಬೇಕು’ ಎಂದರು.

‘ಭಾಷೆ, ಬಹುತ್ವ, ವೈಚಾರಿಕತೆ ಎಲ್ಲವೂ ಸೇರಿ ಕನ್ನಡತನವಾಗಿ ರೂಪುಗೊಂಡಿದೆ. ಕನ್ನಡದ ವಾತಾವರಣ ಗಟ್ಟಿಗೊಳಿಸಲು ಹೆಚ್ಚು ಶ್ರಮಿಸಬೇಕು. ಕನ್ನಡ ಚರಿತ್ರೆಯನ್ನು ಹೊಸ ತಲೆಮಾರಿಗೆ ದಾಟಿಸಲು ಚಿಂತನಾ ಸಮಾವೇಶ ಆಯೋಜಿಸಲಾಗಿದೆ. ವಿಚಾರವಾದಿಗಳು ಸೂಕ್ತ ಸಾಂಸ್ಕೃತಿಕ ಮುನ್ನೋಟ ನೀಡುತ್ತಾರೆಂಬ ವಿಶ್ವಾಸವಿದೆ’ ಎಂದರು. 

‘ಡಿ.ದೇವರಾಜ ಅರಸರು ಮೈಸೂರು ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣ ಮಾಡಿ 2023ಕ್ಕೆ 50 ವರ್ಷ ಆಗಿತ್ತು. ಬಿಜೆಪಿ ಸರ್ಕಾರವೇ ಸುವರ್ಣ ಸಂಭ್ರಮ ಆಚರಿಸಬೇಕಿತ್ತು. ಅವರು ಮಾಡಲಿಲ್ಲ. ಹೀಗಾಗಿ ಬಜೆಟ್‌ನಲ್ಲಿಯೇ ಸುವರ್ಣ ಸಂಭ್ರಮಾಚರಣೆಯನ್ನು ಘೋಷಿಸಿರುವೆ. ಅದನ್ನು ಕನ್ನಡ ಜನೋತ್ಸವವಾಗಿ ಆಚರಿಸಲಾಗುತ್ತಿದೆ’ ಎಂದರು.

ಸಂಸ್ಕೃತಿ ಸಚಿವ ಶಿವರಾಜ್ ಎಸ್‌.ತಂಗಡಗಿ, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಕನಕದಾಸ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ.ಚಿಕ್ಕಣ್ಣ, ಗ್ಯಾರಂಟಿ ಅನುಷ್ಠಾನ‌ ಸಮಿತಿ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಕೆಎಸ್‌ಒಯು ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ಸಂಸ್ಕೃತಿ ಇಲಾಖೆ ನಿರ್ದೇಶಕಿ ಧರಣಿದೇವಿ ಮಾಲಗತ್ತಿ, ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಹಾಜರಿದ್ದರು.

ನಾನು ಕನ್ನಡದಲ್ಲೇ ಸಹಿ ಮಾಡುವೆ. ಆದರೆ ಕನ್ನಡ ಬಿಟ್ಟು ಇಂಗ್ಲಿಷ್‌ನಲ್ಲಿ ಸಹಿಮಾಡಿದ್ದಾರೆಂದು ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಅದಕ್ಕೂ ಅವರು ಮುಖ್ಯ ಕಾರ್ಯದರ್ಶಿಗೆ ಕಾರಣ ಕೇಳಿ ನೋಟಿಸ್‌ ನೀಡಿದ್ದಾರೆ
–ಸಿದ್ದರಾಮಯ್ಯ ಮುಖ್ಯಮಂತ್ರಿ

‘ಕನ್ನಡದಲ್ಲೇ ವ್ಯವಹರಿಸಿ’

‘ರಾಜ್ಯದಲ್ಲಿ ನೆಲೆಸಿ ಬದುಕು ಕಟ್ಟಿಕೊಂಡಿರುವ ಇತರ ಭಾಷಿಕರು ಕನ್ನಡದಲ್ಲೇ ಮಾತನಾಡಬೇಕು. ಕನ್ನಡಿಗರು ಯಾವ ಭಾಷೆಯ ದ್ವೇಷಿಗಳೂ ಅಲ್ಲ. ಕನ್ನಡವು ರಾಜ್ಯದ ಏಳು ಕೋಟಿ ಜನರ ಉಸಿರು. ಸಾಧ್ಯವಿರುವಷ್ಟು ಭಾಷೆಗಳನ್ನು ಕಲಿಯೋಣ. ಆದರೆ ಕನ್ನಡದ ವಾತಾವರಣ ನಿರ್ಮಿಸಿ ನಮ್ಮ ಭಾಷೆಯನ್ನು ಸಂಪೂರ್ಣವಾಗಿ ಬಳಸುವುದು ಜವಾಬ್ದಾರಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.  ‘ತಮಿಳುನಾಡು ಕೇರಳ ಆಂಧ್ರಪ್ರದೇಶ ತೆಲಂಗಾಣ ಮಹಾರಾಷ್ಟ್ರದಲ್ಲಿ ಜನ ಅವರದೇ ಭಾಷೆಗಳಲ್ಲಿ ವ್ಯವಹರಿಸುತ್ತಾರೆ. ಆದರೆ ಅವರು ಇಲ್ಲಿ ಕನ್ನಡ ಬಿಟ್ಟು ಅವರ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ. ನಾವೂ ಅವರ ಭಾಷೆಯಲ್ಲಿ ವ್ಯವಹರಿಸುವುದು ಸರಿಯಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT