ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಂಗನವಾಡಿಗೆ ಕಳಪೆ ಆಹಾರ ಪೂರೈಕೆ: ಶಾಸಕ ಬಿ.ಸುರೇಶ್‌ಗೌಡ ಆರೋಪ

ಲೋಕಾಯುಕ್ತಕ್ಕೆ ದೂರು; ಸಿಬಿಐ ತನಿಖೆಗೆ ಆಗ್ರಹ– ಸುರೇಶ್‌ಗೌಡ
Published : 12 ಸೆಪ್ಟೆಂಬರ್ 2024, 4:05 IST
Last Updated : 12 ಸೆಪ್ಟೆಂಬರ್ 2024, 4:05 IST
ಫಾಲೋ ಮಾಡಿ
Comments

ತುಮಕೂರು: ಅಂಗನವಾಡಿ ಕೇಂದ್ರಗಳಿಗೆ ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ಪೂರೈಕೆ ಮಾಡುತ್ತಿದ್ದು, ದನ, ನಾಯಿಗಳು ತಿನ್ನಲಾಗದ ಸ್ಥಿತಿಯಲ್ಲಿವೆ ಎಂದು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶ್‌ಗೌಡ ಆರೋಪಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ, ಕಳಪೆ ಗುಣಮಟ್ಟದ ಆಹಾರ ಪೊಟ್ಟಣಗಳನ್ನು ಮಾಧ್ಯಮದ ಎದುರು ಪ್ರದರ್ಶಿಸಿದರು.

ರಾಜ್ಯದಲ್ಲಿ ಅಂಗನವಾಡಿಗಳಿಗೆ ಪೌಷ್ಟಿಕ ಆಹಾರ ಪೂರೈಕೆ ಮಾಡಲು ಕೇಂದ್ರ ಸರ್ಕಾರ ಶೇ 60ರಷ್ಟು ಹಾಗೂ ರಾಜ್ಯ ಸರ್ಕಾರ ಶೇ 40ರಷ್ಟು ಹಣ ನೀಡುತ್ತಿದೆ. ಈ ಯೋಜನೆಯಲ್ಲಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆದಿದ್ದು, ಇದು ಸಂಪೂರ್ಣ ದಾರಿ ತಪ್ಪಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಭಾಗಿಯಾಗಿದ್ದಾರೆ ಎಂದು ನೇರ ಆರೋಪ ಮಾಡಿದರು.

ಅಂಗನವಾಡಿಗಳಿಗೆ ಪೂರೈಕೆ ಆಗಿರುವ ಆಹಾರ ಪೊಟ್ಟಣಗಳ ಸಹಿತ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗುವುದು. ಇದರಲ್ಲಿ ಕೇಂದ್ರ ಸರ್ಕಾರದ ಅನುದಾನವೂ ಇರುವುದರಿಂದ ಸಿಬಿಐ ತನಿಖೆ ನಡೆಸುವಂತೆ ಒತ್ತಾಯಿಸಲಾಗುವುದು ಎಂದು ಹೇಳಿದರು.

ಈ ಹಿಂದೆ ಪ್ರತಿ ತಾಲ್ಲೂಕಿನಲ್ಲೂ ಮಹಿಳಾ ಸ್ವಸಹಾಯ ಸಂಘಗಳ (ಎಂಎಸ್‌ಪಿಸಿ) ಮೂಲಕ ಅಂಗನವಾಡಿಗಳಿಗೆ ಪೌಷ್ಟಿಕ ಆಹಾರ ಪೂರೈಕೆ ಮಾಡಲಾಗುತಿತ್ತು. ಸ್ಥಳೀಯವಾಗಿ ಆಹಾರ ಪೂರೈಕೆ ವ್ಯವಸ್ಥೆ ಜಾಲವನ್ನು ರೂಪಿಸಲಾಗಿತ್ತು. ಶಾಸಕರು ಹಾಗೂ ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ಮೂಲಕ ಯೋಜನೆ ಅನುಷ್ಠಾನಕ್ಕೆ ತರಲಾಗಿತ್ತು. ಆದರೆ ಲಕ್ಷ್ಮಿ ಹೆಬ್ಬಾಳಕರ ಸಚಿವರಾದ ನಂತರ ಈ ಸಮಿತಿಗೆ ಇದ್ದ ಅಧಿಕಾರವನ್ನು ಕಿತ್ತುಕೊಂಡಿದ್ದಾರೆ. ತಮಿಳುನಾಡು ಮೂಲದ ಮಣಿ ಎಂಬುವರ ‘ಕ್ರಿಸ್ಟಿ’ ಎಂಬ ಸಂಸ್ಥೆಗೆ ಜವಾಬ್ದಾರಿ ವಹಿಸಲಾಗಿದೆ. ಈ ಸಂಸ್ಥೆ ಮೂಲಕ ರಾಜ್ಯದ ಎಲ್ಲಾ ಅಂಗನವಾಡಿಗಳಿಗೆ ಆಹಾರ ಪದಾರ್ಥ ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕ್ರಿಸ್ಟಿ ಸಂಸ್ಥೆ ನೀಡಿದ ಆಹಾರ ಪದಾರ್ಥಗಳನ್ನು ಮಹಿಳಾ ಸಂಘಗಳು ಪೊಟ್ಟಣ ಕಟ್ಟಿ ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡುತ್ತಿವೆ. ಇದಕ್ಕಾಗಿ ಗ್ರಾಮಾಂತರ ಕ್ಷೇತ್ರದಲ್ಲಿ ಪ್ರತಿ ತಿಂಗಳು ₹30 ಲಕ್ಷ ಹಣವನ್ನು ಕ್ರಿಸ್ಟಿ ಸಂಸ್ಥೆಗೆ ಪಾವತಿಸಲಾಗುತ್ತಿದೆ. ಕ್ಷೇತ್ರದಲ್ಲಿ ಸುಮಾರು 2 ಸಾವಿರ ಮಕ್ಕಳು ಇಂತಹ ಕಳಪೆ ಆಹಾರ ಸೇವಿಸುತ್ತಿವೆ. 224 ವಿಧಾನಸಭಾ ಕ್ಷೇತ್ರಗಳ ಲೆಕ್ಕ ತೆಗೆದುಕೊಂಡರೆ ಕೋಟ್ಯಂತರ ರೂಪಾಯಿ ಮೊತ್ತದ ದೊಡ್ಡ ಹಗರಣ ನಡೆದಿದೆ. ಪುಟ್ಟ ಮಕ್ಕಳ ಆಹಾರದಲ್ಲೂ ಕಲಬೆರಕೆ ಮಾಡಿದವರ ವಿರುದ್ಧ ತನಿಖೆ ನಡೆಸಿ, ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ದಾರಿ ತಪ್ಪಿದ ಆಡಳಿತ:

ರಾಜ್ಯ ಸರ್ಕಾರ ದಾರಿ ತಪ್ಪಿದ್ದು, ಹೇಳುವವರು, ಕೇಳುವವರು ಯಾರೂ ಇಲ್ಲವಾಗಿದ್ದಾರೆ. ಹೆಜ್ಜೆ–ಹೆಜ್ಜೆಗೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಕಾಂಗ್ರೆಸ್‌ನಲ್ಲಿ ಎಲ್ಲಾ ಶಾಸಕರೂ ಮುಖ್ಯಮಂತ್ರಿ ಕುರ್ಚಿಗೆ ಟವೆಲ್ ಹಾಕಿಕೊಂಡು ಕಾಯುತ್ತಿದ್ದಾರೆ. ರಾಜ್ಯದಲ್ಲಿ ನಾಯಕತ್ವ ಇಲ್ಲದೆ ಆಡಳಿತ ದಹನೀಯ ಸ್ಥಿತಿ ತಲುಪಿದೆ. ಸರ್ಕಾರಕ್ಕೆ ಅಸ್ಥಿರತೆ ಕಾಡುತ್ತಿದೆ. ಇಂತಹ ದುರ್ಬಲ ಮುಖ್ಯಮಂತ್ರಿಯನ್ನು ಎಂದೂ ನೋಡಿರಲಿಲ್ಲ ಎಂದು ಆರೋಪಿಸಿದರು.

ಜಿಲ್ಲಾಧಿಕಾರಿ ವರ್ಗಾವಣೆಗೆ ಆಗ್ರಹ

ಜನರ ಸಮಸ್ಯೆಗಳಿಗೆ ಸ್ಪಂದಿಸದ ಸಾರ್ವಜನಿಕರ ಕೆಲಸ ಮಾಡಿಕೊಡದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರನ್ನು ಜಿಲ್ಲೆಯಿಂದ ವರ್ಗಾವಣೆ ಮಾಡಬೇಕು ಎಂದು ಶಾಸಕ ಬಿ.ಸುರೇಶ್‌ಗೌಡ ಒತ್ತಾಯಿಸಿದರು. ‘ಜಿಲ್ಲಾಧಿಕಾರಿಯಾಗಿ ಬಂದ ನಂತರ ಸಾರ್ವಜನಿಕರ ಒಂದೂ ಕೆಲಸವೂ ಆಗುತ್ತಿಲ್ಲ. ಜಿಲ್ಲೆ ಸಂಪೂರ್ಣ ಹಾಳಾಗಿದ್ದು ಗೊಂದಲ ಸೃಷ್ಟಿಸುತ್ತಿದ್ದಾರೆ. ಕಚೇರಿಯಲ್ಲೂ ಜನರಿಗೆ ಸಿಗುತ್ತಿಲ್ಲ. ಜಿಲ್ಲೆಯ ಇತರೆಡೆಗಳಿಗೆ ಪ್ರವಾಸವೂ ಹೋಗುತ್ತಿಲ್ಲ. ಅವರ ಕಚೇರಿಯಲ್ಲಿ ರಾಶಿಗಟ್ಟಲೆ ಕಡತಗಳು ಕೊಳೆಯುತ್ತಿವೆ. ಜನರಿಗೆ ಸ್ಪಂದಿಸದ ಅಧಿಕಾರಿ ಏಕೆ ಬೇಕು? ಈ ಸಂಬಂಧ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ದೂರು ಸಲ್ಲಿಸಲಾಗುವುದು’ ಎಂದು ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಅವರಿಗೆ ಎಸ್ಕಾರ್ಟ್ ಮಾಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ಸಚಿವರು ಹೇಳಿದ ಕೆಲಸ ಮಾತ್ರ ಮಾಡುತ್ತಿದ್ದಾರೆ. ಸಚಿವರು ಚೀಟಿ ಕೊಟ್ಟರೆ ಅಂತಹ ಕೆಲಸ ಮಾಡಿಕೊಡುತ್ತಾರೆ. ಸಾಮಾನ್ಯರ ಕೆಲಸ ಮಾಡುತ್ತಿಲ್ಲ. ಅನುಭವದ ಕೊರತೆಯೂ ಇದೆ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT