ಶನಿವಾರ, 28 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುದಗಲ್ | ಎಲ್ಲೆಂದರಲ್ಲಿ ವಾಹನಗಳ ಪಾರ್ಕಿಂಗ್: ಸುಗಮಸಂಚಾರಕ್ಕೆ ತೊಂದರೆ

ನಿಯಮಕ್ಕೆ ಕಿಮ್ಮತ್ತು ಕೊಡದ ಪುರಸಭೆ; ಸಂಬಂಧ ಇಲ್ಲದಂತೆ ವರ್ತಿಸುವ ಪೊಲೀಸರು
Published : 28 ಸೆಪ್ಟೆಂಬರ್ 2024, 6:05 IST
Last Updated : 28 ಸೆಪ್ಟೆಂಬರ್ 2024, 6:05 IST
ಫಾಲೋ ಮಾಡಿ
Comments

ಮುದಗಲ್: ಪಟ್ಟಣದಲ್ಲಿ ಸೂಕ್ತ ಪಾರ್ಕಿಂಗ್ ಸೌಲಭ್ಯವಿಲ್ಲದೆ ಸಾರ್ವಜನಿಕರು ನಿತ್ಯ ಪರದಾಡುವಂತಾಗಿದೆ. ಪಟ್ಟಣದಲ್ಲಿ ವಾಹನ ನಿಲುಗಡೆ (ಪಾರ್ಕಿಂಗ್) ಅವ್ಯವಸ್ಥೆಯಿಂದ ಕೂಡಿದ್ದರಿಂದ ಸುಗಮ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ.

ವಾಹನ ನಿಲುಗಡೆ ನಿಯಮಕ್ಕೆ ಕಿಮ್ಮತ್ತಿಲ್ಲವಾಗಿದೆ. ಯಾರು, ಎಲ್ಲಿ ಬೇಕಾದರೂ, ಮನ ಬಂದಂತೆ ತಮ್ಮ ವಾಹನವನ್ನು ನಿಲ್ಲಿಸಿ ಹೋಗಬಹುದು. ಅದು ಮುಖ್ಯ ರಸ್ತೆಯೇ ಆಗಿರಲಿ, ಜನನಿಬಿಡ ರಸ್ತೆಯೇ ಇರಲಿ, ಮಾರುಕಟ್ಟೆಯೇ ಆಗಿರಲಿ, ಸರ್ಕಾರಿ ಕಚೇರಿ ಸೇರಿ ಎಲ್ಲೆಂದರಲ್ಲಿ ನಿಲ್ಲಿಸಬಹುದು.

ಪಟ್ಟಣದ ಬೆಳಗಾವಿ–ಹೈದರಾಬಾದ್ ಮುಖ್ಯರಸ್ತೆ, ಮಸ್ಕಿ ರಸ್ತೆ, ಬಸ್ ನಿಲ್ದಾಣ ರಸ್ತೆ, ತರಕಾರಿ ಮಾರುಕಟ್ಟೆ ರಸ್ತೆ ಸೇರಿದಂತೆ ಇನ್ನಿತರ ರಸ್ತೆ, ವೃತ್ತ ಸೇರಿದಂತೆ ಪಟ್ಟಣವನ್ನು ಒಂದು ಸುತ್ತು ಹಾಕಿದರೆ ಇಲ್ಲಿನ ಪಾರ್ಕಿಂಗ್ ವ್ಯವಸ್ಥೆ ಹೇಗಿದೆ ಎಂಬುದು ಕಣ್ಣಿಗೆ ರಾಚುತ್ತದೆ. ಅರ್ಧದಷ್ಟು ರಸ್ತೆಯನ್ನು ದ್ವಿಚಕ್ರ ವಾಹನಗಳು ಅತಿಕ್ರಮಿಸಿರುತ್ತವೆ. ರಸ್ತೆಯಲ್ಲಿ ಓಡಾಡುವ ವಾಹನಗಳಿಗೆ ತೊಂದರೆಯಾಗುವಂತೆ ವಾಹನಗಳನ್ನು ನಿಲ್ಲಿಸಿದ್ದರೂ ಪುರಸಭೆ ಅಧಿಕಾರಿಗಳಾಗಲಿ ಅಥವಾ ಪೊಲೀಸರಾಗಲಿ ಕ್ಯಾರೇ ಎನ್ನುತ್ತಿಲ್ಲ.

ಪೊಲೀಸ್ ಠಾಣೆ ಎದುರು ಪಾದಚಾರಿಗಳು ಸಂಚರಿಸುವ ಪುಟ್‌ಪಾತ್‌ನಲ್ಲಿ ಸವಾರರು ಯದ್ವಾತದ್ವಾ ವಾಹನಗಳನ್ನು ನಿಲ್ಲಿಸುತ್ತಾರೆ. ಪೊಲೀಸರು ಕರ್ತವ್ಯದಲ್ಲಿದ್ದರೂ ನಿಲುಗಡೆಯ ಅವ್ಯವಸ್ಥೆಯನ್ನು ಕೇಳುವವರಿಲ್ಲವಾಗಿದೆ. ಇನ್ನು ಪುರಸಭೆ ಮುಂದಿನ ರಸ್ತೆಯಲ್ಲಿನ ಪಾರ್ಕಿಂಗ್ ಸ್ಥಿತಿ ಅಧೋಗತಿ ತಲುಪಿದೆ. ಪುರಸಭೆ ವಾಹನಗಳು ಪಾದಚಾರಿ ಮಾರ್ಗದ ಮೇಲೆ ನಿಲ್ಲಿಸಿ, ಪಾರ್ಕಿಂಗ್ ನಿಯಮವನ್ನು ಉಲ್ಲಂಘನೆ ಮಾಡುತ್ತಿದ್ದಾರೆ. ವಾಹನ ಸವಾರರಿಗೆ ಪಾರ್ಕಿಂಗ್ ನಿಯಮ ಪಾಲನೆ ಮಾಡಿ ಎಂದು ಹೇಳಿದರೆ, ಮೊದಲು ಪುರಸಭೆಯವರು ಪಾರ್ಕಿಂಗ್ ನಿಯಮ ಪಾಲನೆ ಮಾಡಲು ಹೇಳಿ. ಅವರು ಪಾಲನೆ ಮಾಡಿದರೆ ನಾವು ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ.

ಪಟ್ಟಣದಲ್ಲಿ ಯಾವ ರಸ್ತೆಗಳಲ್ಲೂ ವಾಹನಗಳ ನಿಲುಗಡೆಗೆ ಸ್ಥಳಗಳನ್ನೇ ಗುರುತಿಸಿಲ್ಲ. ಎಲ್ಲಿಯೂ ಫಲಕಗಳಿಲ್ಲ. ಹಾಗಾಗಿ, ಪೊಲೀಸರು ಸಹ ಅಸಹಾಯಕರಂತೆ ಎಲ್ಲವನ್ನೂ ಸಂಭಾಳಿಸಿಕೊಂಡು ಹೋಗಬೇಕಾದ ಸ್ಥಿತಿ ಇದೆ. ಅಲ್ಲದೆ, ಯಾವ ರಸ್ತೆಗಳಲ್ಲೂ ಪಾರ್ಕಿಂಗ್ ಲೈನ್ ಕಾಣುವುದೇ ಇಲ್ಲ. ಯಾರೋ ಒಬ್ಬ ರಸ್ತೆ ಮಧ್ಯೆಯೇ ವಾಹನ ನಿಲ್ಲಿಸಿದರೆ ಜನ ಬೈದುಕೊಂಡು ಆತ ಬರುವವರೆಗೆ ಕಾದು, ನಂತರ ಮುಂದಕ್ಕೆ ಹೋಗಬೇಕಾದ ಸ್ಥಿತಿ ಸಾಮಾನ್ಯವಾಗಿದೆ.

ನಿಗದಿತ ಸ್ಥಳಗಳಲ್ಲಿ ಹಾಗೂ ವಾಹನಗಳ ಸಂಚಾರಕ್ಕೆ ತೊಂದರೆಯಾಗದಂತೆ ವಾಹನಗಳನ್ನು ನಿಲ್ಲಿಸಬೇಕೆಂಬ ನಿಯಮವಿದೆ. ವಾಹನಗಳ ಸವಾರರು ನಿಯಮ ಉಲ್ಲಂಘನೆ ಮಾಡಿದರೆ ಪೊಲೀಸರು ಅಂತಹವರಿಗೆ ₹500 ದಂಡ ವಿಧಿಸಲು ಅವಕಾಶವಿದೆ. ಪಟ್ಟಣದಲ್ಲಿ ಆ ರೀತಿ ದಂಡಾಸ್ತ್ರ ಪ್ರಯೋಗವಾಗುವುದು ತೀರಾ ಕಡಿಮೆ. ಇನ್ನೂ ಕೆಲವೆಡೆ ಹೋಟೆಲ್, ಅಂಗಡಿಯವರು, ಬೀದಿಬದಿ ವ್ಯಾಪಾರಿಗಳು ಅಂಗಡಿ ಪಾದಚಾರಿ ಮಾರ್ಗದ ಮೇಲೆಯೇ ಇರಿಸುತ್ತಾರೆ ಇದು ಕೂಡ ಸಮಸ್ಯೆಗೆ ಕಾರಣವಾಗಿದೆ. ಪಾದಚಾರಿಗಳು ನಡುರಸ್ತೆಯಲ್ಲೇ ನಡೆದಾಡುವ ಅನಿವಾರ್ಯತೆ ಎದುರಾಗಿದೆ.

ಪಟ್ಟಣದ ಬೆಳಗಾವಿ–ಹೈದರಾಬಾದ್ ಮುಖ್ಯರಸ್ತೆ ಸೇರಿದಂತೆ ಹಲವೆಡೆ ಮನಬಂದಂತೆ ವಾಹನ ನಿಲ್ಲಿಸುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತದೆ. ವಾಹನ ನಿಲುಗಡೆ ನಿಯಮವನ್ನು ವ್ಯವಸ್ಥಿತವಾಗಿ ಜಾರಿಗೆ ತರಬೇಕು ಎಂದು ಮಂಜುನಾಥ ಸ್ಥಳೀಯ ನಿವಾಸಿ.

ಪಾದಚಾರಿ ಮಾರ್ಗದಲ್ಲಿ ವಾಹನಗಳ ಪಾರ್ಕಿಂಗ್ ಮಾಡಿರುವುದು ಕಂಡುಬಂದರೆ ವಾಹನ ಮಾಲೀಕರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ.
–ವೆಂಕಟೇಶ, ಪಿಎಸ್‌ಐ ಮುದಗಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT