ಶನಿವಾರ, 6 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಸ್ತೆಯುದ್ದಕ್ಕೂ ಹೊಂಡ–ಗುಂಡಿ: ಕಟಪಾಡಿ–ಶಿರ್ವ ಹೆದ್ದಾರಿ ಅಸ್ತವ್ಯಸ್ತ

Published 4 ಜುಲೈ 2024, 7:08 IST
Last Updated 4 ಜುಲೈ 2024, 7:08 IST
ಅಕ್ಷರ ಗಾತ್ರ

ಶಿರ್ವ: ಕಟಪಾಡಿಯಿಂದ ಶಿರ್ವ ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ಮಳೆಗಾಲದ ಒಂದೆರಡು ತಿಂಗಳ ಮೊದಲು ಅಲ್ಲಲ್ಲಿ ಪ್ಯಾಚ್‌ವರ್ಕ್ ನಡೆಸಿದ ಜಾಗದಲ್ಲಿಯೇ ಉದ್ದಕ್ಕೂ ಗುಂಡಿಗಳು ಕಾಣಿಸಿಕೊಂಡಿವೆ.

ದಿನದಿಂದ ದಿನಕ್ಕೆ ಗುಂಡಿಯ ಗಾತ್ರ ಬೆಳೆಯುತ್ತಿದ್ದು, ಈಗಾಗಾಲೇ ದ್ವಿಚಕ್ರ ವಾಹನಗಳಲ್ಲದೆ, ಆಟೊ, ಕಾರು ವಾಹನಗಳು ಹೊಂಡದಲ್ಲಿ ಬಿದ್ದು ಹರಸಾಹಸ ಪಟ್ಟು ಪ್ರಯಾಣ ಮಾಡಬೇಕಿದೆ.

ಈ ರಸ್ತೆಯಲ್ಲಿ ರಾತ್ರಿ ಹಗಲೆನ್ನದೆ ಸಾವಿರಾರು ವಾಹನಗಳು, ಬೃಹತ್ ಗಾತ್ರದ ಶಿಲೆ ಕಲ್ಲುಗಳನ್ನು ಸಾಗಿಸುವ ಘನ ವಾಹನಗಳು, ಟಿಪ್ಪರ್‌ಗಳ ಓಡಾಟದಿಂದ ಸಣ್ಣ ಹೊಂಡಗಳೆಲ್ಲ ದೊಡ್ಡ ಗುಂಡಿಗಳಾಗಿ ಮಾರ್ಪಟ್ಟಿವೆ. ರಸ್ತೆ ಬದಿಯಲ್ಲಿ ಸರಾಗವಾಗಿ ನೀರು ಹರಿಯಲು ಚರಂಡಿ ನಿರ್ಮಿಸಿಲ್ಲ. ಮಳೆನೀರು ರಸ್ತೆಯಲ್ಲಿ ನದಿಯಂತೆ ಹರಿಯುತ್ತಿದ್ದು, ನೀರು ತುಂಬಿದ ಗುಂಡಿಗಳಲ್ಲಿ ದ್ವಿಚಕ್ರ ಸಹಿತ, ಸಣ್ಣ ವಾಹನಗಳು ಮುಳುಗಿ ಏಳುವ ಭರದಲ್ಲಿ ಎಡವಟ್ಟು ಮಾಡಿಕೊಳ್ಳುವುದು ನಿತ್ಯ ದೃಶ್ಯವಾಗಿದೆ.

ಕಟಪಾಡಿ ಸಂತೆ ಮಾರ್ಕೆಟ್‌ನ ಅನತಿ ದೂರದಲ್ಲಿ ಅಚ್ಚಡ ಕ್ರಾಸ್‌ನ ನಡುವೆ ದೊಡ್ಡ ಗಾತ್ರದ ಗುಂಡಿಗಳಿದ್ದು, ಪ್ರತಿದಿನ ಅಪಘಾತ ಸಾಮಾನ್ಯವಾಗಿದೆ. ರಾತ್ರಿ ವೇಳೆ ಮಳೆಬಂದರೆ ಗುಂಡಿಗಳಲ್ಲಿ ನೀರು ತುಂಬಿ ಎಡವಟ್ಟಾಗುವುದು ಖಚಿತ. ಸುಭಾಸ್‌ನಗರ–ಕುಂಜಾರುಗಿರಿ ಕ್ರಾಸ್, ಶಂಕರಪುರ ಬರೋಡಾ ಬ್ಯಾಂಕ್‌ನಿಂದ ಬಂಟಕಲ್ಲು ತಾಂತ್ರಿಕ ಮಹಾವಿದ್ಯಾಲಯದ ಮುಂಭಾಗ, ಬಂಟಕಲ್ಲು–ಬಿ.ಸಿ. ರೋಡ್, ಪಂಜಿಮಾರು–ಅಟ್ಟಿಂಜೆ ಕ್ರಾಸ್ ಗಣಪತಿ ದೇವಳದ ನಡುವಿನ ರಸ್ತೆಯಲ್ಲಿ ಹಲವು ಗುಂಡಿಗಳಿದ್ದು, ಸಮಸ್ಯೆಯಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಹೆದ್ದಾರಿ ಅವ್ಯವಸ್ಥೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಪಾದಾಚಾರಿಗಳಿಗೆ ನಿತ್ಯವೂ ಕೆಸರಿನ ಅಭಿಷೇಕವಾಗುತ್ತಿದೆ. ಸ್ಥಳೀಯರ ಆಕ್ರೋಶ ಮುಗಿಲುಮಟ್ಟುವ ಮೊದಲು ಸ್ಥಳೀಯ ಆಡಳಿತ, ಲೋಕೋಪಯೋಗಿ ಇಲಾಖೆ ಇತ್ತ ಗಮನ ಹರಿಸಬೇಕಿದೆ. ತಾತ್ಕಾಲಿಕ ಉಪಶಮನಕ್ಕಾದರೂ ಕ್ರಮ ಕೈಗೊಳ್ಳಬೇಕು.

ಕಟಪಾಡಿಯಿಂದ ಶಿರ್ವದವರೆಗಿನ ಮುಖ್ಯರಸ್ತೆ, ಒಳ ರಸ್ತೆಗಳು ತೀರಾ ಹದಗೆಟ್ಟಿದ್ದು, ಮಳೆನೀರು ರಸ್ತೆಯಲ್ಲಿಯೇ ಹರಿಯುತ್ತಿದೆ. ವೇಗವಾಗಿ ಸಾಗುವ ವಾಹನಗಳಿಂದ ಕಾರಂಜಿಯಂತೆ ಚಿಮ್ಮುವ ಕೆಸರು, ಬದಿಯಲ್ಲಿ ಸಂಚರಿಸುವ ನಾಗರಿಕರಿಗೆ ಕೆಸರಿನ ಸ್ನಾನ ಮಾಡಿಸುತ್ತಿದೆ. ಕಿರಿಕಿರಿ ಅನುಭವಿಸುವಂತಾಗಿದೆ. ಪಂಜಿಮಾರು ಬಳಿ ಮೋರಿ ನಿರ್ಮಾಣ ಆಗಿದ್ದು, ರಸ್ತೆ ಕಾರ್ಯ ಆಮೆಗತಿಯಲ್ಲಿ ಸಾಗುತ್ತಿದ್ದು, ವಾಹನ ಸಂಚಾರಕ್ಕೆ ಸಂಚಕಾರ ತಂದಿದೆ. ಗುತ್ತಿಗೆದಾರರ ನಿಧಾನಗತಿ ಕಾಮಗಾರಿ, ಅತೀವ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಶಿರ್ವದ ವಕೀಲ ಮೆಲ್ವಿನ್ ಡಿಸೋಜ ಆರೋಪಿಸಿದ್ದಾರೆ.

‘ರಸ್ತೆ ತಡೆ, ಹೋರಾಟ ಅನಿವಾರ್ಯ’

ಕಟಪಾಡಿಯಿಂದ ಶಿರ್ವದವರೆಗಿನ ಹೆದ್ದಾರಿ ತೀರಾ ಹದಗೆಟ್ಟಿದ್ದು, ಹಲವು ಬಾರಿ ದುರಸ್ತಿ ಬಗ್ಗೆ ಮಾಧ್ಯಮಗಳಲ್ಲಿ ಬಿತ್ತರವಾದರೂ ಅದರ ಗೋಜಿಗೆ ಹೋಗದೆ ಸಂದಂಧಪಟ್ಟ ಇಲಾಖೆ ಮೌನ ತಳೆದಿದೆ. ಕಟಪಾಡಿ ಸಂತೆಕಟ್ಟೆ ಬಳಿ, ಸುಭಾಸ್‌ನಗರ ಜಾಸ್ಮಿನ್ ಕ್ವಾಟ‌್ರಸ್‌ ಬಳಿ, ಬಂಟಕಲ್ಲು ಮಧ್ವವಾದಿರಾಜ ತಾಂತ್ರಿಕ ಕಾಲೇಜು ಬಳಿಯೂ ಹದಗೆಟ್ಟಿದ್ದು, ಶಾಶ್ವತ ಪರಿಹಾರ ಮಾಡುವಲ್ಲಿ ವಿಫಲವಾಗಿದೆ. ರಾಷ್ಟ್ರೀಯ ಹೆದ್ದಾರಿಯಷ್ಟೇ ವಾಹನ ಸಂಚಾರ ಇರುವ ಈ ರಸ್ತೆ ದುರಸ್ತಿ ಮಾಡದಿರಲು ಕಾರಣ ನಿಗೂಢವಾಗಿದೆ. ಜೀವಬಲಿ ಅಥವಾ ಭೀಕರ ಅಪಘಾತಕ್ಕೆ ಕಾಯುತ್ತಿದ್ದೀರಾ? ರಸ್ತೆಯಲ್ಲಿ ಸಂಚರಿಸುವ ವಾಹನಗಳು ತೆರಿಗೆ ಕಟ್ಟುತ್ತಿಲ್ಲವೇ? ಎಂದು ಇಲಾಖೆ ಉತ್ತರಿಸಬೇಕಿದೆ. ರಸ್ತೆ ತಡೆ, ಹೋರಾಟ ಅನಿವಾರ್ಯವಾಗಿದೆ ಎಂದು ಕಟ್ಟಡ ಸಾಮಾಗ್ರಿ ಸಾಗಾಟ ಲಾರಿ, ಟೆಂಪೊ ಮಾಲೀಕರ ಸಂಘ ಕಾಪು ವಲಯ ಅಧ್ಯಕ್ಷ ಚಂದ್ರ ಪೂಜಾರಿ ಎಚ್ಚರಿಕೆ ನೀಡಿದ್ದಾರೆ.

ಕಟಪಾಡಿ-ಶಿರ್ವ ಹೊಂಡ ಗುಂಡಿ ರಸ್ತೆ
ಕಟಪಾಡಿ-ಶಿರ್ವ ಹೊಂಡ ಗುಂಡಿ ರಸ್ತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT