ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಸ್ಕಿ: ಅಶೋಕನ ಶಿಲಾ ಶಾಸನದ ಸ್ಥಳ ಅಭಿವೃದ್ಧಿಗೆ ಸಂಪುಟ ಅಸ್ತು

1915ರಲ್ಲಿ ಮಸ್ಕಿ ಶಾಸನ ಸ್ಥಳ ಪತ್ತೆ: ₹10 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ– ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ
Published : 19 ಸೆಪ್ಟೆಂಬರ್ 2024, 6:28 IST
Last Updated : 19 ಸೆಪ್ಟೆಂಬರ್ 2024, 6:28 IST
ಫಾಲೋ ಮಾಡಿ
Comments

ಮಸ್ಕಿ: ಸಾಮ್ರಾಟ್ ಅಶೋಕನನ್ನು ಜಗತ್ತಿಗೆ ಪರಿಚಯಿಸಿದ ಮಸ್ಕಿ ಪಟ್ಟಣದ ಇತಿಹಾಸ ಪ್ರಸಿದ್ಧವಾದ ಅಶೋಕ ಶಿಲಾ ಶಾಸನದ ಸ್ಥಳ ಅಭಿವೃದ್ಧಿಗೆ ಸರ್ಕಾರ ಮುಂದಾಗಿದೆ.

ಮಂಗಳವಾರ ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಸಲ್ಲಿಸಿದ ಪ್ರವಾಸಿ ತಾಣಗಳ ಅಭಿವೃದ್ಧಿ ಪಟ್ಟಿಗೆ ಸಂಪುಟ ಒಪ್ಪಿಗೆ ನೀಡಿದ್ದು, ಅದರಲ್ಲಿ ಮಸ್ಕಿ ಶಾಸನ ಸ್ಥಳದ ಅಭಿವೃದ್ಧಿ ₹10 ಕೋಟಿ ಪ್ರಸ್ಥಾವನೆಯೂ ಸೇರಿರುವುದು ಪಟ್ಟಣದ ಜನರಲ್ಲಿ ಸಂತಸ ಮೂಡಿಸಿದೆ.

ಪುರಾತತ್ವ ಇಲಾಖೆ ವ್ಯಾಪ್ತಿಗೆ ಸೇರಿದ ಅಶೋಕನ ಶಿಲಾ ಶಾಸನದ ಸ್ಥಳ ಅಭಿವೃದ್ಧಿ ಪಡಿಸಿ ಪ್ರವಾಸಿ ಕೇಂದ್ರವನ್ನಾಗಿಸಬೇಕು ಎಂಬ ಇಲ್ಲಿಯ ಜನರ ಬಹುದಿನದ ಬೇಡಿಕೆಗೆ ಸರ್ಕಾರ ಸ್ಪಂದಿಸಿದೆ ಎಂದು ಶಾಸಕ ಹಾಗೂ ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಆರ್.ಬಸನಗೌಡ ತುರುವಿಹಾಳ ಹೇಳಿದ್ದಾರೆ.

2019ರಲ್ಲಿಯೇ ಶಾಸನದ ಸ್ಥಳದ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆಯಿಂದ ₹1 ಕೋಟಿ ಬಿಡುಗಡೆ ಮಾಡಿಸಲಾಗಿತ್ತು. ಶಾಸನದ ಮುಂದೆ ಎರಡು ಎಕರೆ ಜಾಗವನ್ನು ಖರೀದಿಸಲಾಗಿತ್ತು. ಆದರೆ, ಪುರಾತತ್ವ ಇಲಾಖೆಯ ಬಿಗಿಯಾದ ಕಾನೂನಿನಿಂದ ₹50 ಲಕ್ಷ ಮಾತ್ರ ಬಳಕೆಯಾಗಿದ್ದು, ಇನ್ನೂ ₹50 ಲಕ್ಷ ಖರ್ಚಾಗದೆ ಉಳಿದಿದೆ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ತಿಳಿಸಿದರು.

1915ರಲ್ಲಿ ಪಟ್ಟಣದಿಂದ 2 ಕಿ.ಮೀ ದೂರದಲ್ಲಿನ ಬೆಟ್ಟದಲ್ಲಿ ಈ ಶಾಸನವನ್ನು ಸಂಶೋಧಕ ಬೀಡನ್ ಎಂಬುವರು ಪತ್ತೆ ಹಚ್ಚಿದ್ದರು. ಬ್ರಾಹ್ಮಿಲಿಪಿಯಲ್ಲಿರುವ ಈ ಶಾಸನವು ಅಶೋಕನನ್ನು ದೇವನಾಂಪ್ರೀಯ ಅಶೋಕ ಎಂದು ಗುರುತಿಸಿದ ಶಾಸನವಾಗಿದೆ. ಈ ಶಾಸನಕ್ಕೆ ಈಗಾಗಲೇ 109 ವರ್ಷ ಪೂರ್ಣಗೊಂಡಿದೆ. ಸರ್ಕಾರ ಈಗಲಾದರೂ ಇದರ ಅಭಿವೃದ್ಧಿಗೆ ಮುಂದಾಗಿರುವುದು ಸ್ವಾಗತಾರ್ಹ ಎಂದು ಹಿರಿಯ ಸಾಹಿತಿ ಮಹಾಂತೇಶ ಮಸ್ಕಿ ತಿಳಿಸಿದ್ದಾರೆ.

ಪ್ರತಾಪಗೌಡ ಪಾಟೀಲ
ಪ್ರತಾಪಗೌಡ ಪಾಟೀಲ
ರಾಜ್ಯ ಸರ್ಕಾರ ಅಶೋಕನ ಶಾಸನ ಸ್ಥಳದ ಅಭಿವೃದ್ಧಿಗೆ ಮುಂದಾಗಿರುವುದು ಸ್ವಾಗತಾರ್ಹ. ಸಂಪುಟ ನಿರ್ಣಯ ಶೀಘ್ರ ಜಾರಿಗೆ ಬಂದು ಪ್ರಮುಖ ಪ್ರವಾಸೋದ್ಯಮ ಕೇಂದ್ರವಾಗಲಿ.
ಪ್ರತಾಪಗೌಡ ಪಾಟೀಲ ಮಾಜಿ ಶಾಸಕ
ಆರ್.ಬಸನಗೌಡ ತುರುವಿಹಾಳ
ಆರ್.ಬಸನಗೌಡ ತುರುವಿಹಾಳ
ಅಶೋಕನ ಶಿಲಾಶಾಸನದ ಸ್ಥಳ ಅಭಿವೃದ್ಧಿಗೆ ಸಂಬಂಧಪಟ್ಟ ಇಲಾಖೆಯವರೊಂದಿಗೆ ಶೀಘ್ರ ಚರ್ಚಿಸಲಾಗುವುದು. ಅಭಿವೃದ್ಧಿ ನೀಲನಕ್ಷೆ ಸಿದ್ಧಪಡಿಸಿ ಇದನ್ನು ಪ್ರಮುಖ ಪ್ರವಾಸೋದ್ಯಮ ಸ್ಥಳವನ್ನಾಗಿಸಲಾಗುವುದು.
ಆರ್.ಬಸನಗೌಡ ತುರುವಿಹಾಳ ಶಾಸಕ
‘ಐಹೊಳೆ ಪಟ್ಟದಕಲ್ಲು ಮಾದರಿಯಲ್ಲಿ ಅಭಿವೃದ್ಧಿಯಾಗಲಿ’
‘ಐಹೊಳೆ ಪಟ್ಟದಕಲ್ಲು ಮಾದರಿಯಲ್ಲಿ ಅಶೋಕನ ಶಿಲಾಶಾಸನ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕು’ ಎಂದು ಇತಿಹಾಸ ಸಂಶೋಧಕ ಚನ್ನಬಸ್ಸಯ್ಯ ಹಿರೇಮಠ ಒತ್ತಾಯಿಸಿದ್ದಾರೆ. ‘ಶಾಸನದ ಸ್ಥಳದಲ್ಲಿ ಮ್ಯೂಸಿಯಂ ಮಾಡಿ ಬೇರೆಬೇರೆ ಕಡೆ ಇರುವ ಇಲ್ಲಿ ದೊರೆತ ಶಾಸನಗಳನ್ನು ಪುನಃ ಇಲ್ಲಿಗೆ ತಂದು ಸಂಗ್ರಹಿಸಿಡುವ ಕೆಲಸವನ್ನು ಪುರಾತತ್ವ ಹಾಗೂ ಪ್ರವಾಸೋದ್ಯಮ ಇಲಾಖೆ ಮಾಡುವ ಮೂಲಕ ಮಸ್ಕಿ ಶಾಸನದ ಹಿರಿಮೆಯನ್ನು ಎತ್ತಿಹಿಡಿಯಬೇಕು’ ಎಂದು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT