ಸಮುದ್ರ ಮಧ್ಯೆ ಈ ಬಾರಿ ಯಾಂತ್ರಿಕ ಋತುವಿನಲ್ಲಿ ಸರಿಯಾದ ತೂಫಾನ್ ಆಗದೆ ಮೀನುಗಾರಿಕೆ ಆಶಾದಾಯಕವಾಗಿರಲಿಲ್ಲ. ಮಳೆಗಾಲದಲ್ಲಿ ತೂಫಾನ್ ಆಗಿ ಸಮುದ್ರ ಪ್ರಕ್ಷುಬ್ದಗೊಂಡು ಕಡಲಾಳದ ಮಣ್ಣು ಮೇಲೆ ಬಂದಾಗ ಮೀನಿನ ಲಕ್ಷಣ ಕಾಣಿಸಿಕೊಳ್ಳುತ್ತದೆ. ಈ ವೇಳೆ ಪ್ರಕ್ಷುಬ್ದ ಸಮುದ್ರ ಅಲ್ಲಲ್ಲಿ ಶಾಂತತೆ ಕಾಯ್ದುಕೊಂಡರೆ ಮೀನುಗಾರಿಕೆಗೆ ಆನುಕೂಲವಾಗುತ್ತದೆ. ಮಳೆಗಾಲದ ಪ್ರಾರಂಭದಲ್ಲಿ ಉತ್ತಮ ಮಳೆಯಾದರೆ ನದಿ ಮೂಲಕ ಮಳೆ ನೀರು ಕಡಲ ಒಡಲು ಸೇರುತ್ತದೆ. ನದಿ ಮೂಲಕ ಕಡಲು ಸೇರಿದ ಕೆಂಪುನೀರಿನ ವಾಸನೆಗೆ ಮೀನು ಮೊಟ್ಟೆ ಇಡಲು ಧಾವಿಸಿ ಬರುತ್ತವೆ. ಆಳಸಮುದ್ರದಿಂದ ಸಂತಾನೋತ್ಪತ್ತಿಗೆ ಬರುವ ಮೀನು ಸಮುದ್ರ ತೀರ ಸಮುದ್ರ–ನದಿ ಸೇರುವ ಸಂಗಮಗಳಲ್ಲಿ ಮೊಟ್ಟೆ ಇಡುತ್ತವೆ. ಮೊಟ್ಟೆ ಇಟ್ಟ ಮೀನು ನಂತರ ಆಳಸಮುದ್ರಕ್ಕೆ ಹೊರಡಲು ಅಣಿಯಾಗುತ್ತವೆ. ಇದೇ ಸಂದರ್ಭದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ನಡೆಯುವುದರಿಂದ ಈ ಮೀನುಗಳೇ ಮೀನುಗಾರರ ಬಲೆಗೆ ಬೀಳುತ್ತವೆ ಎಂದು ಉದ್ಯಾವರ ಪಡುಕರೆ ಯೋಗೀಶ್ ಸಾಲ್ಯಾನ್ ವಿವರಿಸಿದರು.