ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಡುಪಿ: ಜಿಲ್ಲೆಯಲ್ಲಿ ಅಗ್ನಿಶಾಮಕ ದಳಕ್ಕೆ ಬೇಕಿದೆ ಇನ್ನಷ್ಟು ಬಲ

ನವೀನ್‌ ಕುಮಾರ್‌ ಜಿ.
Published 22 ಜುಲೈ 2024, 8:21 IST
Last Updated 22 ಜುಲೈ 2024, 8:21 IST
ಅಕ್ಷರ ಗಾತ್ರ

ಉಡುಪಿ: ಮಳೆಗಾಲವಿರಲಿ ಬೇಸಿಗೆ ಇರಲಿ ಅಗ್ನಿ ಅನಾಹುತ ಯಾವಾಗ ಬೇಕಿದ್ದರೂ ಸಂಭವಿಸಬಹುದು. ಸ್ಪಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಮತ್ತೆ ಮತ್ತೆ ಸಂಭವಿಸುವ ಅಗ್ನಿ ಅನಾಹುತಗಳು ನಮಗೆ ಎಚ್ಚರಿಕೆಯ ಗಂಟೆಯನ್ನು ಮೊಳಗಿಸುತ್ತಲೇ ಇರುತ್ತವೆ. ಬೆಂಕಿ ಅವಘಡಗಳ ಮಾಹಿತಿ ಕೆದಕುತ್ತಾ ಹೋದರೆ ಶಾರ್ಟ್‌ ಸರ್ಕೀಟ್‌, ಎ.ಸಿ. ವಯರ್‌ನಲ್ಲಿ, ಇನ್ವರ್ಟರ್‌ನಲ್ಲಿ ಶಾರ್ಟ್‌ ಸರ್ಕೀಟ್‌ ಮೊದಲಾದ ಕಾರಣಗಳೇ ಸಿಗುತ್ತವೆ.

ಈಚೆಗೆ ನಗರದ ಮನೆಯೊಂದರಲ್ಲಿ ಸಂಭವಿಸಿದ್ದ ಅಗ್ನಿ ಅನಾಹುತದಲ್ಲಿ ದಂಪತಿ ಮೃತಪಟ್ಟಿದ್ದರು. ಮನೆಯಲ್ಲಿ ಸೆಂಟ್ರಲೈಸ್ಡ್‌ ಎ.ಸಿ. ಅಳವಡಿಸಿದ್ದು, ಅದರ ವೈರ್‌ನಲ್ಲಿ ಉಂಟಾದ ಶಾರ್ಟ್‌ ಸರ್ಕೀಟ್‌ನಿಂದ ಅನಾಹುತ ಸಂಭವಿಸಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಆದರೆ, ಖಚಿತ ಕಾರಣ ತಿಳಿದು ಬಂದಿಲ್ಲ.

ದಂಪತಿಗೆ ಹೆಚ್ಚಿನ ಸುಟ್ಟ ಗಾಯಗಳಾಗದಿರುವುದರಿಂದ ಹೊಗೆಯನ್ನು ಉಸಿರಾಡಿ ಉಸಿರು ಚೆಲ್ಲಿರಬಹುದು ಎಂದು ಊಹಿಸಲಾಗಿದೆ. ಅಲ್ಲದೆ ಇವರ ಮನೆಯೊಳಗಿನ ಒಳಾಂಗಣ ವಿನ್ಯಾಸಕ್ಕೆ ಮರ, ಪಿಒಪಿ ಮೊದಲಾದವುಗಳನ್ನು ಹೆಚ್ಚು ಬಳಸಲಾಗಿತ್ತು. ಇವು ಬೆಂಕಿ ಅವಘಡದ ಸಂದರ್ಭದಲ್ಲಿ ಹೊಗೆಕಾರಕಗಳಾಗುತ್ತವೆ ಎಂಬುದಾಗಿ ಅಗ್ನಿಶಾಮಕ ದಳದವರು ತಿಳಿಸುತ್ತಾರೆ.

ಈ ಮನೆಯ ಅನತಿ ದೂರದಲ್ಲೇ ಅಗ್ನಿಶಾಮಕ ದಳದ ಠಾಣೆ ಇದ್ದುದರಿಂದ ಅವರು ಕೂಡಲೇ ಸ್ಥಳಕ್ಕೆ ತಲುಪಿ ದಂಪತಿಯ ಮಕ್ಕಳಿಬ್ಬರ ಪ್ರಾಣ ಉಳಿಸಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಬೆಂಕಿ ಅನಾಹುತ ಸಂಭವಿಸಿದರೆ ಅಗ್ನಿಶಾಮಕ ಠಾಣೆಗಳೂ ಜಿಲ್ಲೆಯಲ್ಲಿ ಸಾಕಷ್ಟಿಲ್ಲ. ಜಲ ವಾಹನಗಳ ಕೊರತೆಯೂ ಕಾಡುತ್ತಿದೆ. ಜಿಲ್ಲೆಯಲ್ಲಿ ಸಾಕಷ್ಟು ಅರಣ್ಯ ಪ್ರದೇಶಗಳಿರುವುದರಿಂದ ಬೇಸಿಗೆ ಕಾಲದಲ್ಲಿ ಅಗ್ನಿ ಅನಾಹುತಗಳು ಸಂಭವಿಸುತ್ತಿವೆ. ಇಂತಹ ಸಂದರ್ಭದಲ್ಲಿ ಹೆಚ್ಚು ಅಗ್ನಿಶಾಮಕ ದಳದ ಠಾಣೆಗಳ ಅಗತ್ಯ ಇದೆ ಎಂದು ನಾಗರಿಕರು ಆಗ್ರಹಿಸಿದ್ದಾರೆ.

ಜಲವಾಹನ ಕೊರತೆ: 15 ವರ್ಷಗಳಿಗಿಂತಲೂ ಹಳೆಯ ವಾಹನಗಳನ್ನು ರಸ್ತೆಗೆ ಇಳಿಸುವಂತಿಲ್ಲ ಎಂಬ ಕೇಂದ್ರ ಸರ್ಕಾರದ ಮಾರ್ಗಸೂಚಿ ಜಾರಿಗೆ ಬಂದ ನಂತರ ಜಿಲ್ಲೆಯ ಅಗ್ನಿಶಾಮಕ ದಳದ ಠಾಣೆಯಲ್ಲಿರುವ ಹಳೆಯ ಜಲವಾಹನಗಳು ನಿಷ್ಪ್ರಯೋಜಕವಾಗಿವೆ.

ಉಡುಪಿ, ಬೈಂದೂರು, ಮಲ್ಪೆ, ಕಾರ್ಕಳ ಮತ್ತು ಕುಂದಾಪುರ ಠಾಣೆಗಳಲ್ಲಿ ಈಗ ತಲಾ ಒಂದೊಂದು ಜಲವಾಹನಗಳಿವೆ. ಇನ್ನೂ ಐದು ಜಲವಾಹನಗಳ ಅಗತ್ಯ ಇದೆ ಎನ್ನುತ್ತವೆ ಅಗ್ನಿಶಾಮಕ ದಳದ ಮೂಲಗಳು.

ಬ್ರಹ್ಮಾವರ, ಕಾಪುವಿನ ಪಡುಬಿದ್ರಿ ಮತ್ತು ಹೆಬ್ರಿಗೆ ಅಗ್ನಿಶಾಮಕ ದಳದ ನೂತನ ಠಾಣೆಗಳು ಮಂಜೂರಾಗಿವೆ. ಕೆಲವಕ್ಕೆ ಸ್ಥಳ ಸಮೀಕ್ಷೆಯೂ ನಡೆದಿದೆ. ಆದರೆ ಇನ್ನೂ ಕಟ್ಟಡ ಟೆಂಡರ್‌ ಪ್ರಕ್ರಿಯೆ ಸೇರಿದಂತೆ ಹಲವು ಪ್ರಕ್ರಿಯೆಗಳು ಬಾಕಿ ಇರುವುದರಿಂದ ಈ ಠಾಣೆಗಳು ಸಾಕಾರಗೊಳ್ಳಲು ಇನ್ನೂ ಕೆಲವು ವರ್ಷ ಕಾಯಬೇಕಿದೆ.

ಪಡುಬಿದ್ರಿಯಲ್ಲಿ ಒಂದು ವರ್ಷದೊಳಗೆ ಅಗ್ನಿಶಾಮಕ ದಳದ ನೂತನ ಠಾಣೆ ನಿರ್ಮಾಣವಾಗಬಹುದೆಂದು ಅಗ್ನಿಶಾಮಕ ದಳದ ಮೂಲಗಳು ವಿಶ್ವಾಸ ವ್ಯಕ್ತಪಡಿಸಿವೆ.

ಉಡುಪಿಯಿಂದ ಬರಬೇಕು: ಹಿರಿಯಡಕ ಸುತ್ತ ಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಬೇಸಿಗೆಯಲ್ಲಿ ಬೆಂಕಿ ಬೀಳುವ ಸಾಧ್ಯತೆಗಳು ಜಾಸ್ತಿ. ಕುರುಚಲು ಕಾಡುಗಳು, ಗುಡ್ಡೆ ಪ್ರದೇಶಕ್ಕೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಅವಘಡ ಸಂಭವಿಸಿದಾಗ ಉಡುಪಿಯಿಂದ ಅಗ್ನಿಶಾಮಕ ವಾಹನ ಬರಬೇಕಾಗಿದೆ.

ಎರಡೂ ತಾಲ್ಲೂಕಿಗೂ ಒಂದೇ ಠಾಣೆ ಆಸರೆ: ಕಾರ್ಕಳ ತಾಲ್ಲೂಕಿನ ಅಗ್ನಿಶಾಮಕ ಠಾಣೆಯ ಸಿಬ್ಬಂದಿ, ಹೆಬ್ರಿ ತಾಲ್ಲೂಕು ವ್ಯಾಪ್ತಿಯಲ್ಲಿ ತುರ್ತು ಅವಘಡಗಳನ್ನು ಸಂಭವಿಸಿದಾಗ ಅವುಗಳನ್ನೂ ನಿಭಾಯಿಸಬೇಕಾಗಿದೆ.

ಠಾಣೆಯಲ್ಲಿ 4500ಲೀ. ಸಾಮರ್ಥ್ಯದ ವಾಹನವಿದ್ದು ತಾಲ್ಲೂಕಿನ ಎಲ್ಲ ತುರ್ತು ಅವಘಡಗಳನ್ನು ನಿಭಾಯಿಸುತ್ತಿದೆ. ಠಾಣೆಯಲ್ಲಿ ಸಿಬ್ಬಂದಿಗೆ ಅವಶ್ಯವಾದ ಲೈಫ್ ಜಾಕೆಟ್‌ಗಳು, ಪಂಪ್‌ಗಳು ಹಾಗೂ ಇತರ ಸಲಕರಣೆಗಳು ಇವೆ ಎಂದು ಠಾಣಾಧಿಕಾರಿ ಅಲ್ಬರ್ಟ್ ಮೊನಿಸ್ ಹೇಳಿದರು.

ದೂರದ ಹೆಬ್ರಿಗೆ ಪ್ರತ್ಯೇಕ ಅಗ್ನಿಶಾಮಕ ಠಾಣೆಯ ಅಗತ್ಯವಿದ್ದು, ಅದಕ್ಕೆ ನಿವೇಶನ ನಿಗದಿಯಾಗಿದೆ. ಅಷ್ಟರ ತನಕ ತುರ್ತು ಸಂದರ್ಭಗಳಲ್ಲಿ ಕಾರ್ಕಳದಿಂದ ಹೆಬ್ರಿಗೆ ತೆರಳಲು ಕೊಂಚ ಕಾಲಾವಕಾಶ ಬೇಕಾಗುತ್ತದೆ. ತುರ್ತು ಕರೆಗಳ ಸಂದರ್ಭಗಳಲ್ಲಿ ರಾಮ ಸಮುದ್ರದಿಂದ ನೀರನ್ನು ಸಂಗ್ರಹಿಸಿ ತರಲಾಗುತ್ತದೆ. ಆದರೆ ದೂರದ ಗ್ರಾಮೀಣ ಪ್ರದೇಶಗಳಲ್ಲಿ ಬೆಂಕಿಯ ಅವಘಡಗಳಾದಾಗ ಆಯಾ ಗ್ರಾಮದಲ್ಲೇ ನೀರಿನ ಪೂರೈಕೆ ಮಾಡಿದರೆ ಬೆಂಕಿ ನಂದಿಸುವ ಕಾರ್ಯ ಬೇಗ ಮಾಡಲು ಸಾಧ್ಯ ಎನ್ನುತ್ತಾರೆ ಅವರು.

ಸಾಕಾರಗೊಳ್ಳದ ಬೇಡಿಕೆ: ಕೈಗಾರಿಕಾ ಹಬ್ ಆಗಿ ಬೆಳೆಯುತ್ತಿರುವ ಪಡುಬಿದ್ರಿಯಲ್ಲಿ ಅಗ್ನಿ ಶಾಮಕ ದಳದ ಠಾಣೆ ನಿರ್ಮಾಣಕ್ಕೆ ಹಲವು ದಶಕಗಳ ಬೇಡಿಕೆ ಇದೆ. ಇದಕ್ಕಾಗಿ ಈ ಹಿಂದೆ ನಂದಿಕೂರಿನಲ್ಲಿ ಜಾಗವನ್ನು ಗುರುತಿಸಲಾಗಿತ್ತು. ಠಾಣೆಗೆ ಮಂಜೂರಾತಿ  ದೊರಕಿದರೂ ಅದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

ಈ ಪ್ರದೇಶದಲ್ಲಿ ಅಗ್ನಿ‌ದುರಂತ ಸಂಭವಿಸಿದರೆ‌ 20 ಕಿ.ಮೀ ದೂರದ‌ ಉಡುಪಿಯಿಂದ ಜಲವಾಹನ ಬರಬೇಕಾಗಿದೆ. ಕಳೆದ ವಿಧಾನಸಭಾ ಅಧಿವೇಶನದಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಪರಮೇಶ್ವರ್ ಅವರು ಹೆಜಮಾಡಿಯಲ್ಲಿ ಅಗ್ನಿ ಶಾಮಕ ದಳಕ್ಕೆ ಕಟ್ಟೆ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ದೊರಕಿದೆ. 2021ರಲ್ಲಿ ಠಾಣೆ ನಿರ್ಮಾಣಕ್ಕೆ ಮಂಜೂರಾತಿ ದೊರಕಿದೆ. ಈಗಾಗಲೇ 1.35 ಎಕರೆ ಜಮೀನಿಗೆ ಇಲಾಖೆ ಹೆಸರಿಗೆ ನೋಂದಣಿ ಮಾಡಲಾಗಿದೆ. ಅನುದಾನ ಬಿಡುಗಡೆಗೆ ಕ್ರಮ ವಹಿಸಲಾಗಿದೆ ಎಂದಿದ್ದಾರೆ.

ಪೂರಕ ಮಾಹಿತಿ: ವಾಸುದೇವ್‌ ಭಟ್‌, ರಾಘವೇಂದ್ರ ಹಿರಿಯಡಕ, ಹಮೀದ್‌ ಪಡುಬಿದ್ರಿ, ಸುಕುಮಾರ್‌ ಮುನಿಯಾಲ್‌

ಅಗ್ನಿ ಅನಾಹುತ ಸಂಭವಿಸಿದಾಗ ಜನರು ಮನೆಗಳಿಂದ ಹೊರಬರಲಾಗದೆ ಒಳಗಡೆಯೇ ಸಿಲುಕಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಹೊಗೆಯನ್ನು ಉಸಿರಾಡಿ ಪ್ರಜ್ಞಾಹೀನರಾಗುತ್ತಾರೆ. ಅಂತಹವರನ್ನು ಕೂಡಲೇ ಹೊರ ತಂದು ಆಕ್ಸಿಜನ್‌ ನೀಡಿ ಆಸ್ಪತ್ರೆಗೆ ಕರೆದೊಯ್ಯಬೇಕು. ಇಲ್ಲದಿದ್ದರೆ ಜೀವಕ್ಕೇ ಅಪಾಯವಾಗುವ ಸಾಧ್ಯತೆ ಇರುತ್ತದೆ
ಡಾ. ಎಚ್. ಅಶೋಕ್‌ ಜಿಲ್ಲಾ ಶಸ್ತ್ರಚಿಕಿತ್ಸಕರು
ಸುರಕ್ಷತೆಗೆ ಜನರೇ ಗಮನ ಕೊಡಬೇಕು
ಜನರು ಮನೆಗಳಲ್ಲಿ ಎಂಸಿಡಿ (ಮಿನಿಯೇಚರ್‌ ಸರ್ಕಿಟ್‌ ಬ್ರೇಕರ್‌) ಉಪಕರಣವನ್ನುಅಳವಡಿಸಬೇಕು. ಇದು ವಿದ್ಯುತ್ ಶಾರ್ಟ್‌ ಸರ್ಕೀಟ್‌ನಿಂದ ರಕ್ಷಣೆ ನೀಡುತ್ತದೆ. ಐಎಸ್‌ಐ ಮುದ್ರೆ ಇರುವ ಎಲೆಕ್ಟ್ರಾನಿಕ್ಸ್‌ ಉಪಕರಣಗಳನ್ನೇ ಬಳಸಬೇಕು. ಹಾಗಿದ್ದರೆ ಶಾರ್ಟ್‌ ಸರ್ಕೀಟ್‌ ಸಂಭವಿಸುವ ಅಪಾಯ ಕಡಿಮೆ. ಮನೆಗಳಲ್ಲಿ ಅಗ್ನಿ ಅನಾಹುತಗಳು ಶೇ 80ರಷ್ಟು ಶಾರ್ಟ್‌ ಸರ್ಕೀಟ್‌ನಿಂದ ಶೇ 10ರಷ್ಟು ಗ್ಯಾಸ್ ಸಿಲಿಂಡ್‌ ಸ್ಫೋಟದಿಂದ ಮತ್ತು ಶೇ 10ರಷ್ಟು ದೇವರ ದೀಪವನ್ನು ರಾತ್ರಿ ಹೊತ್ತು ಉರಿಸಿಡುವುದರಿಂದ ಸಂಭವಿಸುತ್ತದೆ ಎನ್ನುತ್ತಾರೆ ಉಡುಪಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಿನಾಯಕ ಕಲ್ಗುಟ್ಕರ್‌.
ಮಾಲಕರೇ ಜವಾಬ್ದಾರರು
ಗಗನಚುಂಬಿ ಕಟ್ಟಡಗಳು ಅಗ್ನಿ ಸುರಕ್ಷತಾ ಮಾನದಂಡಗಳನ್ನು ಪಾಲಿಸದಿದ್ದರೆ ಅವುಗಳಿಗೆ ಎನ್ಒಸಿ ನೀಡಲಾಗುವುದಿಲ್ಲ. ಫ್ಲ್ಯಾಟ್ ಶಾಪಿಂಗ್‌ ಮಾಲ್‌ ದೊಡ್ಡ ದೊಡ್ಡ ಕಟ್ಟಡಗಳಲ್ಲಿ ನಿಯಮಿತವಾಗಿ ವಯರಿಂಗ್‌ ಮತ್ತು ವಿದ್ಯುತ್ ಉಪಕರಣಗಳ ಕಾರ್ಯ ನಿರ್ವಹಣೆಯನ್ನು ಪರಿಶೀಲಿಸಬೇಕು. ಇಂತಹ ಕಟ್ಟಡಗಳಲ್ಲಿ ಅಗ್ನಿ ಅನಾಹುತ ಸಂಭವಿಸಿದರೆ ಅದರ ಮಾಲಕರೇ ಜವಾಬ್ದಾರರು. ಗುಣಮಟ್ಟದ ಎಲೆಕ್ಟ್ರಾನಿಕ್ಸ್ ಸಾಧನಗಳನ್ನು ಬಳಸಿದರೆ ಶಾರ್ಟ್ ಸರ್ಕೀಟ್‌ ಉಂಟಾಗುವ ಸಾಧ್ಯತೆ ಕಡಿಮೆ ಎನ್ನುತ್ತಾರೆ ನಗರಸಭೆಯ ಪೌರಾಯುಕ್ತ ರಾಯಪ್ಪ.
ಹೆಬ್ರಿಗೆ ತುರ್ತು ಬೇಕಿದೆ ಅಗ್ನಿಶಾಮಕ ಠಾಣೆ
ಹೆಬ್ರಿ: ಹೆಬ್ರಿ ಪಟ್ಟಣವು ಈ ಹಿಂದೆ ಗ್ರಾಮ ಪಂಚಾಯಿತಿ ಆಗಿದ್ದಾಗಲೇ ಇಲ್ಲಿ ಹಲವಾರು ಅಕ್ಕಿ ಗಿರಣಿಗಳು ಗೇರು ಬೀಜದ ಕಾರ್ಖಾನೆ ಸೇರಿ ಹಲವು ಉದ್ಯಮ ಸಮೂಹಗಳು ಇದ್ದವು. ಅಂತಹ ಉದ್ಯಮ ಸಮೂಹಗಳ ಊರು ಹೆಬ್ರಿಯಲ್ಲಿ ತುರ್ತಾಗಿ ಈ ಮೊದಲೇ ಅಗ್ನಿಶಾಮಕ ಠಾಣೆ ಆಗಬೇಕಿತ್ತು. ಆದರೆ ಅದು ಈವರೆಗೆ ಸಾಕಾರಗೊಂಡಿಲ್ಲ. ಅಕ್ಕಿ ಗಿರಣಿ ಗೇರು ಬೀಜದ ಕಾರ್ಖಾನೆಯಲ್ಲಿ ಆಗಾಗ ಅಗ್ನಿ ದುರಂತಗಳು ಸಂಭವಿಸುತ್ತವೆ. ಜಲದುರಂತಗಳು ನಡೆಯುತ್ತಿರುತ್ತವೆ. ಈಗ ಹೆಬ್ರಿ ತಾಲ್ಲೂಕು ಕೇಂದ್ರ ಕೂಡ ಆಗಿದೆ. ಹಾಗಾಗಿ ತುರ್ತಾಗಿ ಹೆಬ್ರಿಗೆ ಅಗ್ನಿಶಾಮಕ ಠಾಣೆ ಆಗಲೇ ಬೇಕಿದೆ ಎಂದು ಜನರು  ಒತ್ತಾಯಿಸಿದ್ದಾರೆ. ತಾಲ್ಲೂಕು ಕೇಂದ್ರವಾದ ಹೆಬ್ರಿಗೆ ಅಗ್ನಿಶಾಮಕ ಠಾಣೆ ಮಂಜೂರು ಆದರೂ ಅದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಅವಘಡಗಳು ಸಂಭವಿಸಿದಾಗ ದೂರದ ಕಾರ್ಕಳದಿಂದ ಅಗ್ನಿಶಾಮಕ ತಂಡ ಬರಬೇಕಿದೆ. ಹಾಗಾಗಿ ಪ್ರಮುಖ ಆದ್ಯತೆಯ ನೆಲೆಯಲ್ಲಿ ಹೆಬ್ರಿಗೆ ಅಗ್ನಿಶಾಮಕ ಠಾಣೆಯನ್ನು ಮಂಜೂರುಗೊಳಿಸಬೇಕು ಎಂಬುದು ಜನರ ಒತ್ತಾಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT