ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ | ಶಿಕ್ಷಕರ ಹುದ್ದೆ ಖಾಲಿ: ಗುಣಮಟ್ಟ ಕುಂಠಿತ

Published : 5 ಸೆಪ್ಟೆಂಬರ್ 2024, 6:04 IST
Last Updated : 5 ಸೆಪ್ಟೆಂಬರ್ 2024, 6:04 IST
ಫಾಲೋ ಮಾಡಿ
Comments

ಯಾದಗಿರಿ: ಜಿಲ್ಲೆಯಲ್ಲಿ ಸರ್ಕಾರಿ 929 ಪ್ರಾಥಮಿಕ, 141 ಪ್ರೌಢ ಶಾಲೆಗಳಿದ್ದು, 2,700 ಪ್ರಾಥಮಿಕ, 670 ಪ್ರೌಢಶಾಲೆ ಹುದ್ದೆಗಳು ಖಾಲಿ ಇವೆ. ಪ್ರಾಥಮಿಕ ಹಂತದಲ್ಲೇ ಶಿಕ್ಷಕರ ಕೊರತೆ ಇರುವುದರಿಂದ ಇದು ಎಲ್ಲದರ ಮೇಲೂ ಪರಿಣಾಮ ಬೀರುತ್ತಿದೆ.

ಜಿಲ್ಲೆಯೂ ಹಲವಾರು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕೊನೆ ಸ್ಥಾನದಲ್ಲಿ ಬರುತ್ತಿದೆ. ಈ ಬಗ್ಗೆ ಜಿಲ್ಲೆಗೆ ಭೇಟಿ ನೀಡಿದ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಅವರು ಖಾಲಿ ಹುದ್ದೆಗಳು, ಫಲಿತಾಂಶದ ಬಗ್ಗೆ ಗಮನ ಸೆಳೆದಿದ್ದಾರೆ. ಜಿಲ್ಲೆಯಲ್ಲಿ 3ಸಾವಿರಕ್ಕೂ ಅಧಿಕ ಹುದ್ದೆಗಳು ಖಾಲಿ ಇರುವುದರಿಂದ ಯಾವ ರೀತಿ ಶಿಕ್ಷಣ ಸಿಗುತ್ತದೆ ಎಂದು ಪ್ರಶ್ನೆ ಎತ್ತಿದ್ದಾರೆ.

ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ–3 ಹಂತಗಳಲ್ಲಿ ನಡೆದಿದ್ದು, ಪೂರ್ಣ ಫಲಿತಾಂಶ ಸಿಕ್ಕಿಲ್ಲ. ಹೀಗಾಗಿ ಬುನಾದಿಯಿಂದಲೇ ಶಿಕ್ಷಕರ ಕೊರತೆ ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಜಿಲ್ಲೆಯಲ್ಲಿ ವಾಸ್ತವಿಕವಾಗಿ ಆರು ತಾಲ್ಲೂಕುಗಳಿದ್ದರೆ ಶಿಕ್ಷಣ ಇಲಾಖೆ ಆಡಳಿತ ದೃಷ್ಟಿಯಿಂದ ಹಳೆಯ ಮೂರು ತಾಲ್ಲೂಕುಗಳನ್ನೇ ಮುಂದುವರಿಸಿಕೊಂಡಿದೆ. ಹುಣಸಗಿ, ವಡಗೇರಾ, ಗುರುಮಠಕಲ್‌ ನೂತನ ತಾಲ್ಲೂಕುಗಳಾದರೂ ಹಳೆ ತಾಲ್ಲೂಕಿನ ಬಿಇಒ ಕಚೇರಿಗಳಿಗೆ ಅಲೆದಾಡಬೇಕಾಗಿದೆ.

‌ಶಹಾಪುರ ತಾಲ್ಲೂಕಿನಲ್ಲಿ 286, ಸುರಪುರ ತಾಲ್ಲೂಕಿನಲ್ಲಿ 348, ಯಾದಗಿರಿ ತಾಲ್ಲೂಕಿನಲ್ಲಿ 295 ಸೇರಿದಂತೆ 929 ಪ್ರಾಥಮಿಕ ಶಾಲೆಗಳಿವೆ. ಮೂರು ತಾಲ್ಲೂಕುಗಳಲ್ಲಿ 5,626 ಮಂಜೂರಾತಿ ಹುದ್ದೆಗಳಿವೆ. 2,926 ಕಾರ್ಯನಿರತ ಹುದ್ದೆಗಳಿದ್ದು, 2,700 ಖಾಲಿ ಹುದ್ದೆಗಳಿವೆ.

ಇನ್ನೂ ಶಹಾಪುರ ತಾಲ್ಲೂಕಿನಲ್ಲಿ 46, ಸುರಪುರ ತಾಲ್ಲೂಕಿನಲ್ಲಿ 49, ಯಾದಗಿರಿ ತಾಲ್ಲೂಕಿನಲ್ಲಿ 46 ಸೇರಿದಂತೆ 141 ಪ್ರೌಢ ಶಾಲೆಗಳಿವೆ. ಶಹಾಪುರ ತಾಲ್ಲೂಕಿನಲ್ಲಿ 479 ಹುದ್ದೆಗಳು ಮಂಜೂರಾಗಿವೆ. ಇದರಲ್ಲಿ 275 ಕಾರ್ಯನಿರತ, 204 ಖಾಲಿ ಹುದ್ದೆಗಳಿವೆ. ಸುರಪುರ ತಾಲ್ಲೂಕಿನಲ್ಲಿ 564 ಮಂಜೂರಾಗಿದ್ದು, 307 ಭರ್ತಿ, 257 ಖಾಲಿ ಹುದ್ದೆಗಳಿವೆ. ಯಾದಗಿರಿ ತಾಲ್ಲೂಕಿನಲ್ಲಿ 505 ಮಂಜೂರು, 296 ಕಾರ್ಯನಿರತ, 209 ಖಾಲಿ ಹುದ್ದೆಗಳಿವೆ. ಹೀಗಾಗಿ ಜಿಲ್ಲೆಯಲ್ಲಿ ಶಿಕ್ಷಕರ ಖಾಲಿ ಹುದ್ದೆಗಳು ರಾರಾಜಿಸುತ್ತಿದ್ದು, ಸಂಬಂಧಿಸಿದವರು ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.

‘ಶಿಕ್ಷಣ ಇಲಾಖೆ ಹುದ್ದೆಗಳನ್ನು ಭರ್ತಿ ಮಾಡಲು ಮನಸ್ಸು ಮಾಡುತ್ತಿಲ್ಲ. ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಸಮುಜಾಯಿಸಿ ನೀಡಲಾಗುತ್ತಿದೆ. ಗ್ರಾಮದ ಪ್ರಭಾವಿಗಳು ಶಿಕ್ಷಕರ ಮೇಲೆ ಗದಪ್ರಹಾರ ಮಾಡಿ ಅತಿಥಿ ಶಿಕ್ಷಕರ ಸ್ಥಾನ ಗಿಟ್ಟಿಸಿಕೊಂಡಿರುತ್ತಾರೆ. ಆದರೆ, ಅವರು ಹೆಸರಿಗೆ ಮಾತ್ರವಿದ್ದು, ಹಲವರು ತಮ್ಮ ಕರ್ತವ್ಯ ಮರೆತ್ತಿದ್ದಾರೆ. ಅತಿಥಿ ಶಿಕ್ಷಕರಗಿಂತ ಕಾಯಂ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಜಿಲ್ಲೆಯ ಫಲಿತಾಂಶ ಸುಧಾರಣೆಗೆ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಕ್ರಮ ವಹಿಸಬೇಕು ಎನ್ನುತ್ತಾರೆ ಶಿಕ್ಷಣ ಪ್ರೇಮಿ ಯಲ್ಲಯ್ಯ ನಾಯಕ ವನದುರ್ಗ.

‘ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ’

ಯಾದಗಿರಿ: 2024-25ನೇ ಸಾಲಿನ ‘ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ’ ಪ್ರಶಸ್ತಿಯನ್ನು ಶಾಲಾ ಶಿಕ್ಷಣ ಇಲಾಖೆ ಘೋಷಿಸಿದೆ.

ಕಿರಿಯ, ಹಿರಿಯ ಪ್ರಾಥಮಿಕ, ಪ್ರೌಢ ಹೀಗೆ ಮೂರು ವಿಭಾಗಗಳಲ್ಲಿ 10 ಜನ ಶಿಕ್ಷಕರಿಗೆ ಪ್ರಶಸ್ತಿಯನ್ನು ಪ್ರಕಟಿಸಿದೆ.

ಕಿರಿಯ ಪ್ರಾಥಮಿಕ ವಿಭಾಗ: ಶಹಾಪುರ ತಾಲ್ಲೂಕಿನ ಹತ್ತಿಗುಡೂರ ಸರ್ಕಾರಿ ಕಿರಿಯ ಪ್ರಾಥಮಿ ಶಾಲೆ ಅಂಬೇಡ್ಕರ್ ನಗರದ ಶಿಕ್ಷಕಿ ಮೀನಾಕ್ಷಿ ಹೊಸ್ಮನಿ, ಸುರಪುರದ ಕುರುಬರ ಗಲ್ಲಿ ಶಾಲೆ ಸುಜಾತ ನಾಯ್ಕ, ಮಂಡೇಲಮ್ಮನ ಗುಡಿ ಶಾಲೆಯ ನೀಲಮ್ಮ ಹಾವೇರಿ, ‌ಯಾದಗಿರಿಯ ಬಂಗಾರೆಮ್ಮಗುಡಿ ಶಾಲೆ ಸುಮಂಗಲಾ, ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಶಹಾಪುರದ ಹೊಸೂರು ಶಾಲೆ ಪರಸಪ್ಪ ಅಜಗಪ್ಪರವರ, ಸುರಪುರ ಕನಗಂಡನಹಳ್ಳಿ ಗೀತಾ ಸಜ್ಜನ್, ಯಾದಗಿರಿಯ ಮುಷ್ತಾಕ ಅಹ್ಮದ್, ಇನ್ನೂ ಪ್ರೌಢಶಾಲಾ ವಿಭಾಗದಲ್ಲಿ ಶಹಾಪುರದ ದೋರನಹಳ್ಳಿ ಶಾಲೆಯ ಸಂಗೀತಾ ದೇಸಾಯಿ, ಸುರಪುರದ ಆರ್‌ಎಂಎಸ್‌ಎ ದೇವಿಕೇರಾ ಶಾಲೆಯ ತಿಪ‍್ಪೇಸ್ವಾಮಿ, ಯಾದಗಿರಿಯ ರಾಮಸಮುದ್ರ ಪ್ರೌಢಶಾಲೆಯ ರಾಜಶೇಖರಗೌಡ ಅವರಿಗೆ ಜಿಲ್ಲಾ ಯಾದಗಿರಿ ರಾಜಶೇಖರ ಗೌಡ ’ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ’ ಪ್ರಶಸ್ತಿ ಘೋಷಿಸಲಾಗಿದೆ. ಸೆಪ್ಟೆಂಬರ್‌ 10ರಂದು ಜಿಲ್ಲಾ ಮಟ್ಟದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ಜಿಲ್ಲೆಯು ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಹಿಂದೆ ಉಳಿದಿದ್ದು, ಮೂರು ಸಾವಿರ ಹುದ್ದೆಗಳು ಖಾಲಿ ಇದೆ. ಕೂಡಲೇ ಶಿಕ್ಷಣ ಇಲಾಖೆ ಅಧಿಕಾರಿಗಳು ಭರ್ತಿಗೆ ಕ್ರಮ ವಹಿಸಬೇಕು .
ವಿ.ಸೋಮಣ್ಣ, ಜಲಶಕ್ತಿ ರಾಜ್ಯ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT