ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ: ಕೃಷಿ ಭೂಮಿ ಬಾಡಿಗೆ ನೀಡಿ ದಿನಗೂಲಿಯಾದ ರೈತರು!

Published 4 ಜುಲೈ 2024, 4:51 IST
Last Updated 4 ಜುಲೈ 2024, 4:51 IST
ಅಕ್ಷರ ಗಾತ್ರ

ಶಿರಸಿ: ಕಳೆದ ಸಾಲಿನ ಬರಗಾಲವು ಬನವಾಸಿ ಭತ್ತದ ಬೆಳೆಗಾರರನ್ನು ಇನ್ನೂ ಕಾಡುತ್ತಿದೆ. ಮಾಡಿದ ಸಾಲ ತೀರಿಸಲಾಗದ ಬೆಳೆಗಾರರು ತಮ್ಮ ಕೃಷಿ ಭೂಮಿಯನ್ನು ಬಾಡಿಗೆ ಆಧಾರದಲ್ಲಿ ನೀಡಿ ಅಲ್ಲಿ ದಿನಗೂಲಿಗಳಾಗಿ ದುಡಿಯುತ್ತಿದ್ದಾರೆ!   

ಶಿರಸಿ ತಾಲ್ಲೂಕಿನ ಬನವಾಸಿ ಹೋಬಳಿಯಲ್ಲಿ ಪ್ರಸಕ್ತ ವರ್ಷ ಸ್ವಂತ ಕೃಷಿ ಮಾಡುವ ಕೃಷಿಕರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುವ ಸಾಧ್ಯತೆ ಹೆಚ್ಚಿದೆ. ಇತ್ತೀಚಿನ ವರ್ಷಗಳಲ್ಲಿ ಬನವಾಸಿ ಕೃಷಿ ವಲಯ ಅತಿವೃಷ್ಟಿ, ಅನಾವೃಷ್ಟಿಗೆ ನಲುಗಿದೆ.

ಈ ಭಾಗದಲ್ಲಿ ಬಹುತೇಕ ಕೃಷಿಕರು ಸಣ್ಣ ಹಿಡುವಳಿದಾರರಿದ್ದು, ಸಾಲ ಮಾಡಿಯೇ ಕೃಷಿ ಮಾಡುವ ವ್ಯವಸ್ಥೆ ಬೆಳೆದು ಬಂದಿದೆ. ಕಳೆದ ಸಾಲಿನಲ್ಲಿ ತೀವ್ರ ಬರಗಾಲ ಎದುರಾದ ಕಾರಣ ಹಾಕಿದ ಬಂಡವಾಳ ಕೂಡ ರೈತರ ಕೈ ಸೇರಿರಲಿಲ್ಲ.

ಭತ್ತ ಬೆಳೆದ ರೈತರು ಜೀವನ ನಿರ್ವಹಣೆಗೂ ಪರದಾಡಿದ್ದರು. ಮಾಡಿದ ಸಾಲ ತೀರಿಸಲಾಗದೆ ರೈತರು ಆತ್ಮಹತ್ಯೆ ಮಾಡಿಕೊಂಡ ಘಟನೆಗಳೂ ಜರುಗಿದ್ದವು. ಹೀಗಾಗಿ ಪ್ರಸಕ್ತ ಸಾಲಿನಲ್ಲಿ ಭತ್ತ ಬೆಳೆಯುವ ಶೇ 30ಕ್ಕೂ ಹೆಚ್ಚು ರೈತರು ಶುಂಠಿ ಹಾಗೂ ಅನಾನಸ್ ಬೆಳೆಯುವ ಆರ್ಥಿಕವಾಗಿ ಬಲಾಢ್ಯರಾಗಿರುವ ರೈತರಿಗೆ ಬಾಡಿಗೆ ಆಧಾರದಲ್ಲಿ ತಮ್ಮ ಕೃಷಿ ಭೂಮಿಯನ್ನು ನೀಡಿ ಕೃಷಿಯಿಂದ ದೂರ ಸರಿದು ಕೂಲಿಯತ್ತ ಹೊರಳಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಈ ಭಾಗದಲ್ಲಿ ಶುಂಠಿ ಕೃಷಿಗೆ ಮಹತ್ವ ನೀಡಲಾಗುತ್ತಿದ್ದು, ಕೆಲ ಸ್ಥಳೀಯ ರೈತರು ಶುಂಠಿಯನ್ನೇ ಮುಖ್ಯ ಬೆಳೆಯನ್ನಾಗಿ ಬೆಳೆಯುತ್ತಿದ್ದಾರೆ. ಇದರ ಜತೆ ಕೇರಳದ ಕೆಲ ಉದ್ಯಮಿಗಳು ಬನವಾಸಿ ನೆಲದಲ್ಲಿ ಭೂಮಿಯನ್ನು 5-10 ವರ್ಷ ಬಾಡಿಗೆ ಪಡೆದು ಶುಂಠಿ ಬಿತ್ತಿ ಆದಾಯ ಗಳಿಸುತ್ತಿದ್ದಾರೆ.

‘ಪ್ರಸಕ್ತ ಸಾಲಿನಲ್ಲಿ ಭತ್ತ ಬೆಳೆಯುವ ಸಾವಿರ ಎಕರೆಗೂ ಹೆಚ್ಚಿನ ಸಮೃದ್ಧ ಭೂಮಿಯನ್ನು ಬಾಡಿಗೆ ಪಡೆಯುವಲ್ಲಿ ಈ ಉದ್ಯಮಿಗಳ ಪಾಲು ಹೆಚ್ಚಿದೆ. ಆರ್ಥಿಕವಾಗಿ ಜರ್ಜರಿತವಾಗಿರುವ ಸ್ಥಳೀಯ ಭತ್ತ ಬೆಳೆಗಾರರು ಇರುವ ಭೂಮಿ ಬಾಡಿಗೆ ನೀಡಿ ದಿನಗೂಲಿ ಕೆಲಸದತ್ತ ಮುಖ ಮಾಡುತ್ತಿದ್ದಾರೆ. ಕೆಲ ರೈತರು ಬಾಡಿಗೆ ನೀಡಿದ ತಮ್ಮದೇ ಜಮೀನಿನಲ್ಲಿ ದಿನಗೂಲಿ ಲೆಕ್ಕಕ್ಕೆ ಕೂಲಿಯಾಗಿ ದುಡಿಯುತ್ತಿದ್ದಾರೆ’ ಎನ್ನುತ್ತಾರೆ ಸ್ಥಳೀಯ ಕೃಷಿಕ ಮಹೇಶ ನಾಯ್ಕ. 

‘ಕಳೆದ ಸಾಲಿನಲ್ಲಿ ಎರಡು ಎಕರೆ ಭತ್ತ ಬೆಳೆಯಲು ಕನಿಷ್ಠ 1 ಲಕ್ಷ ಸಾಲ ಮಾಡಿದ್ದೆ. ಬರದ ಕಾರಣಕ್ಕೆ ಬೆಳೆ ನಾಶವಾಗಿ ಹಾಕಿದ ಬಂಡವಾಳ ಕೂಡ ಹುಟ್ಟಿರಲಿಲ್ಲ. ಸಾಲ ಮೈಮೇಲೆ ಬಂದ ಪರಿಣಾಮ ಈ ಬಾರಿ ಮತ್ತೆ ಎಲ್ಲಯೂ ಸಾಲ ಸಿಕ್ಕಿಲ್ಲ. ಹೀಗಾಗಿ ಸ್ವಂತ ಕೃಷಿಗೆ ಉತ್ಸಾಹ ತೋರದೆ ಭೂಮಿ ಬಾಡಿಗೆ ನೀಡಿ ಅದರಿಂದ ಬಂದ ಆದಾಯದಲ್ಲಿ ಸಾಲ ತೀರಿಸುತ್ತಿದ್ದೇನೆ’ ಎನ್ನುತ್ತಾರೆ ಬನವಾಸಿಯ ಭತ್ತ ಬೆಳೆಗಾರ ದೇವರಾಜ ನಾಯ್ಕ.

‘ಎಕರೆಗೆ ₹30ಸಾವಿರದಿಂದ ₹50 ಸಾವಿರ ಮುಂಗಡ ಹಣ ನೀಡಿ ಕೃಷಿ ಭೂಮಿ ಬಾಡಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಭೂಮಿಯಲ್ಲಿ ದೀರ್ಘಾವಧಿ ಬೆಳೆ ಬೆಳೆಯದಂತೆ ಷರತ್ತು ವಿಧಿಸಿ ಭೂಮಿ ನೀಡಿದ್ದೇವೆ’ ಎಂದು ಮಾಹಿತಿ ನೀಡಿದರು.

ಬನವಾಸಿ ಭಾಗದಲ್ಲಿ 765 ಹೆಕ್ಟೇರ್ ಭತ್ತ ಬಿತ್ತನೆ ಗುರಿಯಿತ್ತು. ಆದರೆ ಈವರೆಗೆ 700 ಹೆಕ್ಟೇರ್ ಬಿತ್ತನೆ ಮಾಡಲಾಗಿದೆ. 3890 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಗುರಿಯಿದ್ದು ಇನ್ನೂ ನಾಟಿ ಕಾರ್ಯ ಆರಂಭವಾಗಿಲ್ಲ.
ನಂದೀಶ ಆರ್ ಕೃಷಿ ಇಲಾಖೆ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT