ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭಟ್ಕಳ: ಸರ್ಕಾರಿ ಪದವಿ ಕಾಲೇಜಿನಲ್ಲಿ ‘ಮಳೆನೀರು’ ಸಂಕಷ್ಟ

ಉದ್ಘಾಟನೆಗೊಂಡ ಎರಡೇ ವರ್ಷಕ್ಕೆ ಸೋರಿಕೆ: ಬಸ್ ಸೌಕರ್ಯಕ್ಕೂ ಪರದಾಟ
Published : 2 ಸೆಪ್ಟೆಂಬರ್ 2024, 4:35 IST
Last Updated : 2 ಸೆಪ್ಟೆಂಬರ್ 2024, 4:35 IST
ಫಾಲೋ ಮಾಡಿ
Comments

ಭಟ್ಕಳ: ಉದ್ಘಾಟನೆಗೊಂಡ ಎರಡೇ ವರ್ಷದಲ್ಲಿ ಭಟ್ಕಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹೊಸ ಕಟ್ಟಡ ಮಳೆಗಾಲದಲ್ಲಿ ಸೋರಿಕೆಯಾಗುತ್ತಿದ್ದು, ವಿದ್ಯಾರ್ಥಿಗಳು ಮಳೆನೀರಿನಲ್ಲಿ ಕುಳಿತು ಪಾಠ ಕೇಳುವ ಸ್ಥಿ ಉಂಟಾಗಿದೆ.

ಉನ್ನತ ಶಿಕ್ಷಣ ಇಲಾಖೆಯಿಂದ ಮಂಜೂರಾದ ₹3 ಕೋಟಿ ವೆಚ್ಚದಲ್ಲಿ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆ (ಕೆ.ಆರ್.ಐ.ಡಿ.ಎಲ್) ಕಟ್ಟಡ ನಿರ್ಮಿಸಿದೆ. ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ದೇವಿನಗರದಲ್ಲಿ 6 ತರಗತಿ ಕೊಠಡಿ, ಪ್ರಾಚಾರ್ಯರ ಕೊಠಡಿ, ಸಿಬ್ಬಂದಿ ಕೊಠಡಿ ಹಾಗು ಶೌಚಾಲಯವನ್ನು ನಿರ್ಮಿಸಲಾಗಿತ್ತು.

ಕಾಮಗಾರಿ ಪೂರ್ಣಗೊಂಡ ನಂತರ ಎರಡು ವರ್ಷಗಳ ಹಿಂದೆ ಪಟ್ಟಣದ ರಂಗಿನಕಟ್ಟೆಯ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಕಾಲೇಜನ್ನು ಸ್ವಂತ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿತ್ತು. ಈಗ ಹೊಸ ಕಟ್ಟಡವೇ ಸೋರಿಕೆಯಾಗುತ್ತಿದ್ದು, ಕಳಪೆ ಕಾಮಗಾರಿ ಬಗ್ಗೆ ವಿದ್ಯಾರ್ಥಿಗಳು ಪ್ರಶ್ನಿಸುತ್ತಿದ್ದಾರೆ.

‘ಕಾಲೇಜನ್ನು ಪಟ್ಟಣದ ಬಸ್ ನಿಲ್ದಾಣದಿಂದ 4 ಕಿ.ಮೀ ದೂರದಲ್ಲಿ ಕಟ್ಟಲಾಗಿದೆ. ಈ ಕಟ್ಟಡವು ಜಾಲಿ ಪಟ್ಟಣದ ಬಸ್ ಮಾರ್ಗಕ್ಕಿಂತ 1 ಕಿ.ಮೀ ಒಳ ಪ್ರದೇಶದಲ್ಲಿದೆ. ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳು ಎರಡು ಬಸ್ ಹಿಡಿದು ಹೋದರೂ ನಡೆದುಕೊಂಡು ಕಾಲೇಜು ತಲುಪಬೇಕಾದ ಸ್ಥಿತಿ ಇದೆ. ಈಗ ಹೊಸ ಕಟ್ಟಡ ಸೋರಿಕೆಯಾಗುತ್ತಿದೆ. ಕಾಲೇಜಿನವರೆಗೆ ಬಸ್ ವ್ಯವಸ್ಥೆ ಇಲ್ಲದ ಕಾರಣ ವಿದ್ಯಾರ್ಥಿಗಳ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ’ ಎನ್ನುತ್ತಾರೆ ಸ್ಥಳೀಯರಾದ ಸುರೇಶ ನಾಯ್ಕ.

‘ಕಟ್ಟಡ ಪೂರ್ಣಗೊಂಡ 6 ತಿಂಗಳಿನಲ್ಲಿಯೇ ಸೋರಿಕೆಯಾಗುತ್ತಿರುವ ಬಗ್ಗೆ ಕಳೆದ ವರ್ಷ ಕೆ.ಆರ್.ಐ.ಡಿ.ಎಲ್‍ಗೆ ಪತ್ರ ಬರೆದು ಸರಿಪಡಿಸುವಂತೆ ಸೂಚಿಸಲಾಗಿತ್ತು. ಆದರೆ ಯಾರು ಕೂಡ ಈ ಕಡೆ ಗಮನಹರಿಸಿಲ್ಲ. ಈ ಬಾರಿ ಜುಲೈನಲ್ಲಿ ಇನ್ನೊಮ್ಮೆ ಪತ್ರ ಬರೆದು ಕಟ್ಟಡದ ಸೋರಿಕೆ ಹಾಗು ಗೋಡೆಗಳು ಶಿಥಿಲಾವಸ್ಥೆಗೊಂಡ ಬಗ್ಗೆ, ಕಿಟಿಕಿ ಗಾಜುಗಳು ಮುರಿದ ಬಗ್ಗೆ ಹಾಗು ಶೌಚಾಲಯ ಅವ್ಯಸ್ಥೆಯ ಪೋಟೊ ಸಮೇತ ಸಾಕ್ಷ್ಯ ನೀಡಿ ಸರಿಪಡಿಸಿಕೊಂಡುವಂತೆ ತಿಳಿಸಲಾಗಿತ್ತು. ಈವರೆಗೂ ಸಂಸ್ಥೆಯು ಸರಿಪಡಿಸಲು ಮುಂದಾಗಿಲ್ಲ’ ಎಂದು ಕಾಲೇಜಿನ ಪ್ರಾಚಾರ್ಯ ನಾಗೇಶ ಶೆಟ್ಟಿ ಹೇಳಿದರು.

ಸ್ಥಳಾಂತರಕ್ಕೆ ಯೋಚನೆ

‘ಕಾಲೇಜು ಕಟ್ಟಡ ಸೋರಿಕೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಪಟ್ಟಣದಿಂದ ದೂರದಲ್ಲಿರುವ ಕಾಲೇಜ್‍ ಅನ್ನು ಭಟ್ಕಳ ಪಟ್ಟಣದಲ್ಲಿಯೇ ನಿರ್ಮಿಸಲು ಸೂಕ್ತ ಜಾಗಕ್ಕೆ ಹುಡುಕಾಟ ನಡೆದಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ತಿಳಿಸಿದರು. ‘2013–18ರ ಅವಧಿಯಲ್ಲಿ ಶಾಸಕನಾಗಿದ್ದ ವೇಳೆ ಕಾಲೇಜು ಕಟ್ಟಡಕ್ಕೆ ಅನುದಾನ ಮಂಜೂರು ಮಾಡಿಸಿದ್ದೆ. ನನ್ನ ಅವಧಿಯ ನಂತರ ಆಯ್ಕೆಯಾಗಿದ್ದ ಶಾಸಕರು ಜನವಸತಿ ರಹಿತ ಪ್ರದೇಶದಲ್ಲಿ ಕಾಲೇಜು ನಿರ್ಮಿಸಲು ಕಾರಣರಾಗಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT