ಜಾತ್ರೆಗೆ ‘ಹಾಲೋಕಳಿ’ಯ ಮೆರುಗು
ಜಾತ್ರೆಯಲ್ಲಿ ಸ್ತಂಭಾರೋಹಣವೇ ಜಾತ್ರೆಯ ವಿಶೇಷ. ಇಲ್ಲಿನ ಅರಸರು ಗೋವುಗಳಿಗೆ ವಿಶೇಷ ಮಹತ್ವ ನೀಡುತ್ತಿದ್ದರು. ಅಧಿಕ ಗೋವು ಸಂಪತ್ತು ಇತ್ತು. ಹಳದಿ ಬಟ್ಟೆ ಧರಿಸಿದ ನಿರ್ದಿಷ್ಟ ಜನರು ಶತಮಾನಗಳ ಹಿಂದೆ ಚರ್ಮದ ಪಿಚಗಾರಿಯಲ್ಲಿ ಹಾಲನ್ನು ತುಂಬಿ ಅದನ್ನು ಕಂಬಾರೋಹಿಗಳಿಗೆ ಮತ್ತು ಭಕ್ತರಿಗೆ ಸಿಂಪಡಿಸುತ್ತಿದ್ದರು. ಹಾಲಿನಿಂದ ಓಕಳಿ ಆಡುತ್ತಿದ್ದ ಕಾರಣ ಈ ಜಾತ್ರೆಗೆ ‘ಹಾಲೋಕಳಿ’ ಎಂಬ ಅಭಿದಾನ ಬಂದಿದೆ. ಈಗ ಹಾಲಿನ ಬದಲಿಗೆ ಕಲ್ಯಾಣಿಯ ನೀರನ್ನು ಪಿಚಗಾರಿಯಲ್ಲಿ ತುಂಬಿಕೊಂಡು ಜನರಿಗೆ ಚಿಮುಕಿಸಲಾಗುತ್ತಿದೆ. ದೇವಸ್ಥಾನದ ಕೆಳಗಿನ ಬಯಲಿನಲ್ಲಿ 50 ಅಡಿ ಉದ್ದವಿರುವ 5 ಕಂಬಗಳನ್ನು ನೆಡಲಾಗುತ್ತದೆ. ಕಂಬಗಳಿಗೆ ಅರದಾಳ ಬೆಣ್ಣೆಬಾಳದಂತಹ ಜಾರುವ ಪದಾರ್ಥಗಳನ್ನು ಲೇಪಿಸಿರಲಾಗಿರುತ್ತದೆ. ಕಂಬದ ತುದಿಯಲ್ಲಿ ನೀರು ತುಂಬಿದ ಮಡಿಕೆಗಳನ್ನು ಇಟ್ಟುಕೊಂಡು ವ್ಯಕ್ತಿಯೊಬ್ಬ ಕುಳಿತಿರುತ್ತಾನೆ. ಸಂಜೆ ವೇಳೆ ಅರಸರು ಪೂಜೆ ಸಲ್ಲಿಸಿ ದೇಗುಲದ ಮೇಲಿನಿಂದ ನಾಣ್ಯ ಚಿಮ್ಮಿಸಿ ಸ್ತಂಬಾರೋಹಣಕ್ಕೆ ಚಾಲನೆ ನೀಡುತ್ತಾರೆ. ಕಂಬಾರೋಹಿಗಳು ಏರಲು ಆರಂಭಿಸುತ್ತಾರೆ. ಮೇಲೆ ಕುಳಿತ ವ್ಯಕ್ತಿ ಅವರ ಮೇಲೆ ನೀರು ಹಾಕುತ್ತಿರುತ್ತಾನೆ. ಕೆಳಗಿರುವ ನಿರ್ದಿಷ್ಟ ಜನರು ಚರ್ಮದ ಪಿಚಗಾರಿಯಿಂದ ನೀರು ಚಿಮ್ಮಿಸುತ್ತಾರೆ. ಇದರಿಂದ ಆರೋಹಿಗಳು ಜಾರಿ ಜಾರಿ ಕೆಳಗೆ ಬೀಳುತ್ತಾರೆ. ಇದು ನೋಡುಗರಿಗೆ ರಂಜನೆ ನೀಡುತ್ತದೆ. ಕೊನೆಗೆ ಒಬ್ಬರ ಸಹಾಯದಿಂದ ಒಬ್ಬರು ಮೇಲೇರಿ ಕಂಬದ ತುದಿಗೆ ಕಟ್ಟಿರುವ ಹಣ್ಣಿನ ಹೋಳುಗಳನ್ನು ಹರಿಯುತ್ತಾರೆ. ಜನ ಕರತಾಡನ ಮಾಡಿ ಹುರಿದುಂಬಿಸುತ್ತಾರೆ. ಮರು ದಿನ ಇದೇ ರೀತಿ ರಮಣಪ್ಪನಾಯಕನ ಕಟ್ಟೆ ಹತ್ತಿರ ಕಂಬಾರೋಹಣ ಜರುಗುತ್ತದೆ. ಜಾತ್ರೆಗೆ ಸುತ್ತಮುತ್ತಲಿನ ಊರುಗಳಿಂದ ಅಸಂಖ್ಯ ಭಕ್ತರು ಆಗಮಿಸುತ್ತಾರೆ. ಮೂರು ದಿನ ವೈಭವವಾಗಿ ಜರುಗುವ ಪರಿಷೆಗೆ 15 ದಿನಗಳವರೆಗೆ ಭಕ್ತರು ದಂಡು ಇರುತ್ತದೆ.