ಶುಕ್ರವಾರ, 27 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ | ಭೂತಾನ್ ಅಡಿಕೆ ಆಮದು ಸ್ಥಗಿತಗೊಳಿಸಿ: ಶಾಸಕ ಭೀಮಣ್ಣ

Published : 27 ಸೆಪ್ಟೆಂಬರ್ 2024, 6:41 IST
Last Updated : 27 ಸೆಪ್ಟೆಂಬರ್ 2024, 6:41 IST
ಫಾಲೋ ಮಾಡಿ
Comments

ಶಿರಸಿ: 'ಭೂತಾನ್‌ನಿಂದ 17 ಸಾವಿರ ಟನ್ ಹಸಿ ಅಡಿಕೆ ಆಮದಿಗೆ ಕೇಂದ್ರ ಸರ್ಕಾರ ನೀಡಿದ ಅನುಮತಿಯನ್ನು ದೇಶೀಯ ಅಡಿಕೆ ಬೆಳೆಗಾರರ ಹಿತದೃಷ್ಟಿಯಿಂದ ಸ್ಥಗಿತ ಮಾಡಬೇಕು' ಎಂದು ಶಾಸಕ ಭೀಮಣ್ಣ ನಾಯ್ಕ ಆಗ್ರಹಿಸಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. 'ಅಡಿಕೆ ಬೆಳೆಗಾರರ ಕಷ್ಟ ಸುಖ ನೋಡಬೇಕಿದ್ದ, ಸಂಸತ್ತಿನಲ್ಲಿ ಈ ಬಗ್ಗೆ ಧ್ವನಿ ಎತ್ತಬೇಕಾದ ಬಿಜೆಪಿ ಸಂಸದರು ಮಾಯವಾಗಿದ್ದಾರೆ. ದೇಶದಲ್ಲಿ ಸಾಕಷ್ಟು ಅಡಿಕೆ ಬೆಳೆಯಲಾಗುತ್ತಿದೆ. ಆದರೆ ಕೇಂದ್ರ ಸರ್ಕಾರವು ಭೂತನ್ ಅಡಿಕೆ ಆಮದಿಗೆ ಅನುಮತಿ ನೀಡಿದೆ. ಇದು ದೇಶೀಯ ಅಡಿಕೆ ದರ ಕುಸಿತಕ್ಕೆ ಕಾರಣವಾಗಿದೆ. ವಿದೇಶಿ ಅಡಿಕೆ ಆಮದು ಮಾಡುವ ವೇಳೆ ಮಲೆನಾಡಿನ ಅಡಿಕೆ ಬೆಳೆಯುವ ಕ್ಷೇತ್ರಗಳ ಸಂಸದರು ಏನು ಮಾಡುತ್ತಿದ್ದರು? ಯಾಕೆ ವಿರೋಧಿಸಿಲ್ಲ?' ಎಂದು ಪ್ರಶ್ನಿಸಿದ ಅವರು, 'ಅಡಿಕೆ ಬೆಳೆಯುವ ಕ್ಷೇತ್ರದ ಎಲ್ಲ ಸಂಸದರು ಈ ವಿಷಯ ಪ್ರಧಾನಿ ಗಮನಕ್ಕೆ ತಂದು ಸ್ಥಗಿತದ ನಿರ್ಣಯ ಕೈಗೊಳ್ಳದಿದ್ದರೆ ಬೆಳೆಗಾರರು ಹೋರಾಟದ ಹಾದಿ ತುಳಿಯಬೇಕಾಗುತ್ತದೆ' ಎಂದರು.

'ರಾಜ್ಯದಲ್ಲಿ ಅಡಿಕೆ ಬೆಳೆಯುವ ಹಾಗೂ ಅದನ್ನು ಅವಲಂಬಿಸಿರುವ ಕುಟುಂಬಗಳು ಸಾಕಷ್ಟಿವೆ. ಆದರೆ ಈ ಬಾರಿ ಅತಿವೃಷ್ಟಿಯಿಂದ ಕೊಳೆ ರೋಗ ಬಂದ ಪರಿಣಾಮ ಅಪಾರ ನಷ್ಟವಾಗಿದೆ. ಹೀಗಾಗಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಡಿಕೆ ಪ್ರದೇಶದಲ್ಲಾದ ಹಾನಿಯ ಮಾಹಿತಿ ಪಡೆದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿ ನೀಡಿದ್ದು, ಸೂಕ್ತ ಪರಿಹಾರ ನೀಡುವಂತೆ ವಿನಂತಿಸಿದ್ದೇನೆ' ಎಂದು ಹೇಳಿದರು.

'ಹೊರ ದೇಶ, ರಾಜ್ಯದ ಅಡಿಕೆ ಮಲೆನಾಡ ಅಡಿಕೆ ಜತೆ ಕಲಬೆರಕೆ ಮಾಡಿ ಮಾರುಕಟ್ಟೆಗೆ ಬಿಟ್ಟರೆ ಅಂಥ ವರ್ತಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು' ಎಂದು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT