ಪ್ರತಿಭಾವಂತರೆಲ್ಲ ಪಿಯುಸಿ ಬಳಿಕ ವೈದ್ಯಕೀಯ, ಎಂಜಿನಿಯರಿಂಗ್ ಮತ್ತಿತರ ವೃತ್ತಿಪರ ಕೋರ್ಸ್ಗಳಿಗೆ ಹೋಗುತ್ತಾರೆ. ಬಿ.ಎಸ್ಸಿ ಆಯ್ಕೆ ಮಾಡಿಕೊಳ್ಳುವವರ ಸಂಖ್ಯೆ ಬಹಳ ಕಡಿಮೆ. ಹೀಗಾಗಿ ವಿಜ್ಞಾನ ಮತ್ತು ಗಣಿತ ಶಿಕ್ಷಕರ ಕೊರತೆ ಇದೆ ಎಂಬ ಮಾತುಗಳು ಶಿಕ್ಷಣ ಇಲಾಖೆಯಲ್ಲೇ ಕೇಳಿಬರುತ್ತಿವೆ. ಇದು ವಾಸ್ತವ ಸಂಗತಿಯೂ ಹೌದು. ಹಾಗಿದ್ದರೂ, ಪ್ರತಿಭಾವಂತರನ್ನು ಶಿಕ್ಷಕ ವೃತ್ತಿಯತ್ತ ಸೆಳೆಯುವ ದಿಸೆಯಲ್ಲಿ ಪ್ರಾಮಾಣಿಕ ಪ್ರಯತ್ನ ಆಗಿಲ್ಲ.

ನೇಮಕಾತಿ ನಿಯಮಾವಳಿಗಳಲ್ಲಿ ಬದಲಾವಣೆ ತರುವುದಕ್ಕಿಂತ ಮುಖ್ಯವಾಗಿ ಪ್ರತಿಭಾವಂತರು ಯಾಕೆ ಶಿಕ್ಷಕ ವೃತ್ತಿಗೆ ಬರುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಂಡು, ಯುವ ಪ್ರತಿಭೆಗಳನ್ನು ಸೆಳೆಯುವ ವಾತಾವರಣ ನಿರ್ಮಾಣ ಆಗಬೇಕು. ಪಿಯುಸಿ ಹಂತದಿಂದಲೇ ಈ ಕುರಿತು ಕಾರ್ಯೋನ್ಮುಖ ಆಗಬೇಕು. ಆಗ ಮಾತ್ರ ಶಿಕ್ಷಕರ ಕೊರತೆ ಸಮಸ್ಯೆಗೆ ಪರಿಹಾರ ಸಿಗಬಹುದು ಎನ್ನುತ್ತಾರೆ ತಜ್ಞರು.

ನ್ಯಾಯಮೂರ್ತಿ ಜೆ.ಎಸ್.ವರ್ಮಾ ನೇತೃತ್ವದ ಸಮಿತಿ ಶಿಕ್ಷಣಕ್ಕೆ ಸಂಬಂಧಿಸಿದಂತೆ 2013ರಲ್ಲಿ ನೀಡಿರುವ ವರದಿಯಲ್ಲಿ ಪ್ರತಿಭಾವಂತರನ್ನು ಶಿಕ್ಷಕ ವೃತ್ತಿಗೆ ಸೆಳೆಯುವ ಸಂಬಂಧ ಕೆಲವೊಂದು ಸಲಹೆಗಳನ್ನು ನೀಡಿತ್ತು. ಆದರೆ, ಇದುವರೆಗೂ ಆ ಸಲಹೆಗಳನ್ನು ಕಾರ್ಯರೂಪಕ್ಕೆ ತರುವ ಕೆಲಸ ಆಗಿಲ್ಲ.

‘ಶಿಕ್ಷಕರಿಗೆ ನೀಡುವ ಸಂಬಳ, ಸೌಲಭ್ಯಗಳನ್ನು ಹೆಚ್ಚಿಸುವುದು, ಸೂಕ್ತ ಸ್ಥಾನಮಾನ, ಉಚಿತ ವಸತಿ ವ್ಯವಸ್ಥೆ, ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುವ ಶಿಕ್ಷಕರಿಗೆ ಹೆಚ್ಚಿನ ಪ್ರೋತ್ಸಾಹಧನ ನೀಡುವುದು ಸೇರಿದಂತೆ ಹಲವು ಸಲಹೆಗಳನ್ನು ನೀಡಿದೆ. ಆದರೆ, ಈ ಬಗ್ಗೆ ಯಾವ ಸರ್ಕಾರವೂ ಗಮನಹರಿಸಿಲ್ಲ’ ಎನ್ನುತ್ತಾರೆ ಶಿಕ್ಷಣ ತಜ್ಞ ವಿ.ಪಿ.ನಿರಂಜನಾರಾಧ್ಯ.

‘ಫಿನ್ಲೆಂಡ್ನಲ್ಲಿ ಶಿಕ್ಷಕವೃತ್ತಿ ಅತ್ಯಂತ ಮಹತ್ವದ ಉದ್ಯೋಗವಾಗಿದೆ. ಅಲ್ಲಿ ಶೇ 90–95ರಷ್ಟು ಅಂಕಗಳನ್ನು ಪಡೆದವರು ಕೂಡ ಶಿಕ್ಷಕ ವೃತ್ತಿ ಆಯ್ಕೆ ಮಾಡಿಕೊಳ್ಳುತ್ತಾರೆ. ಪ್ರತಿಭಾವಂತರಿಗೆ ಅಲ್ಲಿ ಉತ್ತಮ ಸ್ಥಾನಮಾನ ನೀಡಲಾಗುತ್ತದೆ. ಆ ರೀತಿಯ ವ್ಯವಸ್ಥೆ ನಮ್ಮಲ್ಲಿ ಜಾರಿಗೆ ಬಂದರೆ ಪ್ರತಿಭಾವಂತರು ಶಿಕ್ಷಕ ವೃತ್ತಿಗೆ ಬರುತ್ತಾರೆ’ ಎಂಬುದು ಅವರ ಅನಿಸಿಕೆ.

ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವುದು, ಕಾಲ ಮಿತಿಯಲ್ಲಿ ಖಾಲಿ ಹುದ್ದೆಗಳನ್ನು ತುಂಬುವ ಮೂಲಕ ಸರ್ಕಾರಿ ಉದ್ಯೋಗ ಸಿಗಲಿದೆ ಎಂಬ ಭರವಸೆ ಮೂಡಿಸುವುದು ಇತ್ಯಾದಿ ಕ್ರಮಗಳ ಮೂಲಕ ಪಿಯುಸಿ ಹಂತದಿಂದಲೇ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವ ಮನೋಭಾವ ಬೆಳೆಸಬೇಕು ಎಂದು ಅವರು ಸಲಹೆ ನೀಡುತ್ತಾರೆ.

ಯುಜಿಸಿ ಶ್ರೇಣಿ: ‘ದಿನಕ್ಕೆ ಎರಡು ಅಥವಾ ಮೂರು ಕ್ಲಾಸ್ ತೆಗೆದುಕೊಳ್ಳುವ ಕಾಲೇಜು ಮತ್ತು ವಿಶ್ವವಿದ್ಯಾಲಯದ ಬೋಧಕ ಸಿಬ್ಬಂದಿಗೆ ಯುಜಿಸಿ ಶ್ರೇಣಿ ಪ್ರಕಾರ ಕೈತುಂಬಾ ಸಂಬಳ ನೀಡಲಾಗುತ್ತಿದೆ. ಆದರೆ, ಇಡೀ ದಿನ ಚಿಕ್ಕ ಮಕ್ಕಳೊಂದಿಗೆ ಇದ್ದು, ಅವರ ಮನಸ್ಸನ್ನು ಅರ್ಥ ಮಾಡಿಕೊಂಡು ಪಾಠ ಮಾಡುವ ಪ್ರಾಥಮಿಕ ಶಿಕ್ಷಕರಿಗೆ ನೀಡುವ ಸಂಬಳ ಜೀವನ ನಿರ್ವಹಣೆಗೂ ಸಾಕಾಗುವುದಿಲ್ಲ. ಇದನ್ನು ಅರ್ಥ ಮಾಡಿಕೊಂಡು ಶಿಕ್ಷಕರಿಗೂ ಅಧಿಕ ಸಂಬಳ, ಸೌಲಭ್ಯಗಳನ್ನು ನೀಡಿದರೆ ಈ ಕ್ಷೇತ್ರದತ್ತ ಆಕರ್ಷಿತರಾಗಬಹುದು’ ಎನ್ನುತ್ತಾರೆ ಬಿ.ಎಸ್ಸಿ, ಬಿ.ಇಡಿ ಪದವೀಧರ ಎನ್. ಮಂಜುನಾಥ್.

‘ಎನ್ಸಿಇಆರ್ಟಿ ಪಠ್ಯಕ್ಕೆ ಅನುಗುಣವಾಗಿ 6ರಿಂದ 8ನೇ ತರಗತಿವರೆಗೆ ರಾಜ್ಯದಲ್ಲೂ ಪಠ್ಯಕ್ರಮ ಪರಿಷ್ಕರಣೆ ಆಗಿದೆ. ನಿಯಮಾವಳಿ ಪ್ರಕಾರ ಅದರ ಬೋಧನೆಗೆ ಪದವೀಧರ ಶಿಕ್ಷಕರನ್ನೇ ನೇಮಕ ಮಾಡಿಕೊಳ್ಳಬೇಕು. ಬಿ.ಇ ಆದವರಿಗೆ ಬಿ.ಇಡಿ ಮಾಡಿಕೊಂಡು ಬಳಿಕ ಎರಡು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಶಿಕ್ಷಕರಾಗಲು ಆಸಕ್ತಿ ಇದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ, ಅವಕಾಶವಂತೂ ಮಾಡಿಕೊಟ್ಟಿದ್ದೇವೆ. ಏನಾಗುತ್ತದೋ ನೋಡೋಣ’ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.

ಹೆಚ್ಚಿನ ಶುಲ್ಕ ಭರಿಸಿ ಬಿ.ಇ ಪಡೆದವರು ತಾಂತ್ರಿಕ ಕ್ಷೇತ್ರವನ್ನು ಬಿಟ್ಟು, ಶಿಕ್ಷಕ ವೃತ್ತಿಗೆ ಯಾಕೆ ಬರುತ್ತಾರೆ ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ, ಕೆಲಸವೇ ಇಲ್ಲದ ಪರಿಸ್ಥಿತಿ ಇರುವಾಗ ಸರ್ಕಾರಿ ಕೆಲಸ ದೊರೆತರೆ ಯಾರೂ ನಿರಾಕರಿಸುವುದಿಲ್ಲ. ಉದ್ಯೋಗ ಕ್ಷೇತ್ರದಲ್ಲಿ ಈಗ ಸಾಕಷ್ಟು ಬದಲಾವಣೆಗಳು ಆಗಿವೆ. ಖಾಸಗಿ ಕಂಪನಿಗಳಲ್ಲಿ ವೇತನ ಕಡಿತ ಮಾಡಲಾಗುತ್ತಿದೆ. ಹಲವರು ಉದ್ಯೋಗ ಕಳೆದುಕೊಂಡಿದ್ದಾರೆ. ಇಂಥಹ ಸ್ಥಿತಿಯಲ್ಲಿ ಉದ್ಯೋಗ ಮುಖ್ಯವೇ ಹೊರತು, ತಾಂತ್ರಿಕ ಕ್ಷೇತ್ರ, ತಾಂತ್ರಿಕೇತರ ಕ್ಷೇತ್ರ ಎಂಬುದೆಲ್ಲ ಗೌಣವಾಗಲಿದೆ ಎಂಬುದು ಅವರ ಅನಿಸಿಕೆ.

ಇದೂ ಒಂದು ಪ್ರಯತ್ನ...
ಬಿ.ಇ ಪದವಿ ಪಡೆದ ಎಲ್ಲರಿಗೂ ತಾಂತ್ರಿಕ ಕ್ಷೇತ್ರದಲ್ಲಿ ಉದ್ಯೋಗ ಸಿಗುವುದಿಲ್ಲ. ಹೀಗಾಗಿ ಆಸಕ್ತಿ ಇರುವ ಯಾರು ಬೇಕಾದರೂ, ಬಿ.ಇಡಿ ಓದಿ ಶಿಕ್ಷಕರಾಗಲು ಅವಕಾಶ ಕಲ್ಪಿಸಿದ್ದೇವೆ. ಇದರಿಂದಲೇ ಗಣಿತ, ವಿಜ್ಞಾನ ಶಿಕ್ಷಕರ ಕೊರತೆ ನೀಗುತ್ತದೆ ಎಂದು ಹೇಳಲು ಆಗುವುದಿಲ್ಲ.

ಒಂದು ಮಾಹಿತಿ ಪ್ರಕಾರ ಈಗಾಗಲೇ ಬಿ.ಇ ಬಳಿಕ ಬಿ.ಇಡಿ ಮಾಡಿದವರು 300ರಿಂದ 400 ಮಂದಿ ಇದ್ದಾರೆ. 3–4 ವರ್ಷಗಳಲ್ಲಿ ಈ ಸಂಖ್ಯೆ ಒಂದು ಸಾವಿರಕ್ಕೆ ತಲುಪಬಹುದು. ಬಿ.ಇ ಆದವರಲ್ಲಿ ಶೇ 1ರಿಂದ 2ರಷ್ಟು ಮಂದಿ ಬಿ.ಇಡಿ ಮಾಡಬಹುದು ಅಷ್ಟೆ.

ಮುಖ್ಯವಾಗಿ ಈಗ ಮಾಡಿರುವ ತಿದ್ದುಪಡಿಯಿಂದಾಗಿ ಬಿ.ಎಸ್ಸಿಯಲ್ಲಿ ಭೌತವಿಜ್ಞಾನ, ರಸಾಯನವಿಜ್ಞಾನ, ಎಲೆಕ್ಟ್ರಾನಿಕ್ಸ್ (ಪಿಸಿಇ) ವಿಷಯಗಳನ್ನು ವ್ಯಾಸಂಗ ಮಾಡಿ ಬಿ.ಇಡಿ ಪಡೆದವರಿಗೂ ಶಿಕ್ಷಕರಾಗಲು ಅವಕಾಶ ಸಿಗಲಿದೆ. ಅದೇ ರೀತಿ ಕಂಪ್ಯೂಟರ್ ಸೈನ್ಸ್ ಓದಿದವರೂ ಸೇರಿದಂತೆ 30ರಿಂದ 40 ಸಾವಿರ ಮಂದಿ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹತೆ ಪಡೆಯಲಿದ್ದಾರೆ.

ಪದವೀಧರ ಶಿಕ್ಷಕರಿಗೆ ₹40 ಸಾವಿರ ಸಂಬಳ ಸಿಗಲಿದೆ. ಬಿ.ಇ ಪದವಿ ಪಡೆದ ಎಲ್ಲರಿಗೂ ಖಾಸಗಿ ಕಂಪನಿಗಳಲ್ಲಿ ಇಷ್ಟೊಂದು ಸಂಬಳ ಸಿಗುವುದಿಲ್ಲ. ಹಾಗಾಗಿ ಬಿ.ಇಡಿ ಮಾಡಿಕೊಂಡು ಶಿಕ್ಷಕ ವೃತ್ತಿಗೆ ಬರಬಹುದು. 30 ವರ್ಷಗಳಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಏನೆಲ್ಲ ಬದಲಾವಣೆಗಳು ಆಗಲಿವೆ ಎಂಬ ಅರಿವು ತಾಂತ್ರಿಕ ಕ್ಷೇತ್ರದ ಪದವೀಧರರಿಗೆ ಇರುತ್ತದೆ. ಬಿ.ಎಸ್ಸಿ ಪದವೀಧರರಿಂದ ಇದನ್ನು ನಿರೀಕ್ಷೆ ಮಾಡುವುದು ಕಷ್ಟ. ಹೀಗಾಗಿ ಬಿ.ಇ ಆದವರಿಗೆ ಶಿಕ್ಷಕರಾಗಲು ಅವಕಾಶ ನೀಡಿರುವುದರಲ್ಲಿ ತಪ್ಪಿಲ್ಲ. ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿಯ ಕರಡನ್ನು ಗೆಜೆಟ್ನಲ್ಲಿ ಪ್ರಕಟಿಸಿ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗುವುದು. ಇದಾದ ಬಳಿಕ ಅಂತಿಮ ಅಧಿಸೂಚನೆಯನ್ನು ಗೆಜೆಟ್ನಲ್ಲಿ ಪ್ರಕಟಿಸಲಾಗುತ್ತದೆ. ಒಂದು ತಿಂಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
–ಎಸ್.ಆರ್.ಉಮಾಶಂಕರ್, ಪ್ರಧಾನ ಕಾರ್ಯದರ್ಶಿ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.